ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲು, ಕೆಳ ಸೇತುವೆಗಳೇ ಇಲ್ಲದ ರೈಲು ಮಾರ್ಗ!

Last Updated 13 ನವೆಂಬರ್ 2017, 9:48 IST
ಅಕ್ಷರ ಗಾತ್ರ

ಶಿವಮೊಗ್ಗ: ಗೆಜ್ಜೇನಹಳ್ಳಿ–ಸೋಮಿನಕೊಪ್ಪ ಮಾರ್ಗದಲ್ಲಿ ಬರುತ್ತಿದ್ದ ಆಂಬುಲೆನ್ಸ್ ಹೆರಿಗೆ ನೋವು ತೀವ್ರವಾಗಿ ಕಾಣಿಸಿಕೊಂಡ ಗರ್ಭಿಣಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರುತ್ತಿತ್ತು. ಒಳಗಿದ್ದ ಸಂಬಂಧಿಕರು ‘ಸ್ವಲ್ಪ ಬೇಗ ಹೋಗಪ್ಪ, ಇಲ್ಲದಿದ್ದರೆ ಇಲ್ಲೇ ಹೆರಿಗೆ ಆಗುತ್ತದೆ’ ಎಂಬ ಚಾಲಕನನ್ನು ಒತ್ತಾಯಿಸುತ್ತಿದ್ದರು.

ಸೈರನ್‌ ಮೊಳಗಿಸುತ್ತಾ ವೇಗ ವಾಗಿ ಸಾಗುತ್ತಿದ್ದ ವಾಹನಕ್ಕೆ ರಸ್ತೆಯ ಮೇಲಿನ ಪ್ರತಿವಾಹನಗಳೂ ದಾರಿ ಮಾಡಿಕೊಡುತ್ತಿದ್ದವು. ಶಿವಮೊಗ್ಗ ಬಂದೇ ಬಿಟ್ಟಿತು ಎಂದುಕೊಳ್ಳುತ್ತಿರುವಾಗ ಚಾಲಕ ಆಂಬುಲೆನ್ಸ್‌ಗೆ ಬ್ರೇಕ್ ಹಾಕಿದ. ಅಲ್ಲಿ ಸಾಕಷ್ಟು ವಾಹನಗಳು ಸರದಿಯಲ್ಲಿ ನಿಂತಿದ್ದವು. ಒಳಗಿದ್ದ ಎಲ್ಲರಿಗೂ ಧಾವಂತ... ಓ ರೈಲ್ವೆಗೇಟ್ ಹಾಕಿದೆ! ಇನ್ನೂ ಏಳೆಂಟು ನಿಮಿಷ ಕಾಯಲೇಬೇಕು.

ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಮಲಗೊಪ್ಪ ಬಳಿಯಿಂದ ಸೋಮಿನ ಕೊಪ್ಪ–ಸಿಂಹಧಾಮ ರಸ್ತೆವರೆಗೆ  ಬೈತಲೆಯಂತೆ ನಗರದ ಮಧ್ಯೆ ಹಾದು ಹೋಗಿರುವ ರೈಲು ಹಳಿಯನ್ನು ವಾಹನಗಳು ಅಥವಾ ಪಾದಚಾರಿಗಳು ದಾಟಲು ಮೇಲು ಅಥವಾ ಕಳೆ ಸೇತುವೆ ಇದುವರೆಗೂ ನಿರ್ಮಾಣಗೊಂಡಿಲ್ಲ.

ಹೊನ್ನಾಳಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಿರ್ಮಿಸಿರುವ ಮೇಲು ಸೇತುವೆ ನಗರ ವ್ಯಾಪ್ತಿ ಒಳಗೆ ಇರುವ ಏಕೈಕ ರೈಲ್ವೆ ಮೇಲ್ಸೇತುವೆ. ಇದು ಹೊರತುಪಡಿಸಿದರೆ ರೈಲು ಸಾಗುವಾಗ ಎಲ್ಲೆಡೆಯೂ ವಾಹನಗಳು ಸಾಕಷ್ಟು ಸಮಯ ಸರದಿಯಲ್ಲಿ ನಿಂತು ಕಾಯಲೇಬೇಕು. ಚನ್ನಗಿರಿ, ಹೊಳೆಹೊನ್ನೂರು ಮಾರ್ಗ, ನ್ಯಾಮತಿ, ಶಿಕಾರಿಪುರ, ಸೊರಬ ಮಾರ್ಗ, ಬೊಮ್ಮನಕಟ್ಟೆ ಮಾರ್ಗ, ದೇವಕಾತಿಕೊಪ್ಪ, ಗೆಜ್ಜೇನಹಳ್ಳಿ, ಸೋಮಿನಕೊಪ್ಪ ಮಾರ್ಗದ ಕಡೆಯಿಂದ ಬರುವ ವಾಹನಗಳಿಗೆ ರೈಲುಗಳು ಸಾಗುವ ಸಮಯಕ್ಕೆ ಬಂದರೆ ವ್ಯವಸ್ಥೆಗೆ ಹಿಡಿಶಾಪ ಹಾಕುವುದು ಸಾಮಾನ್ಯ ಸಂಗತಿಯಾಗಿದೆ.

ಹೊಳೆಹೊನ್ನೂರು ಮಾರ್ಗ ರಾಷ್ಟ್ರೀಯ ಹೆದ್ದಾರಿಗೆ ಒಳಪಡುತ್ತದೆ. ಬೆಂಗಳೂರು ಅಥವಾ ಮೈಸೂರಿನಿಂದ ಬರುವ ರೈಲುಗಳು ವಿದ್ಯಾನಗರ ನಿಲ್ದಾಣದ ಬಳಿ ನಿಲುಗಡೆ ಮಾಡಿ, ಪ್ರಯಾಣಿಕರನ್ನು ಇಳಿಸಿ ಹೊರಡುವವರೆಗೂ ವಾಹನಗಳು ಕಾಯಬೇಕು. ಕೆಲವೊಮ್ಮೆ ಸೇತುವೆಯ ಮೇಲೂ ವಾಹನಗಳ ದಟ್ಟಣೆ ಇರುತ್ತದೆ.

ಹೆರಿಗೆ, ಅಪಘಾತ, ತುರ್ತು ಆರೋಗ್ಯ ಸಮಸ್ಯೆ ಇರುವವರನ್ನು ಕರೆತರುವಾಗ ಈ ತಡೆ ಸಾಕಷ್ಟು ನೋವು ತರುತ್ತಿದೆ. ಅಂದು ಸೋಮಿನಕೊಪ್ಪ ರಸ್ತೆಯಲ್ಲಿ ಹೆರಿಗೆಗಾಗಿ ಗರ್ಭಿಣಿಯನ್ನು ಕರೆತರುತ್ತಿದ್ದ ಅಂಬುಲೆನ್ಸ್‌ ತಕ್ಷಣವೆ ಬೇರೆ ಮಾರ್ಗದ ಕಡೆ ತಿರುಗಿಸಲೂ ಅಲ್ಲಿ ಅವಕಾಶ ಇರಲಿಲ್ಲ. ಹಾಗೆ ಹೋಗಬೇಕು ಎಂದರೆ ಪಿ ಆ್ಯಂಡ್‌ ಟಿ ಕಾಲೊನಿ ಮೂಲಕ ಸಾಗಿ ಸೂರ್ಯ ಲೇಔಟ್, ಬೊಮ್ಮನಕಟ್ಟೆ ರಸ್ತೆ ತಲುಪಬಹುದು.

ಅಲ್ಲೂ ರೈಲ್ವೆಗೇಟ್‌ ಹಾಕಿರುತ್ತಾರೆ. ಅಲ್ಲಿಂದ ಕೀರ್ತಿ ನಗರ ಮೂಲಕ ಸಾಗಿದರೆ ಸವಳಂಗ ರಸ್ತೆಯ ಗೇಟ್ ಹಾಕಿ ರುತ್ತದೆ. ಗೇಟ್‌ ತಪ್ಪಿಸಲೇ ಬೇಕಾದರೆ ಆ ವಾಹನ ಸವಳಂಗ ರಸ್ತೆಯಲ್ಲಿ ಸಾಗಿ ರಾಗಿಗುಡ್ಡ, ಶಾಂತನಗರ ಸುತ್ತಿ, ಹೊನ್ನಾಳಿ ರಸ್ತೆ ತಲುಪಿ ಮೇಲ್ಸೇತುವೆ ಏರಬೇಕು! ಅಷ್ಟೊಂದು ಸುತ್ತುವ ಬದಲು ರೈಲು ಸಾಗುವವರೆಗೂ ಕಾಯುವುದೇ ಲೇಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT