ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಭಕ್ತರಿಗೆ ಮುಸ್ಲಿಂ ವ್ಯಾಪಾರಿಯ ಅನನ್ಯ ಸೇವೆ!

Last Updated 13 ನವೆಂಬರ್ 2017, 6:24 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಮಾನವೀಯತೆ, ಸೇವೆ, ಬಾಂಧವ್ಯಕ್ಕೆ ಧರ್ಮದ ಹಂಗಿಲ್ಲ’ ಎಂಬ ಮಾತಿನಂತೆ ಇಲ್ಲೊಬ್ಬ ಮುಸ್ಲಿಂ ವ್ಯಾಪಾರಿ ಹಿಂದೂ ಭಕ್ತರಿಗೆ ಉಚಿತ ಹಣ್ಣು, ಜ್ಯೂಸ್ ಕೊಡುವ ಸೇವೆ ಮಾಡುತ್ತಿದ್ದಾರೆ. ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಲಕ್ಷದೀಪೋತ್ಸವಕ್ಕೆ ತೆರಳುವ ತ್ತರ ಕರ್ನಾಟಕದ ಭಕ್ತರಿಗೆ ಕಳೆದ 16 ವರ್ಷಗಳಿಂದ ಸತತವಾಗಿ ಜ್ಯೂಸ್ ಕೊಡುವ ಸೇವೆ ಮಾಡುತ್ತಾ ಬಂದಿದ್ದಾರೆ! ರಾಜಕೀಯ ಲಾಭಕ್ಕಾಗಿ ಜಾತಿ, ಧರ್ಮಗಳ ನಡುವ ಕಂದಕ ಸೃಷ್ಠಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಇವರು ಸದ್ದಿಲ್ಲದೆ ಸಾಮರಸ್ಯ ಬಿತ್ತುವ ಕಾಯಕದಲ್ಲಿ ತೊಡಗಿದ್ದಾರೆ.

ತಮ್ಮ ಅಂಗಡಿಗೆ ತರಳಬಾಳು ಜ್ಯೂಸ್ ಸೆಂಟರ್ ಎಂದು ಹೆಸರಿಟ್ಟುಕೊಳ್ಳುವ ಮೂಲಕವೂ ಅವರು ಜಾತ್ಯತೀತತೆಗೆ ಸಾಕ್ಷಿಯಾಗಿದ್ದಾರೆ. ಪಟ್ಟಣದ ಬಸ್‌ ನಿಲ್ದಾಣದ ಎದುರಿಗೆ ಇರುವ ಸಯದ್‌ ದಾದಾಪೀರ್‌ ಎಂಬ ಮುಸ್ಲಿಂ ವ್ಯಾಪಾರಿ ಭಾನುವಾರ ಎಡೆಯೂರು ಸಿದ್ದಲಿಂಗೇಶ್ವ ಸ್ವಾಮಿ ಲಕ್ಷದೀಪೋತ್ಸವಕ್ಕೆ ತೆರಳುತ್ತಿದ್ದ ಉತ್ತರ ಕರ್ನಾಟಕದ ಸುಮಾರು 350 ಹಿಂದೂ ಭಕ್ತರಿಗೆ ಉಚಿತವಾಗಿ ಜ್ಯೂಸ್‌, ಹಣ್ಣು ವಿತರಿಸಿದರು. ದೂರದಿಂದ ನಡೆದು ಬಿಸಿಲಿನಿಂದ ಬಾಯಾರಿದ್ದ ಭಕ್ತರು ವಿವಿಧ ಬಗೆಯ ಹಣ್ಣುಗಳಿಂದ ತಯಾರಿಸಿದ್ದ ತಣ್ಣನೆಯ ಜ್ಯೂಸ್‌ ಕುಡಿದು ಸಂತೃಪ್ತರಾದರು.

ಪ್ರತೀವರ್ಷ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ನೂರಾರು ಭಕ್ತರು ಎಡೆಯೂರು ಸಿದ್ದಲಿಂಗೇಶ್ವರ ಲಕ್ಷದೀಪೋತ್ಸವಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಾರೆ. ಪಾದಯಾತ್ರೆಯಲ್ಲಿ ತೆರಳುವ ಎಲ್ಲಾ ಭಕ್ತರಿಗೆ ದಾದಾಪೀರ್‌ ಜ್ಯೂಸ್‌ ನೀಡುತ್ತಾರೆ. ಈ ಬಾರಿಯೂ ಹಿಂದೂ ಭಕ್ತರಿಗೆ ಕಲ್ಲಂಗಡಿ, ಪೈನಾಪಲ್‌, ಸೇಬು, ದ್ರಾಕ್ಷಿ, ಮೋಸಂಬಿ, ಕಿತ್ತಲೆ, ಸಪೋಟ, ಕಬ್ಬಿನ ಹಾಲು ಮತ್ತಿತರ ಜ್ಯೂಸ್‌ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.

ಜೀವ ಇರುವವರೆಗೆ ಸೇವೆ: ‘ಕಳೆದ 16 ವರ್ಷಗಳಿಂದ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಭಕ್ತರಿಗೆ ಜ್ಯೂಸ್‌, ಹಣ್ಣು ವಿತರಿಸುತ್ತಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೆ ಈ ಸೇವೆ ಮಾಡುತ್ತೇನೆ. ಸೇವೆ ಮಾಡಲು ಧರ್ಮ ಮುಖ್ಯವಲ್ಲ. ಎಲ್ಲಾ ಧರ್ಮಗಳೂ ಶಾಂತಿ, ಸ್ನೇಹ, ಬಾಂಧವ್ಯ, ಪ್ರೀತಿಯನ್ನು ಬಯಸುತ್ತವೆ. ನಮ್ಮ ಸೇವೆಯನ್ನು ನೋಡಿ ದೇವರು ಒಲಿಯುತ್ತಾನೆಯೇ ವಿನಾ ಪ್ರಾರ್ಥನೆ, ಪೂಜೆ ಮಾಡಿದರೆ ಸಾಲದು’ ಎನ್ನುತ್ತಾರೆ ದಾದಾಪೀರ್.

‘ಪಾದಯಾತ್ರೆಯಲ್ಲಿ ಬರುವ ಭಕ್ತರು ಪಟ್ಟಣಕ್ಕೆ ಬರುವ ದಿನಾಂಕವನ್ನು ಮೊದಲೇ ತಿಳಿಸುತ್ತಾರೆ. ಈ ಬಾರಿ ಭಕ್ತರಿಗಾಗಿ 3 ಕ್ವಿಂಟಲ್ ಪೈನಾಪಲ್, 1 ಬಾಕ್ಸ್ ಸೇಬು, 80 ಕೆಜಿ ಕಲ್ಲಂಗಡಿ, 1 ಕ್ವಿಂಟಲ್ ಕರಬೂಜ, 4 ಕ್ವಿಂಟಲ್ ಕಬ್ಬು ತರಿಸಿದ್ದೆ. ನನ್ನ ಸಂಬಂಧಿಕರ ಮಕ್ಕಳೂ ನನ್ನ ಸೇವೆಗೆ ನೆರವಾಗುತ್ತಾರೆ. ಸಯದ್ ಫರ್ವೇಜ್, ದಾದಾಪೀರ್, ಮಾಹಿರ್, ರೆಹಾನ್, ಜೀಷಾನ್, ಪ್ರಭು, ಮಲ್ಲಿ ಬೆಳಿಗ್ಗೆಯಿಂದ ಜ್ಯೂಸ್ ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ’ ಎನ್ನುತ್ತಾರೆ ದಾದಾಪೀರ್.

ನೀರಿನ ಸಮಸ್ಯೆಯೇ ಸೇವೆಗೆ ಪ್ರೇರಣೆ: 16 ವರ್ಷಗಳ ಹಿಂದೆ ಇಲ್ಲಿಗೆ ಪಾದಯಾತ್ರೆಯಲ್ಲಿ ಬಂದ ಸಿದ್ದಲಿಂಗೇಶ್ವರ ಸ್ವಾಮಿಯ ಭಕ್ತರು ಅಕ್ಕಪಕ್ಕದ ಹೊಟೇಲ್‌ಗಳಲ್ಲಿ ಕುಡಿಯುವ ನೀರು ಕೇಳುತ್ತಿದ್ದರು. ಆಗ ಪಟ್ಟಣದಲ್ಲಿ ಕುಡಿಯುವ ನೀರಿಗೆ ತುಂಬಾ ಸಮಸ್ಯೆ ಇತ್ತು. ಯಾವ ಹೊಟೇಲ್‌ನವರೂ ಭಕ್ತರಿಗೆ ನೀರು ಕೊಡಲಿಲ್ಲ. ಬಾಯಾರಿ ಬಂದ ಭಕ್ತರ ಬವಣೆ ನೋಡಿ ನೋವಾಯಿತು. ಆಗ ನನಗೆ ಎಲ್ಲರಿಗೂ ಜ್ಯೂಸ್‌ ಕೊಡಬೇಕು ಎನಿಸಿತು. ಎಲ್ಲರನ್ನೂ ಕರೆದು ಜ್ಯೂಸ್‌ ಕೊಟ್ಟೆ. ಅಂದಿನಿಂದ ಇಲ್ಲಿಯವರೆಗೆ ಆ ಕಾಯಕ ಮಾಡುತ್ತಿದ್ದೇನೆ. ದೇವರು ನನ್ನನ್ನು ಚೆನ್ನಾಗಿಟ್ಟಿದ್ದಾನೆ’ ಎನ್ನುತ್ತಾರೆ ದಾದಾಪೀರ್‌.

460 ಕಿ.ಮೀ. ಪಾದಯಾತ್ರೆ!: ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಶಲವಡಿಯ ಸಿದ್ದಲಿಂಗೇಶ್ವರ ಭಕ್ತ ಮಂಡಳಿ ಪ್ರತೀವರ್ಷ ಕಾರ್ತೀಕ ಮಾಸದಲ್ಲಿ ಎಡೆಯೂರಿಗೆ ಪಾದಯಾತ್ರೆ ಏರ್ಪಡಿಸುತ್ತದೆ. ಈಗ 41ನೇ ವರ್ಷದ ಪಾದಯಾತ್ರೆಯಲ್ಲಿ ಉತ್ತರ ಕರ್ನಾಟಕದ ದಾಟನಾಳ, ನವಲಗುಂದ, ಶಾನವಾಡ, ಪಡೇಸೂರ, ಖನ್ನೂರ, ನಾಯ್ಕನೂರು, ಯಾವಗಲ್ಲ, ಕೋತಬಾಳ, ಬೆಳವಣಕಿ, ಕರಮುಡಿ, ಇಂಗಳ ಹಳ್ಳಿ, ಹೆಬ್ಬಾಳ, ನಿರಲಗಿ, ಬನ್ನಿಕೊಪ್ಪ, ಇಬ್ರಾಹಿಮ್‌ಪೂರ, ಅಳಗವಾಡಿ, ಅಕ್ಕಿಗುಂದ, ಬಟ್ಟೂರ, ಗದಗ, ಭಾವನೂರ, ಬಾಗಲಕೋಟೆ, ಅರಕೇರಿ, ನೆಲವಡಿ, ಕಂಗವಳ್ಳಿ, ಹಾಗಲಕೇರಿ, ಮೇವುಂಡಿ ಗ್ರಾಮಗಳಿಂದ ಭಕ್ತರು 460 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದರು.

ಶಲವಡಿಯಿಂದ ಹೊರಟಿರುವ ಪಾದಯಾತ್ರೆ ಕುರ್ತುಕೋಟಿ, ಮುಳುಗುಂದ, ಬಟ್ಟೂರ, ಸುರಣಿಗಿ, ಹಾಲಗಿ, ಗುತ್ತಲ, ಅನ್ವೇರಿ, ಹರಿಹರ, ದಾವಣಗೆರೆ, ಸಾಸಲು, ಚಿಕ್ಕಜಾಜೂರು, ಹೊಳಲ್ಕೆರೆ, ತಿರುಮಲಾಪುರ, ಹೊಸದುರ್ಗ, ಶ್ರೀರಾಂಪುರ, ಹುಳಿಯಾರು, ಚಿಕ್ಕನಾಯಕನ ಹಳ್ಳಿ, ತುರುವೇಕೆರೆ, ಜಡಿಯಾ ಮಾರ್ಗದಲ್ಲಿ ಪಾದಯಾತ್ರೆ ನಡೆಸಿ ಲಕ್ಷದೀಪೋತ್ಸವ ನಡೆಯುವ ವೇಳೆಗೆ ಎಡೆಯೂರು ತಲುಪುತ್ತಾರೆ. ಕ್ಷೇತ್ರದಲ್ಲಿ ನಡೆಯುವ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ರೈಲಿನಲ್ಲಿ ತಮ್ಮ ಊರುಗಳಿಗೆ ವಾಪಾಸ್‌ ತೆರಳುತ್ತಾರೆ.

ಸೇವೆ ಕಂಡು ಆನಂದ ಆಗ್ತೈತಿ:
‘ನಾನು 10 ವರ್ಷಗಳಿಂದ ಎಡೆಯೂರಿಗೆ ಪಾದಯಾತ್ರೆ ಮಾಡುತ್ತಿದ್ದೇನೆ. ಪ್ರತೀ ವರ್ಷ ಇಲ್ಲಿ ಜ್ಯೂಸ್ ಕುಡಿಯುತ್ತಿದ್ದೇನೆ. ಮುಸ್ಲಿಂ ವ್ಯಾಪಾರಿಯೊಬ್ಬರು ಹಿಂದೂಗಳಿಗೆ ಸೇವೆ ಮಾಡುತ್ತಿರುವುದನ್ನು ಕಂಡು ಆನಂದ ಆಗ್ತೈತಿ. ಜಾತಿ, ಧರ್ಮ ನಾವ್ ಮಾಡ್ಕೊಂಡಿವಿ. ಎಲ್ಲರಿಗೂ ದೇವ್ರು ಒಬ್ನಾ ಅದಾನ’ ಎಂದು ಭಕ್ತರಾದ ಚಂದ್ರಶೇಖರ್, ಬೆನ್ನರೆಡ್ಡಿ, ಷಣ್ಮುಖಪ್ಪ, ಬಸವರಾಜ ಅಂಗಡಿ ಹೇಳಿದರು.

‘ಪಾದಯಾತ್ರೆ ಸಂಚರಿಸುವ ಮಾರ್ಗ ಮತ್ತು ದಿನಾಂಕ ಇರುವ ಕರಪತ್ರ ಮುದ್ರಿಸಿ ಮೊದಲೇ ಕಳಿಸಿರುತ್ತೇವೆ. ನಿಗದಿಯಾದ ಊರುಗಳಲ್ಲಿ ರಾತ್ರಿ ಉಳಿದುಕೊಳ್ಳುತ್ತೇವೆ. ಅಲ್ಲಿನ ಗ್ರಾಮಸ್ಥರು ನಮಗೆ ಊಟ ನೀಡಿ ಉಪಚರಿಸುತ್ತಾರೆ. ಮಳೆ–ಬೆಳೆ ಚೆನ್ನಾಗಿ ಆಗಲಿ, ಜನ, ಜಾನುವಾರಿಗೆ ರೋಗ–ರುಜಿನಗಳು ಬರದಿರಲಿ, ಎಲ್ಲರಿಗೂ ದೇವರ ಆಶೀರ್ವಾದ ಸಿಗಲಿ ಎಂಬ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಪಾದಯಾತ್ರೆ ಸಮಿತಿಯ ಅಧ್ಯಕ್ಷ ಸಿ.ಎಂ.ಗಡಾದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT