ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವುದು ಒಂದೇ ಅದು ಕನಕನ ಕಿಂಡಿ

Last Updated 13 ನವೆಂಬರ್ 2017, 10:05 IST
ಅಕ್ಷರ ಗಾತ್ರ

ಉಡುಪಿ: ಶ್ರೀಕೃಷ್ಣ ಮಠದ ಎದುರು ಇರುವುದು ಒಂದೇ ಕಿಂಡಿ, ಅದು ಕನಕನ ಕಿಂಡಿ. ಪೂರ್ವಾಭಿಮುಖ ಇದ್ದ ಕೃಷ್ಣ ಕನಕದಾಸರ ಭಕ್ತಿಯನ್ನು ಮೆಚ್ಚಿ ಪಶ್ಚಿಮಾಭಿಮುಖಕ್ಕೆ ತಿರುಗಿದ್ದು ಸತ್ಯ, ಇದನ್ನು ಅಲ್ಲ ಎನ್ನುವವರ ವಿರುದ್ಧ ಹೋರಾಟ ಮಾಡಲು ಸಿದ್ಧ ಎಂದು ಪೇಜಾವರ ಪರ್ಯಾಯ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು

ಉಡುಪಿಯ ಹಾಲುಮತ ಮಹಾಸಭಾ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘ಕೃಷ್ಣನು ಕನಕದಾಸರ ಭಕ್ತಿಯನ್ನು ಮೆಚ್ಚಿ ತಿರುಗಿದ್ದು ಸತ್ಯ. ವ್ಯಾಸರಾಯರ ಸ್ತ್ರೋತ್ರದಲ್ಲಿಯೂ ಅದರ ಉಲ್ಲೇಖ ಇದೆ. ಆದರೆ, ಅದನ್ನು ಕೆಲವರು ಇಲ್ಲ ಎಂದು ಪ್ರತಿಪಾದಿಸುತ್ತಾರೆ.

ಅಂತಹವರ ವಿರುದ್ಧ ನಿಮ್ಮೊಂದಿಗೆ ಹೋರಾಟ ಮಾಡುತ್ತೇನೆ. ಕೃಷ್ಣ ಮಠದ ಎದುರು ಕನಕನ ಕಿಂಡಿ ಮತ್ತು ನವಗ್ರಹ ಕಿಂಡಿ ಇದೆ ಎಂದು ಸಹ ಕೆಲವರು ಹೇಳುತ್ತಾರೆ. ಆದರೆ, ಅಲ್ಲಿ ಇರುವುದು ಕನಕನ ಕಿಂಡಿ ಮಾತ್ರ. ಒಳಗಿನಿಂದ ಕೃಷ್ಣ ಕನಕನನ್ನು ನೋಡಿದರೆ, ಹೊರಗಿನಿಂದ ಕನಕ ಕೃಷ್ಣನನ್ನು ನೋಡಿದ. ನವಗ್ರಹ ಕಿಂಡಿ ಎಂಬುದಕ್ಕೆ ಅರ್ಥವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ‘ಉಡುಪಿಯಲ್ಲಿ ಶಾಖಾ ಮಠ ಆರಂಭಿಸಲು ಸಂಕಲ್ಪ ಮಾಡಲಾಗಿದೆ. ಆದರೆ, ಜಾಗ ಸಿಗುತ್ತಿಲ್ಲ. ಸಚಿವ ಪ್ರಮೋದ್ ಮಧ್ವರಾಜ್ ಅವರು ಜಾಗ ನೀಡುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಅವರೊಂದಿಗೆ ಸಹ ಈ ಬಗ್ಗೆ ಮಾತನಾಡಲಾಗುವುದು’ ಎಂದರು.

ಕನಕದಾಸರಿಂದಲೇ ಉಡುಪಿ ಇಷ್ಟೊಂದು ಪ್ರಚಾರಕ್ಕೆ ಬಂದಿದೆ. ಅಂತಹ ಕನಕನ ಕಿಂಡಿಯ ಬಗ್ಗೆ ಇದ್ದ ಅಪವಾದ ಮತ್ತು ಅನುಮಾನವನ್ನು ಪೇಜಾವರ ಸ್ವಾಮೀಜಿ ಅವರು ಪರಿಹರಿಸಿದ್ದಾರೆ ಎಂದರು.

ನಿರಂಜನಾನಂದಪುರಿ ಸ್ವಾಮೀಜಿ ಅವರು ಪೇಜಾವರ ಸ್ವಾಮೀಜಿ ಹಾಗೂ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರಿಗೆ ಕರಿ ಕಂಬಳಿ ತೊಡಿಸಿ ಸನ್ಮಾನಿಸಿದರು.
ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಎಂ.ಕೆ.ಸೋಮಶೇಖರ್‌, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಹಾಲುಮತಾ ಮಹಾಸಭಾದ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್‌, ಉಡುಪಿ ಜಿಲ್ಲಾಧ್ಯಕ್ಷ ಸಿದ್ದಪ್ಪ ಐಹೊಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT