ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಶ್ನಿಸುವವರನ್ನೇ ಟೀಕಿಸುವುದು ಅಪಾಯಕಾರಿ’

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಧಿಕಾರದಲ್ಲಿ ಇರುವವರನ್ನು ಪ್ರಶ್ನಿಸಿದರೆ ಅದಕ್ಕೆ ಉತ್ತರ ಕೊಡುವ ಬದಲು, ಪ್ರಶ್ನೆ ಮಾಡಿದವರ ಚಾರಿತ್ರ್ಯವನ್ನು ಕೆದಕಿ, ಹೀಯಾಳಿಸುವುದು ಅಪಾಯಕಾರಿ’ ಎಂದು ನಟ ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು ಪ್ರೆಸ್‌ ಕ್ಲಬ್ ಭಾನುವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳು ಸಾಯುತ್ತಿದ್ದರೆ, ಅಲ್ಲಿನ ಮುಖ್ಯಮಂತ್ರಿ ಕೇರಳಕ್ಕೆ ಬಂದು ಪ್ರಚಾರ ಮಾಡುತ್ತಾರೆ. ಇದನ್ನು ಪ್ರಶ್ನಿಸಿದರೆ, ‘ನನ್ನ ಪಕ್ಷ ಬಲವರ್ಧನೆ ಮಾಡಲು ಬಂದಿದ್ದೇನೆ ಎಂದು ಹೇಳುವಷ್ಟೂ ವ್ಯವಧಾನ ಇಲ್ಲ. ಅದರ ಬದಲು ನನ್ನ ತಂದೆ ಮುಸ್ಲಿಂ, ನನ್ನ ತಾಯಿ ಕ್ರಿಶ್ಚಿಯನ್, ನನ್ನ ಹೆಂಡತಿ ಹಿಂದೂ, ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದೇನೆ, ಪಾಕಿಸ್ತಾನಕ್ಕೆ ಹೋಗಬೇಕು ಎಂದೆಲ್ಲ ಮಾತನಾಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾತನಾಡಿದಾಗ, ನಮ್ಮ ಪ್ರಧಾನಿ ಸಮರ್ಥವಾಗಿದ್ದಾರೆ. ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಅವರ ಪಕ್ಷದವರು ಹೇಳಿದರೆ ಸಾಕಿತ್ತು. ಅದರ ಬದಲು ಸಂಸದ ಪ್ರತಾಪ ಸಿಂಹ, ಸೊಂಟದ ಕೆಳಗಿನ ಭಾಷೆ ಮಾತನಾಡುತ್ತಾರೆ.ಇಂತಹ ಮನಸ್ಥಿತಿಯವರು ಜನರನ್ನು ಹೇಗೆ ಪ್ರತಿನಿಧಿಸುತ್ತಾರೆ ಎಂಬುದೇ ತಿಳಿಯುತ್ತಿಲ್ಲ’ ಎಂದರು.

‘ಈಗ ಮಾತನಾಡುವುದಕ್ಕೆ ಹೆದರಿಕೆ ಆಗುತ್ತದೆ. ಹಿಂದೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆಡಳಿತಗಾರರಿಗೆ ಅಧಿಕಾರ ದಾಹವಷ್ಟೇ ಇತ್ತು. ಆದರೆ, ಈಗಿನಂತೆ ಧರ್ಮ, ಜಾತಿ ಹೆಸರಿನಲ್ಲಿ ವೈಯಕ್ತಿಕ ಹಲ್ಲೆ ನಡೆಯುತ್ತಿರಲಿಲ್ಲ. ಮಾತನಾಡುವುದಕ್ಕೆ ಸಾಧ್ಯವಾಗದ ನೋವು ನನ್ನಂತಹ ಅನೇಕರಲ್ಲಿದೆ. ಆದರೆ ನನಗೆ ನಂಬಿಕೆ ಇದೆ ಇಂತಹ ಸ್ಥಿತಿ ಬದಲಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್‌ಗಳು ಸದ್ದು ಮಾಡುತ್ತಿವೆ. ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲ ಪಕ್ಷಗಳು, ಸಿನಿಮಾ ನಟರು, ಉದ್ಯಮಿಗಳು 300ರಿಂದ 400 ಜನರನ್ನು ನೇಮಿಸಿಕೊಂಡು ಸಂಬಳ ಕೊಡುತ್ತಿದ್ದಾರೆ. ತಮಗೆ ಆಗದವರ ವಿರುದ್ಧ ಟ್ರೋಲ್‌ಗಳನ್ನು ಹರಿಬಿಡುವುದೇ ಅವರ ಕೆಲಸ. ಅದರಿಂದ ನನಗೆ ಯಾವುದೇ ಭಯವಿಲ್ಲ. ನನ್ನ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಇಂತಹವರನ್ನು ತೆಗೆದುಹಾಕಬೇಕು ಎಂದು ಕೆಲವರು ಸಲಹೆ ನೀಡುತ್ತಾರೆ. ಕೇವಲ ಹೊಗಳುವವರನ್ನೇ ಸೇರಿಸಿಕೊಂಡು ಗಾಜಿನ ಅರಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಇಷ್ಟವಿಲ್ಲ. ನಮ್ಮನ್ನು ಟೀಕಿಸುವವರೂ ಇರಬೇಕು’ ಎಂದರು.

‘ಪ್ರಕಾಶ್ ರೈ ಈ ಹಿಂದೆ ಏಕೆ ಮಾತನಾಡುತ್ತಿರಲಿಲ್ಲ ಎಂದು ಕೆಲವರು ಪ್ರಶ್ನಿಸುತ್ತಾರೆ. ರಂಗಭೂಮಿ ನಟನಾಗಿ, ಬಹುಭಾಷಾ ನಟನಾಗಿ, ನಿರ್ಮಾಪಕ, ನಿರ್ದೇಶಕನಾಗಿ ನನ್ನ ವೃತ್ತಿ ಜೀವನದ ಎಲ್ಲ ಹಂತಗಳನ್ನು ದಾಟಿದ್ದೇನೆ. ಮುಂದಿನ ನನ್ನ ಜೀವನಕ್ಕೆ ಬೇಕಾಗುವಷ್ಟು ಹಣವನ್ನೂ ಗಳಿಸಿದ್ದೇನೆ. ಈಗ ಯಾವುದರ ಮೇಲೂ ವ್ಯಾಮೋಹ ಇಲ್ಲ. ಇದೆಲ್ಲದರ ಅನುಭವ ಪಡೆದು ಈಗಲಾದರೂ ಮಾತನಾಡದಿದ್ದರೆ ಇದ್ದೂ ಸತ್ತಂತೆ. ಎಲ್ಲವನ್ನೂ ಮೀರಿ ಹೊಸ ದಿಗಂತದತ್ತ ನೋಡುತ್ತಿದ್ದೇನೆ. ಅದಿನ್ನೂ ಮಸುಕಾಗಿದೆ’ ಎಂದು ಹೇಳಿದರು.

ರಾಜಕೀಯಕ್ಕೆ ಬರುವುದಿಲ್ಲ

‘ರಾಜಕೀಯಕ್ಕೆ ಬರುವುದಿಲ್ಲ, ಮುಂದೆಯೂ ರಾಜಕೀಯ ಪ್ರವೇಶ ಮಾಡಬೇಕು ಎಂಬ ಆಲೋಚನೆ ಇಲ್ಲ. ನನ್ನ ಜೀವನ ಪೂರ್ತಿ ನಟನೆಯಲ್ಲೇ ಕಳೆಯುತ್ತೇನೆ’ ಎಂದು ಪ್ರಕಾಶ್ ರೈ ಹೇಳಿದರು.

‘ಈಗಿನ ಯಾವ ಪಕ್ಷಗಳೂ ಶುದ್ಧವಾಗಿಲ್ಲ. ಯಾವುದಾದರೂ ಪಕ್ಷ ಸೇರಿ ನಾನೊಬ್ಬ ಪ್ರಾಮಾಣಿಕ ಆಗಿದ್ದರೆ, ಆ ಪಕ್ಷದ ಹಿಂದಿನ ಎಲ್ಲ ಕಳಂಕಗಳು ನನಗೂ ಮೆತ್ತಿಕೊಳ್ಳುತ್ತವೆ. ಸಮಾಜದಲ್ಲಿ ಒಬ್ಬ ಪ್ರಜೆಯಾಗಿ ಇರುವುದರಲ್ಲೇ ತೃಪ್ತಿ ಇದೆ’ ಎಂದರು.

ರಜನಿಕಾಂತ್, ಕಮಲ್‌ಹಾಸನ್, ಪವನ್‌ಕಲ್ಯಾಣ್, ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ, ‘ಸಿನಿಮಾದಲ್ಲಿನ ಜನಪ್ರಿಯತೆಯನ್ನು ನಂಬಿ ರಾಜಕೀಯಕ್ಕೆ ಬರುವುದು ದುರಂತ. ಇವರೆಲ್ಲರ ಮೇಲೆ ನನಗೆ ಅಭಿಮಾನ ಇದೆ ಹೊರತು ನಾನು ಅವರಿಗೆ ಮತ ನೀಡುವುದಿಲ್ಲ. ಯಾರನ್ನೋ ವಿರೋಧಿಸಬೇಕು ಎಂಬ ಕಾರಣಕ್ಕೂ ಇವರನ್ನು ಬೆಂಬಲಿಸುವುದಿಲ್ಲ. ಜನರೂ ಸಹ ಅಭಿಮಾನದಿಂದ ಮತ ಹಾಕದೆ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ನಾಲ್ಕೈದು ವಾರಗಳಲ್ಲಿ ಗೌರಿ ಹಂತಕರನ್ನು ಬಂಧಿಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ನಾವು ಕಾದು ನೋಡೋಣ
– ಪ್ರಕಾಶ್ ರೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT