ಸಂದರ್ಶನ

‘ಸೊಳ್ಳೆಯನ್ನು ಕೊಲ್ಲಲು ಸುತ್ತಿಗೆ ಬೇಕಾಗಿಲ್ಲ’

‘ಆಧಾರ್‌’ಗಾಗಿ ಬಯೊಮೆಟ್ರಿಕ್ ಮಾಹಿತಿ ನೀಡಿದಾಕ್ಷಣ ವ್ಯಕ್ತಿಯ ಖಾಸಗಿತನದ ಹರಣವಾಗುತ್ತದೆಯೇ? ದೇಶದ ರಕ್ಷಣೆಗೆ ಆಧಾರ್‌ ಅಗತ್ಯವೇ? ಆಧಾರ್‌ ಅಡಿ ಸಂಗ್ರಹಿಸಿದ ಮಾಹಿತಿ ಬಳಸಿ ಜನರ ಮೇಲೆ ಕಣ್ಗಾವಲು ಇಡಬಹುದೇ...? ಈ ಪ್ರಶ್ನೆಗಳು ಆಧಾರ್‌ ಯೋಜನೆ ಚಾಲನೆ ಪಡೆದ ದಿನದಿಂದಲೂ ಸಾರ್ವಜನಿಕರ ನಡುವೆ ಇವೆ. ನಮ್ಮ ಕಾಲದ ಬಹುಮುಖ್ಯ ಯೋಜನೆಗಳಲ್ಲಿ ಒಂದಾದ ಆಧಾರ್‌ ಬಗ್ಗೆ  ಹಿರಿಯ ವಕೀಲರಾದ ಸಜನ್ ಪೂವಯ್ಯ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ

‘ಸೊಳ್ಳೆಯನ್ನು ಕೊಲ್ಲಲು ಸುತ್ತಿಗೆ ಬೇಕಾಗಿಲ್ಲ’

* ಆಧಾರ್‌ನಿಂದ ಮೂಲಭೂತ ಹಕ್ಕಿಗೆ ಧಕ್ಕೆ ಆಗುತ್ತದೆಯೇ ಎಂಬ ಪ್ರಶ್ನೆ ಕೋರ್ಟ್‌ ಮುಂದಿರುವಾಗಲೇ, ಆಧಾರ್‌ ಸಂಖ್ಯೆಯನ್ನು ಹತ್ತಾರು ಯೋಜನೆಗಳಿಗೆ ಕಡ್ಡಾಯ ಮಾಡುತ್ತಿರುವ ಸರ್ಕಾರದ ಉದ್ದೇಶ ಏನಿರಬಹುದು?
ನನ್ನ ಕಣ್ಣಿನ ಪಾಪೆ, ನನ್ನ ಬೆರಳಚ್ಚು, ನನ್ನ ರಕ್ತದ ಗುಂಪು ಇವೆಲ್ಲ ಮಾಹಿತಿ ಖಾಸಗಿತನದ ವ್ಯಾಪ್ತಿಯಲ್ಲಿವೆ. ನಾನು ಏನು ಮಾಡಬೇಕು, ಯಾರ ಜೊತೆ ಕೆಲಸ ಮಾಡಬೇಕು, ಯಾರ ಜೊತೆ ಕೆಲಸ ಮಾಡಬಾರದು, ಏನು ಕುಡಿಯಬೇಕು, ಏನು ತಿನ್ನಬೇಕು... ಇವೆಲ್ಲವೂ ಖಾಸಗಿತನಕ್ಕೆ ಸಂಬಂಧಿಸಿದವು. ಖಾಸಗಿತನದಲ್ಲಿ ಬಹಳ ಮುಖ್ಯವಾದುದು ಮಾಹಿತಿಯ ಖಾಸಗಿತನ. ಸಾರ್ವಜನಿಕವಾಗಿ ಲಭ್ಯವಿರುವ ವ್ಯಕ್ತಿಯ ಖಾಸಗಿ ವಿವರಗಳು ಕೂಡ ಖಾಸಗಿತನದ ವ್ಯಾಪ್ತಿಗೇ ಬರುತ್ತವೆ ಎಂದು ಕೋರ್ಟ್‌ ಹೇಳಿದೆ. ಅಂದರೆ, ಸಾಮಾಜಿಕ ಜಾಲತಾಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಖಾಸಗಿ ವಿವರ ಪ್ರಕಟಿಸಿದ್ದಾನೆ ಎಂದಿಟ್ಟುಕೊಳ್ಳೋಣ. ಆ ಜಾಲತಾಣವು ತಾನು ವ್ಯಕ್ತಿಯಿಂದ ಸಂಗ್ರಹಿಸಿದ ಮಾಹಿತಿಯನ್ನು ಯಾವ್ಯಾವುದೋ ಉದ್ದೇಶಗಳಿಗೆ ಬಳಸುವಂತಿಲ್ಲ – ಯಾವ ಉದ್ದೇಶಕ್ಕೆ ಮಾಹಿತಿ ಸಂಗ್ರಹಿಸಲಾಯಿತೋ, ಆ ಉದ್ದೇಶಕ್ಕೆ ಮಾತ್ರ ಬಳಸಬೇಕು.

ಆರಂಭದಲ್ಲಿ, ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ (ಪಿಡಿಎಸ್) ಸೋರಿಕೆ ತಡೆಯಲು ಹಾಗೂ ಇತರ ಕೆಲವು ಉದ್ದೇಶಗಳಿಗಾಗಿ ಆಧಾರ್‌ ರೂಪಿಸಲಾಯಿತು. ಆದರೆ, ಕಾಲ ಕಳೆದಂತೆ ಇದರ ಬಳಕೆ ವಿಸ್ತರಣೆಯಾಯಿತು. ಹೀಗೆ ವಿಸ್ತರಿಸಿದ್ದು ಖಾಸಗಿತನದ ಉಲ್ಲಂಘನೆಯಾಯಿತು. ಸರ್ಕಾರ ಹೀಗೇಕೆ ಮಾಡುತ್ತಿದೆ? ಆಧಾರ್‌ ಸರಿಯೋ, ತಪ್ಪೋ ಎಂಬ ಬಗ್ಗೆ ಕೋರ್ಟ್‌ ತೀರ್ಪು ಬರುವ ಮೊದಲೇ, ದೇಶದ ಶೇಕಡ 99ರಷ್ಟು ಜನರನ್ನು ಈ ಯೋಜನೆಯ ವ್ಯಾಪ್ತಿಗೆ ತಂದು, ತೀರ್ಪನ್ನು ‘ಕಾಗದದ ಹುಲಿ’ಯನ್ನಾಗಿ ಮಾಡುವ ಉದ್ದೇಶ ಇರುವಂತಿದೆ.

* ಆಧಾರ್‌ ಯೋಜನೆಯು ಖಾಸಗಿತನವನ್ನು ಉಲ್ಲಂಘಿಸುವುದು ನಿರ್ದಿಷ್ಟವಾಗಿ ಹೇಗೆ?
ಖಾಸಗಿತನ ಮೂಲಭೂತ ಹಕ್ಕು ಎಂಬ ಒಂದೇ ಕಾರಣಕ್ಕೆ ಆಧಾರ್‌ ಕೆಟ್ಟದ್ದು ಎನ್ನಲಾಗದು. ವ್ಯಕ್ತಿಯ ಖಾಸಗಿ ವಿವರಗಳು ಅವನ ಬಳಿಯೇ ಇರಬೇಕು. ಪ್ರಭುತ್ವವು ಜನರೆಲ್ಲರಿಂದ ಸಂಗ್ರಹಿಸಿದ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆಗಳಿರುತ್ತವೆ. ‘ಸಂಗ್ರಹಿಸಿದ ಮಾಹಿತಿ ಇಟ್ಟುಕೊಂಡು ಏನು ಮಾಡಬಹುದು ಎಂಬುದಕ್ಕಿಂತ, ಸರ್ಕಾರದ ಬಳಿ ತನ್ನೆಲ್ಲ ಮಾಹಿತಿ ಇದೆ ಎಂಬುದು ಜನರಲ್ಲಿ ಭೀತಿ ಮೂಡಿಸುತ್ತದೆ. ಇದು ಖಾಸಗಿ

ತನವನ್ನು ಉಲ್ಲಂಘಿಸುತ್ತದೆ’ ಎಂದು ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯ ಹೇಳಿದೆ. ತನ್ನ ಬ್ಯಾಂಕ್‌ ವಹಿವಾಟುಗಳು, ಮೊಬೈಲ್‌ ಸಂಭಾಷಣೆಗಳು, ತಾನು ಕಾಂಡೋಮ್‌ ಖರೀದಿಸುವುದು ಇಂಥವೆಲ್ಲ ಸರ್ಕಾರಕ್ಕೆ ಗೊತ್ತಾಗುತ್ತದೆ ಎನ್ನುವ ಅರಿವು ಜನರಲ್ಲಿ ಭೀತಿ ಹುಟ್ಟಿಸಬಹುದು. ‘ಜನರ ಆಲೋಚನಾ ಸ್ವಾತಂತ್ರ್ಯ ಹಾಗೂ ಪ್ರಜ್ಞೆಯ ಮೇಲೆ ಈ ಭೀತಿಯಿಂದಾಗುವ ಪರಿಣಾಮವು ಪ್ರಜಾತಂತ್ರ ವ್ಯವಸ್ಥೆಗೆ ತಕ್ಕುದಲ್ಲ’ ಎಂದು ಅಮೆರಿಕದ ಸುಪ್ರೀಂ ಕೋರ್ಟ್‌ ಹೇಳಿದೆ. ಹಾಗಾಗಿ, ಮಾಹಿತಿ ಸಂಗ್ರಹಣೆಯಿಂದಲೇ ಖಾಸಗಿತನ ಉಲ್ಲಂಘನೆ ಆಗುತ್ತದೆ ಎನ್ನಲಾಗದು. ಆದರೆ, ಆ ಮಾಹಿತಿಯನ್ನು ಯಾವುದಕ್ಕೆಲ್ಲಾಬಳಸಿಕೊಳ್ಳಬಹುದು ಎಂಬ ನೆಲೆಯಲ್ಲಿ ಯೋಚಿಸಿದಾಗ ಖಾಸಗಿತನದ ಉಲ್ಲಂಘನೆ ಗೊತ್ತಾಗುತ್ತದೆ.

ಅನಿವಾರ್ಯ ಸಂದರ್ಭಗಳಲ್ಲಿ ಖಾಸಗಿತನಕ್ಕೆ ಮಿತಿ ಹೇರಬಹುದು. ಆದರೆ ಆ ‘ಅನಿವಾರ್ಯ’ ಏನು? ಪಿಡಿಎಸ್‌ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟಬೇಕು ಎಂಬುದು ಸರ್ಕಾರದ ಉದ್ದೇಶವಾದರೆ, ಅದಕ್ಕೆ ಸಂಬಂಧಿಸಿದ ಜನರಿಂದ ಮಾತ್ರ ಬಯೊಮೆಟ್ರಿಕ್ ಮಾಹಿತಿ ಪಡೆಯಬೇಕು. ಆ ಮಾಹಿತಿಗಳನ್ನು ಪಿಡಿಎಸ್‌ ಉದ್ದೇಶಕ್ಕೇ ಬಳಸಬೇಕು. ಪಿಡಿಎಸ್‌ ವ್ಯಾಪ್ತಿಗೆ ಬಾರದವರಿಂದ ಬಯೊಮೆಟ್ರಿಕ್‌ ಮಾಹಿತಿ ಪಡೆಯುವುದು, ಅವರ ಆಧಾರ್‌ ಸಂಖ್ಯೆಯನ್ನು ಮೊಬೈಲ್‌ ಸಂಖ್ಯೆಗೆ ಜೋಡಿಸುವುದು ಏಕೆ?

* ಖಾಸಗಿತನದ ಹಕ್ಕನ್ನು ಪ್ರಜಾತಂತ್ರ ಸರ್ಕಾರ ಜನರಿಂದ ಕಿತ್ತುಕೊಳ್ಳಬಹುದೇ?
ಖಾಸಗಿತನದ ಹಕ್ಕು ದೊರೆತಿರುವುದು ‘ರಹಸ್ಯ’ ಕಾಯ್ದುಕೊಳ್ಳುವ ನೆಲೆಗಟ್ಟಿನಲ್ಲಿ ಅಲ್ಲ. ಅದು ದೊರೆತಿರುವುದು ಮನುಷ್ಯನ ಘನತೆ ಕಾಯುವ ಉದ್ದೇಶದಿಂದ. ಹೀಗಿರುವಾಗ, ಖಾಸಗಿತನದ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳುವುದು ಅಸಾಧ್ಯ. ಆದರೆ, ಸೀಮಿತ ಉದ್ದೇಶಕ್ಕಾಗಿ, ಉದಾಹರಣೆಗೆ ಕ್ರಿಮಿನಲ್‌ ಪ್ರಕರಣವೊಂದರ ತನಿಖೆಗಾಗಿ, ಬಯೊಮೆಟ್ರಿಕ್ ಮಾಹಿತಿ ಸಂಗ್ರಹಿಸಬಹುದು. ಮನೆಯಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡೂ, ‘ನನ್ನ ಮನೆ ಪ್ರವೇಶಿಸಬೇಡ, ನನಗೆ ಖಾಸಗಿತನ ಇದೆ’ ಎಂದು ಪೊಲೀಸರಿಗೆ ಹೇಳಲಾಗದು.

* ಜಿಪಿಎಸ್‌, ಇಂಟರ್ನೆಟ್‌ ಹಾಗೂ ಬೆರಳಚ್ಚಿನ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ ಕೂಡ ಖಾಸಗಿತನಕ್ಕೆ ಅಪಾಯ ತರಬಲ್ಲದು. ಹೀಗಿರುವಾಗ ನೀವು ಆಧಾರ್‌ ಮಾತ್ರ ವಿರೋಧಿಸುವುದು ಏಕೆ?
ಸ್ಮಾರ್ಟ್‌ಫೋನ್‌ ಬಳಸುವವರ ಬೆರಳಚ್ಚಿನ ಮಾಹಿತಿ ಮೊಬೈಲ್‌ ಕಂಪೆನಿಯ ಬಳಿ ಇರುತ್ತದೆ, ನಿಜ. ಅದನ್ನು ಬಳಸಿ ಕಂಪೆನಿ ಏನು ಮಾಡಬಹುದು? ಅಬ್ಬಬ್ಬಾ ಅಂದರೆ, ಆ ಮಾಹಿತಿಯನ್ನು ಇನ್ನೊಬ್ಬರಿಗೆ ಮಾರಬಹುದು. ಹಾಗೆ ಮಾಡಿದರೆ ಕಂಪೆನಿ ವಿರುದ್ಧ ಮೊಕದ್ದಮೆ ಹೂಡಿ, ಪರಿಹಾರ ಕೇಳಬಹುದು. ಆ ಕಂಪೆನಿ ನನ್ನ ಮೇಲೆ ಕಣ್ಗಾವಲು ಇಟ್ಟರೂ, ಅದಕ್ಕೆ ನನ್ನನ್ನು ಬಂಧಿಸುವ ಅಧಿಕಾರವಿಲ್ಲ. ಆದರೆ ಕಣ್ಗಾವಲು ಇಡುವ, ಬಂಧಿಸುವ ಕೆಲಸವನ್ನು ನಮ್ಮ ಮಾಹಿತಿಯನ್ನೆಲ್ಲ ಸಂಗ್ರಹಿಸಿದ ಸರ್ಕಾರ ಮಾಡಬಹುದು. ಆಧಾರ್‌ ಬೆಂಬಲಿಗರು ಒಂದು ಕಂಪೆನಿ ಮಾಡುವುದನ್ನು ಸರ್ಕಾರದ ಕೆಲಸಗಳ ಜೊತೆ ಹೋಲಿಸಬಾರದು. ನಮ್ಮ ಮೂಲಭೂತ ಹಕ್ಕುಗಳನ್ನು ಕೊನೆಯುಸಿರಿನವರೆಗೂ ರಕ್ಷಿಸಿಕೊಳ್ಳಬೇಕು.

* ಆಧಾರ್‌ನಿಂದಾಗಿ ಸಾವಿರಾರು ಕೋಟಿ ರೂಪಾಯಿ ಹಣ ಉಳಿತಾಯವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದನ್ನು ಅಲ್ಲಗಳೆಯುತ್ತೀರಾ?
ಸರ್ಕಾರ ಹೇಳಿಕೊಳ್ಳುತ್ತಿರುವ ಅಂಕಿ–ಅಂಶಗಳ ಬಗ್ಗೆ ಮಹಾಲೇಖಪಾಲರು (ಸಿಎಜಿ) ಲೆಕ್ಕಪರಿಶೋಧನೆ ನಡೆಸಿ, ಅದನ್ನು ಸಂಸತ್ತಿನ ಮುಂದಿರಿಸಿದ್ದನ್ನು ನಾನಂತೂ ಕಂಡಿಲ್ಲ. ಆದರೆ, ಸರ್ಕಾರ ಹೇಳುತ್ತಿರುವುದನ್ನು ಒಮ್ಮೆ ಒಪ್ಪಿಕೊಳ್ಳೋಣ. ಇಷ್ಟು ಹಣ ಉಳಿತಾಯ ಮಾಡಲು ಬೇರೆ ಮಾರ್ಗಗಳು ಇರಲಿಲ್ಲವೇ? ಅಷ್ಟು ಹಣ ಉಳಿಸಲು ದೇಶವಾಸಿಗಳೆಲ್ಲರ ಬಯೊಮೆಟ್ರಿಕ್ ಮಾಹಿತಿ ಪಡೆಯಬೇಕಿತ್ತೇ? ಸೊಳ್ಳೆಯನ್ನು ಕೊಲ್ಲಲು ಸುತ್ತಿಗೆ ಬೇಕಾಗಿಲ್ಲ.

2025ರಲ್ಲೋ, 2030ರಲ್ಲೋ ಒಬ್ಬ ಕ್ರೂರಿ ಅಧಿಕಾರಕ್ಕೆ ಬರುತ್ತಾನೆ ಎಂದು ಭಾವಿಸಿ. ನಮ್ಮೆಲ್ಲರಿಂದ ಸಂಗ್ರಹಿಸಿದ ಮಾಹಿತಿ ಇಟ್ಟುಕೊಂಡು ಆತ ಏನೇನು ಮಾಡಬಲ್ಲ ಎಂಬುದು ಗೊತ್ತಿದೆಯೇ? ನಿಮ್ಮ, ಕುಟುಂಬದವರ ಖಾಸಗಿ ಮಾಹಿತಿ ದುರ್ಬಳಕೆ ಮಾಡಿ, ನೀವು ಮಂಡಿಯೂರುವಂತೆ ಮಾಡಬಲ್ಲ. ಹಾಗಾಗಬೇಕೇ? ಸರ್ಕಾರಕ್ಕೂ ಮಿತಿಗಳಿವೆ. ಸಕಲ ಮಾಹಿತಿಗಳನ್ನೂ ಹೊಂದುವ ಅಧಿಕಾರ ಅದಕ್ಕಿಲ್ಲ. 

Comments
ಈ ವಿಭಾಗದಿಂದ ಇನ್ನಷ್ಟು
ಫುಟ್‌ಬಾಲ್ ಅಂಗಳದ ಮಿನುಗುತಾರೆ

ವ್ಯಕ್ತಿ
ಫುಟ್‌ಬಾಲ್ ಅಂಗಳದ ಮಿನುಗುತಾರೆ

18 Mar, 2018
 ‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

ವಾರದ ಸಂದರ್ಶನ
‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

18 Mar, 2018
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

ಕಟಕಟೆ–110
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

18 Mar, 2018

ವಿಜಯಪುರ
‘ನೀನೇನು ಎಲೆಕ್ಷನ್‌ಗೆ ನಿಲ್ತಿಯೇನಪ್ಪಾ..!’

‘ನೋಡಪ್ಪಾ ನೀ ಎಲೆಕ್ಷನ್‌ಗೆ ನಿಲ್ಲೋದಿದ್ರೇ ಹೇಳು. ಸುಮ್ನೇ ಯಾಕ ಕಾರ್ಪೊರೇಟರ್ ಆಗಾಕ ಬಡಿದಾಡ್ತಿ. ನಮ್‌ ಸದಸ್ಯರನ್ನೆಲ್ಲಾ ಒಪ್ಸಿ, ನಿನ್ನೇ ಸಿಟಿಗೆ ಎಂಎಲ್‌ಎ ಎಲೆಕ್ಷನ್‌ಗೆ ನಿಲ್ಲಸ್ತೀನಿ...’ ...

18 Mar, 2018

ಈ ಭಾನುವಾರ
ಬಟ್ಟೆ ಧರಿಸದಿದ್ದರೆ ಮಾನ ಹೋಗೋದು!

‘ಬೆಂಗಳೂರಿನ ಮಾನ ಹೋದ ಮೇಲೆ ಇನ್ನೊಂದು ವರದಿ ಕೊಟ್ಟರೆ ಜನರು ನಂಬ್ತಾರಾ’ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ, ‘ಅಯ್ಯೊ ಮಾನ ಹೇಗೆ ಹೋಗುತ್ತೆ. ನಾವು...

18 Mar, 2018