ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಿ ಹ್ಯಾಂಗ...

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ
ADVERTISEMENT


ನಾನು ಗದುಗಿನ ವೀರೇಶ್ವರ ಪುಣ್ಯಾಶ್ರಮ ಸೇರಿದ್ದು ನನ್ನ ಬಾಲ್ಯದ ಅತ್ಯಂತ ಸಿಹಿ ಘಟನೆ. 13ನೇ ವಯಸ್ಸಿಗೆ ನಾನು ಪುಣ್ಯಾಶ್ರಮ ಸೇರಿದೆ. ನನಗೆ ಬದುಕು, ಬೆಳಕು ಕೊಟ್ಟ ಪುಣ್ಯ ಜಾಗ ಆಶ್ರಮ. ಆಶ್ರಮದಲ್ಲಿ ಕಳೆದ ದಿನಗಳೆಲ್ಲವೂ ಸಿಹಿಯ ದಿನಗಳೇ.

ಬಾಲ್ಯದಲ್ಲಿ ಮನೆಯಲ್ಲಿ ತುಂಬಾ ಬಡತನವಿತ್ತು. ನಮ್ಮ ತಂದೆ-ತಾಯಿ ತುಂಬಾ ಕಷ್ಟಪಡುತ್ತಿದ್ದರು. ಬಾಲ್ಯದ ಕಹಿ ನೆನಪು ಎಂದರೆ ಬಡತನವೇ. ನಮ್ಮ ತಂದೆ-ತಾಯಿ ಕಷ್ಟಪಡುತ್ತಿದ್ದ ದಿನಗಳನ್ನು ನೆನೆದರೆ ಎದೆ ಭಾರವಾಗುತ್ತದೆ.
-ಪಂಡಿತ್ ಎಂ. ವೆಂಕಟೇಶ್ ಕುಮಾರ್
ಹಿಂದೂಸ್ತಾನಿ ವಿದ್ವಾಂಸ
* * *


1972ರ ಒಂದು ಸಂಜೆ ನಮ್ಮಮ್ಮ ನನ್ನನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಕರೆದುಕೊಂಡು ಹೋಗಿದ್ದೇ ನನ್ನ ಬಾಲ್ಯದ ಸಿಹಿ ಘಟನೆ. ಅಂದು ಬಿ.ವಿ. ಕಾರಂತರ ನಿರ್ದೇಶನದಲ್ಲಿ 'ಈಡಿಪಸ್' ನಾಟಕ ನಡೆಯುತ್ತಿತ್ತು. ಬಾಲನಟನೊಬ್ಬ ಬಂದಿರಲಿಲ್ಲ. ದಿಢೀರನೆ ನನ್ನನ್ನು ಆ ಪಾತ್ರಕ್ಕೆ ಸಜ್ಜುಗೊಳಿಸಿದರು. ಆಗ ನನಗೆ 9 ವರ್ಷ. ಆ ಘಟನೆಯನ್ನು ನಾನು ಎಂದೂ ಮರೆಯಲಾರೆ.

ಇನ್ನು ನಮ್ಮ ತಂದೆ ನಮ್ಮನ್ನು ಬಿಟ್ಟುಹೋಗಿದ್ದು ನನ್ನ ಬಾಲ್ಯದ ಅತ್ಯಂತ ಕಹಿ ಘಟನೆ. ತಂದೆ ನಮ್ಮನ್ನು ತೊರೆದು ಹೋದ ಮರು ದಿನ ತುಂಬಾ ಅಪಮಾನವಾಯಿತು. ಅದು ನನ್ನ ಜೀವನದಲ್ಲೇ ತುಂಬಾ ಕಹಿಯಾದ ದಿನ.
-ಬಿ. ಸುರೇಶ್
ಚಲನಚಿತ್ರ ನಿರ್ಮಾಪಕ-ನಿರ್ದೇಶಕ
* * *


ನಾನು ಬಾಲ್ಯ ಕಳೆದ ಹಳ್ಳಿಯಲ್ಲಿನ ಬಹುತೇಕ ನೆನಪುಗಳು ಸಿಹಿಯೇ. ನಮ್ಮಪ್ಪ ಶಿಕ್ಷಕರಾಗಿದ್ದರು. ಇಡೀ ಹಳ್ಳಿ ನಮ್ಮ ಕುಟುಂಬವನ್ನು ಸಲಹುತ್ತಿತ್ತು. ಹಳ್ಳಿಯ ಎಲ್ಲರ ಮನೆ, ತೋಟ, ಹೊಲಗಳೂ ನಮ್ಮವೇ ಎನ್ನುವಷ್ಟು ಮುಕ್ತ ವಾತಾವರಣವಿತ್ತು.

ಹಳ್ಳಿಯ ಒಬ್ಬ ಮಹಿಳೆ ಗೌಡನ ಸೊಸೆಯ ಬಗ್ಗೆ ಏನೋ ಮಾತನಾಡಿದಳು ಎಂಬ ಕಾರಣಕ್ಕೆ ಪಂಚಾಯ್ತಿ ಸೇರಿಸಿ ಆಕೆಗೆ ಪೊರಕೆಯಲ್ಲಿ ಹೊಡೆದಿದ್ದರು. ಆ ಘಟನೆ ಬಾಲ್ಯದ ಕಹಿ ನೆನಪಾಗಿ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಆ ಕ್ರೌರ್ಯವನ್ನು ಹಳ್ಳಿಯ ಯಾರೂ ಅಂದು ಪ್ರಶ್ನೆ ಮಾಡಲಿಲ್ಲವಲ್ಲ ಎಂದು ಮನಸ್ಸು ಈಗಲೂ ಮರುಗುತ್ತದೆ.
-ಜಿ. ರಾಮಕೃಷ್ಣ
ಹಿರಿಯ ಲೇಖಕರು
* * *


ಬಾಲ್ಯದಲ್ಲಿ ನಮ್ಮ ತಂದೆ 'ಬಾಲಮಿತ್ರ', 'ಚಂದಮಾಮ' ಕಥೆಪುಸ್ತಕಗಳನ್ನು ತಂದುಕೊಡುತ್ತಿದ್ದರು. ಅದರಲ್ಲಿದ್ದ ಚಿತ್ರಗಳನ್ನು ನೋಡಿಕೊಂಡು ಚಿತ್ರ ಬರೆಯುವಂತೆ ನನಗೆ ಹೇಳುತ್ತಿದ್ದರು. ಕಥೆ ಪುಸ್ತಕ ಓದುತ್ತಿದ್ದದ್ದು ಹಾಗೂ ಅವುಗಳಲ್ಲಿನ ಚಿತ್ರಗಳನ್ನು ಬರೆಯುತ್ತಿದ್ದದ್ದು ನನ್ನ ಬಾಲ್ಯದ ಸಿಹಿ ನೆನಪು.

ನಾನು ಆರು ವರ್ಷದವನಿದ್ದಾಗ ಮಳೆಗಾಲದ ಒಂದು ಸಂಜೆ ನಮ್ಮ ತಂದೆಯ ಸಾವಿನ ಸುದ್ದಿ ಬಂತು. ಅದು ನನ್ನ ಬಾಲ್ಯದ ಹಾಗೂ ಜೀವನದ ಅತ್ಯಂತ ಕಹಿ ಘಟನೆ. ಈಗಲೂ ಸಂಜೆ ಮಳೆಯಾದರೆ ಅಪ್ಪನ ಸಾವಿನ ನೆನಪೇ ಕಾಡುತ್ತದೆ.
-ವಿ. ಮನೋಹರ್
ಸಂಗೀತ ನಿರ್ದೇಶಕ
* * *


ಅವು ಯುಕೆಜಿಯ ದಿನಗಳು. ಕಾನ್ವೆಂಟಿಗೆ ಹೋಗಿದ್ದ ನಾನು ಮನೆಗೆ ಹೋಗುವ ದಾರಿಯಲ್ಲಿ ಕಂಡ ಕಲ್ಯಾಣಮಂಟಪಕ್ಕೆ ಹೋಗಿದ್ದೆ. ಮದುವೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದವರು ನಾನು ವಧುವಿನ ಕಡೆಯವರ ಮಗುವೇನೋ ಎಂದು ನನ್ನನ್ನು ಕೊನೆಯ ಗಾಡಿಗೆ ಕೂರಿಸಿಕೊಂಡು ಹೋಗಿದ್ದರು. ಅವರ ಮನೆಯಲ್ಲಿ ಮದುವೆಗೆ ಮಾಡಿದ್ದ ಸಿಹಿತಿನಿಸುಗಳನ್ನು ಕೊಟ್ಟು ಎರಡು ದಿನ ಚೆನ್ನಾಗಿ ನೋಡಿಕೊಂಡಿದ್ದರು. ಆ ಮೇಲೆ ಯಾರೋ ನಮ್ಮ ಮನೆಯವರಿಗೆ ಪರಿಚಯದವರು ಇವರ ಮನೆಗೆ ಬಂದಾಗ, 'ಇದು ಹಾರೋಹಳ್ಳಿಯ ಹುಡುಗಿ' ಎಂದು ಹೇಳಿದ ಮೇಲೆ ನಾನು ನಮ್ಮ ಮನೆ ಸೇರಿದ್ದು. ಬಾಲ್ಯ ಎಂದರೆ ಈ ಘಟನೆ ತುಂಬಾ ನೆನಪಾಗುತ್ತದೆ.

ಒಂದು ದಿನ ನನ್ನ ಗೆಳತಿಯ ಕೈಲಿದ್ದ ಬಲೂನ್ ನನ್ನ ಕೈತಾಗಿ ಮೋರಿಗೆ ಬಿದ್ದು ಹೋಯಿತು. ಅವಳ ಅಜ್ಜಿ ನನ್ನನ್ನು ಕೊಳಚೆ ತುಂಬಿದ್ದ ಮೋರಿಗೆ ಇಳಿಸಿ ನನ್ನಿಂದ ಬಲೂನನ್ನು ಎತ್ತಿಸಿದ್ದರು. ಅದು ಅತ್ಯಂತ ಕಹಿ ಘಟನೆ. ಬಾಲ್ಯ ಎಂದರೆ ನನಗೆ ತಕ್ಷಣಕ್ಕೆ ನೆನಪಾಗುವುದು ನನ್ನ ಹಳ್ಳಿ ಮತ್ತು ನಮ್ಮಪ್ಪ.
-ಅಕ್ಷತಾ ಪಾಂಡವಪುರ
ರಂಗಭೂಮಿ-ಚಲನಚಿತ್ರ ಕಲಾವಿದೆ
* * *


ಬಾಲ್ಯದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ ನೆನಪುಗಳು ಸಿಹಿಯಾದವು. ಶಾಲೆಗೆ ಹೋಗಲು ಗದ್ದೆಯ ನಡುವಲ್ಲೆಲ್ಲಾ ನಡೆದುಹೋಗುತ್ತಿದ್ದೆವು. ಮಳೆಗಾಲದಲ್ಲಿ ಷೂ ಹಾಕಿಕೊಂಡು ಶಾಲೆಗೆ ಹೋಗುವುದೇ ಸವಾಲಾಗುತ್ತಿತ್ತು. ಮನೆಯಿಂದ ಶಾಲೆಗೆ ಹೋಗಲು ಸರಿಯಾದ ರಸ್ತೆ ಇರಲಿಲ್ಲ. ನಾವು ಹುಡುಗರು ಕೈಯಲ್ಲಿ ಷೂ ಹಿಡಿದುಕೊಂಡು ಗದ್ದೆ ದಾಟಿ, ಕೆಸರಿನ ದಾರಿಯಲ್ಲಿ ನಡೆದು ಆಮೇಲೆ ಕಾಲು ತೊಳೆದು ಷೂ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆವು. ಸುಮಾರು ಎರಡು ಕಿ.ಮೀ. ನಾವು ಹೀಗೆ ಸಾಹಸ ಪಟ್ಟು ಶಾಲೆ ಸೇರುತ್ತಿದ್ದೆವು. ಆ ದಿನಗಳು ತುಂಬಾ ಕಾಡುತ್ತವೆ. ನನಗೆ ಕಹಿ ಎನಿಸುವ ಬಾಲ್ಯದ ನೆನಪುಗಳು ಯಾವುವೂ ಇಲ್ಲ.
-ವಿ.ಆರ್. ರಘುನಾಥ್
ಹಾಕಿ ಆಟಗಾರ
* * *


ನಮ್ಮ ಶಾಲೆಯಲ್ಲಿ ರಾಮಚಂದ್ರಪ್ಪ ಎಂಬ ತುಂಬಾ ಒಳ್ಳೆಯ ಶಿಕ್ಷಕರಿದ್ದರು. ಅವರು ನಮಗೆ ಗಣಿತ ಮತ್ತು ಇಂಗ್ಲಿಷ್‍‍ ಕಲಿಸುತ್ತಿದ್ದರು. ಒಂದು ದಿನ ಅವರು ಬಿಡಿಸುತ್ತಿದ್ದ ಗಣಿತದ ಲೆಕ್ಕ ತಪ್ಪಾಗಿತ್ತು. ಅದನ್ನು ನಾನು ತರಗತಿಯಲ್ಲೇ ಎದ್ದು ನಿಂತು ಹೇಳಿದ್ದೆ. ಅದನ್ನು ತಿದ್ದಿದ ಅವರು, 'ಗುರು ತಪ್ಪು ಮಾಡಿದರೂ ಹೀಗೆ ಎತ್ತಿ ತೋರಿಸಬೇಕು. ಇದು ಒಳ್ಳೆಯ ಶಿಷ್ಯನ ಲಕ್ಷಣ' ಎಂದು ಹೇಳಿದ್ದರು. ಇದು ನನ್ನ ಬಾಲ್ಯದ ಮರೆಯಲಾಗದ ಸಿಹಿ ಘಟನೆ.

ಒಂದು ದಿನ ಶಾಲೆಯ ಪಕ್ಕದ ಮರದಲ್ಲಿ ಮಕ್ಕಳೆಲ್ಲ ಆಟವಾಡುತ್ತಿದ್ದೆವು. ನಮಗಿಂತ ದೊಡ್ಡ ಹುಡುಗನೊಬ್ಬ ಬೀಸಿದ ಕಡ್ಡಿ ಹುಡುಗಿಯೊಬ್ಬಳ ಕೆನ್ನೆಗೆ ಬಿದ್ದು ಗಾಯವಾಯಿತು. ಆ ದೊಡ್ಡ ಹುಡುಗ ಕಡ್ಡಿ ಬೀಸಿದ ಆರೋಪವನ್ನು ತನ್ನ ಕುಟಿಲತೆಯಿಂದ ನನ್ನ ಮೇಲೆ ಹೊರೆಸಿದ. ಮಾಡದ ತಪ್ಪಿಗೆ ಆರೋಪ ಹೊತ್ತು ಅಪರಾಧಿ ಸ್ಥಾನದಲ್ಲಿ ನಿಂತ ಆ ಘಟನೆ ಬಾಲ್ಯದ ಕಹಿ ನೆನಪು.
-ರವಿಕೃಷ್ಣಾ ರೆಡ್ಡಿ
ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT