ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಸುಧಾರಣೆಗೆ ಬಂತು ಟೆಲಿಟೀಚಿಂಗ್‌

Last Updated 13 ನವೆಂಬರ್ 2017, 9:51 IST
ಅಕ್ಷರ ಗಾತ್ರ

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲೆಯ 10 ಶಾಲೆಗಳನ್ನು ಟೆಲಿಟೀಚಿಂಗ್ ಅಡಿ ಆಯ್ಕೆ ಮಾಡಿಕೊಳ್ಳಲು ಮಣಿಪಾಲ್ ಫೌಂಡೇಷನ್ ಮುಂದಾಗಿದೆ. ಈಗಾಗಲೇ ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಪ್ರೌಢಶಾಲೆ, ತುಮಕೂರು ನಗರದ ಜೂನಿಯರ್ ಕಾಲೇಜಿನಲ್ಲಿರುವ ಪ್ರೌಢಶಾಲೆ, ಬಾಪೂಜಿ ಶಾಲೆ ಹಾಗೂ ಹನುಮಂತಪುರದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಚಟುವಟಿಕೆಗಳು ಆರಂಭವಾಗಿದೆ. ಹನುಮಂತಪುರದ ಶಾಲೆಯಲ್ಲಿಯೇ ವರ್ಚುಯಲ್ ಕ್ಲಾಸ್ ರೂಂ ಸ್ಟುಡಿಯೊ ಪ್ರಾರಂಭಿಸಲಾಗಿದೆ. ಉಳಿದ ಆರು ಶಾಲೆಗಳಿಗೆ ಹುಡುಕಾಟ ನಡೆದಿದೆ.

ಏನಿದು ಟೆಲಿಟೀಚಿಂಗ್: ಹತ್ತನೇ ತರಗತಿಯಲ್ಲಿ ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ ಫೌಂಡೇಷನ್‌ನವರು ’ವರ್ಚುಯಲ್ ಕ್ಲಾಸ್‌ರೂಂ’ ಹೆಸರಿನ ತರಗತಿಗಳನ್ನು ರಾಜ್ಯದ ಕೆಲವು ಪ್ರೌಢಶಾಲೆಗಳಲ್ಲಿ ಆರಂಭಿಸಿದೆ. ಇಲ್ಲಿ ಸಂಪನ್ಮೂಲ ವ್ಯಕ್ತಿಗಳು ಪವರ್ ಪ್ರೆಸೆಂಟೇಷನ್, ದೃಶ್ಯ ಮಾಧ್ಯಮ ಹೀಗೆ ಆಧುನೀಕ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳ ಮನಸ್ಸಿಗೆ ನಾಟುವಂತೆ ವಿಷಯಗಳನ್ನು ಬೋಧಿಸುವರು. ಉಡುಪಿ ಜಿಲ್ಲೆಯಲ್ಲಿ 46 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕಳೆದ ವರ್ಷ ಇದರಲ್ಲಿ 16 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಆದಷ್ಟು ಫಲಿತಾಂಶ ಕಳಪೆಯಾಗಿರುವ ಶಾಲೆಗಳಿಗೆ ಆದ್ಯತೆ ನೀಡಲಾಗುತ್ತದೆ.

ಕಡಿಮೆ ಫಲಿತಾಂಶ ಪಡೆದಿರುವ ಶಾಲೆಯಲ್ಲಿಯೇ ‘ವರ್ಚುಯಲ್ ಕ್ಲಾಸ್‌ರೂಂ’ ಸ್ಟುಡಿಯೊ ಆರಂಭಿಸಲಾಗುತ್ತದೆ. ಈ ಸ್ಟುಡಿಯೊದಿಂದ ಇತರ ಒಂಬತ್ತು ಶಾಲೆಗಳಿಗೆ ಸಂ‍ಪರ್ಕ ನೀಡಲಾಗಿರುತ್ತದೆ. ಇಲ್ಲಿ ನಡೆಯುವ ಪಾಠಗಳನ್ನು ಆಯಾ ಶಾಲೆಗಳಲ್ಲಿ ಅಳವಡಿಸಿರುವ ಪರದೆಯಲ್ಲಿ (ವೀಕ್ಷಣಾ ಕೇಂದ್ರ) ನೋಡಿ ತಿಳಿಯಬಹುದು. 10 ನಿಮಿಷದ ವಿದ್ಯಾರ್ಥಿಗಳ ಜತೆ ಸಂವಾದಕ್ಕೂ ಅವಕಾಶ ಇರುತ್ತದೆ. ಸಮೀಪದ ಶಾಲೆಗಳ ಆಸಕ್ತ ವಿದ್ಯಾರ್ಥಿಗಳೂ ಟೆಲಿಟೀಚಿಂಗ್ ಸೌಲಭ್ಯ ಪಡೆದಿರುವ ಶಾಲೆಗಳಲ್ಲಿ ಪಾಠಗಳನ್ನು ಕೇಳಬಹುದು.

10 ಪ್ರೌಢಶಾಲೆಗಳಲ್ಲಿ ಏಕಕಾಲದಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಈ ವ್ಯವಸ್ಥೆ ಸಹಕಾರಿಯಾಗಿದೆ. ಅಂತರ್‌ಜಾಲದ ಸೌಲಭ್ಯವನ್ನು ಮಾತ್ರ ಆಯಾ ಶಾಲೆಗಳು ಕಲ್ಪಿಸಬೇಕಾಗಿದೆ. ‘ಸರ್ಕಾರಿ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕೇವಲ ಶಾಲಾ ಶುಲ್ಕವನ್ನು ಮಾತ್ರ ಪಡೆಯುವ ಖಾಸಗಿ ಶಾಲೆಗಳಿಗೆ ಈ ಸೌಲಭ್ಯ ನೀಡಲಾಗುತ್ತದೆ’ ಎಂದು ಫೌಂಡೇಶನ್ ಕೆಲಸಗಳಿಗೆ ಜಿಲ್ಲೆಯಲ್ಲಿ ಸಂಯೋಜಕರಾಗಿರುವ ಪ್ರೊ.ಕೆ.ಚಂದ್ರಣ್ಣ ತಿಳಿಸಿದರು.

‘9 ಮತ್ತು 10ನೇ ತರಗತಿಯನ್ನು ಈ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಶಾಲೆಯಲ್ಲಿ ಕನಿಷ್ಠ 55 ವಿದ್ಯಾರ್ಥಿ ಗಳು ಇರಬೇಕು. ಆರು ಮಂದಿ ಸಂಪನ್ಮೂಲ ವ್ಯಕ್ತಿಗಳು ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯವನ್ನು ಈಗ ಬೋಧಿಸುತ್ತಿದ್ದಾರೆ. ಇವರು ನುರಿತ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಡಯಟ್‌ನಿಂದ ಆಯ್ಕೆ ಮಾಡಿಕೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಸಂಪನ್ಮೂಲ ವ್ಯಕ್ತಿಗಳಿಗೆ ಫೌಂಡೇಷನ್‌ನಿಂದಲೇ ಗೌರವಧನವನ್ನು ನೀಡಲಾಗುತ್ತದೆ. ಪ್ರತಿ ಶಾಲೆಗೆ ₹ 1.50 ಮೌಲ್ಯದ ಉಪಕರಣಗಳನ್ನು ನೀಡಲಾಗುತ್ತದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳದ ಜತೆಗೆ ಕೌಶಲಾಭಿವೃದ್ಧಿಗೂ ಗಮನ ನೀಡಲಾಗುತ್ತದೆ’ ಎಂದು ವಿವರಿಸಿದರು. ಮಣಿಪಾಲ್ ಫೌಂಡೇಷನ್‌ನ ಸಿಇಒ ರಾಜನ್ ಪಡುಕೋಣೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಾಂತಾರಾಮ್ ಇತ್ತೀಚೆಗೆ ಹನುಮಂತಪುರ ಶಾಲೆಯಲ್ಲಿ ಸ್ಟುಡಿಯೊ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT