ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಡಿಗೆ ಹೋದ’ ರಾಮನ ಮೊದಲ ನೋಟ

Last Updated 13 ನವೆಂಬರ್ 2017, 12:00 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ಸಿನಿಮಾಗಳ ಶೀರ್ಷಿಕೆಯೇ ಕಾತರ ಹುಟ್ಟಿಸುತ್ತವೆ. ‘ರಾಮನು ಕಾಡಿಗೆ ಹೋದನು’ ಎಂಬ ಶೀರ್ಷಿಕೆಯೂ ಅಂತಹುದೇ. ಚಿತ್ರದ ಹೂರಣ ಏನಿರಬಹುದು ಎಂಬ ಬಗ್ಗೆ ಈ ಶೀರ್ಷಿಕೆಯೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ರಾಮ ಎಂಬಲ್ಲಿಗೆ ಭಕ್ತಿ ಭಾವ ಸ್ಫುರಿಸಿದರೆ, ರಾಮ ಕಾಡಿಗೆ ಹೋದನು ಎಂಬಲ್ಲಿಗೆ ಇಡೀ ರಾಮಾಯಣದ ಹೀರೊನೇ ಕಣ್ಮುಂದೆ ಬರುತ್ತಾನೆ.

‘ರಾಮನು ಕಾಡಿಗೆ..’ ಚಿತ್ರದ ಫಸ್ಟ್‌ ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನಿಂದ ಚರ್ಚೆಗೂ ಪಾತ್ರವಾಗಿದೆ. ಸಾದಾ ಸೀದಾ ನಟನೆಯಿಂದಲೇ ಪ್ರೇಕ್ಷಕರ ಮನಸ್ಸಿಗೆ ಲಗ್ಗೆಯಿಡುವ ನಟ ನೀನಾಸಂ ಸತೀಶ್‌ ಅವರೇ ಇಲ್ಲಿನ ‘ರಾಮ’. ನಿರ್ಮಾಪಕರೂ ಅವರೇ. ಪಂಪಾವತಿ ಸಹೋದರರಾದ ವಿಕಾಸ್‌ ಮತ್ತು ವಿನಯ್‌ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ.

ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ನಡೆದಿರುವ ಸಾಮಾಜಿಕ ಮತ್ತು ಕೌಟುಂಬಿಕ ಜೀವನದ ಕತೆಗಳ ಜಾಡಿನಲ್ಲೇ ವರ್ತಮಾನಕ್ಕೆ ಒಗ್ಗುವಂತೆ ಕತೆ ಹೆಣೆದಿರುವುದು ವಿಶೇಷ. ಶೀರ್ಷಿಕೆ ನೋಡಿ ಪೌರಾಣಿಕ ಛಾಯೆ ಸ್ವಲ್ಪವಾದರೂ ಇದ್ದೀತು ಎಂದುಕೊಂಡರೆ ತಪ್ಪು. ಯಾಕೆಂದರೆ, ‘ಇದರಲ್ಲಿ ಪೌರಾಣಿಕ ಅಂಶ ಸ್ವಲ್ಪವೂ ಇರುವುದಿಲ್ಲ. ಇದೊಂದು ಅಪ್ಪಟ ಹಾಸ್ಯ ಮಿಶ್ರಿತ ಥ್ರಿಲ್ಲರ್‌ ಸಿನಿಮಾ’ ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ.

ಇದೀಗ ಬಿಡುಗಡೆಯಾಗಿರುವ ಪೋಸ್ಟರ್‌ ಈ ಮಾತುಗಳಿಗೆ ‍ಪುಷ್ಟಿ ಕೊಡುವಂತಿದೆ. ಕೈಯಲ್ಲಿ ಲ್ಯಾಪ್‌ಟಾಪ್ ಚೀಲ ಹಿಡಿದುಕೊಂಡು ಹೆದ್ದಾರಿಯ ಒಂದು ‘ತೀರ’ದಿಂದ ಇನ್ನೊಂದು ‘ತೀರ’ಕ್ಕೆ ಸಾಗರೋಲ್ಲಂಘನ ಮಾಡಿದ ಹನುಮಂತನಂತೆ ಹೈಜಂಪ್‌ ಮಾಡುವ ಯುವಕನ ಚಿತ್ರ ಎದ್ದುಕಾಣುತ್ತದೆ. ಈ ಯುವಕ ಬೆನ್ನಿಗೆ ಕಟ್ಟಿಕೊಂಡಿರುವ ಬತ್ತಳಿಕೆಯಲ್ಲಿ ಐದಾರು ಬಾಣಗಳು!

ರಸ್ತೆಯ ಒಂದು ‘ತೀರ’ದಲ್ಲಿ ಮೈಸೂರು ಚಾಮುಂಡೇಶ್ವರಿ ದೇವಾಲಯವನ್ನು ಹೋಲುವ ಚಿನ್ನದ ಬಣ್ಣದ ಗೋಪುರ, ಜೈಂಟ್‌ ವ್ಹೀಲ್‌, ಒಂದಿಷ್ಟು ಪೈರು ಇದ್ದರೆ ಅವನು ತಲುಪಬೇಕಾದ ‘ತೀರ’ದಲ್ಲಿ ಆರು ಕಂಬಗಳ ಮೇಲೆ ಒಂದು ಜೋಪಡಿಯ ಸೂರಿನಲ್ಲಿ ‘ಗೋ ಗ್ರೀನ್‌’ ಎಂಬ ಇಂಗ್ಲಿಷ್‌ ಬಾವುಟ, ಅಷ್ಟೆತ್ತರದ ತೆಂಗಿನ ಮರ, ಆಕಾಶದಲ್ಲಿ ಅಷ್ಟೆತ್ತರದಲ್ಲಿ ತೇಲುತ್ತಿರುವ ಬಿಸಿಗಾಳಿ ಬಲೂನ್‌ ಮತ್ತು ಅದನ್ನು ನೋಡುತ್ತಿರುವ ಒಂದಷ್ಟು ಜನ, ಅವರಿಗೆ ಬೆನ್ನು ಹಾಕಿದ ಹತ್ತು ತಲೆಯ ರಾವಣನ ಪ್ರತಿಕೃತಿ... ಹೀಗೆ, ಪೋಸ್ಟರ್‌ನ ಚಿತ್ರಣಗಳನ್ನು ನೋಡುಗರು ತೋಚಿದಂತೆ ಅರ್ಥೈಸಿಕೊಳ್ಳಬಹುದು. ಆದರೆ, ಮೊದಲ ನೋಟದಲ್ಲೇ ಸತೀಶ್‌ ಮತ್ತು ತಂಡ ಚಿತ್ರಪ್ರೇಮಿಗಳ ತಲೆಗೆ ಕೆಲಸ ಕೊಟ್ಟಿರುವುದಂತೂ ಸತ್ಯ.

‘ಒಂದು ಮೊಟ್ಟೆಯ ಕತೆ’ ಚಿತ್ರದಲ್ಲಿ ವಿಭಿನ್ನ ಸಂಗೀತದಿಂದ ಗಮನ ಸೆಳೆದಿರುವ ಮಿಥುನ್‌ ಮುಕುಂದನ್‌ ಅವರೇ ‘ರಾಮ’ನಿಗೂ ಸಂಗೀತ ನೀಡಿದ್ದಾರೆ. ನೀನಾಸಂ ಸತೀಶ್‌ ನಾಯಕಿ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆದರೂ ಡಿಸೆಂಬರ್‌ ಎರಡರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ತಂಡ ಹೇಳಿಕೊಂಡಿದೆ. ಕಾಡಿಗೆ ಹೋದ ರಾಮ ಯಾವಾಗ ಚಿತ್ರಮಂದಿರಕ್ಕೆ ಬರುತ್ತಾನೆ ಎಂದು ಕಾದು ನೋಡಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT