ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ಮೇಲೆ ಸವಾರಿಗೆ ಸಜ್ಜು

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೂರು ತಿಂಗಳ ಹಿಂದೆ ಟೆಸ್ಟ್‌, ಏಕದಿನ ಸರಣಿ ಮತ್ತು ಟ್ವೆಂಟಿ–20 ಪಂದ್ಯ ಆಡಲು ಶ್ರೀಲಂಕಾಗೆ ತೆರಳಿದ್ದ ಭಾರತ ತಂಡ ದ್ವೀಪರಾಷ್ಟ್ರದ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಮೂರೂ ಪ್ರಕಾರಗಳಲ್ಲಿ ಆಡಿದ ಎಲ್ಲ ಒಂಬತ್ತು ಪಂದ್ಯಗಳನ್ನು ಗೆದ್ದ ಭಾರತ ಸಂಕಷ್ಟದಲ್ಲಿದ್ದ ಲಂಕಾ ತಂಡಕ್ಕೆ ಆಘಾತ ನೀಡಿ ವಾಪಸಾಗಿತ್ತು.

ತಂಡದ ಶೋಚನೀಯ ಅವಸ್ಥೆಯಿಂದ ಬೇಸತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯವರೇ ಅಧಿಕಾರ ತೊರೆದು ಕೆಳಗಿಳಿದಿದ್ದರು. ನಂತರ ತಂಡದ ಮೇಲೆ ನಿರಂತರ ಟೀಕಾ ಪ್ರಹಾರ, ಸರ್ಕಾರದಿಂದ ಕ್ರಮದ ಎಚ್ಚರಿಕೆ...ಹೀಗೆ ಅನೇಕ ಘಟನಾವಳಿಗಳಿಗೆ ಅಲ್ಲಿನ ಕ್ರಿಕೆಟ್‌ ಸಾಕ್ಷಿಯಾಯಿತು. ಇದೆಲ್ಲದರ ನಂತರ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಸರಣಿಗಳಲ್ಲೂ ತಂಡ ಗುಣಮಟ್ಟದ ಕ್ರಿಕೆಟ್ ಆಡಲು ವಿಫಲವಾಯಿತು. ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆದ್ದರೂ ಏಕದಿನ ಮತ್ತು ಟ್ವೆಂಟಿ–20 ಸರಣಿಯಲ್ಲಿ ಮುಖಭಂಗ ಅನುಭವಿಸಿತು.

ಇತ್ತ ಲಂಕಾದಿಂದ ವಾಪಸಾದ ಭಾರತ ತವರಿನಲ್ಲಿ ಮತ್ತಷ್ಟು ಪ್ರಭಾವ ಬೀರಿತು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಮತ್ತು ಟ್ವೆಂಟಿ–20 ಸರಣಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿ ಕ್ರಿಕೆಟ್ ಜಗತ್ತಿನ ಹೊಗಳಿಕೆಗೆ ಪಾತ್ರವಾಯಿತು.

ಮೂರು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆಯನ್ನು ಕಂಡ ವಿರಾಟ್ ಕೊಹ್ಲಿ ಬಳಗ ಮತ್ತು ಹೊಡೆತದ ಮೇಲೆ ಹೊಡೆತ ತಿಂದಿರುವ ಶ್ರೀಲಂಕಾ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿವೆ. ಸುಮಾರು 40 ದಿನಗಳ ಪ್ರವಾಸದಲ್ಲಿ ಶ್ರೀಲಂಕಾ ತಲಾ ಮೂರು ಟೆಸ್ಟ್‌, ಮೂರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ಮೂರು ತಿಂಗಳ ಅವಧಿಯಲ್ಲಿ ಒಟ್ಟು 23 ಪಂದ್ಯಗಳ ‘ದಾಖಲೆ’ ಸರಣಿಯಲ್ಲಿ ಭಾಗಿಯಾಗಿರುವ ಭಾರತಕ್ಕೆ ಇದು ಕೊನೆಯ ಸವಾಲು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಏಕದಿನ ಹಾಗೂ ಟ್ವೆಂಟಿ–20 ಸರಣಿಯನ್ನು ಮಾತ್ರ ಆಡಿರುವ ಭಾರತ ಶ್ರೀಲಂಕಾ ಎದುರು ‘ಪೂರ್ಣ ಪ್ರಮಾಣ’ದ ಸರಣಿಗಳಲ್ಲಿ ಪಾಲ್ಗೊಂಡು ಈ ವರ್ಷದ ಕೊನೆಯನ್ನು ಸ್ಮರಣೀಯವಾಗಿಸಲು ಸಜ್ಜಾಗಿದೆ.

ಭಾರತ ಮತ್ತು ಶ್ರೀಲಂಕಾ ತಂಡಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಆಡಲು ಆರಂಭಿಸಿದ್ದು 1982–83ರ ಅವಧಿಯಲ್ಲಿ. ಈ ತಂಡಗಳ ನಡುವಿನ ಮೊದಲ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿ ಇದೇ ವರ್ಷದಲ್ಲಿ ನಡೆದಿತ್ತು. ಟೆಸ್ಟ್‌ನಲ್ಲಿ ಸುನಿಲ್ ಗಾವಸ್ಕರ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಕಪಿಲ್ ದೇವ್‌ ಪಡೆಯನ್ನು ಅಂದು ಬಂಡೂಲ ವರ್ಣಪುರ ನೇತೃತ್ವದ ಬಲಿಷ್ಠ ಲಂಕಾ ಎದುರಿಸಿತ್ತು.

ಅಂದಿನಿಂದ ಇಂದಿನವರೆಗೂ ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿಗಳು ನಿರಂತರವಾಗಿ ನಡೆಯುತ್ತ ಬಂದಿವೆ. 2008–09ರಿಂದ ಟ್ವೆಂಟಿ–20 ಸರಣಿಯೂ ಇದಕ್ಕೆ ಸೇರ್ಪಡೆಯಾಯಿತು. ಎಲ್ಲ ಪ್ರಕಾರಗಳಲ್ಲೂ ಶ್ರೀಲಂಕಾ ವಿರುದ್ಧ ಭಾರತ ಪಾರಮ್ಯ ಮೆರೆದಿದೆ. ಕೆಲವು ಸಂದರ್ಭದಲ್ಲಿ ಶ್ರೀಲಂಕಾ ಪ್ರಬಲ ತಿರುಗೇಟನ್ನೂ ನೀಡಿದೆ.

ಆದರೆ ಈಗ ಅನುಭವಿಸುವಂಥ ಸ್ಥಿತಿ ಆ ತಂಡಕ್ಕೆ ತೀರಾ ಅಪರೂಪ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲ ಕೆಲವು ವರ್ಷ ಅಷ್ಟೇನೂ ಹೆಸರು ಮಾಡದ ಲಂಕಾ ನಂತರ ಅರ್ಜುನ ರಣತುಂಗ, ಅರವಿಂದ ಡಿ’ಸಿಲ್ವಾ, ರೋಷನ್‌ ಮಹಾನಾಮ, ಹಸನ್ ತಿಲಕರತ್ನೆ ಮುಂತಾದ ದಿಗ್ಗಜರ ಮೂಲಕ ಗಮನ ಸೆಳೆಯಿತು. ಸನತ್ ಜಯಸೂರ್ಯ, ಅರವಿಂದ ಡಿ ಸಿಲ್ವಾ, ಮಾಹೇಲ ಜಯವರ್ಧನೆ, ಕುಮಾರ ಸಂಗಕ್ಕಾರ, ತಿಲಕರತ್ನೆ ದಿಲ್ಶನ್‌, ಚಮಿಂದ ವಾಸ್‌, ಮುತ್ತಯ್ಯ ಮುರಳೀಧರನ್‌ ಮುಂತಾದವರನ್ನು ಒಳಗೊಂಡ ಸಿಂಹಳೀಯರು ಎದುರಾಳಿಗಳಿಗೆ ಸಿಂಹಸ್ವಪ್ನವಾದರು.

ಆದರೆ ಈಗ ತಂಡ ದಯನೀಯ ಸ್ಥಿತಿಯಲ್ಲಿದೆ. ವಿಶ್ವಕಪ್‌, ಚಾಂಪಿಯನ್ಸ್ ಟ್ರೋಫಿ, ವಿಶ್ವ ಟ್ವೆಂಟಿ–20 ಮುಂತಾದ ಟೂರ್ನಿಗಳಲ್ಲಿ ಪಾರಮ್ಯ ಮೆರೆದ, ದಾಖಲೆಗಳನ್ನು ಬರೆದ ತಂಡ ಈಗ ಪ್ರಭಾವಿ ಆಟಗಾರರ ಅನುಪಸ್ಥಿತಿ ಎದುರಿಸುತ್ತಿದೆ. ಟೆಸ್ಟ್‌ ರ್‌್ಯಾಂಕಿಂಗ್‌ನಲ್ಲಿ ಆರನೇ ಸ್ಥಾನ ಹೊಂದಿರುವ ತಂಡ ಏಕದಿನ ಮತ್ತು ಟ್ವೆಂಟಿ–20 ರ್‌್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿದೆ. ಸೋಲಿನ ಸುಳಿಯಲ್ಲಿ ಬಿದ್ದು ಒದ್ದಾಡುತ್ತಿರುವ ತಂಡ ವರ್ಷಾಂತ್ಯದಲ್ಲಿ ಗೆಲುವಿನ ಸವಿಯುಣ್ಣುವ ಕನಸಿನೊಂದಿಗೆ ಭಾರತಕ್ಕೆ ಬಂದಿಳಿದಿದೆ.

ಹೊಸಬರ ಮೇಲೆ ನಿರೀಕ್ಷೆ
ಶ್ರೀಲಂಕಾ ತಂಡ ಈಗ ಹೊಸಬರ ತರಬೇತಿ ಕೇಂದ್ರದಂತಾಗಿದೆ. ನಾಯಕ ದಿನೇಶ್ ಚಾಂದಿಮಲ್ ಅವರೊಂದಿಗೆ ಏಂಜೆಲೊ ಮ್ಯಾಥ್ಯೂಸ್‌, ರಂಗನಾ ಹೇರಾತ್, ಸುರಂಗ ಲಕ್ಮಲ್‌ ಅವರಂಥ ಕೆಲವರನ್ನು ಬಿಟ್ಟರೆ ಉಳಿದವರು ಯಾರೂ 25ಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ನಿವೃತ್ತಿಯ ಅಂಚಿನಲ್ಲಿ ಇರುವುದರಿಂದ ಹಿರಿಯ ಆಟಗಾರರ ಮೇಲೆ ಹೆಚ್ಚು ನಿರೀಕ್ಷೆ ಇರಿಸಿಕೊಳ್ಳಲು ತಂಡಕ್ಕೆ ಸಾಧ್ಯವಿಲ್ಲ. ಆದ್ದರಿಂದ ಹೊಸಬರ ಮೇಲೆ ಜವಾಬ್ದಾರಿ ಹೆಚ್ಚಿದೆ.

ಭಾರತ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದಾಗಲೇ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಗೊಂದಲ ಮೂಡಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ಕೌಶಲ್‌ ಸಿಲ್ವಾ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಕುಶಾಳ್ ಮೆಂಡಿಸ್‌ ಅವರನ್ನು ಕೈಬಿಟ್ಟಿರುವ ಆಯ್ಕೆ ಸಮಿತಿ ಅನುಭವಿ ಏಂಜೆಲೊ ಮ್ಯಾಥ್ಯೂಸ್ ಮತ್ತು ರಂಗನಾ ಹೇರಾತ್ ಮೇಲೆ ಭರವಸೆ ಇರಿಸಿದೆ. ಯಾವುದೇ ಸಂದರ್ಭದಲ್ಲಿ ಸಿಡಿದೇಳುವ ಗುಣ ಇರುವ ಶ್ರೀಲಂಕಾ ತಂಡಕ್ಕಿದೆ. ಆದ್ದರಿಂದ ಸಮಬಲದ ಹೋರಾಟಕ್ಕೆ ಸರಣಿಗಳು ಸಾಕ್ಷಿಯಾಗುವ ಭರವಸೆ ಕ್ರಿಕೆಟ್ ಪ್ರಿಯರದ್ದು.

ಯುವ ಮತ್ತು ಅನುಭವಿ ಬ್ಯಾಟ್ಸ್‌ಮನ್‌ಗಳ ಜೊತೆ ಆಲ್‌ರೌಂಡರ್‌ ಮ್ಯಾಥ್ಯೂಸ್‌, ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ಎಡಗೈ ಸ್ಪಿನ್ನರ್‌ ರಂಗನಾ ಹೇರಾತ್‌, ನಾಯಕ ದಿನೇಶ್ ಚಾಂದಿಮಲ್‌ ಮುಂತಾದವರು ಮಿಂಚುವ ಭರವಸೆ ಇದೆ. ಭಾರತ ತಂಡವೂ ಉತ್ಸಾಹದಲ್ಲಿದ್ದು ಹಿರಿಯ ಆಟಗಾರರ ಜೊತೆ ಹೊಸಬರು ಮಿಂಚು ಹರಿಸುತ್ತಿದ್ದಾರೆ. ಆದ್ದರಿಂದ ಸಿಹಿ ನೆನಪುಗಳೊಂದಿಗೆ 2017ಕ್ಕೆ ಬೀಳ್ಕೊಡುವ ತಂಡ ಯಾವುದು ಎಂಬ ಕುತೂಹಲ ಈಗ ಕ್ರಿಕೆಟ್ ವಲಯದ್ದು.

ಮೊದಲ ಜಯದ ಕನಸು
ಭಾರತ ಮತ್ತು ಶ್ರೀಲಂಕಾ ನಡುವೆ ಈ ವರೆಗೆ ಒಟ್ಟು 15 ಟೆಸ್ಟ್ ಸರಣಿಗಳು ನಡೆದಿವೆ. ಇವುಗಳ ಪೈಕಿ ಏಳು ಸರಣಿಗಳಿಗೆ ಭಾರತ ಆತಿತ್ಯ ವಹಿಸಿದೆ. ಒಮ್ಮೆಯೂ ಎದುರಾಳಿಗಳಿಗೆ ಸರಣಿಯನ್ನು ಬಿಟ್ಟುಕೊಡಲಿಲ್ಲ. ಈ ಬಾರಿಯೂ ಈ ದಾಖಲೆಯನ್ನು ಉಳಿಸಿಕೊಳ್ಳುವ ವಿಶ್ವಾಸ ಭಾರತಕ್ಕಿದೆ. ಮೊದಲ ಸರಣಿ ಜಯದ ಸವಿ ಅನುಭವಿಸಲು ಚಾಂದಿಮಲ್‌ ಬಳಗ ಪ್ರಯತ್ನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT