ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಗೆಯಲ್ಲಿ ಗ್ರಾಹಕರಿಂದ ದೂರವಾದ ದೂರವಾಣಿ

Last Updated 13 ನವೆಂಬರ್ 2017, 6:22 IST
ಅಕ್ಷರ ಗಾತ್ರ

ಕಳಸ: ‘ಇಡೀ ಗ್ರಾಮದಲ್ಲಿ ಯಾವುದೇ ಸ್ಥಿರ ದೂರವಾಣಿಯೂ ಕೆಲಸ ಮಾಡುತ್ತಿಲ್ಲ. ಮೊಬೈಲ್‌ ನೆಟ್‌ವರ್ಕ್‌ ಸಿಗಬೇಕಾದರೆ 2 ಕಿ.ಮೀ. ದೂರದ ಗುಡ್ಡ ಏರಬೇಕು’. ಇದು ಹೊರನಾಡು ಸಮೀಪದ ಬಲಿಗೆ ಗ್ರಾಮಸ್ಥರ ನಿತ್ಯಸಂಕಟ. ಹೊರನಾಡಿನಿಂದ 8 ಕಿ.ಮೀ ದೂರದ ಬಲಿಗೆ ಭೌಗೋಳಿಕವಾಗಿ ಕಳಸ ಗ್ರಾಮ ಪಂಚಾಯಿತಿಗೆ ಒಳಪಟ್ಟ ಪ್ರದೇಶ.

ಇಲ್ಲಿನ ಮಧ್ಯಮ ವರ್ಗದ ಕೃಷಿಕರ ನೆಮ್ಮದಿ ಕೆಡಿಸಿರುವುದು ಎರಡು ವಿಷಯಗಳು. ಒಂದು ಇನಾಂ ಭೂಮಿ ವಿವಾದ, ಮತ್ತೊಂದು ಗ್ರಾಮದ ಯಾವ ಪ್ರದೇಶದಲ್ಲೂ ದೂರವಾಣಿ ಸಂಪರ್ಕ ಇಲ್ಲದಿರುವುದು. ಇನಾಂ ವಿವಾದ ಸುಪ್ರೀಂ ಕೋರ್ಟಿನಲ್ಲಿ ಇರುವುದರಿಂದ ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ. ಆದರೆ ದೂರವಾಣಿ ಸಮಸ್ಯೆ ಮಾತ್ರ ಹದಗೆಟ್ಟಿದ್ದು ಪರಿಹಾರದ ಭರವಸೆಯೇ ಗ್ರಾಮಸ್ಥರಲ್ಲಿ ಇಲ್ಲವಾಗಿದೆ.

‘ನಮ್ಮ ಊರಿಗೆ ಮೊದಲು ರಸ್ತೆಯೇ ಇರಲಿಲ್ಲ. ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ ರಸ್ತೆ ನಿರ್ಮಾಣ ಆದ ನಂತರ ಆ ಸಮಸ್ಯೆ ನಿವಾರಣೆ ಆಯಿತು. ಆದರೆ ಈಗ ಸ್ಥಿರ ದೂರವಾಣಿಗಳೆಲ್ಲವೂ ಕೆಟ್ಟಿರುವುದರಿಂದ ಮತ್ತು ಮೊಬೈಲ್‌ ಸಿಗ್ನಲ್‌ ಸಿಗದಿರುವುದರಿಂದ ನಮಗೆ ತೊಂದರೆ ಆಗಿದೆ’ ಎಂದು ಅಲ್ಲಿನ ಗ್ರಾಮಸ್ಥ ಶಶಿಕಾಂತ ಹೇಳುತ್ತಾರೆ.

ಹೊರನಾಡು ಮತ್ತು ಹಿರೇಬೈಲಿನ ಮೊಬೈಲ್‌ ಟವರ್‌ಗಳಿಂದ ಈ ಹಿಂದೆ ಬಲಿಗೆ ಗ್ರಾಮಕ್ಕೆ ಸಂಪರ್ಕ ಸಿಗುತ್ತಿತ್ತು. ಆದರೆ ಈಗ 3 ತಿಂಗಳಿನಿಂದ ಆ ಟವರ್‌ಗಳ ಸಂಕೇತವೂ ಸರಿಯಾಗಿ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಗೋಳು.

‘ನಾವು ಮೊಬೈಲ್‌ ಮೂಲಕ ಕರೆ ಮಾಡಬೇಕಾದರೆ 2 ಕಿ.ಮೀ ದೂರದ ಬಲಿಗೆ ಪ್ರವೇಶದ ಕಟ್ಟೆ ಅಥವಾ ಕೊಪ್ಪ ಗಡಿಯ ವಿಘ್ನೇಶ್ವರ ಕಟ್ಟೆಗೆ ಹೋಗಬೇಕು’ ಎಂದು ಮತ್ತೊಬ್ಬ ಗ್ರಾಮಸ್ಥ ಸವಿಂಜಯ ಹೇಳುತ್ತಾರೆ. ಈ ಎರಡೂ ಪ್ರದೇಶದಲ್ಲಿ ಮೊಬೈಲ್‌ ಹಿಡಿದು ಕರೆ ಮಾಡಲು ಬರುವ ಗ್ರಾಮಸ್ಥರ ದೃಶ್ಯಗಳು ಸಾಮಾನ್ಯವಾಗಿವೆ.

‘ಸ್ಥಿರ ದೂರವಾಣಿ ದುರಸ್ತಿಗೆ ಯಾವ ಸಲಕರಣೆಯೂ ಇಲ್ಲ ಎಂದು ದೂರವಾಣಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಇಲ್ಲಿ ಮೊಬೈಲ್‌ ಸಂಕೇತವೂ ಸಿಗುವುದಿಲ್ಲ ಎಂದರೆ ನಾವು ಏನು ಮಾಡಬೇಕು, ಇಲ್ಲಿ ಮೊಬೈಲ್‌ ಸಂಕೇತ ಸಿಗುವಂತೆ ಮಾಡದಿದ್ದರೆ ಸದ್ಯದಲ್ಲೇ ದೂರವಾಣಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ’ ಎಂದು ರೈತ ಸಂಘದ ಪದಾಧಿಕಾರಿ ಸವಿಂಜಯ ಎಚ್ಚರಿಸಿದ್ದಾರೆ.

‘ಕಳಸ ಗ್ರಾಮ ಪಂಚಾಯಿತಿಯಲ್ಲಿ ಸಭೆ ಇದ್ದರೆ ಕಳಸದಲ್ಲಿ ಇರುವ ನನ್ನ ಮಗ 16 ಕಿ.ಮೀ ದೂರದ ನಮ್ಮ ಮನೆಗೆ ಬಂದು ತಿಳಿಸಿದರೆ ಮಾತ್ರವೇ ನನಗೆ ತಿಳಿಯುತ್ತದೆ. ದೂರವಾಣಿ ಇಲ್ಲದೆ ಜನರಿಗೆ ಅನಾರೋಗ್ಯ ಮತ್ತಿತರ ಸಂದರ್ಭದಲ್ಲಿ ಭಾರಿ ತೊಂದರೆ ಆಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಸುವರ್ಣಮ್ಮ ಹೇಳುತ್ತಾರೆ.

‘ಈ ಸಮಸ್ಯೆಯ ಬಗ್ಗೆ ಮಾಹಿತಿ ಬಯಸಿ ಕಳಸ ದೂರವಾಣಿ ಕೇಂದ್ರಕ್ಕೆ ‘ಪ್ರಜಾವಾಣಿ’ ಹಲವಾರು ಬಾರಿ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಲಿಲ್ಲ. ಬಲಿಗೆ ಗ್ರಾಮಸ್ಥರು ದೂರವಾಣಿ ಕೇಂದ್ರಕ್ಕೆ ಈ ಸಮಸ್ಯೆ ತಿಳಿಸಬೇಕಾದಲ್ಲಿ ಅವರು ಕಳಸಕ್ಕೆ ಬಂದು ತಿಳಿಸಬೇಕೇ ಹೊರತು ಬೇರೆ ದಾರಿ ಇಲ್ಲ’ ಎಂಬುದು ಸಮಸ್ಯೆಯ ಆಳ ಮನದಟ್ಟು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT