ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಲಿರುವ ಅಧಿವೇಶನ

ಜಾರ್ಜ್‌, ಡಿಕೆಶಿ ರಾಜೀನಾಮೆಗೆ ಪಟ್ಟು ಹಿಡಿಯಲಿರುವ ಬಿಜೆಪಿಗೆ ಕಾಂಗ್ರೆಸ್‌ ಪ್ರತಿತಂತ್ರ
Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ವೇದಿಕೆಯಾಗಲಿದೆ.

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಬಿಜೆಪಿ ಅವಧಿಯಲ್ಲಿ ವಿದ್ಯುತ್‌ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಅವರ ಆಪ್ತರ ಮನೆಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ, ಟಿಪ್ಪು ಜಯಂತಿ ಆಚರಣೆ, ಗೌರಿ ಹತ್ಯೆ, ರೈತರ ಸಮಸ್ಯೆ ಹಾಗೂ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದಾದ ಹಾನಿ... ಇವು ಕಾವೇರಿದ ಚರ್ಚೆಗೆ ಕಾರಣವಾಗಲಿವೆ. 

ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವುದರಿಂದ ಬೆಳಗಾವಿ ಅಧಿವೇಶನ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಕಳೆದ ವರ್ಷದ ಚಳಿಗಾಲ ಅಧಿವೇಶನವೂ ಬಹುತೇಕ ಗದ್ದಲಕ್ಕೆ ಬಲಿಯಾಗಿತ್ತು. ಬೆಂಗಳೂರು– ಮೈಸೂರು ಎಕ್ಸ್‌‍ಪ್ರೆಸ್‌ ರಸ್ತೆ (ಬಿಎಂಐಸಿ) ಯೋಜನೆಗೆ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಹಗರಣ, ಬರಗಾಲ, ಮಹದಾಯಿ ಮೊದಲಾದ ವಿಷಯಗಳು ಕಲಾ‍ಪವನ್ನೇ ನುಂಗಿಹಾಕಿದ್ದವು. ಹೆಚ್ಚುಕಡಿಮೆ ಅದೇ ವಾತಾವರಣ ಈಗಲೂ ಇದ್ದಂತಿದೆ. ಆದರೆ, ಸಮಸ್ಯೆಗಳು ಮಾತ್ರ ಬೇರೆ.

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಎತ್ತಿಕೊಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಹಣಿಯಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, ಸಚಿವ ಜಾರ್ಜ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಪ್ರಕರಣದ ತನಿಖೆ ಮತ್ತೆ ಆರಂಭವಾಗಿದೆ. ಸಿಬಿಐ ದಾಖಲಿಸಿದ ಎಫ್ಐಆರ್‌ನಲ್ಲಿ ಜಾರ್ಜ್‌ ಅವರನ್ನು ಮೊದಲನೇ ಆರೋಪಿ ಎಂದು ಹೆಸರಿಸಲಾಗಿದೆ.

ಇದನ್ನು ಮುಂದಿಟ್ಟುಕೊಂಡು ಸಚಿವರ ರಾಜೀನಾಮೆಗೆ ಬಿಜೆಪಿ ನಾಯಕರು ವಿಧಾನಮಂಡಲದ ಉಭಯ ಸದನಗಳಲ್ಲೂ ಪಟ್ಟು ಹಿಡಿಯಲಿದ್ದಾರೆ.

‘ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ. ಗಣಪತಿ ಆತ್ಮಹತ್ಯೆ ಕುರಿತು ಸಿಐಡಿ ಎಫ್‌ಐಆರ್‌ ದಾಖಲಿಸಿದ ತಕ್ಷಣವೇ ಜಾರ್ಜ್‌ ಸಚಿವ ಸ್ಥಾನ ತ್ಯಜಿಸಿದ್ದರು. ಪ್ರಕರಣದಲ್ಲಿ ಅವರ ಪಾತ್ರ ಇಲ್ಲ ಎಂದು ಸಿಐಡಿ ಪೊಲೀಸರು ನ್ಯಾಯಾಲಯದಲ್ಲಿ ಬಿ ರಿಪೋರ್ಟ್‌ ಹಾಕಿದ ಬಳಿಕ ಮತ್ತೆ ಸಂಪುಟಕ್ಕೆ ಅವರನ್ನು ತೆಗೆದುಕೊಳ್ಳಲಾಗಿದೆ. ಅವರು ಪುನಃ ರಾಜೀನಾಮೆ ಕೊಡುವ ಅಗತ್ಯವಿಲ್ಲ’ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.

ಗಣಪತಿ ಪ್ರಕರಣವನ್ನು ತಣ್ಣಗೆ ಮಾಡಲು ಆಡಳಿತ ಪಕ್ಷ ಕಾಂಗ್ರೆಸ್‌ ಪ್ರತಿತಂತ್ರ ರೂಪಿಸಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿದ್ಯುತ್‌ ಖರೀದಿ ಅವ್ಯವಹಾರ ಪ್ರಸ್ತಾಪಿಸಿ ಕೋಲಾಹಲ ಎಬ್ಬಿಸಲು ಕಾಂಗ್ರೆಸ್‌ ಸದಸ್ಯರು ಸಜ್ಜಾಗಿದ್ದಾರೆ. ವಿದ್ಯುತ್‌ ಖರೀದಿ ಅಕ್ರಮ ಕುರಿತು ಪರಿಶೀಲಿಸಿರುವ ಸದನ ಸಮಿತಿ ವರದಿ ಸದನದಲ್ಲಿ ಮಂಡನೆ ಆಗುವ ಸಂಭವವಿದೆ.

2010ರಲ್ಲಿ ಖಾಸಗಿ ಕಂಪೆನಿಯೊಂದರ ಜೊತೆ 25 ವರ್ಷಗಳ ಅವಧಿಗೆ ಮಾಡಿಕೊಂಡ ವಿದ್ಯುತ್‌ ಖರೀದಿ ಒಪ್ಪಂದ ರದ್ದುಪಡಿಸಿ, ಅದೇ ಕಂಪೆನಿಯೊಂದಿಗೆ ಅಲ್ಪಾವಧಿ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಬೊಕ್ಕಸಕ್ಕೆ ₹ 28,000 ಕೋಟಿ ನಷ್ಟವಾಗಿದೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ.

ವರ್ಷಕ್ಕೆ 1580 ಮೆಗಾವಾಟ್‌ ವಿದ್ಯುತ್‌ ಅನ್ನು ಯೂನಿಟ್‌ಗೆ ₹ 3.75 ದರದಲ್ಲಿ ಖರೀದಿಸಲು ಮೊದಲು ಒಪ್ಪಲಾಗಿತ್ತು. ಅಲ್ಪಾವಧಿ ಒಪ್ಪಂದದಿಂದ ಖರೀದಿ ದರ ಯೂನಿಟ್‌ಗೆ ₹ 6.80 ಆಯಿತು. ದೀರ್ಘಾವಧಿ ಟೆಂಡರ್‌ ರದ್ದುಪಡಿಸುವಂತೆ ಶೋಭಾ ಅವರೇ ಸೂಚಿಸಿದ್ದರು. ಸಂಪುಟ ಸಭೆಗೆ ಕಳುಹಿಸಿದ ಟಿಪ್ಪಣಿಗೆ ಅವರೇ ಸಹಿ ಹಾಕಿದ್ದರು. ರಾಜ್ಯ ಸರ್ಕಾರ ಇದನ್ನು ಕೆದಕಲು ಹೊರಟಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಇಕ್ಕಟ್ಟಿನಿಂದ ಪಾರಾಗಲು ಈ ಸದನ ಸಮಿತಿಯಲ್ಲಿರುವ ಬಿಜೆಪಿ ಸದಸ್ಯರು ಆಕ್ಷೇ‍ಪ ದಾಖಲಿಸಿದ್ದಾರೆ.

ಬಿಜೆಪಿ ಸದಸ್ಯರು ಗಣಪತಿ ಹಗರಣದ ಜೊತೆಗೆ ಸಚಿವ ಶಿವಕುಮಾರ್‌ ಮತ್ತು ಅವರ ಆಪ್ತರ ಮನೆಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ ವಿಷಯವನ್ನು ಪ್ರಸ್ತಾಪಿಸಿ ಅವರ ರಾಜೀನಾಮೆಗೂ ಒತ್ತಾಯಿಸಲಿದ್ದಾರೆ. ಇದಲ್ಲದೆ, ನಿಷೇಧಾಜ್ಞೆ ನಡುವೆ ಟಿಪ್ಪು ಜಯಂತಿ ಆಚರಣೆ ಮಾಡಿದ ಸರ್ಕಾರದ ನಿಲುವು, ಗೌರಿ ಹತ್ಯೆ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲವಾಗಿರುವುದು, ರೈತರು ಅದರಲ್ಲೂ ಮೆಕ್ಕೆಜೋಳ ಬೆಳೆದು ಸಂಕಷ್ಟಕ್ಕೊಳಗಾದವರ ಸಮಸ್ಯೆಯನ್ನು ವಿರೋಧ ಪಕ್ಷಗಳು ಎತ್ತಿಕೊಳ್ಳಲಿವೆ. ಲಿಂಗಾಯತ ಪ್ರತ್ಯೇಕ ಧರ್ಮ, ದತ್ತಪೀಠ ವಿವಾದ ಮೊದಲಾದ ವಿಷಯಗಳು ಚರ್ಚೆಗೆ ಬರಲಿದೆ.

ಈ ಮಧ್ಯೆ, ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ ರೂಪಿಸಲಾಗಿರುವ ಮಸೂದೆ ಸೇರಿದಂತೆ ನಾಲ್ಕು ಮಸೂದೆ ಮಂಡಿಸುವುದಾಗಿ ಅಧಿಕೃತ ಪಟ್ಟಿಯಲ್ಲಿ ನಮೂದಿಸಲಾಗಿದೆ. ಈ ಮಸೂದೆಯ ಕೆಲವು ಅಂಶಗಳ ಬಗ್ಗೆ ಭಾರತೀಯ ವೈದ್ಯಕೀಯ ಸಂಘದ ವಿರೋಧ ವ್ಯಕ್ತಪಡಿಸಿದೆ. ಈ ಅಂಶಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಚಿವ ಸಂಪುಟವು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದೆ. ಮಸೂದೆ ವಿರೋಧಿಸಿ ವೈದ್ಯರು ಸೋಮವಾರ ಬೆಳಗಾವಿಯಲ್ಲೂ ಪ್ರತಿಭಟನೆ ನಡೆಸಲಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಮಸೂದೆ ಮಂಡನೆ ಅನುಮಾನ ಎಂದು ಹೇಳಲಾಗುತ್ತಿದೆ.

ಇದಲ್ಲದೆ, ಬಡ್ತಿ ಮೀಸಲಾತಿ, ದಕ್ಷಿಣ ಕನ್ನಡದಲ್ಲಿ ಕಂಬಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಸೂದೆ, ಮೌಢ್ಯಾಚರಣೆ ನಿಷೇಧ ಮಸೂದೆ ಹಾಗೂ ನಗರ ಪ್ರಾಧಿಕಾರಗಳ ಮಸೂದೆಗಳು ವಿಧಾನ ಮಂಡಲದಲ್ಲಿ ಮಂಡನೆ ಆಗಲಿವೆ. ಎಚ್‌.ಡಿ. ಕೋಟೆ ಶಾಸಕ ಚಿಕ್ಕಮಾದು ಹಾಗೂ ಕಲಬುರ್ಗಿ ಶಾಸಕ ಖಮರುಲ್‌ ಇಸ್ಲಾಂ ಅವರ ನಿಧನಕ್ಕೆ ಮೊದಲ ದಿನ ವಿಧಾನಸಭೆ ಸಂತಾಪ ಸೂಚಿಸಿ, ಒಂದು ದಿನ ಮುಂದಕ್ಕೆ ಹೋಗಲಿದೆ. 24ರಂದು ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನಡೆಯುವುದರಿಂದ ಕೊನೆ ದಿನವೂ ಅಧಿವೇಶನ ನಡೆಯುವುದು ಅನುಮಾನ.

ವೈದ್ಯರ ಬೆಳಗಾವಿ ಚಲೋ ಇಂದು

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ನೇತೃತ್ವದಲ್ಲಿ ವೈದ್ಯರು ಸೋಮವಾರ ‘ಬೆಳಗಾವಿ ಚಲೋ’ ನಡೆಸಲಿದ್ದಾರೆ.

‘ರಾಜ್ಯದ ವಿವಿಧೆಡೆಯಿಂದ ವೈದ್ಯರು ಈಗಾಗಲೇ ಬೆಳಗಾವಿ ಕಡೆಗೆ ಹೊರಟಿದ್ದಾರೆ. ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸದಂತೆ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಅದಕ್ಕೆ ಸರ್ಕಾರ ಒಪ್ಪದೇ ಇದ್ದರೆ ಬೇಡಿಕೆ ಈಡೇರುವ ತನಕ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಸಂಘದ ಅಧ್ಯಕ್ಷ ರಾಜಶೇಖರ ಎಸ್‌. ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆಗೆ ಸ್ಪಂದಿಸದೆ ಮಸೂದೆಗೆ ಅನುಮೋದನೆ ಪಡೆದರೆ, ಅದಕ್ಕೆ ಅಂಕಿತ ಹಾಕದಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಲು ಎಲ್ಲಾ ವೈದ್ಯರು ವೃತ್ತಿ ತ್ಯಜಿಸಲು ನಿರ್ಧರಿಸಲಾಗಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT