ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ಮಾರಾಟ ಮಾಡಿ ಬದುಕು ಹಸನಾಗಿಸಿಕೊಂಡರು...

Last Updated 13 ನವೆಂಬರ್ 2017, 6:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೂವುಗಳು, ಕರಿಬೇವು, ತೆಂಗಿನ ಸಸಿ ಸೇರಿದಂತೆ ಮನೆಯ ಮುಂದಿನ ಅಂಗಳ ಸುಂದರವಾಗಿ ಕಾಣಲು ಅಲಂಕರಿಸಬಹುದಾದ ವಿವಿಧ ಬಗೆಯ ಸಸಿಗಳ ರಾಶಿ. ಇವುಗಳನ್ನು ಸಾಲು ಸಾಲಾಗಿ ಮಾರಾಟಕ್ಕಾಗಿ ಇಟ್ಟಿರುವ ದೃಶ್ಯ ರಸ್ತೆ ಬದಿಯೊಂದರ ಪಕ್ಕದಲ್ಲಿ ಗೋಚರಿಸುತ್ತವೆ. ಬಿ.ಡಿ.ರಸ್ತೆ ಮೂಲಕ ಬೆಂಗಳೂರು ಮಾರ್ಗವಾಗಿ ತೆರಳುವ ಪಂಚಾಚಾರ್ಯ ಕಲ್ಯಾಣ ಮಂಟಪದ ಬಲ ಬದಿಯಲ್ಲಿ ಇರುವ ನರ್ಸರಿಯಲ್ಲಿ ವಿವಿಧ ರೀತಿಯ ಸಸಿಗಳು ಹಚ್ಚ ಹಸಿರಿನಂತೆ ಕಣ್ಣಿಗೆ ಕಾಣುವುದು ಹೀಗೆ.

ನಿಗದಿತ ಸ್ಥಳದಲ್ಲಿ ಸಿಗುವಂಥ ಸಸಿಗಳು ಈ ರಸ್ತೆ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಕಾಣುತ್ತದೆ. ಅಲ್ಲೊಮ್ಮೆ ವಾಹನ ನಿಲ್ಲಿಸಿದರೆ ಸಾಕು... ನರ್ಸರಿಯ ಮಾಲೀಕ, ಕೆಲಸಗಾರರು, ‘ಸರ್ ನಿಮಗೆ ಯಾವ ರೀತಿಯ ಸಸಿಬೇಕು. ಹೂವುಗಳ ಸಸಿಯೇ, ಕರಿಬೇವಿನ ಸಸಿಯೇ, ತೆಂಗಿನ ಸಸಿ ಬೇಕೆ ಹೇಳಿ’ ಎನ್ನುತ್ತಾರೆ.

₹ 1 ಸಾವಿರದವರೆಗಿನ ಸಸಿಗಳು ಲಭ್ಯ: ‘ವಿವಿಧ ವರ್ಣಗಳ ಗುಲಾಬಿ ಮತ್ತು ಬಟನ್ಸ್‌, ದಾಸವಾಳ ಸೇರಿದಂತೆ ಭಿನ್ನ – ವಿಭಿನ್ನ ರೀತಿಯ ₹ 20 ರಿಂದ ₹ 40ರವರೆಗೂ ದೊರಕುವ ಹೂವಿನ ಸಸಿಗಳಿವೆ. ₹ 100 ರಿಂದ ₹ 1 ಸಾವಿರದವರೆಗಿನ ಅಲಂಕಾರಿಕ ಗಿಡಗಳಿವೆ. ನಮ್ಮಲ್ಲಿ ಗ್ರಾಹಕರು ಕೇಳಿದ ಸಸಿ ಇಲ್ಲದಿದ್ದರೂ ಬೇರೆ ಕಡೆಯಿಂದ ತರಿಸಿಕೊಡುತ್ತೇವೆ’ ಎನ್ನುತ್ತಾರೆ ನರ್ಸರಿ ಮಾಲೀಕ ವೆಂಕಟೇಶ್.

‘ಮೂಲತಃ ನಾವು ಆಂಧ್ರಪ್ರದೇಶದಿಂದ ಚಿತ್ರದುರ್ಗಕ್ಕೆ ಬಂದಿದ್ದೇವೆ. ಬದುಕನ್ನು ರೂಪಿಸಿಕೊಳ್ಳಲು ಇದು ನಮಗೆ ಸಹಕಾರಿಯಾಗಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ವ್ಯಾಪಾರವನ್ನು ನಾನೂ ಮಾಡುವುದಿಲ್ಲ. ನನ್ನ ಪತ್ನಿ ಮತ್ತು ಮಕ್ಕಳು ಆಂಧ್ರದಲ್ಲಿಯೇ ಇದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅದಕ್ಕಾಗಿ ದುಡಿಯುವ ಸಲುವಾಗಿ ಇಲ್ಲಿ ಸುಮಾರು ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ’ ಎನ್ನುತ್ತಾರೆ ಅವರು.

ಆಂಧ್ರದಿಂದ ಸಸಿಗಳು ದುರ್ಗಕ್ಕೆ: ‘ಸಸಿಗಳು ಖಾಲಿಯಾದರೆ, ಆಂಧ್ರಪ್ರದೇಶದ ಸಾಂಸ್ಕೃತಿಕ ರಾಜಧಾನಿ ಎಂಬುದಾಗಿ ಪ್ರಸಿದ್ಧವಾಗಿರುವ ರಾಜಮಂಡ್ರಿಯಿಂದ ಸಸಿಗಳನ್ನು ತರಿಸುತ್ತೇವೆ. ಒಂದು ಲೋಡ್‌ ಸಸಿಗಳಿಗೆ ಸಾಮಾನ್ಯವಾಗಿ ₹ 50 ಸಾವಿರ ಆಗುತ್ತದೆ. ವ್ಯಾಪಾರ ಮಾಡುವ ಈ ಸ್ಥಳದ ಬಾಡಿಗೆ ₹ 3 ಸಾವಿರ. ಸಸಿಗಳನ್ನು ಉಳಿಸಿ, ಬೆಳೆಸಲು ಪ್ರತಿನಿತ್ಯ ₹ 250 ಖರ್ಚಾಗುತ್ತದೆ. ನಮ್ಮಲ್ಲಿ ಇಬ್ಬರು ಕೆಲಸಗಾರರಿದ್ದು, ಅವರ ದಿನನಿತ್ಯದ ಕೂಲಿ ಎಲ್ಲವನ್ನೂ ಲೆಕ್ಕ ಹಾಕಿದರು ನಮಗೆ ಉಳಿಯುವುದು ಅಲ್ಪ. ಸಿಗುವಷ್ಟರಲ್ಲೇ ತೃಪ್ತಿ ಪಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ’ ಎಂದು ವಿವರಿಸಿದರು.

ಒಂದು ಹೊತ್ತಿನ ಊಟ, ಸಂಸಾರ ನಿರ್ವಹಣೆ, ಜೀವನೋಪಾಯಕ್ಕಾಗಿ ಎಲ್ಲೆಲ್ಲಿಂದಲೋ ಬಂದು ಇಲ್ಲಿ ನೆಲೆ ಕಂಡು ಕೊಂಡಿರುವುದು ನಿಜಕ್ಕೂ ನಮಗೆ ಅಚ್ಚರಿ. ಯಾರೇ ಆಗಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬ ವಿಶ್ವಾಸದೊಂದಿಗೆ ಸಾಗಿದರೆ ಯಾವುದೇ ಸ್ಥಳದಲ್ಲಾದರೂ ಬದುಕು ರೂಪಿಸಿಕೊಳ್ಳಬಹುದು ಎಂದು ಸಸಿಕೊಳ್ಳಲು ಬಂದಿದ್ದ ಗ್ರಾಹಕರು ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT