ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ನಾಡಲ್ಲಿ ಮನೆ ಮಾಡಿದ ಕ್ರಿಕೆಟ್ ಕಲರವ

Last Updated 13 ನವೆಂಬರ್ 2017, 8:56 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬಿಸಿಲ ನಾಡು’ ಕಲಬುರ್ಗಿಯಲ್ಲಿ ಕಳೆದ ಒಂದೂವರೆ ವಾರದಿಂದ ಕ್ರಿಕೆಟ್ ಕಲರವ ಮನೆ ಮಾಡಿದೆ. ನಗರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಟೂರ್ನಿಯಲ್ಲಿ ಬೆಂಗಳೂರು, ಕಲಬುರ್ಗಿಯ ತಲಾ ಎರಡು, ಪುಣೆ, ಒಡಿಶಾ, ಮುಂಬೈ, ಹೈದರಾಬಾದ್‌ನ ತಲಾ ಒಂದು ತಂಡಗಳು ಭಾಗವಹಿಸಿವೆ. ಈ ಟೂರ್ನಿ ಹೈದರಾಬಾದ್‌ ಕರ್ನಾಟಕ ಭಾಗದ ಯುವ ಆಟಗಾರರಲ್ಲಿ ಚೈತನ್ಯ ಮೂಡಿಸಿದೆ.

ಟೂರ್ನಿಯಲ್ಲಿ ಸ್ಥಳೀಯ ಪ್ರತಿಭೆಗಳು ಉತ್ತಮ ಪ್ರದರ್ಶನ ತೋರಿ ಗಮನ ಸೆಳೆಯುತ್ತಿದ್ದಾರೆ. ಪ್ರೆಸಿಡೆಂಟ್‌ ಇಲೆವೆನ್ ತಂಡದ ಎನ್.ರಾಘವೇಂದ್ರ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಮೂರು ಪಂದ್ಯಗಳಿಂದ 154 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ. ಸೆಕ್ರೆಟರಿ ಇಲೆವೆನ್ ತಂಡದ ಆಲ್ ರೌಂಡರ್ ಸಿದ್ದು ಅವರು ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರು ಪಂದ್ಯಗಳಿಂದ ಅವರು 10 ವಿಕೆಟ್ (ಭಾನುವಾರ ಅಂತ್ಯಕ್ಕೆ) ಕಬಳಿಸಿದ್ದಾರೆ.

ಆಟಗಾರರ ಹರ್ಷ: ‘ಈ ಟೂರ್ನಿ ನಮ್ಮಂಥ ಯುವ ಆಟಗಾರರಿಗೆ ಉತ್ತಮ ಅವಕಾಶ. ಬೇರೆ ರಾಜ್ಯಗಳ ತಂಡದ ಆಟಗಾರರೊಂದಿಗೆ ಆಡುವುದು ಹೊಸ ಅನುಭವ. ಅವರು ಯಾವ ರೀತಿ ತಂತ್ರಗಳನ್ನು ರೂಪಿಸುತ್ತಾರೆ, ಅವರ ಕೌಶಲ ಏನು ಎಂದು ತಿಳಿದುಕೊಳ್ಳಲು ಸಾಧ್ಯವಾಯಿತು’ ಎಂದು ಸಿದ್ದು ಹರ್ಷ ವ್ಯಕ್ತಪಡಿಸಿದರು.

ಹೈದರಾಬಾದ್‌ನ ಶ್ರೀನಿವಾಸ್‌ ಕ್ರಿಕೆಟ್‌ ಅಕಾಡೆಮಿ ತಂಡದಲ್ಲಿ ಅಲ್ಲಿನ 19 ವರ್ಷದೊಳಗಿನವರ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವ ಸಂಹಿತ್ ರೆಡ್ಡಿ, ಸಾಗರ್ ಚೌರಾಸಿಯಾ ಇದ್ದಾರೆ. ‘ಆಟಗಾರನಿಗೆ ಎಲ್ಲ ಪಂದ್ಯಗಳೂ ಮುಖ್ಯ. ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇಂತಹ ಟೂರ್ನಿಗಳು ಸಹಕಾರಿ. ಅಲ್ಲದೆ, ಬೇರೆ ಬೇರೆ ತಂಡದ ಆಟಗಾರರೊಂದಿಗೆ ಬೆರೆಯಬಹುದು’ ಎನ್ನುತ್ತಾರೆ ಸಂಹಿತ್ ಮತ್ತು ಸಾಗರ್‌.

ಅಚ್ಚುಕಟ್ಟು ವ್ಯವಸ್ಥೆಗೆ ಮೆಚ್ಚುಗೆ: ನಗರದಲ್ಲಿ ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ ಆಯೋಜಿಸಿರುವ ರಾಷ್ಟ್ರಮಟ್ಟದ ಟೂರ್ನಿಗೆ ಬೇರೆ ಬೇರೆ ತಂಡಗಳ ಆಟಗಾರರು, ಕೋಚ್‌ಗಳು ಮತ್ತು ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಚ್ಚುಕಟ್ಟಾದ ಆಯೋಜನೆ, ಉತ್ತಮ ಊಟ ಮತ್ತು ವಸತಿ ವ್ಯವಸ್ಥೆಯನ್ನು ಭಾಗವಹಿಸಿದ್ದ ಎಲ್ಲ ತಂಡಗಳು ಪ್ರಶಂಸಿಸಿವೆ.

‘ಟೂರ್ನಿ ಯಶಸ್ವಿಯಾಗಿದ್ದಕ್ಕೆ ಸಂತಸವಾಗಿದೆ. ಟೂರ್ನಿ ಆಯೋಜನೆಗೆ ಕ್ಲಬ್‌ನ ಎಲ್ಲ ಸದಸ್ಯರು ಮೂರು ತಿಂಗಳಿನಿಂದ ಪರಿಶ್ರಮಪಟ್ಟಿದ್ದಾರೆ. ಇನ್ನೂ ದೊಡ್ಡಮಟ್ಟದ ಟೂರ್ನಿ ಆಯೋಜಿಸಲು ಇದು ಸ್ಫೂರ್ತಿ ನೀಡಿದೆ’ ಎಂದು ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್‌ (ಜಿಸಿಸಿ) ಅಧ್ಯಕ್ಷ ಪ್ರಕಾಶ್ ಅಯ್ಯಾಳಕರ್ ಸಂತಸ ವ್ಯಕ್ತಪಡಿಸಿದರು.

‘ಈ ಹಿಂದೆ ಹಲವು ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಅನುಭವ ಇತ್ತು. ಅಲ್ಲದೆ, ಕ್ಲಬ್‌ ನ ಯಾವುದೇ ಸದಸ್ಯರು ಸಲಹೆ, ಸೂಚನೆ ನೀಡಿದರೆ ಅದನ್ನು ಅಳವಡಿಸಿಕೊಳ್ಳುತ್ತೇವೆ. ಒಂದು ನಿರ್ಧಾರ ತೆಗೆದುಕೊಂಡರೆ ಅದನ್ನು ಎಲ್ಲರೂ ಪಾಲಿಸುತ್ತೇವೆ. ಹೀಗಾಗಿ ಇಷ್ಟು ದೊಡ್ಡ ಟೂರ್ನಿಯನ್ನು ಆಯೋಜಿಸಲು ಸಾಧ್ಯವಾಯಿತು’ ಎಂದು ಅವರು ಟೂರ್ನಿಯ ಯಶಸ್ಸನ್ನು ಬಿಚ್ಚಿಟ್ಟರು.

‘ರಾಯಚೂರು ವಲಯದಲ್ಲಿರುವ ಕಲಬುರ್ಗಿ, ಬೀದರ್‌, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ವಿಜಯಪುರ ಜಿಲ್ಲೆಗಳ ಆಟಗಾರರನ್ನು ಸೇರಿಸಿ ಟೂರ್ನಿಗಾಗಿ ಎರಡು ತಂಡಗಳನ್ನು ಮಾಡಲಾಗಿದೆ. bಟೂರ್ನಿ ಕೆಎಸ್‌ಸಿಎ ಮಾನ್ಯತೆ ಪಡೆದಿದ್ದು, ಹೈದರಾಬಾದ್‌ ಕರ್ನಾಟಕ ಭಾಗದ ಯುವ ಆಟಗಾರರಿಗೆ ಇದು ಉತ್ತಮ ವೇದಿಕೆಯಾಗಿದೆ’ ಎನ್ನುತ್ತಾರೆ ಜಿಸಿಸಿಯ ಜಂಟಿ ಕಾರ್ಯದರ್ಶಿ ಹಾಗೂ ಬೆಂಗಳೂರು ಜಸ್ಟ್ ಕ್ರಿಕೆಟ್ ಅಕಾಡೆಮಿಯ ಕೋಚ್‌ ಗೌತಮ್ ಅಲಿಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT