ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗತ್ತಲ ಹಾದಿಯ ಮಿಣುಕು ದೀಪಗಳು

Last Updated 13 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಕೇವಲ ಒಂದೇ ಒಂದು ಗಂಟೆ ಮೊದಲು ಪ್ರಕಟಗೊಂಡಿದ್ದರೆ ಮದ್ದೂರು ತಾಲ್ಲೂಕು, ಮಾರ್ನವಮಿ ದೊಡ್ಡಿಯ ರೈತ ಎಂ.ಕೆ.ರವಿ ಜೀವಂತ ವಿದ್ಯುತ್‌ ವೈರ್‌ಗೆ ಕೈ ಇಡುತ್ತಿರಲಿಲ್ಲ. ವಿದ್ಯುತ್‌ ಶಾಕ್‌ನಿಂದ ಹಸಿರುಗಟ್ಟಿದ್ದ ಅಪ್ಪನ ಹೆಣವನ್ನು ಅಪ್ಪಿ ಮಲಗಿದ್ದ ಮಗ ವಿವೇಕ್‌ನನ್ನು ಕಂಡು ಆತನ ಶಿಕ್ಷಕ ನಂದೀಶ್‌ ಬಿಕ್ಕಿಬಿಕ್ಕಿ ಅಳುತ್ತಿದ್ದರು. ವಿವೇಕ್‌ನನ್ನು ಅಪ್ಪಿದ ನಂದೀಶ್‌ ‘ನೀನು ಶೇ 94 ಅಂಕ ಗಳಿಸಿದ್ದಿ ವಿವೇಕಾ’ ಎಂದಾಗ ಇಡೀ ಊರಿಗೆ ಊರೇ ಗೋಳಿಟ್ಟಿತ್ತು.

ತುಂಬಕೆರೆ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ ವಿವೇಕ್‌ ಪ್ರತಿಭಾವಂತ ಹುಡುಗನಾಗಿದ್ದ. ತಾಯಿ ಕಲಾವತಿ, ಶಿಕ್ಷಕ ನಂದೀಶ್‌ ಅವರಿಗೆ ಪ್ರತಿದಿನ ಸಂಜೆ ಮೊಬೈಲ್‌ ಕರೆ ಮಾಡಿ ಮಗನ ಓದಿನ ಬಗ್ಗೆ ವಿಚಾರಿಸುತ್ತಿದ್ದರು. ವಿವೇಕನ ಫಲಿತಾಂಶ ಕಂಡೊಡನೆ ನಂದೀಶ್‌, ಕಲಾವತಿ ಅವರಿಗೆ ಮೊಬೈಲ್‌ ಕರೆ ಮಾಡಲು ಪ್ರಯತ್ನಿಸಿದರು.

ತಾಯಿಯ ಖುಷಿಯನ್ನು ಕೇಳಿ ಆನಂದಿಸುವ ಕುತೂಹಲ ಅವರಿಗಿತ್ತು. ಆದರೆ ಮೊಬೈಲ್‌ ಸ್ಥಗಿತಗೊಂಡಿತ್ತು. ಊರಿಗೇ ಹೋಗಿ ಫಲಿತಾಂಶ ತಿಳಿಸುವ ಎಂದು ನಂದೀಶ್‌ ಮಾರ್ನವಮಿ ದೊಡ್ಡಿಗೆ ಹೋದಾಗ ಆ ತಾಯಿ ಹಣೆ ತುಂಬ ಕುಂಕುಮ, ಕೈ ತುಂಬಾ ಬಳೆ, ಹೊಸ ಸೀರೆಯುಟ್ಟು ಪತಿಯ ಶವದ ಮುಂದೆ ಗೋಳಿಡುತ್ತಿದ್ದರು.

ಈಗ ವಿವೇಕ ಮಂಡ್ಯದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಕಲಿಯುತ್ತಿದ್ದಾರೆ. ರಾಜಕಾರಣಿಯೊಬ್ಬರು ಮಾನವೀಯತೆ ದೃಷ್ಟಿಯಿಂದ ಓದಿನ ಖರ್ಚು ವಹಿಸಿಕೊಳ್ಳುವುದಾಗಿ ಭರವಸೆ ಕೊಟ್ಟು ಕಾಲೇಜಿಗೆ ಸೇರಿಸಿದ್ದಾರೆ. ಆದರೆ ಅವರು ಫೀಜು ಕಟ್ಟಿಲ್ಲ. ಹೀಗಾಗಿ ಕಾಲೇಜು ಸಿಬ್ಬಂದಿ ‘ನಿನ್ನ ಫೀ ಬಂದಿಲ್ಲ. ಶೀಘ್ರ ಹಣ ಬರದಿದ್ದರೆ ಕಾಲೇಜಿನಿಂದ ಹೊರಹಾಕುತ್ತೇವೆ’ ಎಂದು ಬೆದರಿಕೆಯೊಡ್ಡುತ್ತಿದ್ದಾರೆ.

₹ 1.20 ಲಕ್ಷ ಫೀ ಕಟ್ಟುವ ಸ್ಥಿತಿಯಲ್ಲಿ ಕುಟುಂಬ ಇಲ್ಲ. ಅವರ ತಾಯಿಗೆ ಇದೇ ದೊಡ್ಡ ನೋವಾಗಿದೆ. ‘ಹೇಗಾದರೂ ಮಾಡಿ ನಾನೇ ಫೀ ಕಟ್ಟುವೆ, ಕಾಲೇಜಿನಿಂದ ನನ್ನ ಮಗನನ್ನು ಹೊರ ಹಾಕಬೇಡಿ’ ಎಂದು ಕೈ ಮುಗಿಯುತ್ತಿದ್ದಾರೆ.

ಹಸುವೇ ಆಧಾರ...
ಮಂಡ್ಯ ತಾಲ್ಲೂಕಿನ ಊರಮಾರಕಸಲಕೆರೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಸಿದ್ದೇಗೌಡ ಅವರ ಪತ್ನಿ ಸುಜಾತಾ ಅವರು ಹಸುವೊಂದನ್ನು ಕೊಂಡು ಹೈನುಗಾರಿಕೆ ಯಿಂದ ಜೀವನ ಕಟ್ಟಿಕೊಂಡಿದ್ದಾರೆ. 19 ವರ್ಷ ವಯಸ್ಸಿನ ಮಗ ನವೀನ್‌ ಉತ್ತಮ ಚಿತ್ರ ಕಲಾವಿದನಾಗಿದ್ದು ರಾಜ್ಯಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ. ಗ್ರಾಮದಲ್ಲಿ ಈ ವರ್ಷ ಗಣೇಶ ಹಬ್ಬದಲ್ಲಿ ಕೂರಿಸಿದ್ದ ನೈಸರ್ಗಿಕ ಗಣಪತಿ ಮೂರ್ತಿ ನವೀನ್‌ ಮಾಡಿದ್ದು. ಮತ್ತೊಬ್ಬ ಮಗ ನಂದನ್‌ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ.

ಕೆ.ಆರ್‌.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಸಣ್ಣಯ್ಯ ಅವರ ಪತ್ನಿ ಕೂಲಿಯಿಂದ ಜೀವನ ಸಾಗಿಸುತ್ತಿದ್ದಾರೆ. ಐಕನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ರವಿ ಅವರ ಪತ್ನಿ ವಸಂತಾ ಅವರೂ ಕೂಲಿ ಮಾಡುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಡಿಯುತ್ತಿದ್ದಾರೆ. ಮಗಳು ದೀಪಿಕಾ ಅಂತಿಮ ವರ್ಷದ ಬಿ.ಎ, ಮಗ ದೀಕ್ಷಿತ್‌ ದ್ವಿತೀಯ ಪಿಯುಸಿ ಕಲಿಯುತ್ತಿದ್ದಾರೆ.

ನಾಗಮಂಗಲ ತಾಲ್ಲೂಕಿನ ಚಿಣ್ಯ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಚನ್ನೇಗೌಡ ಅವರ ಪತ್ನಿ ಪಾರ್ವತಿ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆದ್ಯತೆ ಕೊಟ್ಟಿದ್ದಾರೆ. ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಅವರ ತವರು ಇಜ್ಜಲಘಟ್ಟ ಗ್ರಾಮದಲ್ಲಿ ಮೃತಪಟ್ಟ ಪುಟ್ಟರಾಜು ಅವರ ಪತ್ನಿ ಮಂಗಳಾಗೌರಿ ಅವರಿಗೆ ಮಕ್ಕಳೇ ಆಧಾರವಾಗಿದ್ದಾರೆ.

***

ಒಂದಲ್ಲ, ಹತ್ತಲ್ಲ, ಐವತ್ತಲ್ಲ, ನೂರಲ್ಲ ಮಂಡ್ಯ ಜಿಲ್ಲೆಯಲ್ಲಿ ಇಂತಹ 230 ಕತೆಗಳಿವೆ. 2015ರಿಂದೀಚೆಗೆ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವರೈತರೇ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿರುವುದು ಬಹಳ ಆತಂಕಕಾರಿ ಬೆಳವಣಿಗೆ. ಇನ್ನೂ ಕಳವಳ ಪಡುವ ಸಂಗತಿ ಎಂದರೆ ಶೇ 60ರಷ್ಟು ಭೂಮಿ ನೀರಾವರಿಗೆ ಒಳಪಡುವ ಮಂಡ್ಯ, ಮದ್ದೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಜೀವ ಕಳೆದುಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ನಿರಂತರ ಬರ, ತಮಿಳುನಾಡಿಗೆ ಹರಿದು ಹೋದ ಕೆ.ಆರ್‌.ಎಸ್‌ ನೀರು, ಸದ್ದು ನಿಲ್ಲಿಸಿದ ಸಕ್ಕರೆ ಕಾರ್ಖಾನೆ, ಬೆಳೆಯುತ್ತಾ ಹೋದ ಬಡ್ಡಿ ಸಾಲ, ಜಿಲ್ಲೆಯ ರೈತರು ಪ್ರತಿಷ್ಠೆಯನ್ನು ಪಣಕ್ಕಿಟ್ಟು ನಡೆಸುವ ಬಾಡೂಟ ವೈಭವ, ಅದ್ದೂರಿ ಮದುವೆ ಮುಂತಾದ ಸಮಸ್ಯೆಗಳು ಮಂಡ್ಯ ಜಿಲ್ಲೆಯ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿವೆ.

ಒಂದು ಕಾಲವಿತ್ತು, ನೂರಾರು ಟನ್‌ ಕಬ್ಬ ಬೆಳೆದು, ಸಾವಿರಾರು ಕ್ವಿಂಟಲ್‌ ಭತ್ತ ಬೆಳೆದು ಹಣ ಎಣಿಸಿಕೊಳ್ಳುತ್ತಿದ್ದ ರೈತ ಕೊಡುಗೈ ದಾನಿಯಾಗಿದ್ದ. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ. ಕೆ.ಆರ್‌.ಎಸ್‌. ನೀರು ಬಿಟ್ಟು ಪರ್ಯಾಯ ನೀರಾವರಿ ಮೂಲವನ್ನೇ ಹುಡುಕದ ರೈತರ ಜಂಘಾಬಲವೇ ಕುಸಿದು ಬಿದ್ದಿದೆ. ಅಂತರ್ಜಲ ಕುಸಿತದಿಂದಾಗಿ ಕೊಳವೆಬಾವಿಗಳು ಬತ್ತಿಹೋಗಿವೆ. ನಗರದಲ್ಲಿ ನಾಯಿಕೊಡೆಗಳಂತೆ ಎದ್ದು ನಿಂತಿರುವ ರಾಜ್ಯ, ಹೊರರಾಜ್ಯಗಳ ಫೈನಾನ್ಸ್‌ ಕಂಪನಿಗಳು, ಲೇವಾದೇವಿಗಾರರು ಚಿನ್ನ ಅಡವಿಟ್ಟುಕೊಂಡು ಸಾಲ ಕೊಡುತ್ತಿವೆ.

ಚಿನ್ನ ಬಿಡಿಸಿಕೊಳ್ಳಲಾಗದೇ, ಸಾಲವನ್ನೂ ತೀರಿಸಲಾಗದೆ ಪ್ರಾಣ ಬಿಟ್ಟ ಹಲವು ರೈತರಿದ್ದಾರೆ. ಚಿನ್ನ ಹರಾಜು ಮಾಡುತ್ತಿರುವ ಫೈನಾನ್ಸ್‌ ಕಂಪೆನಿ, ಬ್ಯಾಂಕ್‌ಗಳ ವಿರುದ್ಧ ಶಾಸಕ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹೋರಾಟವೂ ನಡೆಯುತ್ತಿದೆ. ಲೇವಾದೇವಿಗಾರರು, ಬ್ಯಾಂಕ್‌ಗಳು ರೈತರಿಗೆ ಸಮಯಕೊಡಲು ಸಿದ್ಧರಿಲ್ಲ, ನೋಟಿಸ್‌ ಮೇಲೆ ನೋಟಿಸ್‌ ಕೊಟ್ಟು ರೈತರು ಖಿನ್ನತೆಯಿಂದ ನರಳುವಂತೆ ಮಾಡಿದ್ದಾರೆ. ‘ರೈತರ ಖಿನ್ನತೆಯೇ ಆತ್ಮಹತ್ಯೆಗೆ ಮೂಲ ಕಾರಣ’ ಎಂದು ಮನೋರೋಗ ತಜ್ಞ ಡಾ.ಸತ್ಯನಾರಾಯಣರಾವ್‌ ಅಭಿಪ್ರಾಯ ಪಡುತ್ತಾರೆ.

‘ನೀರು, ಗಾಳಿ, ಬೆಳಕು ಸೃಷ್ಟಿಯ ಕೊಡುಗೆ. ಇವುಗಳನ್ನು ನ್ಯಾಯ–ಪಂಚಾಯಿತಿಯ ಮುಂದಿಟ್ಟರೆ ಜನ ಬದುಕಲು ಸಾಧ್ಯವೇ? ರಾಜಕಾರಣಿಗಳು ಮಾತ್ರವಲ್ಲ, ನ್ಯಾಯಾಂಗ ಕೂಡ ಕೆ.ಆರ್‌.ಎಸ್‌ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿ 10 ಲಕ್ಷ ತೆಂಗಿನಮರಗಳು ಒಣಗಿ ಹೋಗಿದ್ದು ಇದೂ ಆತ್ಮಹತ್ಯೆಗೆ ಪ್ರಬಲ ಕಾರಣವಾಗಿದೆ.’ ಎಂದು ರೈತಸಂಘದ ಮುಖಂಡ ಪಣಕನಹಳ್ಳಿ ನಾಗಣ್ಣ ಹೇಳುತ್ತಾರೆ.

‘ನೀರಿನಿಂದ ಹೊರಬಿದ್ದ ಮೀನಿನಂತಾಗಿದೆ ಮಂಡ್ಯ ಜಿಲ್ಲೆಯ ರೈತರ ಸ್ಥಿತಿ. ನಮ್ಮ ರೈತರು ಕನ್ನಂಬಾಡಿ ನೀರನ್ನು ಬಿಟ್ಟು ಬೇರೆ ಯೋಚಿಸಲೇ ಇಲ್ಲ. ಹೀಗಾಗಿ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಅಭಿಪ್ರಾಯ ಪಡುತ್ತಾರೆ.

ರಾಯಲ್‌ ಎನ್‌ಫೀಲ್ಡ್‌ ಹುಚ್ಚು!
ಮಂಡ್ಯ ಜಿಲ್ಲೆಯ ಯುವ ರೈತರಿಗೆ ಜಮೀನಿನಲ್ಲಿ ದುಡಿಯುವ ಮನೋಭಾವ ಮಾಯವಾಗಿರುವುದು ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ. ನಗರದಲ್ಲೇ ಹೆಚ್ಚಾಗಿ ಇರುವ ಯುವಕರು ಹೋಟೆಲ್‌ಗಳಲ್ಲಿ, ಬಾರ್‌ಗಳಲ್ಲಿ ಕೆಲಸ ಮಾಡುತ್ತಾ ಕಾಲಕಳೆಯುತ್ತಿದ್ದಾರೆ. ‘ಒಂದು ವರ್ಷದ ಹಿಂದೆ ಮಂಡ್ಯದಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಶೋರೂಂ ಆರಂಭವಾಯಿತು.

ಕೇವಲ ಒಂದು ವರ್ಷದಲ್ಲಿ 2,000 ಬೈಕ್‌ಗಳು ಮಾರಾಟವಾಗಿವೆ ಎಂದರೆ ಮಂಡ್ಯ ಜಿಲ್ಲೆಯ ಯುವ ರೈತರ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ಹಳ್ಳಿಹಳ್ಳಿಗಳಲ್ಲಿ ರಾಯಲ್‌ ಎನ್‌ಫೀಲ್ಡ್‌ ಇವೆ. ಜಮೀನು ಮಾರಿ ಬೈಕ್‌ ಕೊಂಡವರಿದ್ದಾರೆ’ ಎಂದು ಯುವ ಮುಖಂಡ ನಾಗೇಶ್‌ ಹೇಳುತ್ತಾರೆ.

*


ಮತ್ತೆ ಹುಟ್ಟಿ ಬರುತ್ತಾನೆ ಮೊಮ್ಮಗ!
ಇಬ್ಬರು ತಂಗಿಯರ ವಿವಾಹಕ್ಕಾಗಿ ಹಂಬಲಿಸಿದ್ದ ರೈತ ಮಹೇಶ್‌ಗೆ ಸಾಯುವ ವಯಸ್ಸಾಗಿರಲಿಲ್ಲ. ಅವರು ನೇಣು ಬಿಗಿದುಕೊಂಡಾಗ ಅವರಿಗೆ ಕೇವಲ 28 ವರ್ಷ ವಯಸ್ಸು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಅವರು ಮನೆಯ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಒಳ್ಳೆಯ ಮನೆಗಳಿಗೆ ತಂಗಿಯರನ್ನು ಮದುವೆ ಮಾಡಿಕೊಟ್ಟಿದ್ದರು. ಇನ್ನೇನು ತಾವೂ ಮದುವೆಯಾಗಬೇಕು ಎಂದುಕೊಳ್ಳುತ್ತಿರುವಾಗ ಮಹೇಶ್‌ ನೇಣಿಗೆ ಶರಣಾದರು. ಮದುವೆ ಸಾಲದ ಜೊತೆಗೆ ಡೆಂಗಿಯಿಂದ ಬಳಲುತ್ತಿದ್ದ ಮನೆಮಂದಿಯನ್ನು ಉಳಿಸಿಕೊಳ್ಳಲು ಹೋರಾಟವನ್ನೇ ಮಾಡಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ₹ 3 ಲಕ್ಷ ಬಿಲ್‌ ಆಗಿತ್ತು. ಸಾಲ ₹ 8 ಲಕ್ಷಕ್ಕೇರಿತ್ತು. ಹೆಣ್ಣಿನ ಕುತ್ತಿಗೆಗೆ ತಾಳಿ ಕಟ್ಟಬೇಕಾಗಿದ್ದ ಲೋಕೇಶ್‌, ತನ್ನ ಕುತ್ತಿಗೆಯನ್ನೇ ಬಿಗಿದುಕೊಂಡು ಪ್ರಾಣ ಬಿಟ್ಟರು. ಇದು ಮಂಡ್ಯ ತಾಲ್ಲೂಕಿನ ಪಣಕನಹಳ್ಳಿ ರೈತನ ಕತೆ. ಕಣ್ಣೆದುರೇ ಅಣ್ಣನನ್ನು ಕಳೆದುಕೊಂಡ ತಂಗಿಯರ ಗೋಳು ನಿಲ್ಲುವಂಥದ್ದಲ್ಲ. ಮನೆಗೆ ಆಧಾರವಾಗಿದ್ದ ಒಬ್ಬನೇ ಮಗನ ಅಗಲಿಕೆಯ ಪುತ್ರಶೋಕ ನಾಗಮ್ಮನಿಗೆ ನಿರಂತರವಾದುದು. ಆದರೆ 104 ವರ್ಷ ವಯಸ್ಸಿನ ಆ ಹಿರಿಯ ಜೀವ, ಮಹೇಶ್‌ ಅವರ ತಂದೆಯ ತಾಯಿ ಚನ್ನಮ್ಮನ ಕಣ್ಣುಗಳನ್ನು ಕಂಡರೆ ಕರುಳು ಕಿವುಚುತ್ತದೆ.

ಸರ್ಕಾರ ಕೊಟ್ಟ ಪರಿಹಾರದ ಹಣದಿಂದಲೂ ಸಾಲ ತೀರಲಿಲ್ಲ. ಇದ್ದ ಆಸ್ತಿ ಮಾರಿ ನಾಗಮ್ಮ ಸಾಲ ತೀರಿಸಿದ್ದಾರೆ. ಪೂರ್ವಜರು ಕಟ್ಟಿದ್ದ ದೊಡ್ಡ ತೊಟ್ಟಿ ಮನೆಯಲ್ಲಿ ಒಬ್ಬಂಟಿಯಾಗಿ ನಾಗಮ್ಮ ಕಾಲ ಕಳೆಯುತ್ತಿದ್ದಾರೆ. ಈಗ ಕಿರಿಯ ಮಗಳು ಗರ್ಭಿಣಿ, ಮಹೇಶನೇ ಹುಟ್ಟಿ ಬರುತ್ತಾನೆ ಎಂದು ನಾಗಮ್ಮ, ಶತಾಯುಷಿ ಚನ್ನಮ್ಮ ಕಾಯುತ್ತಿದ್ದಾರೆ.

*
ಗುಡ್ಡೆಬಾಡು ಎಡೆ ಇಟ್ಟೆ!
‘ನನ್ನ ಗಂಡನಿಗೆ ಗುಡ್ಡೆಬಾಡು ಎಂದರೆ ಎಲ್ಲಿಲ್ಲದ ಪ್ರೀತಿ. ಕುರಿತಂದು, ಕೊಯ್ದು, ಗುಡ್ಡೆ ಮಾಡಿ ಗ್ರಾಮದ ಜನರಿಗೆ ಹಂಚುತ್ತಿದ್ದರು. ಈ ವರ್ಷ ಮನೆಯವರಿಲ್ಲದ ಕಾರಣ ಮಾರ್ಲಾಮಿ ಹಬ್ಬವನ್ನೇ ಮಾಡಲಿಲ್ಲ. ಅವರು ಇಷ್ಟಪಡುತ್ತಿದ್ದ ಒಂದು ಕೆ.ಜಿ. ಗುಡ್ಡೆಬಾಡನ್ನೇ ತಂದು ಎಡೆ ಹಾಕಿದೆ’ ಎಂದು ಗಾಣದಹೊಸೂರು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಿಂಗೇಗೌಡ ಅವರ ಪತ್ನಿ ಬೋರಮ್ಮ ಹೇಳಿದರು.

ಮೋಸ ಮಾಡಿದ ಡಿಎಚ್‌ಒ
‘ಆರೋಗ್ಯ ಇಲಾಖೆಯಲ್ಲಿ ಖಾಲಿ ಇದ್ದ ಡಿ ದರ್ಜೆ ಹುದ್ದೆ ಆಯ್ಕೆ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬ ಸದಸ್ಯರಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್‌ ಅವರಿಗೆ ಸೂಚನೆ ನೀಡಿತ್ತು. ಆದರೆ ಡಿಎಚ್‌ಒ ಒಬ್ಬ ಸದಸ್ಯರಿಗೂ ಕೆಲಸ ನೀಡದೆ ಅವ್ಯವಹಾರ ಮಾಡಿದ್ದಾರೆ. ಅವರ ವಿರುದ್ಧ ತನಿಖೆ ಕೈಗೊಳ್ಳಬೇಕು ಎಂದು ಮಂಡ್ಯ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ರೈತ ಮುಖಂಡ ಕೆ.ಬೋರಯ್ಯ ಆರೋ‍‍‍‍‍ಪಿಸುತ್ತಾರೆ.

*


–ತಾತಾ, ತಂದೆಯ ಭಾವಚಿತ್ರಗಳ ಜೊತೆ ಪಣಕನಹಳ್ಳಿ ಗ್ರಾಮದ ಯುವ ರೈತ ಮಹೇಶ್‌ ಅವರ ಭಾವಚಿತ್ರ.

ಅಪ್ಪನಿಗೂ ಪರಿಹಾರ ಕೊಡಿ
ಸಣಬದಕೊಪ್ಪಲು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಲೋಕೇಶ್‌ ಅವರ ಮನೆಗೆ ಭೇಟಿ ನೀಡಿದ್ದಾಗ ಮೃತ ರೈತನ ಮಗಳು, 13 ವರ್ಷದ ಸ್ಮಿತಾ ತನ್ನ ಪುಸ್ತಕದಲ್ಲಿ ಜೋಪಾನವಾಗಿಟ್ಟಿದ್ದ ದಿನಪತ್ರಿಕೆಯೊಂದರ ಚೂರನ್ನು ಕೈಗೆ ತಂದಿಟ್ಟರು. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕೈಸಾಲ ಮಾಡಿಕೊಂಡಿದ್ದ ರೈತರಿಗೂ ಪರಿಹಾರ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

‘ಮುಖ್ಯಮಂತ್ರಿ ಸೂಚನೆ ನೀಡಿದ್ದರೂ ಅಪ್ಪನ ಸಾವಿಗೆ ಪರಿಹಾರ ಕೊಟ್ಟಿಲ್ಲ. ಅಪ್ಪನ ಹೆಸರಲ್ಲಿ ಜಮೀನು ಇಲ್ಲ ಎಂಬ ಕಾರಣದಿಂದ ಪರಿಹಾರ ತಿರಸ್ಕರಿಸಲಾಗಿದೆ. ಸರ್ಕಾರ ಸರಿಯಾಗಿ ನೀರು ಕೊಟ್ಟಿದ್ದರೆ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಅಪ್ಪನ ಸಾವಿಗೆ ಸರ್ಕಾರವೇ ಕಾರಣ. ಮುಂದೆ ನಾನು ಚೆನ್ನಾಗಿ ಓದಿ ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಹೋರಾಟ ನಡೆಸುತ್ತೇನೆ’ ಎಂದು ಸ್ಮಿತಾ ಹೇಳುತ್ತಿದ್ದಾಗ ಮನೆಮಂದಿ ಎಲ್ಲರೂ ಕಣ್ಣೀರಿಟ್ಟರು.

*


ರಾತ್ರಿಯ ವೇಳೆ ಕುಡುಕರ ಕಾಟ...
ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದ ಯುವ ರೈತ ಮಾದೇಗೌಡ ಆತ್ಮಹತ್ಯೆಯ ನಂತರ ಪತ್ನಿ ಲಕ್ಷ್ಮಮ್ಮಗೆ ಕೊಡಿಯಾಲ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಡುಗೆ ಮಾಡುವ ಕೆಲಸ ಸಿಕ್ಕಿದೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯ ತನಕವೂ ದುಡಿಯಬೇಕು. ರಾತ್ರಿ ಮಕ್ಕಳಿಗೆ ಊಟ ಕೊಟ್ಟು ನಂತರವೇ ಮನೆಗೆ ಬರಬೇಕು. ಬಸ್‌ ಹಿಡಿದು ಮನೆಗೆ ಬರುವಷ್ಟರಲ್ಲಿ ರಾತ್ರಿ 9 ಗಂಟೆಯಾಗುತ್ತದೆ.

ಒಂಟಿ ಮಹಿಳೆ ಅಷ್ಟೊತ್ತಿನಲ್ಲಿ ಬಸ್‌ನಲ್ಲಿ ಪ್ರಯಾಣಿಸಲು ಕಷ್ಟವಾಗುತ್ತಿದೆ. ರಾತ್ರಿ ಬಸ್‌ ನಿಲ್ದಾಣದಲ್ಲಿ ಒಬ್ಬರೇ ನಿಂತಿದ್ದರೆ ಕೆಲ ಕುಡುಕರು ಕೆಟ್ಟ ದೃಷ್ಟಿಯಿಂದ ನೊಡುತ್ತಿದ್ದಾರೆ. ಬಸ್‌ನಲ್ಲೂ ಕೆಟ್ಟ ನೋಟಗಳು ಅವರನ್ನು ಕಾಡುತ್ತಿವೆ.

‘ಕೆಲಸ ಬಿಟ್ಟು ಬದುಕು ಸಾಧ್ಯವಿಲ್ಲ. ಮಗ ಆದರ್ಶ್‌ಗೌಡ ಐಟಿಐ ಓದುತ್ತಿದ್ದಾನೆ. ಅವನಿಗೆ ಒಂದು ದಾರಿಯಾಗಬೇಕು. ಸಂಜೆ ಆರರಷ್ಟಕ್ಕೆ ಮುಗಿಯುವ ಕೆಲಸ ಕೊಟ್ಟರೆ ಅನುಕೂಲವಾಗುತ್ತದೆ. ಮನೆಯಲ್ಲೂ ನಾನು ಒಬ್ಬಂಟಿ. ನನ್ನ ಪತಿ ಹಾಗೂ ತಮ್ಮ ಒಗ್ಗಟ್ಟಿನಿಂದ ಇದ್ದರು. ಈಗ ಓರಗಿತ್ತಿಯರು ಮನೆಯ ನಡುವೆ ಗೋಡೆ ಕಟ್ಟಿಕೊಂಡಿದ್ದಾರೆ. ಹಿಂದಿನ ಬಾಗಿಲಿಂದ ಓಡಾಡುತ್ತಿದ್ದೇನೆ’ ಎಂದು ಲಕ್ಷ್ಮಮ್ಮ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT