ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಮದ್ದೂರಿನ ಎಳನೀರು!

Last Updated 13 ನವೆಂಬರ್ 2017, 5:21 IST
ಅಕ್ಷರ ಗಾತ್ರ

ಬಾಗಲಕೋಟೆ: ಮಂಡ್ಯ ಜಿಲ್ಲೆಯ ಮದ್ದೂರು ಮಾರುಕಟ್ಟೆಯ ಎಳನೀರು ನಗರಕ್ಕೆ ಲಗ್ಗೆ ಇಟ್ಟಿದ್ದು, ದಾಹ ತಣಿಸಿಕೊಳ್ಳಲು ಹಾಗೂ ಆರೋಗ್ಯದ ದೃಷ್ಟಿಯಿಂದ ಎಳನೀರು ಖರೀದಿಗೆ ದಾಂಗುಡಿ ಇಡುತ್ತಿದ್ದಾರೆ. ಹಾಗಾಗಿ ಬೇಡಿಕೆ ಹೆಚ್ಚಿದ್ದು, ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.

ನವನಗರದ ಬಸ್ ನಿಲ್ದಾಣ, ಎಪಿಎಂಸಿ ವೃತ್ತ, ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ ವೃತ್ತ, ವಿದ್ಯಾಗಿರಿಯ ಎಂಜಿನಿಯರಿಂಗ್ ಕಾಲೇಜು ವೃತ್ತದಲ್ಲಿ ತಳ್ಳುವಗಾಡಿಗಳು ಮತ್ತು ರಸ್ತೆಬದಿಯಲ್ಲಿ ಎಳನೀರು ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ಗಾತ್ರಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ. ₹20 ರಿಂದ ₹25 ರವರೆಗೆ ಮಾರಾಟವಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಬೆಳೆದಿರುವ ರೈತರು ಸಹ ಜಿಲ್ಲಾ ಕೇಂದ್ರಕ್ಕೆ ತಂದು ಮಾರಾಟ ಮಾಡುತ್ತಿದ್ದಾರೆ.

ಸಿಹಿಯಲ್ಲಿ ಮದ್ದೂರು ಎಳನೀರು ಹೆಚ್ಚು ಪ್ರಸಿದ್ಧಿ ಪಡೆದಿದೆ. ಅತಿ ಹೆಚ್ಚು ನೀರು ಹಾಗೂ ಸಿಹಿ ಅದರ ವಿಶೇಷವಾಗಿದೆ. ಹಾಗಾಗಿ ಅದಕ್ಕೆ ಬೇಡಿಕೆ ಇದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಕೋಲ್ಕತ್ತ ಸೇರಿದಂತೆ ಇತರೆ ರಾಜ್ಯಗಳಿಗೆ ಎಳ ನೀರು ರವಾನೆಯಾಗುತ್ತದೆ. ರಾಜ್ಯದಲ್ಲಿಯೂ ಇದಕ್ಕೆ ಬೇಡಿಕೆ ಹೆಚ್ಚಿದ್ದು, ನಗರದ ಜನ ಹೆಚ್ಚು ಇಷ್ಟ ಪಡುತ್ತಾರೆ. ಹಾಗಾಗಿ ನಾವು ಅಲ್ಲಿಂದಲೇ ಕಾಯಿಗಳನ್ನು ತಂದು ಮಾರಾಟ ಮಾಡುತ್ತೇವೆ ಎಂದು ಹುಬ್ಬಳ್ಳಿ ಮೂಲದ ಎಳನೀರು ವ್ಯಾಪಾರಿ ಗೌಸ್ ಮೋದಿನ್ ಹೇಳಿದರು.

ಕಳೆದ ಹತ್ತು ದಿನಗಳಿಂದ ಸುಮಾರು 15 ಜನರನ್ನೊಳಗೊಂಡ ತಂಡ ನಗರಕ್ಕೆ ಬಂದಿದ್ದು, ವ್ಯಾಪಾರ ಉತ್ತಮವಾಗಿದೆ. ರೈತರು ಹಳ್ಳಿಯಿಂದ ಎಳನೀರು ತಂದು ನಗರದಲ್ಲಿ ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಹಾಗಾಗಿ ಬೀದಿ ಬದಿಯ ವ್ಯಾಪಾರಿಗಳೂ ಅನಿವಾರ್ಯವಾಗಿ ಬೆಲೆ ಹೆಚ್ಚಿಸುತ್ತಾರೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕ ಬೆಲೆಯಾದರೂ ನಗರದಲ್ಲಿ ಎಳನೀರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ದಿನದಲ್ಲಿ ಸುಮಾರು 50–80 ಮಂದಿ  ಖರೀದಿಸುತ್ತಾರೆ. ಆಸ್ಪತ್ರೆ ಮತ್ತು ಬಸ್ ನಿಲ್ದಾಣಗಳಲ್ಲಿ ಮಾರಾಟ ಹೆಚ್ಚಾಗಿದೆ' ಎಂದು ವ್ಯಾಪಾರಿ ಶಿವು ರಾಠೋಡ ಹೇಳಿದರು.

ಮಹಾಂತೇಶ ಮಸಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT