ಭಾರತ ಹಾಕಿ ತಂಡ

ಕರ್ನಾಟಕದ ಪ್ರತಿಭೆಗಳೂ ಮಿಂಚುವಂತಾಗಲಿ

ಭಾರತ ವನಿತೆಯರ ಹಾಕಿ ತಂಡವು ಕಳೆದ ವಾರ ಏಷ್ಯಾ ಕಪ್ ಗೆದ್ದು ವಿಶ್ವಕಪ್‌ಗೆ ರಹದಾರಿ ಪಡೆಯಿತು. ಭಾರತದ ವನಿತೆಯರು ಈ ಸಾಧನೆ ಮಾಡಿದ್ದು 2ನೇ ಬಾರಿ. 2004ರಲ್ಲಿ ಮೊಟ್ಟಮೊದಲ ಏಷ್ಯಾಕಪ್‌ ಗೆದ್ದ ತಡಕ್ಕೆ ಕರ್ನಾಟಕದ ಹೆಲೆನ್ ಮೇರಿ ನಾಯಕಿಯಾಗಿದ್ದರು. ಅವರೊಂದಿಗೆ  ಗಿರೀಶ ದೊಡ್ಡಮನಿ ನಡೆಸಿದ ಮಾತುಕತೆ ಇಲ್ಲಿದೆ.

ಏಷ್ಯಾಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಗೋಲು ಗಳಿಸಿದಾಗ ಭಾರತ ತಂಡದ ಆಟಗಾರ್ತಿಯರು ಸಂಭ್ರಮಿಸಿದರು.

ಕರ್ನಾಟಕದಲ್ಲಿ ಜೂನಿಯರ್‌ ಹಾಕಿ ಕ್ರೀಡೆಯಲ್ಲಿ ಪ್ರತಿಭಾನ್ವಿತ ಹುಡುಗಿಯರಿದ್ದಾರೆ. ಆದರೆ ಅವರು ದೀರ್ಘ ಕಾಲದವರೆಗೆ ಆಡುವುದಿಲ್ಲ. ಹೆಚ್ಚು ಟೂರ್ನಿಗಳು ಆಯೋಜನೆಗೊಳ್ಳುವ ಮೂಲಕ ಅವರಿಗೆ ಆಡುವ ಅವಕಾಶ ನೀಡಬೇಕು. ಹೆಚ್ಚು ಪಂದ್ಯಗಳಲ್ಲಿ ಆಡಿದಷ್ಟು ಕೌಶಲ ಬೆಳೆದು, ಸೀನಿಯರ್ ಮಟ್ಟಕ್ಕೆ ಏರುತ್ತಾರೆ’– 2004ರಲ್ಲಿ ಮಹಿಳೆಯರ ಏಷ್ಯಾ ಕಪ್ ಗೆದ್ದುಕೊಂಡಿದ್ದ ಭಾರತ ತಂಡದ ನೇತೃತ್ವ ವಹಿಸಿದ್ದ ಕರ್ನಾಟಕದ ಗೋಲ್‌ಕೀಪರ್ ಹೆಲೆನ್ ಮೇರಿ ಅವರ ಮಾತುಗಳಿವು.

ಹೋದ ವಾರ ರಾಣಿ ರಾಂಪಾಲ್ ನಾಯಕತ್ವದ ಭಾರತ ತಂಡವು ಜಪಾನ್‌ನಲ್ಲಿ ಏಷ್ಯಾ ಕಪ್ ಗೆದ್ದಿತ್ತು. ಆದರೆ ತಂಡದಲ್ಲಿ ಕರ್ನಾಟಕದ ಆಟಗಾರ್ತಿಯರು ಯಾರೂ ಇರಲಿಲ್ಲ. ಇದಕ್ಕೆ ಕಾರಣ ಮತ್ತು ಭವಿಷ್ಯದಲ್ಲಿ ಕರ್ನಾಟಕದಲ್ಲಿ ಮಹಿಳೆಯರ ಹಾಕಿ ಕ್ರೀಡೆಯ ಬೆಳವಣಿಗೆ ಕುರಿತು ಹೆಲೆನ್ ಮೇರಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

*13 ವರ್ಷಗಳ ಹಿಂದೆ ನೀವು ಮಾಡಿದ್ದ ಸಾಧನೆಯ ಪ್ರೇರಣೆಯಿಂದ ಕರ್ನಾಟಕದಲ್ಲಿ ಇನ್ನೂ ಹಲವಾರು ಆಟಗಾರ್ತಿಯರು ಪ್ರವರ್ಧಮಾನಕ್ಕೆ ಬರಬೇಕಿತ್ತು. ಆ ಕಾರ್ಯ ಆಗಿದೆಯೇ?
ರಾಜ್ಯದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದವರು ಕಡಿಮೆ. 1990ರಲ್ಲಿ ಬಿ.ಎಂ. ಗೀತಾ, 1998ರಲ್ಲಿ ಲಕ್ಷ್ಮೀಶ್ರೀ ಅವರು ಆಡಿದ್ದರು. ಅವರ ನಂತರ 2007ರವರೆಗೆ ನಾನು ತಂಡದಲ್ಲಿದ್ದೆ. 2006ರ ವಿಶ್ವಕಪ್‌ನಲ್ಲಿ ಆಡುವ ಅವಕಾಶ ನನಗೆ ಸಿಕ್ಕಿತ್ತು. 2010ರ ನಂತರ ಪೊನ್ನಮ್ಮ ಅವರು ಮುಂಚೂಣಿಯಲ್ಲಿದ್ದರು. 2013ರಲ್ಲಿ ಅವರಿದ್ದ ತಂಡವು‌‌‌ ಕಂಚು ಗೆದ್ದಿತ್ತು. ಆ ನಂತರದಲ್ಲಿ ಜೂನಿಯರ್ ಮಟ್ಟದಲ್ಲಿ ಕೆಲವು ಆಟಗಾರ್ತಿಯರು ಭರವಸೆ ಮೂಡಿಸಿದ್ದರು. ಆದರೆ ಮುಂಚೂಣಿಗೆ ಬರಲಿಲ್ಲ.

ಪಂಜಾಬ್, ಛತ್ತೀಸಗಡ, ಹರಿಯಾಣಗಳಲ್ಲಿ  ಪರಿಸ್ಥಿತಿ ಬೇರೆ. ಅಲ್ಲಿ ಒಂದೇ ರಾಜ್ಯದ ನಾಲ್ಕು ತಂಡಗಳನ್ನು ರಚಿಸಿ ಬೇರೆ ಬೇರೆ ಟೂರ್ನಿಗಳಲ್ಲಿ ಆಡುವ ಅವಕಾಶ ನೀಡುತ್ತಾರೆ. ಅಲ್ಲದೇ ಪರಸ್ಪರ ಅವರ ತಂಡಗಳಲ್ಲಿ ಸ್ಪರ್ಧೆ ಏರ್ಪಡಿಸುತ್ತಾರೆ. ಅದರಿಂದ ಕೌಶಲ್ಯ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

ದೈಹಿಕ ಮತ್ತು ಮಾನಸಿಕ ಬಲವು ಹೆಚ್ಚುವುದರಿಂದ ಸೀನಿಯರ್ ಮಟ್ಟದಲ್ಲಿ ಉತ್ತಮವಾಗಿ ಆಡುತ್ತಾರೆ. ಅಂತಹ ವ್ಯವಸ್ಥೆ ಇಲ್ಲಿಯೂ ಆಗಬೇಕು. ಮೈಸೂರು, ಕೊಡಗು ವಸತಿ ನಿಲಯಗಳಲ್ಲಿ ಉತ್ತಮ ಆಟಗಾರ್ತಿಯರು ಇದ್ದಾರೆ. ಅವರನ್ನು ಮತ್ತಷ್ಟು ಸಬಲಗೊಳಿಸುವ ಕಾರ್ಯ ನಡೆಯಬೇಕು. ರಾಜ್ಯದೆಲ್ಲೆಡೆಯೂ ಟರ್ಫ್ ಕ್ರೀಡಾಂಗಣಗಳು ಅಭಿವೃದ್ಧಿಗೊಂಡರೆ ಗ್ರಾಮೀಣ ಪ್ರದೇಶಗಳ ಬಾಲಕಿಯರಿಗೆ ತರಬೇತಿ ನೀಡಬಹುದು.

* 2004 ಮತ್ತು 2017ರ ಏಷ್ಯಾ ಕಪ್ ಗೆಲುವುಗಳ ನಡುವಣ ವ್ಯತ್ಯಾಸವನ್ನು ಹೇಗೆ ವಿಶ್ಲೇಷಿಸುತ್ತೀರಿ?
ವಿಶ್ವಕಪ್ ಪ್ರವೇಶಿಸಲು ಏಷ್ಯಾ ಕಪ್‌ ಗೆಲುವು ನಮಗೆ ಉತ್ತಮ ಅವಕಾಶವಾಗಿತ್ತು. ಇಲ್ಲದಿದ್ದರೆ ಅರ್ಹತಾ ಸುತ್ತುಗಳ ಕಠಿಣ ಪರೀಕ್ಷೇಗಳನ್ನು ಪಾರು ಮಾಡಬೇಕಿತ್ತು. ಆಗ ದೆಹಲಿಯಲ್ಲಿಯೇ ಟೂರ್ನಿ ನಡೆದಿತ್ತು. ಫೈನಲ್‌ ಪಂದ್ಯದಲ್ಲಿ ಬಲಿಷ್ಠ ತಂಡವಾಗಿದ್ದ ಜಪಾನ್ ಮೇಲೆ ಗೆದ್ದಿದ್ದೆವು. ಕೇವಲ 1–0 ಗೋಲಿನ ಅಂತರದಿಂದ ಜಯಿಸಿದ್ದೆವು. ಜಸ್ಜೀತ್ ಕೌರ್ ಆ ಗೋಲು ಹೊಡೆದಿದ್ದರು.

ನಮ್ಮ ತಂಡದಲ್ಲಿ ಏಳು ಮಂದಿ ಹೊಸ ಆಟಗಾರ್ತಿಯರೇ ಇದ್ದರು. ಆದರೆ, ಕೋಚ್ ಕೌಶಿಕ್ ಅವರ ಮಾರ್ಗದರ್ಶನದಿಂದ ಚೆನ್ನಾಗಿ ಆಡಿದ್ದೆವು. ಲೀಗ್ ಹಂತದಲ್ಲಿ ಮಲೇಷ್ಯಾ ವಿರುದ್ಧ ಪಂದ್ಯದ ಡ್ರಾ ಅಗಿದ್ದು ಬಿಟ್ಟರೆ ಉಳಿದದ್ದರಲ್ಲಿ ಜಯಿಸಿದ್ದೆವು. ಈ ಬಾರಿಯದ್ದೂ ಅಮೋಘ ಜಯ. ಏಕೆಂದರೆ ಜಪಾನ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಚೀನಾದಂತಹ ಬಲಿಷ್ಠ ತಂಡವನ್ನು ಸೋಲಿಸಿದ್ದು ದೊಡ್ಡ ಸಾಧನೆ.

ಕಳೆದ 13 ವರ್ಷಗಳಲ್ಲಿ ಆಟದ ತಾಂತ್ರಿಕತೆ, ಕೌಶಲ್ಯ ಮತ್ತು ವೇಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಆಡಿದ ತಂಡವು ಯಶಸ್ವಿಯಾಗಿದೆ. ವಿಶ್ವಕಪ್ ಅರ್ಹತೆ ಗಿಟ್ಟಿಸಿಕೊಂಡಿರುವುದು ಸಂತಸವಾಗಿದೆ.

*ವಿಶ್ವಕಪ್ ಟೂರ್ನಿಗೆ ಯಾವ ರೀತಿಯ ಸಿದ್ಧತೆ ಅಗ‌ತ್ಯ?
ಏಷ್ಯಾದ ಬಲಿಷ್ಠ ತಂಡಗಳಾದ ಚೀನಾ, ಕೊರಿಯಾ ಮತ್ತು ಜಪಾನ್ ಎದುರು ನಮ್ಮ ತಂಡ ಉತ್ತಮ ಸಾಧನೆ ಮಾಡಿದೆ. ಯುರೋಪ್ ದೇಶಗಳ ಎದುರು ಹೆಚ್ಚು ಟೆಸ್ಟ್‌ ಸರಣಿಗಳನ್ನು ಆಡಬೇಕು. ಆಗ ವಿಶ್ವಕಪ್‌ನಲ್ಲಿ ಆ ತಂಡಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ. ಹಿಂದೆ ನ್ಯೂಜಿಲೆಂಡ್ ಅಂತಹ ಬಲಿಷ್ಠ ತಂಡವಾಗಿರಲಿಲ್ಲ. ಅದರೆ, ಕಳೆದ ಒಂದು ದಶಕದಲ್ಲಿ ಆ ತಂಡವು ವಿಶ್ವದ ಉದ್ದಗಲ್ಲಕ್ಕೂ ನಿರಂತರವಾಗಿ ಪ್ರವಾಸ ಮಾಡುತ್ತಿದೆ. ಹೆಚ್ಚು ಪಂದ್ಯಗಳನ್ನು ಆಡುತ್ತಿದೆ. ಅದರಿಂದಾಗಿ ಈಗ ಬಲಿಷ್ಠವಾಗಿದೆ.

*ತಂಡದ ಗೆಲುವಿನಲ್ಲಿ ಗೋಲ್‌ಕೀಪರ್ ಪಾತ್ರ ಕುರಿತು
ಅತ್ಯಂತ ಮಹತ್ವದ್ದು ಮತ್ತು ಅಷ್ಟೇ ಕಠಿಣವಾದದ್ದು. ನಮ್ಮ ಸಮಯದಲ್ಲಿ ತಂತ್ರಜ್ಞಾನದ ನೆರವು ಅಷ್ಟಾಗಿ ಇರಲಿಲ್ಲ. ಈಗ ಉತ್ತಮ ತರಬೇತಿ ವ್ಯವಸ್ಥೆ ಇದೆ. ಆದರೆ ಪೆನಾಲ್ಟಿ ಶೂಟೌಟ್‌ಗಳಲ್ಲಿ, ಕಾರ್ನರ್‌ಗಳಲ್ಲಿ ಮತ್ತು ಸೆಕೆಂಡ್‌ ಲೈನ್ ಸ್ಕೋರಿಂಗ್‌ಗಳಲ್ಲಿ ಎದುರಾಳಿಗಳನ್ನು ತಡೆಯಲು ವಿಶೇಷ ಚಾಕಚಕ್ಯತೆ ಇರಲೇಬೇಕು. ಪುರುಷರ ಹಾಕಿ ತಂಡದ ಎದುರು ಆಡಿದ್ದ ಪಂದ್ಯಗಳಲ್ಲಿ ನಾವು ಪಾಠ ಕಲಿತಿದ್ದೆವು.. ಈಗಲೂ ಅದೇ ಮಾದರಿ ಸೂಕ್ತ. ಪುರುಷರ ತಂಡಗಳ ಎದುರು ಪಂದ್ಯಗಳನ್ನು ಆಡಬೇಕು.

*ತಂಡಕ್ಕೆ ಕೋಚ್‌ ನೇಮಕ ವಿಷಯದಲ್ಲಿ ಸ್ಪಷ್ಟತೆ ಇರಬೇಕಲ್ಲವೇ?
ಹೌದು; ವಿದೇಶಿ ಕೋಚ್‌ಗಳಿಂದ ಕೆಲವು ಉತ್ತಮ ವಿಷಯಗಳನ್ನು ಕಲಿಯಬಹುದು. ಆದರೆ ನಮ್ಮ ದೇಶದ ಮಟ್ಟಿಗೆ ದೇಶಿ ಕೋಚ್‌ ಇದ್ದರೆ ಒಳ್ಳೆಯದು. ಯುರೋಪ್ ದೇಶಗಳ ಆಟಗಾರರು ಫಿಟ್‌ನೆಸ್‌ ಮತ್ತು ಪವರ್ ಪ್ಲೇ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ನಮ್ಮದು ಕೌಶಲ್ಯಾಧಾರಿತ ಆಟ. ಯುರೋಪಿಯನ್ನರಿಗೆ ಹೋಲಿಕೆ ಮಾಡಿದರೆ ನಮ್ಮ ಅಂಗಸೌಷ್ಠವ ಕಡಿಮೆ. ಆದ್ದರಿಂದ ುತ್ತಮ ಕೌಶಲ್ಯಗಳೇ ಆಸ್ತಿ. ಆ ನಿಟ್ಟಿನಲ್ಲಿ ತರಬೇತಿ ನೀಡುವುದು ಇಲ್ಲಿಯ ಕೋಚ್‌ಗಳಿಗೆ ಮಾತ್ರ ಸಾಧ್ಯ.

ಹೆಲೆನ್ ಮೇರಿ ಕುರಿತು..
ಕೇರಳ ಮೂಲದ ಕುಟುಂಬದ ಹೆಲೆನ್ ಮೇರಿ ಅವರು ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. 2004ರ ಏಷ್ಯಾಕಪ್‌ ಗೆದ್ದ ತಂಡಕ್ಕೆ ನಾಯಕಿಯಾಗಿದ್ದರು. ಗೋಲ್‌ಕೀಪರ್ ಆಗಿದ್ದ ಅವರು 2006ರಲ್ಲಿ ಸ್ಪೇನ್‌ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿಯೂ ಆಡಿದ್ದರು. ಅವರ ಪತಿ ಲಕ್ಷ್ಮಣರಾವ್ ಅವರು ಕರ್ನಾಟಕ ಪೊಲೀಸ್ ತಂಡದ ಹಾಕಿಪಟುವಾಗಿದ್ದವರು. ಸದ್ಯ ಮೇರಿ ಅವರು ಸೆಂಟ್ರಲ್ ರೈಲ್ವೆ ತಂಡದ ಕೋಚ್ ಆಗಿದ್ದು, ಮುಂಬೈನಲ್ಲಿ ನೆಲೆಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಹದಿನಾರರ ಪೋರಿಯ ಚಿನ್ನದ ಬೇಟೆ

ಶೂಟಿಂಗ್‌
ಹದಿನಾರರ ಪೋರಿಯ ಚಿನ್ನದ ಬೇಟೆ

12 Mar, 2018
ಕರ್ನಾಟಕದ ಕೀರ್ತಿ

ರೋಯಿಂಗ್‌
ಕರ್ನಾಟಕದ ಕೀರ್ತಿ

12 Mar, 2018
ಚಿನ್ನದ ಕನಸಿನಲ್ಲಿ...

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌
ಚಿನ್ನದ ಕನಸಿನಲ್ಲಿ...

12 Mar, 2018
ಆಟ ಮುನ್ನೋಟ

ಆಟ-ಅಂಕ
ಆಟ ಮುನ್ನೋಟ

12 Mar, 2018
ಜಾವೆಲಿನ್‌: ಭರವಸೆಯ ಮಿಂಚು

ಆಟ-ಅಂಕ
ಜಾವೆಲಿನ್‌: ಭರವಸೆಯ ಮಿಂಚು

12 Mar, 2018