ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದೆಲ್ಲಡೆ ಫ್ಲೆಕ್ಸ್‌ಗಳ ಹಾವಳಿ

Last Updated 13 ನವೆಂಬರ್ 2017, 6:51 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಹೆಚ್ಚಾಗಿದ್ದು, ನಗರಸಭೆ ಆದಾಯಕ್ಕೂ ಕತ್ತರಿ ಬಿದ್ದಿದೆ. ಅಲ್ಲದೆ, ನಗರದ ಸೌಂದರ್ಯಕ್ಕೂ ಕುಂದುಂಟಾಗಿದೆ. ಹಬ್ಬ, ಹರಿದಿನ, ಜಯಂತಿ, ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳ ನೆಪದಲ್ಲಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಅಳವಡಿಸುವುದು ಈಚೆಗೆ ಸಾಮಾನ್ಯವಾಗಿ ಬಿಟ್ಟಿದೆ.

ಇಲ್ಲಿನ ಮಹಾತ್ಮ ಗಾಂಧಿ ವೃತ್ತ, ಭೂಮರೆಡ್ಡಿ ವೃತ್ತ, ಹಾತಲಗೇರಿ ನಾಕಾ, ಮುಳಗುಂದ ನಾಕಾ, ಟಿಪ್ಪು ಸುಲ್ತಾನ್ ವೃತ್ತ, ಹಳೆ ಡಿ.ಸಿ. ಕಚೇರಿ ಸೇರಿ ಮುಖ್ಯ ರಸ್ತೆಗಳ ಪಕ್ಕದಲ್ಲಿ, ರಸ್ತೆ ವಿಭಜಕದ ಮಧ್ಯದಲ್ಲಿ ನೂರಾರು ಬ್ಯಾನರ್‌ಗಳು ಕಾಣುತ್ತವೆ. ಕೆಲ ಬಡಾವಣೆಗಳಲ್ಲಂತೂ ಪೈಪೋಟಿಗೆ ಬಿದ್ದಂತೆ ಫ್ಲೆಕ್ಸ್‌ ಅಳವಡಿಸಲಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ ಅಳವಡಿಸುವ ಮೊದಹುಚ್ಚೇಶ್ವರ ಅಣ್ಣಿಗೇರಿಲು ಅನುಮತಿ ಪಡೆಯಬೇಕು. ಸ್ಥಳೀಯ ಆಡಳಿತ ಕೂಡ ಜಾಹೀರಾತು ಫಲಕಕ್ಕೆ ಅನುಗುಣವಾಗಿ ದರ ನಿಗದಿಪಡಿಸಬೇಕು. ನಿಗದಿಪಡಿಸಿದ ಸ್ಥಳದಲ್ಲಿಯೇ ಜಾಹೀರಾತು ಫಲಕ ಅಳವಡಿಸಬೇಕು.

ಖಾಸಗಿ ವ್ಯಕ್ತಿಗಳು ತಮ್ಮ ಮನೆಯ ಮೇಲೆ ಅಥವಾ ಮುಂಭಾಗದಲ್ಲಿ ಖಾಸಗಿ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಿದರೂ ಕೂಡ ನಗರಸಭೆಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಆದರೆ, ಇಂತಹ ಯಾವುದೇ ನಿಯಮಗಳು ನಗರದಲ್ಲಿ ಪಾಲನೆ ಆಗುತ್ತಿಲ್ಲ. ನಾಗರಿಕರು, ವಿದ್ಯಾರ್ಥಿಗಳು, ವಾಹನ ಸವಾರರ ಸಂಚಾರಕ್ಕೆ ಅಡ್ಡಿಯಾಗುವಂತೆ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.

ಇಷ್ಟಾದರೂ ಪ್ರಚಾರ ಪ್ರಿಯರು, ರಾಜಕಾರಣಿಗಳು, ಸಂಘ– ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ನಗರಸಭೆ ಹಿಂದೇಟು ಹಾಕುತ್ತಿದೆ. ಇನ್ನೊಂದೆಡೆ ಜಾಹೀರಾತು ತೆರಿಗೆ ಮೂಲಕ ನಗರಸಭೆಗೆ ಬರಬೇಕಾದ ಲಕ್ಷಾಂತರ ರೂಪಾಯಿ ವರಮಾನವೂ ಸೋರಿಕೆಯಾಗುತ್ತಿದೆ.

ನಗರಸಭೆ 2016–17ನೇ ಸಾಲಿನಲ್ಲಿ ಜಾಹೀರಾತು ತೆರಿಗೆ ಮೂಲಕ ₹ 3 ಲಕ್ಷ ಆದಾಯ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಇದರದಲ್ಲಿ ಅರ್ಧದಷ್ಟೂ ಸಂಗ್ರಹ ಆಗಿರಲಿಲ್ಲ. 2017–18ನೇ ಸಾಲಿನಡಿ ಇದನ್ನು ₹ 5.10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ನಗರಸಭೆ ಸಾಮಾನ್ಯ ಸಭೆಯಲ್ಲೂ ಈ ಕುರಿತು ಹಲವು ಬಾರಿ ಚರ್ಚೆಗಳು ನಡೆದಿವೆ. ಆದರೆ, ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಅಥವಾ ದಂಡ ವಸೂಲಿ ಮಾಡುವ ಕಾರ್ಯ ಇದುವರೆಗೆ ನಡೆದಿಲ್ಲ.

‘ನಗರಸಭೆ ಕಟ್ಟುನಿಟ್ಟಿನ ಕ್ರಮಕೈಗೊಂಡರೆ ವಾರ್ಷಿಕವಾಗಿ ಜಾಹೀರಾತು ತೆರಿಗೆಯಿಂದಲೇ ಕನಿಷ್ಠ ₹ 15 ಲಕ್ಷ ವರಮಾನ ಸಂಗ್ರಹಿಸಬಹುದು’ ಎನ್ನುತ್ತಾರೆ ವಿರೋಧ ಪಕ್ಷದ ಸದ್ಯರೊಬ್ಬರು. ‘ಆದರೆ, ಸ್ಥಳೀಯ ಆಡಳಿತ ಸರಿಯಾದ ನೀತಿ ರೂಪಿಸಿಲ್ಲ. ಹಳೆಯ ದರ ಪರಿಷ್ಕರಿಸಿ ಜಾಹೀರಾತು ಅಳವಡಿಸುವವರಿಗೆ ಶುಲ್ಕ ನಿಗದಿಪಡಿಸಿ, ವಸೂಲಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಪ್ರಭಾವಿಗಳು ಅಳವಡಿಸುವ ಫ್ಲೆಕ್ಸ್‌ಗಳು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ, ಅವುಗಳನ್ನು ತೆರವುಗೊಳಿಸುತ್ತಿಲ್ಲ’ ಎನ್ನುವುದು ಸಾರ್ವಜನಿಕರ ಆರೋಪ.

‘ಸರ್ಕಾರದ ನಿಯಮಾವಳಿ ಪ್ರಕಾರ ಜಾಹೀರಾತು ತೆರಿಗೆ ನಿಗದಿಪಡಿಸಿ ವಸೂಲಿ ಮಾಡಬೇಕು. ಜತೆಗೆ, ಸಂಚಾರಕ್ಕೆ ತೊಂದರೆ ಉಂಟು ಮಾಡುವ ಫ್ಲೆಕ್ಸ್‌ಗಳನ್ನು ಕೂಡಲೇ ತೆರವುಗೊಳಿಸಬೇಕು. ತೆರಿಗೆ ವಸೂಲಾತಿಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಬಾರದು’ ಎನ್ನುತ್ತಾರೆ ನಗರದ ನಿವಾಸಿ ಎಲ್‌.ಕೆ ಸುರೇಶ.

‘ನಗರದ ವಿವಿಧ ವೃತ್ತಗಳು ಹಾಗೂ ರಸ್ತೆಗಳ ಪಕ್ಕದಲ್ಲಿ ಅನಧಿಕೃತವಾಗಿ ಬ್ಯಾನರ್‌ಗಳನ್ನು ಅಳವಡಿಸಿರುವ ವಿಷಯ ಗಮನಕ್ಕೆ ಬಂದಿದೆ. ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅನಧಿಕೃತವಾಗಿ ಬ್ಯಾನರ್‌ಗಳನ್ನು ಹಾಕದಂತೆ ಜನಜಾಗೃತಿ ಮೂಡಿಸಲಾಗುವುದು’ ಎಂದು ಪೌರಾಯುಕ್ತ ಮನ್ಸೂರ್ ಅಲಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT