ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ವೈದ್ಯರೂ ಕೆಟ್ಟವರಲ್ಲ

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

ರಾಜ್ಯದ ಖಾಸಗಿ ವೈದ್ಯರನ್ನು ಮಣಿಸಲು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ‘ವೈದ್ಯರು ಯಾವುದೇ ನಿಯಂತ್ರಣಕ್ಕೊಳಪಡಲು ಸಿದ್ಧರಿಲ್ಲ, ಅವರ ಕುಕೃತ್ಯಗಳನ್ನು ಶಿಕ್ಷಿಸುವುದಕ್ಕೆ ಈಗ ಯಾವ ವ್ಯವಸ್ಥೆಯೂ ಇಲ್ಲ, ವೈದ್ಯರ ಧನದಾಹವು ಮಿತಿಮೀರಿದ್ದು ಅದನ್ನು ಸರ್ಕಾರವು ನಿರ್ಬಂಧಿಸಲೇಬೇಕು, ಆದ್ದರಿಂದ ಇಂತಹ ಕಾನೂನು ಅತ್ಯಗತ್ಯ’ ಎನ್ನುವುದು ಈ ಕಾಯ್ದೆಗೆ ತಿದ್ದುಪಡಿ ಬೇಕು ಎನ್ನುವವರ ವಾದ. ಆದರೆ, ವಾಸ್ತವದಲ್ಲಿ, ಸರ್ಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕ ಆರೋಗ್ಯ ಸೇವೆಗಳು ನೆಲ ಕಚ್ಚಿದ್ದು, ಶೇ 80ರಷ್ಟು ಜನರು ಖಾಸಗಿ ಆರೋಗ್ಯ ಸೇವೆಗಳಿಗೆ ಖರ್ಚು ಮಾಡಬೇಕಾದ ಕಷ್ಟಕ್ಕೆ ಸಿಲುಕಿರುವಾಗ, ಅದನ್ನೆಲ್ಲ ಮರೆಮಾಚಲು ಚುನಾವಣೆಯ ವೇಳೆ ಈ ತಿದ್ದುಪಡಿಯ ಆಮಿಷವನ್ನು ಮತದಾರರಿಗೆ ಒಡ್ಡಲಾಗುತ್ತಿದೆ.

ನವೆಂಬರ್ ಏಳರಂದು ಆರೋಗ್ಯ ಸಚಿವರು ನೀಡಿರುವ ಹೇಳಿಕೆಯಲ್ಲಿ, ಗ್ರಾಹಕರ ವೇದಿಕೆಗಳು ದೂರುಗಳನ್ನು ಪರಿಹರಿಸಲು ದೀರ್ಘ ಸಮಯವನ್ನು ತೆಗೆದುಕೊಳ್ಳುವುದರಿಂದ, ವೈದ್ಯರನ್ನು 45 ದಿನಗಳೊಳಗೆ ಕ್ಷಿಪ್ರ ವಿಚಾರಣೆಗೆ ಒಳಪಡಿಸುವುದಕ್ಕಾಗಿ ಜಿಲ್ಲಾ ಮಟ್ಟದ ಕುಂದುಕೊರತೆ ಸಮಿತಿಗಳನ್ನು ರಚಿಸಲು ಈ ತಿದ್ದುಪಡಿ ತರಲಾಗುತ್ತಿದೆ ಎಂದಿದ್ದಾರೆ.

ತೀರಾ ನಿರಾಧಾರವಾದ ಈ ಒಂದೇ ಹೇಳಿಕೆಯು ಸಾಂವಿಧಾನಿಕ ವ್ಯವಸ್ಥೆಯನ್ನು ಅಪಮಾನಿಸಿ, ಬುಡಮೇಲು ಮಾಡುವ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ. ರಾಜ್ಯದ ವೈದ್ಯರು ಇಂತಹ ದುರುದ್ದೇಶದ ವಿರುದ್ಧವೇ ಪ್ರತಿಭಟನೆಗೆ ಇಳಿದಿದ್ದಾರೆ.

ಕೆಪಿಎಂಇ ಕಾಯ್ದೆಯ ತಿದ್ದುಪಡಿಗೆಂದು ಇದೇ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಸಮಿತಿಯು ‘ಗ್ರಾಹಕರ ವೇದಿಕೆಗಳಲ್ಲಿ ಪರಿಹಾರ ಪಡೆಯುವ ಅವಕಾಶಗಳು ಇರುವ ಕಾರಣಕ್ಕೇ ಜಿಲ್ಲಾ ಸಮಿತಿಯ ಅಗತ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿತ್ತು. ವೈದ್ಯರನ್ನು ನಿಯಂತ್ರಿಸಲು ವೃತ್ತಿಸಂಹಿತೆ, ವೈದ್ಯಕೀಯ ಪರಿಷತ್ತಿನ ನಿಯಮಗಳು, ಗ್ರಾಹಕರ ರಕ್ಷಣಾ ಕಾಯ್ದೆ, 2007ರ ಕೆಪಿಎಂಇ ಕಾಯ್ದೆ, ವೈದ್ಯ ವೃತ್ತಿಗೆ ಸಂಬಂಧಿಸಿದ ಹಾಗೂ ಇನ್ನೂ ಹಲವು ಕಾನೂನುಗಳು ಇರುವುದರಿಂದ ಹೊಸ ಸಮಿತಿಯ ಅಗತ್ಯವಿಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತವೂ ಆಗಿತ್ತು. ಅವೆಲ್ಲ ಏನಾದವು?

ಗ್ರಾಹಕರ ವೇದಿಕೆಗಳ ಬಗ್ಗೆ ಹೇಳಿರುವುದೂ ಸುಳ್ಳು. ಈ ಮೇ 31ರ ವರೆಗೆ 31 ಜಿಲ್ಲಾ ಗ್ರಾಹಕ ವೇದಿಕೆಗಳಲ್ಲಿ ಶೇ 95ರಷ್ಟು ಹಾಗೂ ರಾಜ್ಯ ಆಯೋಗದಲ್ಲಿ ಶೇ 84ರಷ್ಟು ಪ್ರಕರಣಗಳು ಇತ್ಯರ್ಥವಾಗಿವೆ. ಸರಾಸರಿ ಶೇ 10-12ರಷ್ಟು ವೈದ್ಯಕೀಯ ನಿರ್ಲಕ್ಷ್ಯದ ದೂರುಗಳಾಗಿವೆ. ಗರಿಷ್ಠ ₹ 23.5 ಲಕ್ಷ ಪರಿಹಾರವನ್ನು ನೀಡಿದ ನಿದರ್ಶನವೂ ಇದೆ. ಆಯೋಗಕ್ಕೆ ಬೆಂಗಳೂರಿನ ಬಸವ ಭವನದ ಮೂಲೆಯಲ್ಲಿ ಈ ಸರ್ಕಾರ ಒದಗಿಸಿರುವ ಸಣ್ಣ ಕೊಠಡಿಯ ಇಕ್ಕಟ್ಟಿನಲ್ಲೂ ಮೂವರು ಸದಸ್ಯರು ತಿಂಗಳಿಗೆ 200 ಪ್ರಕರಣಗಳನ್ನು ಪರಿಹರಿಸುತ್ತಿದ್ದಾರೆ. ವೈದ್ಯರ ಕತ್ತು ಹಿಸುಕುವ ಕಾನೂನು ತರುವ ನೆಪದಲ್ಲಿ ಆಯೋಗವನ್ನು ಅವಮಾನಿಸುವ ಬದಲು ಅದಕ್ಕೆ ದೊಡ್ಡ ಕೊಠಡಿಯನ್ನು ನೀಡಿದರಾಗದೇ?

ರಾಜ್ಯ ವೈದ್ಯಕೀಯ ಪರಿಷತ್ತಿಗೆ ಕಳೆದ 5 ವರ್ಷಗಳಲ್ಲಿ 329 ದೂರುಗಳು ಬಂದಿದ್ದು, 33 ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಪರಿಷತ್ತು ಸರಿಯಿಲ್ಲ ಎಂದು ಹೇಳಿ ಹೊಸ ಸಮಿತಿಯನ್ನು ರಚಿಸಲು ಹೊರಟಿರುವ ಸರ್ಕಾರವು ಇದೇ ಪರಿಷತ್ತಿಗೆ 2016ರಲ್ಲಿ ನಡೆಸಬೇಕಾಗಿದ್ದ ಚುನಾವಣೆಯನ್ನು ಇನ್ನೂ ನಡೆಸಿಲ್ಲ!

ಈಗಿರುವ 2007ರ ಕೆಪಿಎಂಇ ಕಾಯ್ದೆಯಡಿಯಲ್ಲೂ ತಪ್ಪಿತಸ್ಥ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಬಹುದು. ಅಂತಹ ನಿದರ್ಶನಗಳೂ ಇವೆ. ಕಲಬುರ್ಗಿಯಲ್ಲಿ ಹಲವರ ಗರ್ಭಕೋಶಗಳನ್ನು ತೆಗೆದ ಪ್ರಕರಣಗಳಲ್ಲಿ ಈ ಕಾನೂನಿನಡಿಯಲ್ಲೇ ಆಸ್ಪತ್ರೆಗಳ ಪರವಾನಗಿಯನ್ನು ಕೂಡಲೇ ರದ್ದುಪಡಿಸಲಾಗಿತ್ತು. ಒಂದು ಆಸ್ಪತ್ರೆಯು ಹೆಸರು ಬದಲಿಸಿ ಮತ್ತೆ ತೆರೆದರೂ, ಈಗದನ್ನು ಮುಚ್ಚಿಸಲಾಗಿದೆ. ಜಿಲ್ಲಾಡಳಿತ, ವೈದ್ಯಕೀಯ ಪರಿಷತ್ತು ಹಾಗೂ ನ್ಯಾಯಾಲಯಗಳಲ್ಲಿ ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಆದರೆ ಇವು ಯಾವೂ ಸರಿಯಿಲ್ಲವೆಂದು ಸುಳ್ಳು ಹೇಳಿ, ಹೆಚ್ಚುವರಿ ಅಥವಾ ವಿಶೇಷ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುವ ಸಮಿತಿಗಳಲ್ಲಿ ವಕೀಲರ ನೆರವೂ ಇಲ್ಲದೆ ಕ್ಷಿಪ್ರ ವಿಚಾರಣೆಗೆ ವೈದ್ಯರನ್ನು ಗುರಿಪಡಿಸಬೇಕು ಎನ್ನುವ ಅಸಾಂವಿಧಾನಿಕವಾದ, ಅಪಾಯಕಾರಿಯಾದ ತಿದ್ದುಪಡಿ. ಇದುವೇ ನಮ್ಮ ವಿರೋಧಕ್ಕೆ ಪ್ರಮುಖ ಕಾರಣ.

‘ಹೆಣವಿಟ್ಟು ಹಣಕ್ಕಾಗಿ ಪೀಡಿಸುತ್ತಾರೆ’ ಎನ್ನುವ ಆರೋಪವನ್ನು ನಿತ್ಯವೂ ಮಾಡಲಾಗುತ್ತಿದೆ. 2015ರಲ್ಲಿ ರಾಜ್ಯದಲ್ಲಾದ 3,93,731 ಸಾವುಗಳಲ್ಲಿ 1,46,414 ಸಾವುಗಳು 1692 ಆಸ್ಪತ್ರೆಗಳಲ್ಲಾಗಿವೆ. ಬಾಯಿಗೆ ಬಂದಂತೆ ಆರೋಪಿಸುವ ಬದಲು, ಇವುಗಳಲ್ಲಿ ಅದೆಷ್ಟು ಪ್ರಕರಣಗಳಲ್ಲಿ ಹಣಕ್ಕಾಗಿ ಪೀಡಿಸಲಾಗಿತ್ತೆನ್ನುವುದನ್ನು ಹೇಳಲಿ. ಅಪರೂಪಕ್ಕೊಮ್ಮೆ, ಯಾವುದೋ ಕಾರಣಕ್ಕೆ ನಡೆದಿರಬಹುದಾದ ಕೆಲವು ಪ್ರಕರಣಗಳನ್ನೇ ದೊಡ್ಡದು ಮಾಡಿ, ಎಲ್ಲಾ ವೈದ್ಯರೂ ಹೆಣವಿಟ್ಟು ಹಣ ಕೀಳುವವರೆಂದು ಆರೋಪಿಸುವುದು ವೈದ್ಯವಿರೋಧಿ ಹುಚ್ಚಾಟವಾಗಿದೆ.

ನಮ್ಮ ದೇಶದಲ್ಲಿ ವೈದ್ಯಕೀಯ ಚಿಕಿತ್ಸೆಗೆ ತಗಲುವ ವೆಚ್ಚದ ಬಗ್ಗೆ ಸ್ಪಷ್ಟ ಮಾಹಿತಿಯೇ ಲಭ್ಯವಿಲ್ಲದಿರುವಾಗ ಸರ್ಕಾರವು ದರವನ್ನು ನಿಗದಿಪಡಿಸುತ್ತದೆನ್ನುವುದು ಹುಂಬತನ. ಕೇಂದ್ರ ಸರ್ಕಾರದ ಅಂತಹ ಪ್ರಯತ್ನವು 5 ವರ್ಷಗಳಾದರೂ ಕೈಗೂಡಿಲ್ಲ. ಕರ್ನಾಟಕ ಜ್ಞಾನ ಆಯೋಗದ ವರದಿಯಂತೆ, ಆಸ್ಪತ್ರೆಗಳು ಮಾಡುವ ಖರ್ಚಿನ ಶೇ 7-70 ರಷ್ಟನ್ನು ಮಾತ್ರ ಆರೋಗ್ಯ ಸುರಕ್ಷಾ ಯೋಜನೆಗಳಲ್ಲಿ ನೀಡಲಾಗುತ್ತಿರುವ ದರಗಳು ಭರಿಸುತ್ತವೆ. ಅಂದರೆ ಉಳಿದ ಖರ್ಚಿನ ನಷ್ಟವನ್ನು ಖಾಸಗಿ ಆಸ್ಪತ್ರೆಗಳೇ ಸಹಿಸುತ್ತವೆ. ಆದ್ದರಿಂದ, ಜನರಿಗೆ ಅತಿ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕಾದರೆ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತಗೊಳ್ಳಬೇಕೇ ಹೊರತು, ಖಾಸಗಿ ವೈದ್ಯರ ಕತ್ತು ಹಿಸುಕಿದರಾಗದು. ಕಾರ್ಪೊರೇಟ್ ಆಸ್ಪತ್ರೆಗಳಲ್ಲಾಗಲೀ, ಇನ್ಯಾವುದೇ ಆಸ್ಪತ್ರೆಗಳಲ್ಲಾಗಲೀ ದುಬಾರಿ ಚಿಕಿತ್ಸೆಯ ಬಗ್ಗೆ ನಿರ್ದಿಷ್ಟ ದೂರುಗಳಿದ್ದರೆ, ಸಂಬಂಧಿತ ಕಾನೂನುಗಳಡಿಯಲ್ಲಿ ತನಿಖೆಗೊಳಪಡಿಸಬೇಕೇ ವಿನಾ ಎಲ್ಲಾ ವೈದ್ಯರನ್ನೂ ದೂಷಿಸುವುದಲ್ಲ.

‘ಕೋಟಿ ಕೊಟ್ಟವರು ಲೂಟಿ ಮಾಡುತ್ತಿದ್ದಾರೆ’ ಎನ್ನುವವರು ‘ನೀಟ್’ ಬಂದ ಮೇಲೂ ಕೋಟಿಗೆ ಸೀಟು ಕೊಡಲು ಅವಕಾಶವಿತ್ತಿರುವ ಈ ಸರ್ಕಾರವನ್ನು ಪ್ರಶ್ನಿಸುವುದಿಲ್ಲ, ಬದಲಿಗೆ ವೈದ್ಯರೇ ಅದನ್ನು ಪ್ರಶ್ನಿಸಿದ್ದಾರೆ. ಈ ಅಸಾಂವಿಧಾನಿಕ ತಿದ್ದುಪಡಿಯನ್ನು ಪ್ರತಿಭಟಿಸುತ್ತಿರುವ ಬಹುತೇಕ ವೈದ್ಯರು ಸ್ವಸಾಮರ್ಥ್ಯದಿಂದ ವೈದ್ಯರಾಗಿ ಹಗಲಿರುಳು ದುಡಿಯುತ್ತಿರುವವರೇ ಹೊರತು, ಕೋಟಿ ಕೊಟ್ಟು ಸೀಟು ಪಡೆದವರಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT