ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಾಡುತಾ ಕಲಿಯಲು ಆ್ಯಪ್‌ಗಳು

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಆಂಡ್ರಾಯ್ಡ್ ವೇದಿಕೆಯಲ್ಲಿ ಮಕ್ಕಳ ಅಪ್ಲಿಕೇಷನ್‌ಗಳು(ಆ್ಯಪ್‌) ಈಗ ಅಸಂಖ್ಯ ಎನ್ನುವಷ್ಟು ಬೆಳೆದಿವೆ. ಅಷ್ಟೇ ಏಕೆ? ಕನ್ನಡದಲ್ಲೂ ಈಗ ಆಂಡ್ರಾಯ್ಡ್ ಅಪ್ಲಿಕೇಷನ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿವೆ. ಮಕ್ಕಳಿಗೆ ಮನರಂಜನೆಯಿಂದ ಹಿಡಿದು, ಕಲಿಕೆ, ವ್ಯಕ್ತಿತ್ವ, ವಿಕಸನ, ಆಟಕ್ಕಾಗಿ ಅಪ್ಲಿಕೇಷನ್‌ಗಳು ಅಭಿವೃದ್ಧಿಗೊಂಡಿವೆ.

ಕಲಿಕೆಯಿಂದಲೇ ಆರಂಭಗೊಳಿಸುವುದಾದರೆ, ‘ಕನ್ನಡ ಅಕ್ಷರಮಾಲೆ’ ಅಪ್ಲಿಕೇಷನ್ ಅನುಕೂಲಕಾರಿಯಾಗಿದೆ. ಇದು ಅತ್ಯಂತ ಸರಳ- ಸುಂದರ. ಅಕ್ಷರಮಾಲೆಯ ವಿವಿಧ ಅಕ್ಷರಗಳನ್ನು ಪ್ರಾತಿನಿಧಿಕ ಚಿತ್ರಗಳ ಮೂಲಕ ಕಲಿಸುವ ಸಾಂಪ್ರದಾಯಿಕ ವಿಧಾನವನ್ನೇ ಇಲ್ಲಿ ಅನುಸರಿಸಲಾಗಿದೆ. ಇದರಲ್ಲಿ ಇಂಗ್ಲಿಷಿನಲ್ಲೂ ಅರ್ಥ ನೀಡಿರುವುದು ಮಕ್ಕಳಿಗೆ ದ್ವಿಭಾಷೆಯನ್ನು ಕಲಿಸಲು ಪೂರಕವಾಗಿದೆ.

ಪ್ಲೇ ಸ್ಟೋರಿನಲ್ಲಿ 5ಕ್ಕೆ 4.5 ರೇಟಿಂಗ್ ಸಿಕ್ಕಿರುವುದು ಇದರ ಹೆಗ್ಗಳಿಕೆ. ಇದರಂತೆಯೇ ಇರುವ ‘ಕಿಡ್ಸ್ ಲರ್ನ್ ಕನ್ನಡ ಆಲ್ಫಾಬೆಟ್ಸ್’, ಅಕ್ಷರಮಾಲೆಗಷ್ಟೇ ಮೀಸಲಿರುವ ಮತ್ತೊಂದು ಕನ್ನಡ ಅಪ್ಲಿಕೇಷನ್. ಅಕ್ಷರವೊಂದನ್ನು ತೆರೆದಾಗ ಅದಕ್ಕೆ ಧ್ವನಿಯನ್ನೂ ನೀಡಿರುವುದು ಚನ್ನಾಗಿದೆ.

ಇದೇ ಕ್ಷೇತ್ರದ ಮತ್ತೊಂದು ಉತ್ತಮ ಆ್ಯಪ್‌, ‘ಕನ್ನಡ ಲರ್ನಿಂಗ್ ಆ್ಯಪ್‌ ಫಾರ್ ಕಿಡ್ಸ್’. ಇದರಲ್ಲಿ ಕನ್ನಡ ಅಕ್ಷರಮಾಲೆ, ಇಂಗ್ಲಿಷ್ ಅಕ್ಷರಮಾಲೆ, ಕಾಗುಣಿತ, ಅಂಕಿಗಳು, ಕನ್ನಡ ತಿಂಗಳುಗಳು, ವಾರಗಳು, ದಿನಗಳು, ಪ್ರಾಣಿ- ಪಕ್ಷಿಗಳು, ಹಣ್ಣು-ತರಕಾರಿ ವಿಭಜನೆಗಳಿದ್ದು, ಆಯ್ಕೆ ಮಾಡಿದೊಡನೆ ಧ್ವನಿ ಸಮೇತ ಮಾಹಿತಿ ಸಿಗುತ್ತದೆ. ಅಲ್ಲದೇ, ಬರವಣಿಗೆಯ ಸರಳ ವಿಧಾನಗಳನ್ನೂ ಇದರಲ್ಲಿ ನೀಡಲಾಗಿದೆ.

ಟಚ್ ಸ್ಕ್ರೀನ್ ಇರುವ ಮೊಬೈಲ್ ಫೋನುಗಳಲ್ಲಿ ಅಕ್ಷರದ ಮೇಲೆ ಬೆರಳಾಡಿಸಿ ಬರವಣಿಗೆ ಕಲಿಯುವಂತೆ ಸೌಲಭ್ಯ ನೀಡಲಾಗಿದೆ. ‘ಕನ್ನಡ ಆಟ’ ಆ್ಯಪ್‌ಅನ್ನು ಸಹ ಪರಿಗಣಿಸಬಹುದು. 5 ಸಾವಿರಕ್ಕೂ ಹೆಚ್ಚು ಒಗಟುಗಳು, ಪ್ರಶ್ನೋತ್ತರಗಳು ಇದರಲ್ಲಿವೆ.

ಆಂಡ್ರಾಯ್ಡ್ ಆ್ಯಪ್‌ ಲೋಕದಲ್ಲಿ ಈಗ ಸಾಮಾನ್ಯೀಕರಿಸಿದ ವಿಭಜನೆಗಳಿವೆ. ಆಂಡ್ರಾಂಯ್ಡ್ ರೂಪುಗೊಂಡ ಆರಂಭದ ದಿನಗಳಲ್ಲಿ ಈ ವಿಭಜನೆಗಳನ್ನು ಆ್ಯಪ್‌ಗಳ ಆಶಯ, ಅವುಗಳ ಕಾರ್ಯವೈಖರಿಗೆ ತಕ್ಕಂತೆ ರಚಿಸಲಾಗಿತ್ತು. ಈಗ, ಈ ವಿಭಜನೆಗಳಿಗೆ ತಕ್ಕಂತೆ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸುವ ರೂಢಿ ಬೆಳೆದಿದೆ. ಈಗ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಇಂತಹ 36 ವಿಭಜನೆಗಳಿಗೆ.

ಇವುಗಳ ಪೈಕಿ ಪ್ರಸಿದ್ಧ ವಿಭಜನೆಗಳು ಛಾಯಾಗ್ರಹಣ, ಕುಟುಂಬ, ಸಂಗೀತ ಮತ್ತು ಧ್ವನಿ, ಕಲಿಕೆ, ಮನರಂಜನೆ, ಶಾಪಿಂಗ್, ಸಾಮಾಜಿಕ, ಸಂವಹನ ಇತ್ಯಾದಿ. ಈ ಎಲ್ಲ ಕ್ಷೇತ್ರಗಳಲ್ಲಿ ಕನ್ನಡದ ಅಪ್ಲಿಕೇಷನ್‌ಗಳಿವೆ ಎಂದು ಹೇಳುವುದು ಕಷ್ಟವಾದರೂ, ಮನರಂಜನೆ, ಸಾಮಾಜಿಕ, ಸಂವಹನ, ಕಲಿಕೆ ಕ್ಷೇತ್ರಗಳಲ್ಲಂತೂ ಕನ್ನಡದ ಸಾಕಷ್ಟು ಸಾಫ್ಟ್‌ವೇರ್‌ಗಳಿವೆ. ಇವುಗಳ ಪೈಕಿ ಮಕ್ಕಳ ಅಪ್ಲಿಕೇಷನ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ ಅನ್ನಿಸಿಕೊಂಡಿದೆ.

ಭಾರತೀಯ ಭಾಷೆಗಳ ಪೈಕಿ ಕನ್ನಡದಲ್ಲಿ ಅಪ್ಲಿಕೇಷನ್‌ಗಳು ಕೊಂಚ ತಡವಾಗಿಯೇ ಅಭಿವೃದ್ಧಿಗೊಂಡವು ಎಂದೇ ಹೇಳಬೇಕು. ಅದರಲ್ಲೂ ದಕ್ಷಿಣ ಭಾರತದಲ್ಲಿ ತಮಿಳಿನ ನಂತರದ ಸ್ಥಾನವನ್ನು ಕನ್ನಡ ಪಡೆದುಕೊಳ್ಳುತ್ತದೆ. ತಮಿಳಿಗರ ಅಪ್ಲಿಕೇಷನ್‌ಗಳೇ ಇಂದಿಗೂ ಹೆಚ್ಚಿವೆ. ಆದರೆ, ಎರಡು ವರ್ಷದಿಂದ ಈಚೆಗೆ ಕನ್ನಡದ ಅಪ್ಲಿಕೇಷನ್‌ಗಳು ಸಮಾಧಾನ ತರುವಷ್ಟು ಸಂಖ್ಯೆಯಲ್ಲಿ ಅಭಿವೃದ್ಧಿಗೊಂಡಿವೆ. ಕನ್ನಡದ ಮಕ್ಕಳಿಗಾಗಿ ಅಭಿವೃದ್ಧಿಗೊಂಡಿರುವ ವಿವಿಧ ವಿಭಜನೆಗಳ ಮೊಬೈಲ್ ಅಪ್ಲಿಕೇಷನ್‌ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT