ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾರ್ಮಿಕರಿಗೆ ಡಿಮೆಂಡಪ್ಪೋ, ಡಿಮೆಂಡ್‌

Last Updated 13 ನವೆಂಬರ್ 2017, 6:27 IST
ಅಕ್ಷರ ಗಾತ್ರ

ಹೊಸದುರ್ಗ: ಹೊಲದಲ್ಲಿ ಕೊಯ್ಲಿಗೆ ಬಂದಿರುವ ರಾಗಿ ಕಟಾವು ಮಾಡುವ ಕೃಷಿ ಕಾರ್ಮಿಕರಿಗೆ ಈ ಬಾರಿ ತಾಲ್ಲೂಕಿನಲ್ಲಿ ಭಾರಿ ಬೇಡಿಕೆ ಬಂದಿದೆ. ಈ ಭಾಗದ ಜನರ ಆಹಾರ ಹಾಗೂ ಜಾನುವಾರು ಮೇವಿಗೆ ಆಸರೆಯಾಗಿರುವ ರಾಗಿಯನ್ನು ತಾಲ್ಲೂಕಿನ ರೈತರು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಕೃಷಿ ಇಲಾಖೆ ಮೂಲಗಳ ಪ್ರಕಾರ ಈ ಬಾರಿ ತಾಲ್ಲೂಕಿನಲ್ಲಿ 25,600 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.

ರಾಗಿ ಬೆಳೆ ವಡೆ ಬಿಚ್ಚುವ ಹಂತದಲ್ಲಿ ಇದ್ದಾಗ ಉತ್ತರೆ, ಹಸ್ತೆ, ಚಿತ್ತೆ ಮಳೆ ತಮ್ಮ ಶಕ್ತ್ಯಾನುಸಾರ ಸುರಿದವು. ಹದ ಮಳೆಗೆ ರೈತರು ಯುರಿಯಾ, ಡಿಎಪಿ ಗೊಬ್ಬರ ಕೊಟ್ಟಿದ್ದರಿಂದ ಬೆಳೆ ಹುಲುಸಾಗಿ ಬೆಳೆಯಿತು. ರಾಗಿ ಕಾಳು ಗಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಕೆಲವೆಡೆ ಹುಲುಸಾಗಿ ಬೆಳೆದಿದ್ದ ರಾಗಿ ತೊಂಡೆ ಬತ್ತಿ ಎತ್ತಬೇಕೋ ಅತ್ತ ಮುರಿದು ನೆಲಕ್ಕೆ ಬಿದಿದ್ದೆ. ಈ ರೀತಿ ಮುರಿದು ಬಿದ್ದ ರಾಗಿ ಕೊಯ್ಯಲು ಕೂಲಿಕಾರಿಗೆ ಕಷ್ಟವಾಗುತ್ತದೆ. 4 ಜನರು ಕೊಯ್ಯುವ ರಾಗಿಯನ್ನು 6 ಮಂದಿ ಕೊಯ್ಯಬೇಕಾಗುತ್ತದೆ ಎನ್ನುತ್ತಾರೆ ರೈತ ರಂಗಸ್ವಾಮಿ.

ಹೇಗೆಬೇಕೋ ಆಗೆ ನೆಲಕ್ಕೆ ಬಿದ್ದಿರುವ ರಾಗಿಯನ್ನು ಬೆಳೆ ಕಟಾವು ಯಂತ್ರ ಬಳಸಿ ಕಟಾವು ಮಾಡಲು ಬರುವುದಿಲ್ಲ. ನೆರವಾಗಿ ಬೆಳೆದಿರುವ ರಾಗಿಯನ್ನು ಮಾತ್ರ ಯಂತ್ರ ಬಳಸಿ ಕಟಾವು ಮಾಡಬಹುದು ಅಷ್ಟೆ. ಕಲ್ಲುಗಳು ಇರುವ ಜಮೀನಿನಲ್ಲಿ ಯಂತ್ರದಿಂದ ಬೆಳೆ ಕಟಾವು ಮಾಡಲಿಕ್ಕೂ ಬರುವುದಿಲ್ಲ. ಒಂದು ವೇಳೆ ಯಂತ್ರ ಬಳಸಿದರೆ ಭೂಮಿಯಿಂದ ಅರ್ಧ ಬಿಟ್ಟು ಕಟಾವು ಮಾಡಬೇಕು. ಇದರಿಂದ ರಾಗಿ ಹುಲ್ಲು ಸಾಕಷ್ಟು ಹಾಳಾಗುತ್ತದೆ. ಆದ್ದರಿಂದ ಕೂಲಿ ಕಾರ್ಮಿಕರಿಂದಲೇ ಬೆಳೆ ಕಟಾವು ಮಾಡಿಸಬೇಕು ಎನ್ನುತ್ತಾರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಆರ್‌.ಲಿಂಗರಾಜು.

ಸತತ ಎರಡು ವರ್ಷ ಬರಗಾಲ ಬಂದಿದ್ದರಿಂದ ಗ್ರಾಮೀಣ ಭಾಗದ ಸಾಕಷ್ಟು ಜನರು ಉದ್ಯೋಗ ಹರಸಿ ನಗರಗಳತ್ತ ವಲಸೆ ಹೋಗಿದ್ದಾರೆ. ಇದರಿಂದ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದೆ. ರಾಗಿ ಕೊಯ್ಯುವ ಕಾರ್ಮಿಕರು ಕಡಿಮೆಯಾಗಿದ್ದಾರೆ. ಇದರಿಂದ ರಾಗಿ ಕೊಯ್ಯುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ರಾಗಿ ಕಟಾವು ಮಾಡುವ 10 ದಿನ ಮೊದಲೇ ಕಾರ್ಮಿಕರನ್ನು ನಿಗದಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಷ್ಟವಾಗುತ್ತದೆ. ಕೊಯ್ಲಿಗೆ ಬಂದ ರಾಗಿ ಕಟಾವು ಮಾಡದಿದ್ದರೆ, ರಾಗಿ ನೆಲಕ್ಕೆ ಉದುರಿ ನಷ್ಟವಾಗುತ್ತದೆ ಎನ್ನುತ್ತಾರೆ ರೈತ ವೆಂಕಟೇಶ್‌.

ರಾಗಿ ಕೊಯ್ಯಲು ಒಬ್ಬ ಕಾರ್ಮಿಕ ದಿನಕ್ಕೆ ₹ 300ರಿಂದ 350ರ ವರೆಗೆ ಕೂಲಿ ಕೇಳುತ್ತಿದ್ದಾರೆ. ಕೊಯ್ಲಿಗೆ ಬಂದಿರುವ ಒಂದು ಎಕರೆ ರಾಗಿ ಕಟಾವು ಮಾಡಲು ₹ 4,500ರಿಂದ 6,500ದ ವರೆಗೆ ಗುತ್ತಿಗೆ ಕೇಳುತ್ತಿದ್ದಾರೆ. ಇನ್ನೂ ರಾಗಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿದ್ದು, ಬೆಳೆಯನ್ನು ಕೂಲಿಕಾರರಿಂದ ಎಡೆಕುಂಟೆ ಹೊಡೆಸಿದ್ದು, ಕಳೆ ತೆಗೆಸಿದ್ದು ಸೇರಿದಂತೆ ಒಂದು ಎಕರೆ ರಾಗಿ ಬೆಳೆಯಲು ಸುಮಾರು ₹ 15,000 ಖರ್ಚು ಮಾಡಲಾಗಿದೆ.

ಒಂದು ಎಕರೆಗೆ 8 ರಿಂದ 10 ಕ್ವಿಂಟಲ್‌ ರಾಗಿ ಆಗಬಹುದು. ಮಾರುಕಟ್ಟೆಯಲ್ಲಿ ಈಗಿರುವ ದರ ನೋಡಿದರೆ ಬೆಳೆಗೆ ಖರ್ಚು ಮಾಡಿರುವ ಹಣವೂ ಕೈಸೇರುವುದಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿರುವುದರಿಂದ ರಾಗಿ ಬೆಳೆಯಬಾರದು ಎನ್ನುವಷ್ಟು ಬೇಸರವಾಗಿದೆ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT