ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಹುಚ್ಚೆಳ್ಳು ಬೆಳೆ ಕಣ್ಮರೆ

Last Updated 13 ನವೆಂಬರ್ 2017, 5:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮುಸುಕಿನ ಜೋಳದ ಬೆಳೆಯ ಅಬ್ಬರಕ್ಕೆ ಹುಚ್ಚೆಳ್ಳು ಎಣ್ಣೆ ಕಾಳು ಬೆಳೆ ಕಣ್ಮರೆಯಾಗುತ್ತಿದೆ. ತಾಲ್ಲೂಕಿನ 24,265 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಕೃಷಿ ಇಲಾಖೆಯ ಎರಡು ವರ್ಷಗಳ ಅಂಕಿ ಅಂಶಗಳ ಪ್ರಕಾರ ಹುಚ್ಚೆಳ್ಳು 60 ಹೆಕ್ಟೇರ್‌ಗಳಲ್ಲಿ ಬೆಳೆಯಾಗುತ್ತಿದೆ.

ಆದರೆ ವಾಸ್ತವದಲ್ಲಿ ತಾಲ್ಲೂಕಿನ ಸಾಸಲು, ತೂಬಗೆರೆ ಹೋಬಳಿಯ ಹಾಗೂ ಕಸಬಾ ಹೋಬಳಿಯ ಕೆಲವೇ ಕೆಲ ರೈತರು ಮಾತ್ರ ಮನೆ ಬಳಕೆಗಷ್ಟೇ ಹುಚ್ಚಳ್ಳನ್ನು ಬೆಳೆದುಕೊಳ್ಳುತ್ತಿದ್ದಾರೆ.

ಮುಸುಕಿನ ಜೋಳ ತಾಲ್ಲೂಕಿನ ರೈತರ ಕೃಷಿ ಭೂಮಿ ಆಕ್ರಮಿಸಿದ ನಂತರ ರಾಗಿ, ತೊಗರಿ, ಅವರೆ, ಹೆಸರು, ಉದ್ದು, ಸಾಸುವೆ, ಹುಚ್ಚೆಳ್ಳು, ನೆಲಗಡಲೆ, ಹರಳು....ಹೀಗೆ ಇನ್ನೂ ಅನೇಕ ಮಳೆ ಆಶ್ರಯದಲ್ಲಿ ಬೆಳೆಯಲಾಗುತ್ತಿದ್ದ ಬೆಳಗಳನ್ನು ನುಂಗಿಹಾಕಿದೆ.

ಅದರಲ್ಲೂ ರಾಗಿ ಹೊಲದ ಮಧ್ಯೆ ಬೆಳೆಯಲಾಗುತ್ತಿದ್ದ ಅಕ್ಕಡಿ ಸಾಲಿನ ಪದ್ಧತಿಯನ್ನೇ ಅಳಿಸಿ ಹಾಕಿದೆ. ಈಗಾಗಲೇ ನಮ್ಮಿಂದ ಕಣ್ಮರೆಯಾಗಿರುವ ಕಿರುಧಾನ್ಯಗಳಾದ ಸಾವೆ, ನವಣೆ, ಸಜ್ಜೆಯಂತೆ ಮುಂದಿನ ಎರಡು ಮೂರು ವರ್ಷಗಳಲ್ಲಿ ಹುಚ್ಚೆಳ್ಳು ಕಣ್ಮರೆಯಾಗಲಿದೆ ಎನ್ನುವ ಆತಂಕ ರೈತರಿಗೆ ಎದುರಾಗಿದೆ.

ಇದಷ್ಟೇ ಅಲ್ಲದೆ ಪೌಷ್ಟಿಕಾಂಶವುಳ್ಳ ಹುಚ್ಚೆಳ್ಳು ಎಣ್ಣೆ ‘ಬಡವರ ತುಪ್ಪ’ ಎಂದೇ ಕರೆಯಲಾಗುತ್ತದೆ. ರಾಗಿರೊಟ್ಟಿ ಹುಚ್ಚೆಳ್ಳು ಚಟ್ನಿ ಬಯಲು ಸೀಮೆಯ ಎಲ್ಲರ ಅಚ್ಚು ಮೆಚ್ಚಿನ ಊಟ. ಹುಚ್ಚೆಳ್ಳು ಹಿಂಡಿ ರಾಸುಳಿಗೆ ಉತ್ತಮ ಪಶು ಆಹಾರವು ಆಗಿದೆ.

ಕೃಷಿ ಮತ್ತು ಪರಿಸರವನ್ನು ಸುಸ್ಥಿರವಾಗಿ ಹಿಡಬಲ್ಲ ಶಕ್ತಿಯನ್ನು ಹೊಂದಿರುವ ಹುಚ್ಚೆಳ್ಳಿಗೆ ಕೃಷಿ ಇಲಾಖೆ ಕಡೆಯಿಂದ ಉಂಟಾಗಿರುವ ಪ್ರೋತ್ಸಾಹದ ಕೊರತೆ, ವಾಣಿಜ್ಯ ಬೆಳೆಗಳಿಗೆ ಮಾರುಹೋಗಿರುವ ರೈತರಲ್ಲಿ ಹುಚ್ಚೆಳ್ಳು ಬೆಳೆ ಮಹತ್ವದ ಕುರಿತು ಸೂಕ್ತ ಮಾಹಿತಿ ಇಲ್ಲದೆ ಇರುವ ಹಿನ್ನೆಲೆಯಿಂದ ನಿರುತ್ಸಾಹ ಮೂಡಿದೆ ಎಂದು ರೈತರೊಬ್ಬರು ಹೇಳುತ್ತಾರೆ.

ಈ ಎಲ್ಲ ಕಾರಣಗಳಿಂದಾಗಿ ಶತಮಾನಗಳಿಂದ ಮಳೆ ಆಶ್ರಯದ ಬೆಳೆಗಳೊಂದಿಗೆ ಒಟ್ಟೋಟ್ಟಿಗೆ ಬೆಳೆದು ಬಂದಿದ್ದ ಔಷಧಿಯ ಗುಣ ಹಾಗೂ ಪೌಷ್ಟಿಕಾಂಶವನ್ನು ಹೊಂದಿದ್ದ ಎಣ್ಣೆ ಕಾಳು ಬೆಳೆ ಹುಚ್ಚೆಳ್ಳು ಕಣ್ಮರೆಯಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT