ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯವಿಲ್ಲದೇ ಪರದಾಟ

Last Updated 13 ನವೆಂಬರ್ 2017, 8:43 IST
ಅಕ್ಷರ ಗಾತ್ರ

ಮದ್ದೂರು: ಇದು ಹೆಸರಿಗೆ ಮಾತ್ರ ಹೊಸ ಬಡಾವಣೆ. ಆದರೆ ಈ ಬಡಾವಣೆಯಲ್ಲಿ ಇಂದಿಗೂ ಮೂಲಸೌಕರ್ಯಗಳ ಕೊರತೆಯದ್ದೇ ಕಾರುಬಾರು. ಪಟ್ಟಣದ ರೋಟರಿ ಸಂಸ್ಥೆ ಕಚೇರಿ ಹಿಂಭಾಗದ ಈ ಹೊಸ ಬಡಾವಣೆ ಇಂದಿಗೂ ಮೂಲ ಸೌಲಭ್ಯಗಳಿಂದ ಮಾರು ದೂರ.

ಇಲ್ಲಿ ಈಗಾಗಲೇ 200ಕ್ಕೂ  ಹೆಚ್ಚು ಸಾಮಾನ್ಯ ಸೇರಿದಂತೆ ಸುಸಜ್ಜಿತ ಮನೆಗಳು ನಿರ್ಮಾಣಗೊಂಡಿವೆ. ಆದರೆ ಇಲ್ಲಿ ಸರಿಯಾದ ರಸ್ತೆ ಇಂದಿಗೂ ಇಲ್ಲ. ಜನರೇ ಮಣ್ಣು ಸುರಿದು ಮಾಡಿಕೊಂಡಿರುವ ಕೊರಕಲು ರಸ್ತೆಯೇ ಸಂಪರ್ಕ ಸೇತುವಾಗಿದೆ. ಒಳಚರಂಡಿ ಇರಲಿ, ಹೊರ ಚರಂಡಿಯ ಸೌಲಭ್ಯವೂ ಇಲ್ಲಿ ಇಲ್ಲ.

ಪಟ್ಟಣ ಗೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಈ ಹೊಸ ಬಡಾವಣೆ ಬಹುತೇಕ ಮನೆಗಳು ಇಂದಿಗೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿಯೇ ಇವೆ. ಹೀಗಾಗಿ ಈ ಬಡಾವಣೆಗೆ ಅಗತ್ಯ ಸೌಲಭ್ಯ ಒದಗಿಸಲು ಪುರಸಭೆಗೆ ಸಾಧ್ಯವಾಗಿಲ್ಲ.

ಈ ಬಡಾವಣೆಯಲ್ಲಿ ಒಟ್ಟು 10 ಅಡ್ಡರಸ್ತೆಗಳಿವೆ. ಒಂದು ರಸ್ತೆಗಾದರೂ ಗೊರವನಹಳ್ಳಿ ಪಂಚಾಯಿತಿ ಡಾಂಬರು ಇರಲಿ, ಕಡೇ ಪಕ್ಷ ಜಲ್ಲಿಕಲ್ಲು, ಮಣ್ಣನ್ನು ಸಹ ಸುರಿದಿಲ್ಲ. ಹೀಗಾಗಿ ಮಳೆ ಬಂದಾಗ ನೀರು ಮನೆ ಆವರಣಕ್ಕೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ಇಡೀ ರಸ್ತೆ ರಾಡಿಯಾಗುತ್ತದೆ. ಆ ಸಂದರ್ಭದಲ್ಲಿ ಜನರು ಈ ರಸ್ತೆಯಲ್ಲಿ ಸರ್ಕಸ್‌ ಮಾಡಬೇಕಾದ್ದು ಅನಿವಾರ್ಯ.

ಉಳಿದಂತೆ ಒಳಚರಂಡಿ ಸೌಲಭ್ಯ ಇಲ್ಲದ ಕಾರಣ ಜನರೇ ತಮ್ಮ ಮನೆಗಳಲ್ಲಿ ಶೌಚಗುಂಡಿ ನಿರ್ಮಿಸಿಕೊಂಡು ಅದಕ್ಕೆ ಶೌಚಾಲಯವನ್ನು ಸಂಪರ್ಕ ಗೊಳಿಸಿದ್ದಾರೆ. ಈ ಬಡಾವಣೆಯಲ್ಲಿ ನೀರಿಗೆ ಸಮಸ್ಯೆಯಿಲ್ಲ. ಕೆಲವು ರಸ್ತೆಗಳ ನಾಗರಿಕರು ಸ್ವಂತ ವೆಚ್ಚದಲ್ಲಿ ಕಾವೇರಿ ಕುಡಿಯುವ ನೀರಿನ ಸಂಪರ್ಕ ಪಡೆದಿದ್ದರೆ, ಈಚೆಗೆ ಗೊರವನಹಳ್ಳಿ ಗ್ರಾಮ ಪಂಚಾಯಿತಿ ಕೆಲವು ರಸ್ತೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಿರುವುದು ಸಮಾಧಾನ ತಂದಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಉಪನ್ಯಾಸಕ ರಾಜೇಂದ್ರ.

ಈ ಬಡಾವಣೆಗೆ ಪ್ರತ್ಯೇಕ ಹೆಚ್ಚುವರಿ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಅಳವಡಿಸದ ಕಾರಣ ವಿದ್ಯುತ್‌ ವ್ಯತ್ಯಯ ಸರ್ವೆ ಸಾಮಾನ್ಯ. ಒಟ್ಟಾರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಈ ಬಡಾವಣೆಯನ್ನು ಪುರಸಭೆ ವ್ಯಾಪ್ತಿಗೆ ಸೇರಿಸುವ ಮೂಲಕ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಪುರಸಭೆ ಗಮನಹರಿಸಬೇಕಿದೆ ಎಂಬುದು ಇಲ್ಲಿನ ನಾಗರಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT