ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಟೋರಿ ವೀವರ್’: ಅಂಗೈಯಲ್ಲಿ ಕಥಾಲಯ

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಥೆ ಕೇಳಲು ಯಾರಿಗೆ ತಾನೇ ಇಷ್ಟವಿಲ್ಲ? ಒಂದೊಂದು ದೃಶ್ಯವೂ ಕಣ್ಣಿಗೆ ಕಟ್ಟುವಂತೆ ಕಥೆಯನ್ನು ವರ್ಣಿಸುತ್ತಿದ್ದರೆ ಮಕ್ಕಳಂತೂ ಬಿಟ್ಟ ಕಣ್ಣು-ಬಾಯಿ ಮುಚ್ಚದೇ ಕೇಳುತ್ತಾರೆ. ಆದರೆ ಈಗ ಕಥೆ ಹೇಳುವವರು ಸಿಗುವುದೇ ವಿರಳ. ಶಾಲೆ, ಟ್ಯೂಷನ್ನು, ಹೋಂ ವರ್ಕ್ ಎಂದು ಹೆಣಗಾಡುವ ಮಕ್ಕಳಿಗೆ ಆಟವಾಡಲೇ ಸಮಯವಿಲ್ಲ, ಇನ್ನು ಕಥೆ ಕೇಳುವ-ಓದಲು ಸಮಯವೆಲ್ಲಿ?

ಮಕ್ಕಳಲ್ಲಿ ಕಥೆಯ ಆಸಕ್ತಿಯ ಮೊಳಕೆ ಚಿಗುರಿಸಲೆಂದೇ ಶುರುವಾಗಿರುವುದು ‘ಪ್ರಥಮ್ ಬುಕ್ಸ್’ ಪ್ರಕಾಶನದ ಅಂತರ್ಜಾಲ ತಾಣ ‘ಸ್ಟೋರಿ ವೀವರ್’. ಭಾರತದ ಪ್ರತಿ ಮಗುವಿಗೂ ಓದುವ ಸಾಮರ್ಥ್ಯ ಬರಬೇಕು, ಅವರೆಲ್ಲರ ಕೈಯಲ್ಲೂ ಪುಸ್ತಕ ಇರುವಂತಾಗಬೇಕು, ಒಳ್ಳೆಯ ಪುಸ್ತಕಗಳು ಲಭ್ಯವಾಗಬೇಕು ಮತ್ತು ಅದಕ್ಕಾಗಿ ಅವರು ಸಾಧ್ಯವಾದಷ್ಟೂ ಕಡಿಮೆ ಬೆಲೆ ತೆರುವಂತಾಗಬೇಕು ಎಂಬುದು ಪ್ರಥಮ್ ಬುಕ್ಸ್‌ನ ಉದ್ದೇಶ.

ಸ್ಟೋರಿ ವೀವರ್‌ನಲ್ಲಿ ಏನೇನಿದೆ?

‘ಪ್ರತಿ ಮಗುವಿಗೂ ಒಳ್ಳೆಯ ಪುಸ್ತಕವನ್ನು ಆನಂದಿಸುವ ಹಕ್ಕಿದೆ. ತಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಸಂಬಂಧಿಸಿದ ಕಥೆಗಳನ್ನು ತಮ್ಮದೇ ಭಾಷೆಯಲ್ಲಿ ಅವರು ಓದುವಂತಾಗಬೇಕು’ ಎಂಬ ಹಂಬಲದಿಂದ ‘ಸ್ಟೋರಿ ವೀವರ್’ ಜೀವ ತಳೆದಿದೆ.

ಫಿಕ್ಷನ್, ನಾನ್ ಫಿಕ್ಷನ್, ಹಾಸ್ಯ, ವಿಜ್ಞಾನ, ಇತಿಹಾಸ, ಗಣಿತ, ಪ್ರಕೃತಿ ಹೀಗೆ ಬೇರೆ ಬೇರೆ ವಿಭಾಗಗಳಿಗೆ ಸಂಬಂಧಿಸಿದ ಕಥೆ ಪುಸ್ತಕಗಳನ್ನು ಪ್ರಥಮ್ ಬುಕ್ಸ್ ಈವರೆಗೆ ಪ್ರಕಟಿಸಿದೆ. ಈ ಪುಸ್ತಕಗಳಿಗಾಗಿ ಅನೇಕ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ. ತನ್ನ ಪುಸ್ತಕ ಮತ್ತು ಸ್ಟೋರಿ ವೀವರ್ ಅಭಿಯಾನದಿಂದ ಭಾರತದ 20 ಕೋಟಿ ಮಕ್ಕಳನ್ನು ತಲುಪುವುದು ಪ್ರಕಾಶನದ ಗುರಿ.

ನೀವೂ ಕಥೆ ಹೆಣೆಯಿರಿ

ಸ್ಟೋರಿ ವೀವರ್ ತಾಣದಲ್ಲಿ ಯಾರು ಬೇಕಾದರೂ ಕಥೆಗಳನ್ನು ಪ್ರಕಟಿಸಬಹುದು. ನೀವೇ ಹೆಣೆದ ಕಥೆಗಳನ್ನು ಇಲ್ಲಿ ಹಾಕಬಹುದು ಮತ್ತು ಬೇರೆ ಭಾಷೆಯ ಕಥೆಗಳನ್ನು ನಿಮ್ಮ ಭಾಷೆಗೆ ಭಾಷಾಂತರಿಸಿ ಸೇರಿಸಬಹುದು. ಮಕ್ಕಳು ಮಾತೃಭಾಷೆಯಲ್ಲೇ ಕಥೆಗಳನ್ನು ಓದುವಂತಾಗಬೇಕು ಎಂಬುದು ಈ ಯೋಜನೆಯ ಉದ್ದೇಶಗಳಲ್ಲೊಂದು. ಇಲ್ಲಿ ಕಥೆಗಳನ್ನು ಓದಲು ಯಾವ ನಿರ್ಬಂಧವೂ ಇಲ್ಲ. ಇದು ಸಂಪೂರ್ಣ ಉಚಿತ. ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್ ಅಡಿಯಲ್ಲಿ ಎಲ್ಲರಿಗೂ ಮುಕ್ತವಾಗಿದೆ. ಈ ತಾಣದಲ್ಲಿ ನಿಮ್ಮಿಷ್ಟದ ಕಥೆ ಪುಸ್ತಕಗಳನ್ನು ಖರೀದಿಸಲೂ ಅವಕಾಶವಿದೆ.

ಸಣ್ಣಪುಟ್ಟ ಸಮುದಾಯಗಳಲ್ಲಷ್ಟೇ ಬಳಕೆಯಲ್ಲಿರುವ ಭಾಷೆಗಳಾದ ಕೊಂಕಣಿ, ಟಿಬೇಟಿಯನ್, ಸಂಸ್ಕೃತ ಸೇರಿದಂತೆ ಜಗತ್ತಿನ 62 ಭಾಷೆಗಳ 3000ಕ್ಕೂ ಅಧಿಕ ಕಥೆಗಳು ಈ ತಾಣದಲ್ಲಿ ಲಭ್ಯ. ಕನ್ನಡದ 200ಕ್ಕೂ ಹೆಚ್ಚು ಕಥೆಗಳು ಇಲ್ಲಿವೆ. 180 ದೇಶಗಳು ಸ್ಟೋರಿ ವೀವರ್‌ನಲ್ಲಿ ಭಾಗವಹಿಸುತ್ತಿವೆ. ಓದುಗರ ಅಪೇಕ್ಷೆ ಮೇರೆಗೆ ಹೊಸಹೊಸ ಭಾಷೆಗಳನ್ನು ಸೇರಿಸಲಾಗುತ್ತಿದೆ.

ಚಿತ್ರ ನೋಡಿ ಕಥೆ ಕಟ್ಟು

ಸ್ಟೋರಿ ವೀವರ್ ಕಥೆ ಅಥವಾ ಅಕ್ಷರ ವಿಭಾಗಕ್ಕಷ್ಟೇ ಸೀಮಿತವಾಗಿಲ್ಲ. ಫೋಟೊ ಗ್ಯಾಲರಿ ವಿಭಾಗದಲ್ಲಿ ಎರಡು ಸಾವಿರಕ್ಕೂ ಅಧಿಕ ಬಣ್ಣ ಬಣ್ಣದ ಚಿತ್ರಗಳನ್ನು ಪ್ರಕಟಿಸಲಾಗಿದೆ. ಇವುಗಳೂ ಎಲ್ಲರಿಗೂ ಉಚಿತವಾಗಿ ಲಭ್ಯವಿವೆ. ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಚಿತ್ರಗಳ ಸರಣಿಯನ್ನು ನೀಡಲಾಗಿದೆ. ಅದನ್ನು ನೋಡಿ ನೀವೇ ನಿಮ್ಮ ಕಲ್ಪನೆಯ ಕಥೆಗಳನ್ನು ಹೆಣೆಯಲೂಬಹುದು.

ಪುಸ್ತಕ ದಾನ ನೀಡಿ ಅಭಿಯಾನ

ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಕುತೂಹಲ ಬೆಳೆಸಲು ಬಯಸುವ ಸಹೃದಯಿಗಳು ಮತ್ತು ಮಕ್ಕಳಿಗಾಗಿ ಪುಸ್ತಕಗಳ ನಿರೀಕ್ಷೆಯಲ್ಲಿರುವ ಸಂಘ–ಸಂಸ್ಥೆಗಳು ಹಾಗೂ ಪೋಷಕರ ನಡುವೆ ಸೇತುವೆಯಾಗುವ ನಿಟ್ಟಿನಲ್ಲಿ ‘ಪುಸ್ತಕ ದಾನ ನೀಡಿ’ ಅಭಿಯಾನವನ್ನು ಪ್ರಥಮ್ ಬುಕ್ಸ್ ಪ್ರಾರಂಭಿಸಿದೆ. ಯಾವುದೇ ಲಾಭದ ನಿರೀಕ್ಷೆ ಇಲ್ಲದ ಈ ಯೋಜನೆ ಸಂಪೂರ್ಣ ಕ್ರೌಡ್ ಫಂಡಿಂಗ್ ಮಾದರಿಯದ್ದು. ಸಂಸ್ಥೆಗಳು ಅಥವಾ ಯಾವುದೋ ಒಬ್ಬ ವ್ಯಕ್ತಿ ಗ್ರಂಥಾಲಯ ತೆರೆಯಲು, ಕಥೆ ಹೇಳುವ ಕಾರ್ಯಕ್ರಮ ರೂಪಿಸಲು ಅಗತ್ಯವಿರುವ ಹಣ ಅಥವಾ ಪುಸ್ತಕಗಳನ್ನು ಸಂಗ್ರಹಿಸಿಕೊಡುವುದು ಈ ಯೋಜನೆಯ ಉದ್ದೇಶ.

ಯೋಜನೆ ಆರಂಭವಾದ ಒಂದೇ ತಿಂಗಳ ಅವಧಿಯಲ್ಲಿ 21 ಭಾಷೆಗಳ 16 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಕಲೆಹಾಕಲಾಗಿದೆ. ಇದು ಈ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿ.

‘ಸ್ಟೋರಿ ವೀವರ್’ನಲ್ಲಿ ಸಂವಾದ–ಚರ್ಚೆಗೆಂದೇ ಪ್ರತ್ಯೇಕ ವಿಭಾಗವನ್ನು ಕಲ್ಪಿಸಲಾಗಿದೆ. ಇದರಲ್ಲಿ ಓದುಗರು ಪ್ರಶ್ನೆಗಳನ್ನು ಕೇಳಬಹುದಾಗಿದೆ. ಚರ್ಚೆ ನಡೆಸಬಹುದಾಗಿದೆ. ಇದು ಸಮಾನ ಮನಸ್ಕ ಓದುಗರ ನಡುವೆಯೇ ಸಂವಾದವನ್ನು ಹುಟ್ಟು ಹಾಕಿ ಹೊಸ ಹೊಳಹುಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತಿದೆ.

ಕಥೆಗಳನ್ನು ಓದಲು storyweaver.org.in ಕೊಂಡಿಯನ್ನು ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT