ಉತ್ತಮ ಆದಾಯ

ತುಂಗಾ ತೀರದಿ ಹಸು ಸಂಗದಿ...

ಕೊಪ್ಪಳ ತಾಲ್ಲೂಕು ಕರ್ಕಿಹಳ್ಳಿ ಗ್ರಾಮ ತುಂಗಭದ್ರಾ ನದಿಯ ಹಿನ್ನೀರಿನ ದಡದಿಂದ ಸುಮಾರು ಐದಾರು ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಬಹಳಷ್ಟು ಕುಟುಂಬಗಳು ಮೀನುಗಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡಿವೆ.

ತುಂಗಾ ತೀರದಿ ಹಸು ಸಂಗದಿ...

–ತುಕಾರಾಂ ರಾವ್ ಬಿ.ವಿ

ಮೀನುಗಾರಿಕೆ ವೃತ್ತಿಯನ್ನೇ ನಂಬಿಕೊಂಡು, ಬದುಕು ಸಾಗಿಸುತ್ತಿದ್ದ ಕುಟುಂಬಕ್ಕೆ ಸತತವಾಗಿ ಬಂದೆರಗಿದ ಬರ ಪರಿಸ್ಥಿತಿ, ಸಂಕಷ್ಟದ ಸರಮಾಲೆಯನ್ನೇ ತಂದೊಡ್ಡಿತ್ತು. ಜೀವನದ ದೋಣಿ ಸಾಗಿಸುವುದೇ ದುಸ್ತರವೆನಿಸಿದ್ದಾಗ ಕೈ ಹಿಡಿದಿದ್ದು ಹೈನುಗಾರಿಕೆ.

ಕೊಪ್ಪಳ ತಾಲ್ಲೂಕು ಕರ್ಕಿಹಳ್ಳಿ ಗ್ರಾಮ ತುಂಗಭದ್ರಾ ನದಿಯ ಹಿನ್ನೀರಿನ ದಡದಿಂದ ಸುಮಾರು ಐದಾರು ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಬಹಳಷ್ಟು ಕುಟುಂಬಗಳು ಮೀನುಗಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡಿವೆ. ಇಂತಹ ಕುಟುಂಬಗಳ ಪೈಕಿ ಫಕೀರವ್ವ ಮರಿಯಪ್ಪ ಸೊಂಟಿ ಅವರ ಕುಟುಂಬವೂ ಒಂದು.

ಪರಿಶಿಷ್ಟ ಜಾತಿಗೆ ಸೇರಿರುವ ಫಕೀರವ್ವ ಹಾಗೂ ಮರಿಯಪ್ಪ ದಂಪತಿಗೆ ನಾಲ್ಕು ಜನ ಮಕ್ಕಳು. ಎಲ್ಲ ಸದಸ್ಯರು ಒಟ್ಟಾಗಿದ್ದು, ಒಟ್ಟಾಗಿ ದುಡಿದು, ಬಂದ ಹಣದಲ್ಲೇ ಸಂಸಾರ ನಡೆಸುತ್ತಿದ್ದಾರೆ.

ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕುಟುಂಬ, ಎಷ್ಟೇ ದುಡಿದರೂ ತಿಂಗಳಿಗೆ ₹6 ಸಾವಿರದಿಂದ
₹7 ಸಾವಿರದಷ್ಟು ಮಾತ್ರ ಆದಾಯ ಸಿಗುತ್ತಿತ್ತು. ಮೀನುಗಾರಿಕೆ ನಡೆಸುವವರ ಸಂಖ್ಯೆ ಹೆಚ್ಚಾಗಿದ್ದು ಹಾಗೂ ಸತತ ಬರದ ಪರಿಸ್ಥಿತಿ ಫಕೀರವ್ವ ಅವರ ಕುಟುಂಬಕ್ಕೆ ತೀವ್ರ ಸಂಕಷ್ಟವನ್ನು ತಂದೊಡ್ಡಿತು.

ಮಳೆಯ ಕೊರತೆಯಿಂದಾಗಿ ಕಳೆದ ಎರಡ್ಮೂರು ವರ್ಷಗಳಿಂದ ಜಲಾಶಯ ಭರ್ತಿಯಾಗಿರಲಿಲ್ಲ. ಹೀಗಾಗಿ ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಬದುಕು ಕಂಡುಕೊಂಡಿದ್ದ ಕುಟುಂಬಕ್ಕೆ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿತು. ಇದ್ದ ಐದು ಎಕರೆ ಜಮೀನಿನಲ್ಲಿಯೂ ಮಳೆಯ ಕೊರತೆಯಿಂದಾಗಿ ಹೇಳಿಕೊಳ್ಳುವ ರೀತಿಯಲ್ಲಿ ಬೆಳೆ ಬರಲಿಲ್ಲ.

ಎರಡು ವರ್ಷಗಳ ಹಿಂದೆ ಪಶುಭಾಗ್ಯ ಯೋಜನೆಯಡಿ ₹ 1.20 ಲಕ್ಷ ವೆಚ್ಚದಲ್ಲಿ (₹ 60 ಸಾವಿರ ಸಬ್ಸಿಡಿ ಮತ್ತು ಉಳಿದ ಮೊತ್ತ ಬ್ಯಾಂಕ್‌ ಮೂಲಕ ಸಾಲ) ಚಿಕ್ಕಬಳ್ಳಾಪುರದಿಂದ ಎರಡು ಆಕಳುಗಳನ್ನು ಖರೀದಿಸಿ ತಂದಿತು ಈ ಕುಟುಂಬ. ಕುಟುಂಬದ ಸದಸ್ಯರೆಲ್ಲ ಕಷ್ಟಪಟ್ಟು ದುಡಿದ ಪರಿಣಾಮ ಇದೀಗ ಆಕಳುಗಳ ಸಂಖ್ಯೆ ಈಗ ಒಂಬತ್ತಕ್ಕೆ ಏರಿದೆ. ಹೈನುಗಾರಿಕೆ ಮೂಲಕ ತಿಂಗಳಿಗೆ ₹ 35 ಸಾವಿರದಷ್ಟು ಆದಾಯ ಬರುತ್ತಿದೆ.

ಸಣ್ಣ ರೈತರಿಗಾಗಿ ಜಾರಿಗೊಳಿಸಿರುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಫಕೀರವ್ವ ಕೊಳವೆಬಾವಿ ಕೊರೆಸಲು ಸಹಾಯ ಪಡೆದಿದ್ದು, ಕೊಳವೆ ಬಾವಿಯಲ್ಲಿ ಎರಡು ಇಂಚಿನಷ್ಟು ನೀರು ಬಂದಿದೆ. ಐದು ಎಕರೆ ಜಮೀನಿನಲ್ಲಿ 1.5 ಎಕರೆಯಷ್ಟು ಭೂಮಿಯಲ್ಲಿ ಮೇವು ಬೆಳೆಯಲಾಗುತ್ತಿದೆ. ಒಂದು ಎಕರೆಯಲ್ಲಿ ತರಕಾರಿ ಹಾಗೂ ಉಳಿದ ಭೂಮಿಯಲ್ಲಿ ಮನೆಗೆ ಬೇಕಾದ ಆಹಾರಧಾನ್ಯ ಬೆಳೆಯಲಾಗುತ್ತಿದೆ. ತರಕಾರಿ ಬೆಳೆಯಿಂದ ಮನೆಯ ದೈನಂದಿನ ಖರ್ಚಿಗೆ ಅಲ್ಪ ಸ್ವಲ್ಪ ಆದಾಯ ಬರುತ್ತಿದೆ.

ಗೋಧಿ ಬೂಸಾವನ್ನು ಮಾತ್ರ ಖರೀದಿಸಿ ತಂದು ಹಾಕಲಾಗುತ್ತದೆ. ಪ್ರತಿದಿನ ಸುಮಾರು 80 ರಿಂದ 85 ಲೀಟರ್‌ ಹಾಲು ಉತ್ಪಾದನೆ ಆಗುತ್ತದೆ. ₹ 25ಕ್ಕೆ ಲೀಟರ್‌ನಂತೆ ಹಾಲು ಮಾರಾಟವಾಗುತ್ತದೆ.

ಆಕಳುಗಳನ್ನು ಸುರಕ್ಷಿತವಾಗಿರಿಸಲು ಕೊಟ್ಟಿಗೆ ನಿರ್ಮಿಸಬೇಕೆಂಬ ಕನಸು ನನಸಾಗಿಸಲು ಈ ಕುಟುಂಬಕ್ಕೆ ನೆರವಾಗಿದ್ದು, ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ. ₹35 ಸಾವಿರ ಮೊತ್ತವನ್ನು ಯೋಜನೆಯಡಿ ಕೂಲಿಯಾಗಿ ಪಡೆದ ಕುಟುಂಬ, ಸ್ವಲ್ಪ ಸಾಲದ ಹಣವನ್ನೂ ಸೇರಿಸಿ, ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಂಡಿದೆ.

ಆಕಳುಗಳಿಗೆ ವಿಮೆ: ಫಕೀರವ್ವ ತಮ್ಮ ಆಕಳುಗಳಿಗೆ ಗಿಣಿಗೇರಾದ ಎಸ್‌ಬಿಐ ಬ್ಯಾಂಕ್‌ನಲ್ಲಿ ವಿಮೆ ಮಾಡಿಸಿದ್ದಾರೆ. ಪ್ರತಿ ಆಕಳಿಗೆ ವರ್ಷಕ್ಕೆ ₹2300 ಪ್ರೀಮಿಯಂ ಪಾವತಿಸುತ್ತಿದ್ದು, ಆಕಸ್ಮಿಕವಾಗಿ ಅಥವಾ ಇನ್ಯಾವುದೇ ಕಾರಣಕ್ಕೆ ಆಕಳು ಮೃತಪಟ್ಟರೆ, ವಿಮೆ ನೆರವಿಗೆ ಬರುತ್ತದೆ ಎನ್ನುವುದು ಇವರ ಆಶಯ.

ಫಕೀರವ್ವ ಅವರ ಮಗ ಹನುಮಂತಪ್ಪ ಅವರೇ, ಹೈನುಗಾರಿಕೆಯ ಬಹಳಷ್ಟು ಹೊಣೆಯನ್ನು ಹೊತ್ತಿದ್ದು, ಹೆಚ್ಚೇನು ವಿದ್ಯಾಭ್ಯಾಸ ಪಡೆದಿಲ್ಲದಿದ್ದರೂ, ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೇರಿ ಆ್ಯಪ್ ಬಳಸುತ್ತಿದ್ದಾರೆ. ಈ ಮೊಬೈಲ್ ಆ್ಯಪ್‌ನಲ್ಲಿ ಕನ್ನಡ ಭಾಷೆಯಲ್ಲಿಯೇ ಮಾಹಿತಿ ಲಭ್ಯವಾಗುವುದರಿಂದ, ಆಕಳುಗಳ ತಳಿ, ಆಹಾರ ಪದ್ಧತಿ, ಮೇವು ನಿರ್ವಹಣೆ, ರೋಗಗಳ ನಿರ್ವಹಣೆ, ಕಾಲಕಾಲಕ್ಕೆ ಯಾವ ಲಸಿಕೆ ಹಾಕಬೇಕು ಎನ್ನುವುದರ ಮಾಹಿತಿ ಸಿಗುತ್ತಿದೆ.

‘ಮೀನುಗಾರಿಕೆಯಿಂದ ನಮ್ಮ ಕುಟುಂಬ ದುಡಿಯುತ್ತಿದ್ದುದು, ಊಟಕ್ಕೆ, ಬಟ್ಟೆಗೆ ಸರಿಯಾಗುತ್ತಿತ್ತು. ಕುಟುಂಬದಲ್ಲಿನ ಮದುವೆ ಮತ್ತಿತರ ಶುಭಕಾರ್ಯಗಳಿಗೆ ಮತ್ತೆ ನಾವು ಸಾಲ ಮಾಡಬೇಕಾಗುತ್ತಿತ್ತು. ಪಶುಭಾಗ್ಯ ಯೋಜನೆ ನಮ್ಮ ಕುಟುಂಬದ ಕೈಹಿಡಿದಿದೆ. ಇದೀಗ ನಾವೂ ಅಲ್ಪ-ಸ್ವಲ್ಪ ಹಣದ ಮುಖ ನೋಡುತ್ತಿದ್ದೇವೆ’ ಎಂದು ಹೇಳುತ್ತಾರೆ ಫಕೀರವ್ವ. ‘ಶ್ರಮವಹಿಸಿ ಶ್ರದ್ಧೆಯಿಂದ ದುಡಿದರೆ, ಸರ್ಕಾರದ ಯೋಜನೆಗಳು, ನಮ್ಮಂಥವರ ಕೈಹಿಡಿಯುವುದರಲ್ಲಿ ಅನುಮಾನವಿಲ್ಲ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ.

ಪಶುಭಾಗ್ಯ ಯೋಜನೆಯಿಂದ ಕೃಷಿ ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗಿದೆ. ಕೂಲಿಕಾರರಾಗಿ ದುಡಿದು, ಬಂದ ಆದಾಯ ಕುಟುಂಬದ ನಿರ್ವಹಣೆಗೆ ಸಾಕಾಗದೆ, ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದ ಫಕೀರವ್ವ ಅವರಂತಹ ಅನೇಕ ಬಡ ಕುಟುಂಬಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎನ್ನುತ್ತಾರೆ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ. ಸಂಪರ್ಕಕ್ಕೆ: 89708 42282

Comments
ಈ ವಿಭಾಗದಿಂದ ಇನ್ನಷ್ಟು
ಸಿರಿಧಾನ್ಯದ ನೂರು ಮುಖಗಳು

ಕೃಷಿ
ಸಿರಿಧಾನ್ಯದ ನೂರು ಮುಖಗಳು

23 Jan, 2018
ಸಿರಿಧಾನ್ಯಗಳ ಐಸಿರಿ

ಕೃಷಿ
ಸಿರಿಧಾನ್ಯಗಳ ಐಸಿರಿ

16 Jan, 2018
ಗಂಟೆಗೆ 60 ಮರಗಳ ಅಡಿಕೆ ಕೊಯ್ಲು

ಕೃಷಿ
ಗಂಟೆಗೆ 60 ಮರಗಳ ಅಡಿಕೆ ಕೊಯ್ಲು

16 Jan, 2018
ಬಿಸಿಲ ನಾಡಿನಲ್ಲೂ ಜೇನಿನ ಹೊಳೆ

ಕೃಷಿ
ಬಿಸಿಲ ನಾಡಿನಲ್ಲೂ ಜೇನಿನ ಹೊಳೆ

9 Jan, 2018
ಮರೆಯಾದ ಸುಗ್ಗಿ ಕಣಗಳು

ಕೃಷಿ
ಮರೆಯಾದ ಸುಗ್ಗಿ ಕಣಗಳು

9 Jan, 2018