ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣ ಕೊಟ್ಟೇವು, ಕಸ ತರಲು ಬಿಡೆವು

Last Updated 13 ನವೆಂಬರ್ 2017, 6:44 IST
ಅಕ್ಷರ ಗಾತ್ರ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಂಗಡನೆ ಹಾಗೂ ಘನತ್ಯಾಜ್ಯ ಸಂಸ್ಕರಣೆಗೆ ಗುರುತಿಸಿರುವ ತಾಲ್ಲೂಕಿನ ಶಿವಳ್ಳಿ ಗ್ರಾಮದೊಳಗೆ ‘ಕಸ ತುಂಬಿದ ಲಾರಿಯನ್ನು ಪ್ರಾಣ ಕೊಟ್ಟಾದರೂ ತಡೆಯುತ್ತೇವೆ’ ಎಂಬ ಹೋರಾಟದ ಕೂಗು ಈಗ ಜೋರಾಗಿ ಕೇಳಿಬರುತ್ತಿದೆ.

ಶಿವಳ್ಳಿ, ಹೆಬ್ಬಳ್ಳಿ ಹಾಗೂ ಸುಳ್ಳ ಗ್ರಾಮಕ್ಕೆ ಹೊಂದಿಕೊಂಡಿರುವ ಮಡ್ಡಿಗುಡ್ಡ ಎಂಬ ಪ್ರದೇಶವನ್ನು ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು 2006ರಲ್ಲಿ ಪಾಲಿಕೆ ಗುರುತಿಸಿತ್ತು. 67.20ಎಕರೆಯ ಈ ಗುಡ್ಡಗಾಡು ಪ್ರದೇಶದ ಸುತ್ತ ಎತ್ತರದ ಕಂಪೌಂಡ್‌ ಹಾಗೂ ಕಾವಲಿಗೆ ಮೂವರನ್ನು ನೇಮಿಸಿದೆ. ಅಂದಿನಿಂದಲೂ ಈ ಮೂರು ಗ್ರಾಮಗಳ ಗ್ರಾಮಸ್ಥರ ವಿರೋಧದಿಂದಾಗಿ ಘನತ್ಯಾಜ್ಯ ಘಟಕ ನಿರ್ಮಾಣ ಯೋಜನೆ ಸ್ಥಗಿತವಾದ ಕಾರಣ ವಿವಾದ ತಣ್ಣಗಿತ್ತು. ಆದರೆ, ಇತ್ತೀಚೆಗೆ ಪೇವರ್ಸ್‌ ಘಟಕ ಆರಂಭಿಸುವ ಕುರಿತು ಸುದ್ದಿ ಪ್ರಕಟಗೊಳ್ಳುತ್ತಲೇ ಗ್ರಾಮಸ್ಥರು ಮತ್ತೆ ಹೋರಾಟಕ್ಕೆ ಅಣಿಯಾಗಿದ್ದಾರೆ.

ಎತ್ತರದ ಗಿರಿಧಾಮದಂತಿರುವ ಮಡ್ಡಿಗುಡ್ಡದಲ್ಲಿ ಮೂರು ಕೆರೆಗಳು ಇದ್ದವು. ಮೇಲೆ ಕೆರೆ ಇದ್ದುದರಿಂದ ಗುಡ್ಡದ ಕೆಳ ಭಾಗದ ಹೊಲಗಳಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಿತ್ತು. ಆದರೆ, ಕಂಪೌಂಡ್‌ ಕಟ್ಟಿದ ನಂತರ ಕೆರೆಗಳು ಮುಚ್ಚಿದ್ದರಿಂದಾಗಿ ಮುಂದೆ ಗ್ರಾಮದಲ್ಲಿ ನೀರಿಗೆ ತತ್ವಾರ ಎದುರಾಯಿತು. ಜತೆಗೆ ಅವಳಿ ನಗರದ ಕಸದಿಂದ ಗ್ರಾಮದ ನೈರ್ಮಲ್ಯ ಹದಗೆಟ್ಟು ಹಂದಿಗಳ ಹಾವಳಿ ಹೆಚ್ಚಾಗಲಿದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ಶಿವು ಬೆಳಾರದ, ‘ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಗ್ರಾಮ, ಅವಳಿ ನಗರ 13ಲಕ್ಷ ಜನರ ಕಸವನ್ನು ನುಂಗಬೇಕೆಂದರೆ ಹೇಗೆ? ಈ ಘಟಕವನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದೇವೆ. ಗುಡ್ಡದ ಕಡೆಯಿಂದ ಮೂಡುಗಾಳಿ ಇತ್ತಲೇ ಬೀಸುವುದರಿಂದ ಕಸದ ವಾಸನೆಯಿಂದಾಗಿ ಗ್ರಾಮಸ್ಥರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಗ್ರಾಮದ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಇದನ್ನು ನಾವು ವಿರೋಧಿಸುತ್ತೇವೆ. ಯಾವ ಕಾರಣಕ್ಕೂ ಈ ಘಟಕ ಇಲ್ಲಿ ಸ್ಥಾಪನೆಯಾಗಲು ಬಿಡುವುದಿಲ್ಲ’ ಎಂದು ಹೇಳಿದರು.

ಈ ವಿಷಯ ಕುರಿತಂತೆ ಶಿವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಈಗಾಗಲೇ ಹಲವು ಬಾರಿ ನಿರ್ಣಯ ಕೈಗೊಳ್ಳಲಾಗಿದೆ. ಕಳೆದ ಅಕ್ಟೋಬರ್‌ 30ರಂದು ನಡೆದ ಗ್ರಾಮ ಪಂಚಾಯ್ತಿ ಸಭೆಯಲ್ಲೂ ಘಟಕ ಸ್ಥಾಪನೆಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶಿವಳ್ಳಿ ಮಾತ್ರವಲ್ಲದೆ, ಸುತ್ತಲಿನ ಹೆಬ್ಬಳ್ಳಿ, ಸುಳ್ಳ, ಬ್ಯಾಹಟ್ಟಿ, ಮಾರಡಗಿ ಗ್ರಾಮಕ್ಕೂ ಈ ಘಟಕ ಮಾರಕವಾಗಲಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಎಲ್ಲರ ಒತ್ತಾಯದ ಮೇಲೆ ನಿರ್ಣಯ ತೆಗೆದುಕೊಂಡ ಗ್ರಾಮ ಪಂಚಾಯ್ತಿಯು ಈ ಘಟಕ ಸ್ಥಾಪನೆಯನ್ನು ಶಿವಳ್ಳಿ ಗ್ರಾಮದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಇದರ ನಿರ್ಣಯದ ಒಂದು ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರಿಗೂ ನೀಡಿದ್ದಾರೆ.

ಇದೇ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ರಾಜಣ್ಣ ಮುದ್ದಿ ಪ್ರತಿಕ್ರಿಯಿಸಿ, ‘ಘಟಕ ಆರಂಭವಾಯಿತೆಂದರೆ ಇಡೀ ಊರಿಗೆ ರೋಗ ಹಿಡಿದಂತಾಗಲಿದೆ. ಘಟಕ ಎತ್ತರದ ಪ್ರದೇಶದಲ್ಲಿದೆ. ಕಸ ಹೊತ್ತ ಲಾರಿ ಊರಿನೊಳಗೇ ಸಾಗಬೇಕು. ಇದು ಕಾಲಕ್ರಮೇಣ ಗ್ರಾಮಸ್ಥರ ಅನಾರೋಗ್ಯಕ್ಕೆ ಕಾರಣವಾಗಬಹುದು. ಸತತ ಬರಗಾಲದಿಂದ ಜನರು ಕಂಗೆಟ್ಟಿದ್ದಾರೆ. ಸದ್ಯ ಲಭ್ಯವಾಗುತ್ತಿರುವ ಉತ್ತಮ ಗಾಳಿಯಾದರೂ ಶುದ್ಧವಾಗಿರಲಿ ಎಂಬುದು ನಮ್ಮ ಆಶಯ. ಯಾವುದೇ ಕಾರಣಕ್ಕೂ ಕಸ ತುಂಬಿದ ಒಂದು ಲಾರಿಗೂ ಊರನ್ನು ಪ್ರವೇಶಿಸಲು ಬಿಡುವುದಿಲ್ಲ. ನೆತ್ತರು ಹರಿದರೂ ಈ ಘಟಕ ಆರಂಭಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

ಗ್ರಾಮದ ಈರಪ್ಪ ದೊಡ್ಡಮನಿ ಮಾತನಾಡಿ, ‘ಘಟಕ ಆರಂಭಕ್ಕೂ ಮೊದಲೇ ಇಲ್ಲಿದ್ದ ಜಲಮೂಲವನ್ನೇ ಪಾಲಿಕೆಯವರು ಮುಚ್ಚಿದ್ದಾರೆ. ಇಡೀ ಊರಿಗೆ ಮಡ್ಡಿಗುಡ್ಡ ಕಾನನದಂತಿತ್ತು. ನಮ್ಮೂರಿನ ಜಾನುವಾರುಗಳು ಅಲ್ಲಿ ಮೇವು ತಿಂದು, ಅಲ್ಲೇ ಇದ್ದ ಕೆರೆಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆಯುತ್ತಿದ್ದವು. ಈಗ ಕಂಪೌಂಡ್ ಕಟ್ಟಿರುವುದರಿಂದ ಜಾನುವಾರುಗಳಿಗೆ ಮೇವೂ ಇಲ್ಲ, ಇತ್ತ ಕೆರೆಯೂ ಇಲ್ಲದೆ ಕೆಳಗಿರುವ ಕೊಳವೆ ಭಾವಿಗಳು ನೀರಿಲ್ಲದ ಸ್ಥಿತಿಯತ್ತ ಸಾಗುತ್ತಿವೆ.

ಘಟಕ ಸ್ಥಾಪನೆಗೆ ಬಿಟ್ಟರೆ ಮುಂದೆ ಇನ್ನೂ ಯಾವ ಬಗೆಯ ಅನಾಹುತಗಳನ್ನು ಗ್ರಾಮಸ್ಥರು ಎದುರಿಸಬೇಕೋ ತಿಳಿಯದು’ ಎಂದು ಆತಂಕ ವ್ಯಕ್ತಪಡಿಸಿದರು. ಈ ಹಿಂದೆಯೂ ಶಿವಳ್ಳಿ ಗ್ರಾಮದವರು ಈ ಘಟಕ ವಿರೋಧಿಸಿ ಕಪ್ಪು ಪಟ್ಟಿ ಪ್ರದರ್ಶನ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಈಗ ಮತ್ತೊಂದು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT