ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐದನೇ ಋತು’ವಿನಲ್ಲಿ ಉಸಿರುಗಟ್ಟಿದ ಲಾಹೋರ್

ಮೆಹ್ರೀನ್ ಜಹ್ರಾ ಮಲಿಕ್ / ನ್ಯೂಯಾರ್ಕ್ ಟೈಮ್ಸ್
Last Updated 11 ನವೆಂಬರ್ 2017, 20:12 IST
ಅಕ್ಷರ ಗಾತ್ರ

ಪಾಕಿಸ್ತಾನದ ಎರಡನೇ ಅತಿ ದೊಡ್ಡ ನಗರಿ ಲಾಹೋರ್ ಎರಡು ವಾರಗಳ ಕಾಲ, ವಿಮಾನ ನಿಲ್ದಾಣದ ಧೂಮಪಾನಿಗಳ ಬೃಹತ್ ‘ಲಾಂಜ್’ ತರಹ ಆಗಿತ್ತು. ಬುಧವಾರ ವಾಯುಮಾಲಿನ್ಯದ ಪ್ರಮಾಣ ತೋರುವ ಮಾಪಕದ ಮಾನಿಟರ್ ನೋಡಿ ಅಬಿದ್ ಒಮರ್ ಅವರಿಗೆ ಚಳಿ ಜಾಸ್ತಿಯಾಯಿತು.

ಒಂದು ಘನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಪ್ರಮಾಣ 1,077 ಮೈಕ್ರೋಗ್ರಾಂನಷ್ಟು ಇರುವುದನ್ನು ಮಾನಿಟರ್ ಖಚಿತಪಡಿಸಿತು.

‘ಪಾರ್ಟಿಕ್ಯುಲೇಟ್ ಮ್ಯಾಟರ್ಸ್ 2.5 ಅಥವಾ ಪಿಎಂ 2.5’ ಎಂಬ ಈ ಕಣಗಳು ಶ್ವಾಸಕೋಶದ ಆಳವನ್ನು ಸುಲಭವಾಗಿ ತಲುಪುತ್ತವೆ. ರಕ್ತನಾಳಗಳನ್ನೂ ಸಲೀಸಾಗಿ ಪ್ರವೇಶಿಸುತ್ತವೆ. ಪಾಕಿಸ್ತಾನ ಸರ್ಕಾರವು ಸುರಕ್ಷಿತ ಎಂದು ನಿಗದಿಪಡಿಸಿರುವುದಕ್ಕಿಂತ ಮಾಲಿನ್ಯಕಾರಕ ಕಣಗಳ ಪ್ರಮಾಣ 30 ಪಟ್ಟು ಹೆಚ್ಚಾಗಿರುವುದನ್ನು ಮಾನಿಟರ್ ದೃಢಪಡಿಸಿತು.

‘ಇಡೀ ದಿನ ಹೊಂಜನ್ನು ನೋಡಬಹುದು. ಅಷ್ಟೇ ಅಲ್ಲದೆ ಅದರ ಕಮಟು ಮೂಗಿಗೆ ಬಡಿಯುತ್ತದೆ. ಕಶ್ಮಲ ಮೆತ್ತಿಕೊಳ್ಳುವುದೂ ಗೊತ್ತಾಗುತ್ತದೆ’ ಎನ್ನುತ್ತಾರೆ ಲಾಹೋರ್‌ನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ 26 ವರ್ಷ ವಯಸ್ಸಿನ ಅಮ್ನಾ ಮನನ್. 1.10 ಕೋಟಿ ಜನರಿರುವ ಲಾಹೋರ್‌ನ ಈ ನಿವಾಸಿಗೆ ಉಸಿರಾಡಲೂ ಈಗೀಗ ಭಯವಾಗುತ್ತಿದೆ.

ದೆಹಲಿಯ ವಾಯುಮಾಲಿನ್ಯದ ತೀವ್ರತೆ ಇತ್ತೀಚೆಗೆ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಪರಿಣತರು ಹೇಳುವಂತೆ ಗಾಳಿಯಲ್ಲಿನ ವಿಷಕಾರಕ ಅಂಶಗಳ ವಿಷಯದಲ್ಲಿ ಭಾರತದ ರಾಜಧಾನಿಗೆ ಲಾಹೋರ್ ಸಡ್ಡುಹೊಡೆಯುತ್ತಿದೆ. ಸಮಸ್ಯೆ ಕೇವಲ ನಗರಕ್ಕೆ ಸೀಮಿತವಾಗಿಲ್ಲ; 2015ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದಂತೆ ಪಾಕಿಸ್ತಾನದ ಸುಮಾರು 60,000 ಮಂದಿ ಗಾಳಿಯಲ್ಲಿನ ಅತಿಯಾದ ಮಾಲಿನ್ಯಕಾರಕ ಕಣಗಳಿಂದ ಮೃತಪಟ್ಟಿದ್ದಾರೆ. ವಿಶ್ವದಲ್ಲಿಯೇ ಮಾಲಿನ್ಯದಿಂದ ಅತಿ ಹೆಚ್ಚು ಸಾವುಗಳನ್ನು ಕಂಡ ದೇಶಗಳಲ್ಲಿ ಪಾಕಿಸ್ತಾನವೂ ಒಂದು.

ಪಾಕಿಸ್ತಾನದ ಪರಿಸರವಾದಿಗಳು ನವೆಂಬರ್ ತಿಂಗಳನ್ನು ‘ಐದನೇ ಋತು’ ಎಂದೇ ವರ್ಷಗಳಿಂದ ಉಲ್ಲೇಖಿಸುತ್ತಾ ಬಂದಿದ್ದಾರೆ. ಈ ತಿಂಗಳಲ್ಲಿ ನಾಶವಾದ ಬೆಳೆಗಳನ್ನು ಸುಡುವವರು ಹೆಚ್ಚು. ಚಳಿಯಿಂದ ಪಾರಾಗಲು ಉರುವಲಿಗೆ ಬೆಂಕಿ ಹಾಕುವವರೂ ಜಾಸ್ತಿ. ಇದರಿಂದಾಗಿ ಚಳಿಗಾಳಿಯ ಜೊತೆಗೆ ಹೊಗೆಯೂ ಬೆರೆತು ಇಡೀ ಲಾಹೋರ್‌ಗೆ
ಹೊದಿಕೆಯಂತಾಗುತ್ತದೆ. ಲಾಹೋರ್ ಅಷ್ಟೇ ಅಲ್ಲದೆ ಪಂಜಾಬ್‍ನ ಕೆಲವು ಪ್ರಾಂತ್ಯಗಳಲ್ಲಿ ಈ ಐದನೇ ಋತುವಿನಲ್ಲಿ ಹೊಂಜು ಕವಿಯುತ್ತದೆ. ಪಂಜಾಬ್ ಗಡಿಯಲ್ಲಿ ಇರುವ ಭಾರತದಂತೆಯೇ ಈ ಸಮಸ್ಯೆ ಬರಬರುತ್ತಾ ಉಲ್ಬಣಿಸುತ್ತಾ ಇದ್ದು, ಅಧ್ವಾನದ ಸ್ಥಿತಿ ತಲುಪಿದೆ. ಪಾಕಿಸ್ತಾನೀಯರು ಇದನ್ನೇ ಅತಿ ಅಪಾಯಕಾರಿ ಮಟ್ಟ ಎಂದು ಹೇಳುತ್ತಾ ಬಂದಿರುವುದು.

ಪರಿಸ್ಥಿತಿ ಹೀಗಿದ್ದೂ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಅಂಶಗಳು ಯಾವುವು ಅಥವಾ ಮಾಲಿನ್ಯದ ಪ್ರಮಾಣ ಎಷ್ಟು ಗಂಭೀರವಾಗಿದೆ ಎಂಬ ಅಧಿಕೃತ ಅಂಕಿಅಂಶ ಲಭ್ಯವಿಲ್ಲ. ಹೊಂಜು ನಿಯಂತ್ರಣಕ್ಕೆ ಹೊಸ ಯೋಜನೆಯನ್ನು ಈ ತಿಂಗಳು ಘೋಷಿಸಿದಾಗ ಪಂಜಾಬ್ ಸರ್ಕಾರ ಅರೆಬರೆ ಅಂಕಿಅಂಶ ಅಷ್ಟೇ ಲಭ್ಯವಿದೆ ಎನ್ನುವುದನ್ನು ಒಪ್ಪಿಕೊಂಡಿತು. ಪಿಎಂ 2.5 ಕಣಗಳ ಪ್ರಮಾಣ ಪ್ರತಿ ಘನ ಮೀಟರ್ ಗಾಳಿಯಲ್ಲಿ 35 ಮೈಕ್ರೋಗ್ರಾಂನಷ್ಟು ಮಾತ್ರ ಇರಬೇಕು. ಅದು ಪದೇಪದೇ ಹೆಚ್ಚಾಗಿರುವುದು ಸ್ಪಷ್ಟವಾಗಿದೆ ಎಂದಷ್ಟೇ ಹೇಳಿತು.

ಪಂಜಾಬ್‍ನ ಪರಿಸರ ರಕ್ಷಣಾ ಇಲಾಖೆಯ ನಿರ್ದೇಶಕ ನಸೀಂ-ಉರ್-ರೆಹಮಾನ್ ಹೇಳುವಂತೆ, ವಾಯುಮಾಲಿನ್ಯದ ಪ್ರಮಾಣ ಅಳೆಯುವ ಆರು ಮಾನಿಟರ್‌ಗಳನ್ನು ಸರ್ಕಾರ ಕಳೆದ ವರ್ಷ ಖರೀದಿಸಿತು. ಆದರೆ, ಅವನ್ನು ಅಳವಡಿಸಲೇ ಇಲ್ಲ. ಕಳೆದ ವಾರ ಹೊಂಜಿನ ಪ್ರಮಾಣ ಅತಿಯಾಗಿ, ಮಾಲಿನ್ಯದ ಪ್ರಮಾಣ ಎಷ್ಟಾಗಿದೆ ಎಂದೇ ಗೊತ್ತಾಗುತ್ತಿಲ್ಲ ಎಂದು ಜನ ಅಲವತ್ತುಕೊಳ್ಳತೊಡಗಿದ ಮೇಲಷ್ಟೇ ಲಾಹೋರ್‍ನ ವಿವಿಧೆಡೆ ಮಾನಿಟರ್‌ಗಳನ್ನು ಅಳವಡಿಸಲಾಯಿತು. ‘ಈಗ ಇಲಾಖೆಯು ಮಾಲಿನ್ಯವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ’ ಎಂದು ಅವರು ಹೇಳಿದರಾದರೂ, ಕಳೆದ ಗುರುವಾರದವರೆಗೂ ಗಾಳಿಯಲ್ಲಿನ ಮಾಲಿನ್ಯಕಾರಕ ಕಣಗಳ ಪ್ರಮಾಣ ಎಷ್ಟು ಎಂದು ಇಲಾಖೆ ತಿಳಿಸಲಿಲ್ಲ.

‘ಇದು ಸೂಕ್ಷ್ಮ ಸಮಸ್ಯೆಯೊಂದಕ್ಕೆ ಸಂಬಂಧಿಸಿದ ಮಾಹಿತಿ’ ಎಂದು ಲಾಹೋರ್‍ನ ಪರಿಸರವಾದಿ ವಕೀಲ ಹಾಗೂ ಚಳವಳಿಕಾರ ಅಹಮದ್ ರಫೇ ಆಲಂ ಹೇಳುತ್ತಾರೆ. ಲಾಹೋರ್‍ನಷ್ಟು ದೊಡ್ಡ ನಗರಕ್ಕೆ ಮಾಲಿನ್ಯ ಅಳೆಯಲು ಕೇವಲ ಆರು ಮಾನಿಟರ್‍ಗಳು ಯಾತಕ್ಕೂ ಸಾಲದು ಎನ್ನುವುದು ಅವರ ಅಭಿಪ್ರಾಯ. ಅಧಿಕೃತ ಮಾಹಿತಿ ಲಭ್ಯವಾಗುತ್ತಿಲ್ಲವಾದ್ದರಿಂದ ಕೆಲವು ಪಾಕಿಸ್ತಾನೀಯರು ತಾವೇ ಮಾರ್ಗೋಪಾಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅಂಥವರಲ್ಲಿ ಒಮರ್ ಕೂಡ ಒಬ್ಬರು. ಲಾಹೋರ್, ಇಸ್ಲಾಮಾಬಾದ್, ಪೆಶಾವರ ಹಾಗೂ ಕರಾಚಿಯಲ್ಲಿ ವಾಯುಮಾಲಿನ್ಯ ಅಳೆಯುವ ಮಾನಿಟರ್‍ಗಳನ್ನು ಅವರು ಅಳವಡಿಸಿದ್ದಾರೆ. ಕರಾಚಿ ನಿವಾಸಿಯಾದ ಅವರು ಮಾನಿಟರ್‍ಗಳಲ್ಲಿ ದಾಖಲಾಗುವ ಮಾಹಿತಿಯನ್ನು ಆಗಿಂದಾಗ್ಗೆ ಹಂಚಿಕೊಳ್ಳಲು ಟ್ವಿಟರ್ ಖಾತೆ ಕೂಡ ತೆರೆದಿದ್ದಾರೆ.

ಚೀನಾದ ಬೀಜಿಂಗ್‍ನಲ್ಲಿ ವಾಸವಿದ್ದಾಗ ಒಮರ್ ತಮಗಾದ ಅನುಭವದಿಂದ ಸ್ಫೂರ್ತಿ ಪಡೆದು ಈ ಕೆಲಸ ಮಾಡಿದ್ದಾರೆ. ಅಲ್ಲಿ ಅಮೆರಿಕ ರಾಯಭಾರ ಕಚೇರಿಯವರು ಮಾಲಿನ್ಯದ ಪ್ರಮಾಣವನ್ನು ಹಂಚಿಕೊಳ್ಳಲು ಟ್ವಿಟರ್ ಖಾತೆ ತೆರೆದಿದ್ದರು. ಚೀನಾದ ಆಡಳಿತವರ್ಗದವರಿಗೆ ಮಾಲಿನ್ಯ ಅಳೆಯುವ ಮಾನಿಟರ್‍ಗಳನ್ನು ಅಳವಡಿಸಲು ಅದೇ ಎಚ್ಚರಿಕೆಯಾಗಿ ಪರಿಣಮಿಸಿತ್ತು. ರಾಜಧಾನಿ ಅಷ್ಟೇ ಅಲ್ಲದೆ ವಿವಿಧೆಡೆಗಳಲ್ಲೂ ಚೀನಾ ಸರ್ಕಾರ ಡಜನ್ ಗಟ್ಟಲೆ ಮಾನಿಟರ್‍ಗಳನ್ನು ಅಳವಡಿಸಿತ್ತು.

‘ಚೀನಾದಲ್ಲಿ ವಾಯುಮಾಲಿನ್ಯವು ರಾಷ್ಟ್ರಮಟ್ಟದ ಸಂವಾದಕ್ಕೆ ಒಳಪಡಲು ಹಾಗೂ ಬಿಕ್ಕಟ್ಟಿಗೆ ಪರಿಹಾರ ಹುಡುಕುವಂತೆ ಮಾಡಲು ಅಂಕಿಅಂಶದ ಅಗತ್ಯವಿದೆ ಎಂದು ನನಗೆ ಗೊತ್ತಾಯಿತು’ ಎನ್ನುವ ಒಮರ್, ಪಾಕಿಸ್ತಾನದಲ್ಲೂ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ.

ಲಾಹೋರ್‍ನ ಅನೇಕ ಮಧ್ಯಮವರ್ಗ ಹಾಗೂ ಮೇಲ್ಮಧ್ಯಮವರ್ಗದವರಲ್ಲಿ ಒಮರ್ ಅವರ ಟ್ವಿಟರ್ ಅಪ್‍ಡೇಟ್‍ಗಳು ಅರಿವು ಮೂಡಿಸುತ್ತಿವೆ. ಎಷ್ಟೋ ಜನ ವಾಯು ಶುದ್ಧೀಕರಣ ಸಾಧನಗಳನ್ನು ಕೊಳ್ಳಲು, ಬಾಯಿ-ಮೂಗು ಮುಚ್ಚಿಕೊಳ್ಳುವಂಥ ಕವಚ ತೊಡಲು ಪ್ರೇರಣೆಯಾಗಿವೆ.

ಆಯೆಶಾ ರಾಜಾ ಎಂಬ ಪರಿಸರವಾದಿಯ ಜನಪ್ರಿಯ ಪುಸ್ತಕದ ಮಳಿಗೆ ಲಾಹೋರ್‍ನಲ್ಲಿ ಇದೆ. ಅವರೂ ಫೇಸ್‍ಬುಕ್ ಗ್ರೂಪ್ ಮಾಡಿದ್ದಾರೆ. ಅದರ ಹೆಸರು - ‘ಸಿಟಿಜನ್ ಫಾರ್ ಕ್ಲೀನ್ ಏರ್’. ಹೊಂಜಿನ ಸಮಸ್ಯೆ ನಿವಾರಿಸಲು ಮಾರ್ಗೋಪಾಯಗಳನ್ನು ಸೂಚಿಸಿ, ಅವನ್ನು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶ ಈ ಗ್ರೂಪ್‍ಗೆ ಇದೆ.

‘ಸರ್ಕಾರಿ ಯಂತ್ರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲವಾಗಿದೆ’ ಎನ್ನುವ ರಾಜಾ, ‘ಸರ್ಕಾರದ ಮೇಲೆ ಒತ್ತಡ ಹೇರುವ ಸಮೂಹವಾಗಿ ಕೆಲಸ ಮಾಡುವ, ಅದರ ನಡೆಗಳನ್ನು ಪ್ರಶ್ನಿಸುವ ಕೆಲಸವನ್ನು ನಾವು ಮಾಡಬೇಕು. ಆಗ ಸರ್ಕಾರ ಏನಾದರೂ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ.

ಗಂಟಲು ನೋವು, ಕಣ್ಣು ಉರಿಗೆ ಕಾರಣವಾಗುವ ಪಂಜಾಬ್‍ನ ಹೊಂಜು ಹಲವು ಸಮಸ್ಯೆಗಳನ್ನು ಒಡ್ಡಿದೆ. ಕಳೆದ ಮಂಗಳವಾರ ಒಂದೇ ದಿನ ಕನಿಷ್ಠ ಒಂದು ಡಜನ್ ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟರು. ಲಾಹೋರ್ ರಸ್ತೆಗಳು ಹೊಂಜು ಕವಿದ ಕಾರಣಕ್ಕೆ ಕಾಣದಂತೆ ಆಗಿರುವುದು ಇದಕ್ಕೆ ಕಾರಣ ಎಂದು ಪೊಲೀಸರು ಹೇಳುತ್ತಾರೆ. ಪ್ರಮುಖ ಹೆದ್ದಾರಿಗಳಲ್ಲಿ ನಿತ್ಯವೂ ಸ್ವಲ್ಪಕಾಲ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವಷ್ಟು ಹೊಂಜು ಕವಿದಿತ್ತು.

ತೈಲವನ್ನು ಇಂಧನವನ್ನಾಗಿ ಬಳಸುವ 13 ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಳೆದ ಒಂದು ವಾರದಿಂದ ಕಾರ್ಯ ಸ್ಥಗಿತಗೊಳಿಸಲಾಗಿದೆ. ಇನ್ನೂ ನಾಲ್ಕು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಅನೇಕ ನಗರಗಳಲ್ಲಿ 12 ತಾಸು ವಿದ್ಯುತ್ ವ್ಯತ್ಯಯವಾಗುತ್ತಿದೆ. 500ಕ್ಕೂ ಹೆಚ್ಚು ಮಂದಿ ಪ್ರತಿದಿನ ಶ್ವಾಸಕೋಶದ ಸಮಸ್ಯೆ ಅಥವಾ ಕಣ್ಣಿನ ಉರಿ ಎಂದು ಹೇಳಿಕೊಂಡು ಲಾಹೋರ್‌ನ ಆಸ್ಪತ್ರೆಯೊಂದಕ್ಕೆ ಬರುತ್ತಿದ್ದಾರೆ.

‘ಲಾಹೋರ್ ಈಗ ಕಸ ಜಮೆಯಾದ ನರಕಕೂಪದಂತೆ ಕಾಣುತ್ತಿದೆ; ‘ಬ್ಲೇಡ್ ರನ್ನರ್’ ಸಿನಿಮಾದ ದೃಶ್ಯದಂತೆ’ ಎಂದು ವ್ಯಾಪಾರಿ ಆದಿಲ್ ಘಾಜಿ ವಿಷಾದಿಸುತ್ತಾರೆ.

ನಾಶಗೊಂಡ ಬೆಳೆ ಹಾಗೂ ಘನತ್ಯಾಜ್ಯ ಸುಡುವುದನ್ನು ನಿಷೇಧಿಸಿರುವುದೂ ಒಳಗೊಂಡಂತೆ ಹಲವು ತುರ್ತು ಕ್ರಮಗಳನ್ನು ಕೈಗೊಂಡಿರುವುದಾಗಿ ಪಂಜಾಬ್ ಸರ್ಕಾರ ಹೇಳುತ್ತಿದೆ. ಬೆಳೆ ಸುಟ್ಟ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ಸರಿಯಾದ ಪರಿಸರ ಸಂರಕ್ಷಣಾ ಕ್ರಮಗಳನ್ನು ಅನುಸರಿಸದ ನೂರಾರು ಕಾರ್ಖಾನೆಗಳನ್ನೂ ಮುಚ್ಚಿಸಲಾಗಿದೆ ಎಂದೂ ಹೇಳಿಕೊಂಡಿದೆ. ಲಾಹೋರ್ ಸಂಚಾರ ಪೊಲೀಸರು ಹೆಚ್ಚು ಹೊಗೆಯುಗುಳುವ ವಾಹನಗಳ ಚಾಲಕರು/ಸವಾರರಿಂದ ಇತ್ತೀಚೆಗೆ 50 ಸಾವಿರ ಡಾಲರ್ (₹ 32.5 ಲಕ್ಷಕ್ಕೂ ಹೆಚ್ಚು) ದಂಡ ಕಟ್ಟಿಸಿಕೊಂಡಿರುವುದಾಗಿ ಹೇಳಿದ್ದಾರೆ. ಸರಕು ಸಾಗಣೆ ವಾಹನಗಳು ಹೆಚ್ಚು ಮಾಲಿನ್ಯ ಉಂಟುಮಾಡುವು
ದಿಲ್ಲವಷ್ಟೆ ಎಂದು ಪರಿಶೀಲಿಸಲೆಂದೇ ಎರಡು ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಪರಿಸರವಾದಿಗಳ ಪ್ರಕಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ಇನ್ನಷ್ಟು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಇಂಧನದ ಗುಣಮಟ್ಟ ಸುಧಾರಣೆ, ಹೊಗೆಯುಗುಳುವ ಕಾರುಗಳ ಸಂಚಾರ ನಿರ್ಬಂಧ, ಸೌರಶಕ್ತಿ ಹಾಗೂ ಮರುಬಳಕೆ ಇಂಧನಗಳನ್ನು ವ್ಯಾಪಕವಾಗಿ ಉಪಯೋಗಿಸಲು ಅರಿವು ಮೂಡಿಸುವುದು, ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ನೆಡುವುದು, ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದು - ಇವೆಲ್ಲ ಆಗಬೇಕಾದ ಕೆಲಸಗಳು ಎಂದು ಪರಿಸರವಾದಿಗಳು ಸೂಚಿಸುತ್ತಾರೆ.

‘ಮಾಧ್ಯಮಗಳು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿವೆ. ಜನರ ಕೋಪವೂ ಸ್ಫೋಟಗೊಳ್ಳುತ್ತಿದೆ. ಹೀಗಾಗಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಅದರೆ, ದೀರ್ಘಕಾಲಿಕ ಪರಿಹಾರದ ಕುರಿತು ಯಾರೂ ಯೋಚಿಸುತ್ತಿರುವಂತೆ ಕಾಣುತ್ತಿಲ್ಲ’ ಎಂದು ಆಲಂ ವಿಷಾದಿಸುತ್ತಾರೆ.

‘ಸರ್ಕಾರ ಬೇರೆಯವರ ಮೇಲೆ ಗೂಬೆ ಕೂರಿಸುವುದನ್ನು ಬಿಡಬೇಕು. ಭಾರತದಲ್ಲಿ ಬೆಳೆ ಸುಡುತ್ತಿರುವುದರಿಂದ ಪಾಕಿಸ್ತಾನದ ಹೊಂಜಿನ ಪ್ರಮಾಣ ಹೆಚ್ಚಾಗಿದೆ ಎಂದು ಪರಿಸರ ಇಲಾಖೆ ಅಧಿಕಾರಿಗಳು ವಾದಿಸುತ್ತಿರುವುದು ಇದಕ್ಕೆ ಉದಾಹರಣೆ’ ಎನ್ನುತ್ತಾರೆ ಅವರು.

‘ಭಾರತದಲ್ಲಿ ಬೆಳೆ ಸುಡುವುದರಿಂದ ಬರುವ ಹೊಗೆ ದೊಡ್ಡ ಸಮಸ್ಯೆ ಎನ್ನುವುದು ನಿಜವೇನೋ ಹೌದು. ಆದರೆ, ಅದೇ ಕೆಲಸ ನಮ್ಮಲ್ಲೂ ನಡೆಯುತ್ತಿರುವುದನ್ನು ಒಪ್ಪಿಕೊಳ್ಳಬೇಕು’ ಎನ್ನುವ ಒಮರ್, ಸರ್ಕಾರ ದೊಡ್ಡ ಮಟ್ಟದಲ್ಲಿ ಎಚ್ಚೆತ್ತುಕೊಂಡು ಪರಿಹಾರ ನೀಡಬೇಕು, ಜನಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸುತ್ತಾರೆ.

ದಿ ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT