ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹರಕ್ಷಕರಿಗೆ ಯುವ ಬ್ರಿಗೇಡ್‌ ಪಾಠ!

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
Last Updated 13 ನವೆಂಬರ್ 2017, 9:23 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಪೊಲೀಸರಿಗೆ ಹಿಂದುತ್ವವಾದಿ ಸಂಘಟನೆ ‘ಯುವ ಬ್ರಿಗೇಡ್‌’ ಸಂಚಾಲಕರಿಂದ ತರಬೇತಿ ಕೊಡಿಸಲಾಗಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ. ವಾಸ್ತವವಾಗಿ ಇದು ಗೃಹರಕ್ಷಕರಿಗೆ ನೀಡಿದ ಉಪನ್ಯಾಸ.

ಹೊಸಪೇಟೆಯ ಗೃಹರಕ್ಷಕ ದಳದ ಕಚೇರಿಯಲ್ಲಿ ಭಾನುವಾರ ನಡೆದ ಪರೇಡ್ ವೇಳೆ ಯುವ ಬ್ರಿಗೇಡ್‌ನ ತಾಲ್ಲೂಕು ಸಂಚಾಲಕ ಚಂದ್ರಶೇಖರ್‌ ಅವರು ಉಪನ್ಯಾಸ ನೀಡಿದ್ದಾರೆ. ಗೃಹರಕ್ಷಕ ದಳದ ತಾಲ್ಲೂಕು ಅಧಿಕಾರಿಗಳು ಹಾಗೂ ಸಿಬ್ಬಂದಿ ಅದರಲ್ಲಿ ಪಾಲ್ಗೊಂಡಿದ್ದರು. ಚಂದ್ರಶೇಖರ್‌ ಸುಮಾರು ಒಂದು ಗಂಟೆ ಈ ಉಪನ್ಯಾಸ ನಡೆದಿದ್ದು, ನೀರಿನ ಬಳಕೆ ಮತ್ತು ರಾಷ್ಟ್ರೀಯತೆ ಕುರಿತು ಮಾತನಾಡಿದ್ದಾರೆ ಎಂದು ಗೃಹರಕ್ಷಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

‘ಯುವ ಬ್ರಿಗೇಡ್‌ ಸಂಚಾಲಕ ಚಂದ್ರಶೇಖರ್‌ ಉಪನ್ಯಾಸ ನೀಡಲು ಒಪ್ಪಿಗೆ ನೀಡಿದ್ದು ಎಷ್ಟು ಸರಿ?’, ‘ನಿರ್ದಿಷ್ಟ ವಿಚಾರಧಾರೆ ಹೊಂದಿರುವ ಸಂಘಟನೆಯ ಸಂಚಾಲಕರನ್ನು ಕರೆಸಿ ಗೃಹರಕ್ಷಕ ಸಿಬ್ಬಂದಿಗೆ ಉಪನ್ಯಾಸ ಕೊಡುವ ಜರೂರು ಏನಿತ್ತು?’ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಅವರನ್ನು ಸಂಪರ್ಕಿಸಿದಾಗ, ‘ಉಪನ್ಯಾಸ ಕಾರ್ಯಕ್ರಮ ಗೃಹರಕ್ಷಕ ಸಿಬ್ಬಂದಿಗೆ ಆಯೋಜಿಸಲಾಗಿತ್ತು. ಅದರಲ್ಲಿ ಪೊಲೀಸರ್‍ಯಾರು ಭಾಗವಹಿಸಿರಲಿಲ್ಲ. ಹಾಗಾಗಿ ಇದು ಗೃಹರಕ್ಷಕ ದಳಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಜಿಲ್ಲಾ ಕಮಾಡೆಂಟ್‌ ಅವರಿಗೆ ಕೇಳಿ’ ಎಂದರು.

‘ಯುವ ಬ್ರಿಗೇಡ್‌ಗೆ ಸೇರಿದವರು ಎಂದು ಗೊತ್ತಿರಲಿಲ್ಲ’
‘ಎಂದಿನಂತೆ ಭಾನುವಾರ ನಮ್ಮ ಸಿಬ್ಬಂದಿ ಪರೇಡ್‌ ಮಾಡುತ್ತಿದ್ದರು. ಸಾಮಾಜಿಕ ಸಂಘಟನೆಯವರು ಎಂದು ಹೇಳಿಕೊಂಡು ಕೆಲವರು ಬಂದಿದ್ದರು. ಐದು ನಿಮಿಷ ನೀರಿನ ನಿರ್ವಹಣೆ ಕುರಿತು ತಿಳಿಸಬೇಕಿದ್ದು, ಅವಕಾಶ ಕಲ್ಪಿಸಬೇಕು ಎಂದು ಕೋರಿಕೊಂಡಿದ್ದರು. ಅದಕ್ಕೆ ನಮ್ಮ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದರು. ಅವರು ಯುವ ಬ್ರಿಗೇಡ್‌ಗೆ ಸೇರಿದವರು ಎಂದು ಗೊತ್ತಿರಲಿಲ್ಲ’ ಎನ್ನುತ್ತಾರೆ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಎಂ.ಎ. ಶಕೀಬ್‌.

ಈ ಕುರಿತು ಯುವ ಬ್ರಿಗೇಡ್‌ ತಾಲ್ಲೂಕು ಸಂಚಾಲಕ ಚಂದ್ರಶೇಖರ್‌ ಅವರನ್ನು ಸಂಪರ್ಕಿಸಿದಾಗ, ‘ಕನಸಿನ ಕರ್ನಾಟಕ ಶೀರ್ಷಿಕೆಯ ಅಡಿಯಲ್ಲಿ ನೀರಿನ ಮಿತ ಬಳಕೆ ಕುರಿತು ಗೃಹರಕ್ಷಕ ಸಿಬ್ಬಂದಿಗೆ ತಿಳಿಸಿಕೊಟ್ಟಿದ್ದೇನೆ. ಆದರೆ, ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ಎರಡು ದಿನಗಳಲ್ಲಿ ಸುದ್ದಿಗೋಷ್ಠಿ ಕರೆದು ಎಲ್ಲವನ್ನೂ ವಿವರಿಸುತ್ತೇನೆ’ ಎಂದಷ್ಟೇ ಹೇಳಿದರು.

ಯುವ ಬ್ರಿಗೇಡ್‌ ಉಪನ್ಯಾಸಕ್ಕೆ ಪ್ರಗತಿಪರ ಸಂಘಟನೆಗಳ ಮುಖಂಡರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಭಾರತದ ಸಂವಿಧಾನವನ್ನೇ ಒಪ್ಪಿಕೊಳ್ಳದ ಸಂಘಟನೆಯಿಂದ ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದು ಎಷ್ಟರಮಟ್ಟಿಗೆ ಸರಿ. ನಿಜಕ್ಕೂ ಇದು ಖಂಡನಾರ್ಹ ವಿಷಯ. ಇದು ಕರ್ನಾಟಕ ರಾಜ್ಯ ಸೇವಾ ನಿಯಮಕ್ಕೆ ವಿರುದ್ಧವಾದುದು’ ಎಂದು ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ ತಿಳಿಸಿದ್ದಾರೆ.

‘ಯುವ ಬ್ರಿಗೇಡ್‌ ಹೆಸರು ಕೇಳಿದಾಕ್ಷಣ ಅವರು ಯಾರು, ಅವರು ಎಂತಹ ಸಿದ್ಧಾಂತವನ್ನು ನಂಬಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಿದ್ದರೂ ಅಧಿಕಾರಿಗಳು ಆ ಸಂಘಟನೆಯ ಸಂಚಾಲಕರನ್ನು ಕರೆಸಿ ಉಪನ್ಯಾಸ ಕೊಡಿಸಿದ್ದು ಸರಿಯಲ್ಲ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಸಾಂವಿಧಾನಿಕ ಸಂಸ್ಥೆಗಳನ್ನು ಕೇಸರೀಕರಣಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ್‌ ಒತ್ತಾಯಿಸಿದ್ದಾರೆ.

‘ಯುವ ಬ್ರಿಗೇಡ್‌ಗೆ ಉಪನ್ಯಾಸ ನೀಡಲು ಅವಕಾಶ ಕೊಟ್ಟಿರುವವರು ಪಿಎಫ್‌ಐಗೂ ಅವಕಾಶ ಕೊಡುತ್ತೀರಾ? ಶ್ರೀರಾಮಸೇನೆಗೂ ಅವಕಾಶ ಕೊಡುತ್ತೀರಾ? ಎಸ್‌ಡಿಪಿಐಗೂ ಅವಕಾಶ ಕೊಡುತ್ತೀರಾ?’ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಏನಿದು ಯುವ ಬ್ರಿಗೇಡ್‌?
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ, ನರೇಶ್ ಶೆಣೈ  ಮತ್ತಿತರರು ಸೇರಿ ಹುಟ್ಟಿಹಾಕಿದ ನಮೋ ಬ್ರಿಗೇಡ್‌ ಕೆಲ ದಿನಗಳ ನಂತರ ಯುವ ಬ್ರಿಗೇಡ್ ಎಂದು ಹೆಸರಾಯಿತು. ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನರೇಶ್ ಶೆಣೈ ಕೆಲ ದಿನಗಳ ಕಾಲ ತಲೆಮರೆಸಿಕೊಂಡಿದ್ದರು. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು. ಸದ್ಯ ಅವರು ಜಾಮೀನು ಪಡೆದು ಹೊರಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT