ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳ ‘ಸ್ವಹಿತಾಸಕ್ತಿ’!

Last Updated 14 ನವೆಂಬರ್ 2017, 10:50 IST
ಅಕ್ಷರ ಗಾತ್ರ

ಕೆಪಿಎಂಇ ಕಾಯ್ದೆ ತಿದ್ದುಪಡಿ ಮಸೂದೆ– 2017ರ ವಿರುದ್ಧ  ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಖಾಸಗಿ ವೈದ್ಯರು ‘ಬೆಳಗಾವಿ ಚಲೊ’ ಹೋರಾಟ ನಡೆಸಿದ್ದಾರೆ. ವೈದ್ಯಕೀಯ ವೃತ್ತಿಯ ಮೌಲ್ಯಗಳು ಮತ್ತು ನೈತಿಕತೆಯನ್ನು ಕಾಪಾಡುವ, ಪ್ರಗತಿಪರವಾದ ಮಸೂದೆಯನ್ನು ವೈದ್ಯರು ವಿರೋಧಿಸುತ್ತಿರುವುದು ನಿಜಕ್ಕೂ ದುಃಖಕರ ಸಂಗತಿ. ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ವೃತ್ತಿಗೌರವ, ಬದ್ಧತೆ ಹಾಗೂ ನೈತಿಕತೆಗಳನ್ನು ಕಾಪಾಡಿಕೊಂಡಿದ್ದರೆ, ಖಾಸಗಿ ಆಸ್ಪತ್ರೆಗಳು ಮಾನವೀಯತೆಯಿಂದ, ರೋಗಿಯ ಆರೈಕೆಯನ್ನೇ ಮುಖ್ಯವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದರೆ ಇಂಥ ಕಾಯ್ದೆಯ ಅವಶ್ಯಕತೆಯೇ ಇರಲಿಲ್ಲ. ವಾಸ್ತವದಲ್ಲಿ ಈ ಮಸೂದೆಯು ವೈದ್ಯರ ವಿರುದ್ಧ ಅಲ್ಲವೇ ಅಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.

ಈ ಮಸೂದೆಯನ್ನು ವಿರೋಧಿಸುತ್ತಿರುವ ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯರ ಆಕ್ಷೇಪ-ಅಸಹನೆಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪಲಾಯನವಾದದಂತೆ ಕಾಣುತ್ತವೆ. ಇದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಹುದು.

ಕುಂದುಕೊರತೆ ನಿವಾರಣಾ ಸಮಿತಿ: ಖಾಸಗಿ ಆಸ್ಪತ್ರೆಗಳು ನಿಯಮ ಉಲ್ಲಂಘಿಸಿದ ಬಗ್ಗೆ ದೂರುಗಳು ಬಂದಾಗ ಆ ಕುರಿತು ತನಿಖೆ ನಡೆಸಿ ರೋಗಿಗಳಿಗೆ ನ್ಯಾಯ ಒದಗಿಸುವ ವೇದಿಕೆ ಇದು. ಈ ಸಮಿತಿಯೇ ಇರಬಾರದು ಎಂದು ಖಾಸಗಿ ಆಸ್ಪತ್ರೆಗಳವರು ವಾದಿಸುತ್ತಾರೆ. ಕುಂದುಕೊರತೆ ನಿವಾರಣೆಗೆ ಸಮರ್ಪಕ ವ್ಯವಸ್ಥೆ ಇಲ್ಲ. ಈ ಕೊರತೆ ನೀಗುವ ವ್ಯವಸ್ಥೆಯೂ ಬೇಡವೆಂದು ವಾದಿಸುವ ಆಸ್ಪತ್ರೆಗಳವರು ‘ಉತ್ತರದಾಯಿತ್ವವೇ ಇರಬಾರದು’ ಎಂದು ಬಯಸುತ್ತಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ.

ಸೇವಾ ದರದ ನಿಯಂತ್ರಣ: ‘ತಜ್ಞರ ಸಮಿತಿ ನಿಗದಿ ಮಾಡಿದ ಸೇವಾ ದರಗಳ ಬಗ್ಗೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದ ನಂತರವೇ  ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸರ್ಕಾರ ಹಲವಾರು ಬಾರಿ ಸ್ಪಷ್ಟೀಕರಣ ನೀಡಿದೆ. ಆದರೂ ಈ ಕುರಿತು ಅನೇಕರು ಅಪಪ್ರಚಾರ ನಡೆಸುತ್ತಿದ್ದಾರೆ. ಸೇವಾ ದರಗಳು ನಿಗದಿಯಾದರೆ ಮಾತ್ರ ರೋಗಿಗಳ ಆರ್ಥಿಕ ಶೋಷಣೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಖಾಸಗಿ ಆಸ್ಪತ್ರೆಗಳವರು ಹೃದ್ರೋಗಕ್ಕೆ ಬಳಸಲಾಗುವ ಸ್ಟೆಂಟ್‍ಗಳಲ್ಲಿ ಶೇ 600ರಷ್ಟು ಲಾಭ ಮಾಡಿಕೊಳ್ಳುತ್ತಿವೆ ಎಂಬುದು ಬೆಳಕಿಗೆ ಬಂದ ನಂತರ, ಕೇಂದ್ರ ಸರ್ಕಾರ ಸ್ಟೆಂಟ್‍ಗಳ ಗರಿಷ್ಠ ದರ ನಿಗದಿ ಮಾಡಿದೆ. ಸುಪ್ರೀಂ ಕೋರ್ಟ್‌ ಸಹ ಜನರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳಿಗೆ ಇವುಗಳ ಬೆಲೆ ನಿಗದಿಮಾಡುವ ಅಧಿಕಾರವಿದೆ ಎಂದು ಹೇಳಿದೆ.

ಉತ್ತರದಾಯಿತ್ವ ಮತ್ತು ಮಾನ್ಯತೆ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವಿವಿಧ ಮಾನ್ಯತೆಗಳನ್ನು ಪಡೆಯುವ ಖಾಸಗಿ ಆಸ್ಪತ್ರೆಗಳು, ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ಉತ್ತರದಾಯಿತ್ವವನ್ನು ಹೆಚ್ಚಿಸುವ ಮಾನದಂಡಗಳನ್ನು ಪಾಲಿಸಲು ಒಪ್ಪುತ್ತಿಲ್ಲವೆನ್ನುವುದು ಅಚ್ಚರಿ ಮೂಡಿಸುವ ಸಂಗತಿ.

ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಅಕ್ರಮಗಳನ್ನು ಮರೆಮಾಚಿ, ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಮಾತನಾಡುವುದು ಆತ್ಮವಂಚನೆ ಎನಿಸಿಕೊಳ್ಳುತ್ತದೆ. ಹೆಣವನ್ನು ಐಸಿಯುನಲ್ಲಿ ಇಟ್ಟು ಹಣ ಮಾಡಿಕೊಳ್ಳುವುದು, ಕಮಿಷನ್‍ ಉದ್ದೇಶದಿಂದ ಅನವಶ್ಯಕ ಪರೀಕ್ಷೆಗಳನ್ನು ನಡೆಸಿ ಚಿಕಿತ್ಸೆ ಕೊಡುವುದು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರಿಗೆ ಗುರಿ ನಿಗದಿ ಮಾಡುವುದು, ಇವೆಲ್ಲವೂ ‘ಅಕ್ರಮ’ಗಳಲ್ಲವೇ?

ಸರ್ಕಾರಿ ಆರೋಗ್ಯ ವ್ಯವಸ್ಥೆಯು ಬರೀ ಚಿಕಿತ್ಸಾತ್ಮಕ ಸೇವೆಗಳಿಗೆ ಸೀಮಿತವಾಗಿರುವುದಿಲ್ಲ. ರೋಗ ತಡೆಗಟ್ಟುವಿಕೆ, ಆರೋಗ್ಯವರ್ಧನೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ರೋಗಗಳ ಬಗ್ಗೆ ಕಣ್ಗಾವಲು... ಈ ಎಲ್ಲಾ ಜವಾಬ್ದಾರಿಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಈಗಾಗಲೇ ಸರ್ಕಾರದ ನೇರ ನಿಯಂತ್ರಣಕ್ಕೆ ಒಳಪಟ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಹಾರ ನಡೆದರೆ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು ಮತ್ತು ಲೋಕಾಯುಕ್ತವು ಯಾರ ಬಗ್ಗೆಯಾದರೂ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಬಹುದು. ಹೀಗಾಗಿ ಸರ್ಕಾರಿ ಆಸ್ಪತ್ರೆಗಳನ್ನೂ ಈ ಮಸೂದೆ ವ್ಯಾಪ್ತಿಗೆ ತರಬೇಕು ಎನ್ನುವ ವಾದದಲ್ಲಿ ಹುರುಳಿಲ್ಲ.

ರೋಗಿ-ವೈದ್ಯರ ಸಂಬಂಧ: ಮಸೂದೆಯು ರೋಗಿ ಮತ್ತು ವೈದ್ಯರ ನಡುವಿನ ವಿಶ್ವಾಸವನ್ನು ನಾಶ ಮಾಡುತ್ತದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ರೋಗಿಗಳ ಕುಟುಂಬದವರನ್ನು ಬಂಧಿಸಲು ಅವಕಾಶವಿರುವ 2009ರ ಕಾಯ್ದೆಯು (ವೈದ್ಯರ ಮೇಲೆ ಹಲ್ಲೆಗಳ ವಿರುದ್ಧದ ಕಾಯ್ದೆ) ರೋಗಿ ಮತ್ತು ವೈದ್ಯರ ನಡುವಿನ ವಿಶ್ವಾಸವನ್ನು ನಾಶ ಮಾಡುವುದಿಲ್ಲವೇ? ಐಎಂಎ ವಾದವನ್ನೇ ಒಪ್ಪುವುದಾದರೆ ಈ ಕಾಯ್ದೆಯೂ ಇರಬಾರದಲ್ಲವೇ?

ಅಪಪ್ರಚಾರ: ಮಸೂದೆಯಲ್ಲಿ ಉಲ್ಲೇಖಿಸಿರುವ ದಂಡಗಳ ಬಗ್ಗೆ ತಪ್ಪು ಮಾಹಿತಿಗಳ ಪ್ರಚಾರ ನಡೆಯುತ್ತಿದೆ. ‘ರೋಗಿಗಳು ಮಾತಾಡುವಾಗ ಅಡೆತಡೆಯಾದರೆ ವೈದ್ಯರಿಗೆ ಜೈಲು’ ಎಂಬ ಹಸಿ ಸುಳ್ಳನ್ನು ಸಾಮಾಜಿಕ ಜಾಲತಾಣ, ವಾಟ್ಸ್‌ ಆ್ಯಪ್‌ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಇದು ಹೊಣೆಗೇಡಿ ವರ್ತನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT