ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಟಪಟ ಮಾತಿನ ಚಿನಕುರುಳಿಗಳು

Last Updated 13 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಆಟ–ಪಾಠದೊಂದಿಗೆ ಹವ್ಯಾಸವನ್ನೂ ಮುನ್ನಡೆಸುವ ಛಲ ಅವರಿಗಿದೆ. ಅಂತಹ ‘ಸೆಲಬ್ರಿಟಿಗಳು’ ಮಕ್ಕಳ ದಿನದ ನೆಪದಲ್ಲಿ ತಮಗನಿಸಿದ್ದನ್ನು ಇಲ್ಲಿ ಹಂಚಿಕೊಂಡಿದ್ದಾರೆ...

‘ನಾನು ಡಾನ್ಸ್‌ ಮಾಡ್ತೇನೆ’
‘ಹಾಯ್‌... ನಾನು ಆದ್ಯ. ಸರಿಗಮಪ ಲಿಟ್ಲ್‌ ಚಾಂಪ್ಸ್‌ನಲ್ಲಿ ನಿಮ್ಮ ಅಚ್ಚುಮೆಚ್ಚಿನ ಮಗುವಾಗಿದ್ದ ಆದ್ಯ ನಾನು. ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಗೆ ಹಾಡು, ಡಾನ್ಸ್‌ ಜೊತೆಗೆ ತುಂಬಾ ಕಾರ್ಯಕ್ರಮ ಇುತ್ತೆ. ನಮಗೆಲ್ಲ ಸಿಹಿ ಕೊಡ್ತಾರೆ. ನಾನು ‘ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ’ ಹಾಡು ಹೇಳಬೇಕು ಅಂದುಕೊಡಿದ್ದೀನಿ. ಡಾನ್ಸ್‌ ಕೂಡಾ ಮಾಡ್ತೀನಿ. ನನಗೆ ಆ್ಯಕ್ಟಿಂಗ್‌ ಮಾಡೊದಂದ್ರೆ ತುಂಬಾ ಇಷ್ಟ. ಆದರೆ ಅವತ್ತು ಮಾಡೋದಕ್ಕೆ ಆಗತ್ತೋ, ಇಲ್ವೊ ಗೊತ್ತಿಲ್ಲ.

ಈಗ ನಾನು ‘ಭೀಮಸೇನ ನಳಮಹರಾಜ’, ‘ಹೋಂ ಮಿನಿಸ್ಟರ್‌’ ಸಿನಿಮಾದಲ್ಲಿ ಅಭಿನಯಿಸ್ತಾ ಇದೀನಿ. ಆ್ಯಕ್ಟಿಂಗ್‌ ಜೊತೆಗೆ ಓದುವುದು ನನಗೆ ಕಷ್ಟ ಅನಿಸುವುದೇ ಇಲ್ಲ. ಎರಡನ್ನೂ ಇಷ್ಟಪಟ್ಟು ಮಾಡ್ತೀನಿ. ಟೀವಿ ನೋಡ್ತಾನೇ ಆ್ಯಕ್ಟ್‌ ಮಾಡೋದು ಕಲಿತುಕೊಂಡೆ. ಇದರ ಜೊತೆಗೆ ಆಟ ಕೂಡ ಆಡ್ತೀನಿ. ನನಗೆ ಜಾರುಬಂಡಿ, ಜೋಕಾಲಿ ಆಡೋದು ಇಷ್ಟ. ಆಮೇಲೆ... ಅಪ್ಪ ದಿನಾಲೂ ಸೈಕಲ್‌ ಹೊಡೆಯಲು ಕರೆದುಕೊಂಡು ಹೋಗುತ್ತಾರೆ. ನಾನು ಓದಿ ಡಾಕ್ಟರ್‌, ಸಿಂಗರ್‌, ಟೀಚರ್‌ ಮೂರೂ ಆಗಬೇಕು ಅಂದುಕೊಂಡಿದ್ದೇನೆ. ನಾನು ಹೊರಗೆ ಹೋದಾಗ ಜನ ನನ್ನ ಕೆನ್ನೆಯನ್ನು ಜೋರಾಗಿ ಚಿವುಟುತ್ತಾರೆ. ಒಂದು ಸಲ ಶಾಲೆ ಹತ್ತಿರ ಒಂದು ಹುಡುಗಿ ಎಷ್ಟು ಜೋರಾಗಿ ಕೆನ್ನೆಗೆ ಪಿಂಚ್‌ ಮಾಡಿಬಿಟ್ಳು ಗೊತ್ತಾ. ಆದರೂ ನಾನು ಏನೂ ಅಂದಿಲ್ಲ. ನಾನು ಜನರ ಹತ್ತಿರ ಚೆನ್ನಾಗಿ ಮಾತಾಡ್ತೀನಿ.
– ಆದ್ಯ, ಉಡುಪಿ

*


‘ಹೆಲಿಕಾಫ್ಟರ್‌ ಮೇಲೆ ಕೂರಬೇಕು’
ಟೀಚರಿಗೆಲ್ಲ ಮಕ್ಕಳು ಗಿಫ್ಟ್‌ ಕೊಟ್ಟರೆ ಅದು ಟೀಚರ್ಸ್‌ ಡೇ. ಮಕ್ಕಳಿಗೆಲ್ಲ ಟೀಚರ್ಸ್‌ ಗಿಫ್ಟ್‌ ಕೊಟ್ಟರೆ ಅದು ಚಿಲ್ಡ್ರನ್ಸ್ ಡೇ. ನಾನು ಮಕ್ಕಳ ದಿನಾಚರಣೆಗೆ ಡಾನ್ಸ್‌, ಆ್ಯಕ್ಟಿಂಗ್‌ ಎಲ್ಲಾ ಮಾಡ್ತೇನೆ. ‘ಸಂಗೀತ ನಾ ಹಾಡಿದೆ’.. ಹಾಡನ್ನು ನಾನು ಕಲ್ತಿದ್ದೇನೆ. ನನಗೆ ಆ್ಯಕ್ಟಿಂಗ್‌ ಮಾಡಿ ಓದುವುದಕ್ಕೆ ಒಂದು ಡ್ರಾಪ್‌ ಕೂಡ ಕಷ್ಟ ಆಗಲ್ಲ. ನಾನೇ ಕ್ಲಾಸಿಗೆ ರ‍್ಯಾಂಕ್‌ ಗೊತ್ತಾ. ಎಲ್ಲಾದರಲ್ಲೂ ಔಟ್‌ ಆಫ್‌ ಔಟ್‌ ಅಂಕ ಬರತ್ತೆ. ನಾನು ಹೈಪರ್‌ ಆ್ಯಕ್ಟಿವ್‌ ಅಂಥ ಅಪ್ಪ ಹೇಳ್ತಾರೆ. ಅದಕ್ಕೆ ಡ್ರಾಮ ಮಾಡೋದಕ್ಕೆ ಕರೆದುಕೊಂಡು ಹೋದ್ರು. ನಾನು ಆಯ್ಕೆಯಾದೆ. ನನಗೆ ನನಗೆ ಕ್ರಿಕೆಟ್‌, ಫ್ರಾಗ್‌ ರೇಸ್‌, ಶೂಟಿಂಗ್‌ ಆಟ ಇಷ್ಟ. ನಾನು ಓದಿ ಮಿಲಿಟರಿ ಸೇರುತ್ತೇನೆ. ನನಗೆ ಒಂದು ಕನಸಿದೆ, ಅದೇನು ಗೊತ್ತಾ, ಹೆಲಿಕಾಫ್ಟರ್‌ ಮೇಲೆ ಕೂತುಕೊಂಡು ಹೋಗಬೇಕು. ಅದರ ಮೇಲೆ ಕಡ್ಡಿ ಇರುತ್ತದ್ದಲ್ಲ ಅದನ್ನು ಗಟ್ಟಿಯಾಗಿ ಹಿಡ್ಕೊಂಡ್ರೆ ನಾನು ಬೀಳೊಲ್ಲ. ಮತ್ತೇ... ಏಣಿ ಕೊಟ್ರೆ ಮೇಲೆ ಕೆಳಗೆ ಓಡಾಡಬಹುದು.. ಅಲ್ವಾ?
– ಅಚಿಂತ್ಯಾ, ಮೈಸೂರು

*


‘ಅಭಿಮಾನಿಗಳಿಗೆ ಅಷ್ಟೂ ಮಾಡದಿದ್ರೆ ಹೇಗೆ ಹೇಳಿ’
ನಾನು ಈಗ ಹೊಸ ಶಾಲೆಗೆ ಸೇರಿದ್ದೇನೆ. ಅದಕ್ಕೆ ಇಲ್ಲಿ ಹೇಗೆ ಮಕ್ಕಳ ದಿನಾಚರಣೆ ಆಚರಿಸುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ಮೊದಲಿನ ಶಾಲೆಯಲ್ಲಿ ಸಿಹಿ ಕೊಟ್ಟು, ಡಾನ್ಸ್‌ ಮಾಡಿಸ್ತಿದ್ರು. ನನಗೆ ಆ್ಯಕ್ಟಿಂಗ್‌ ಮಾಡುವುದಕ್ಕೆ ಮೊದಲು ಅಪ್ಪ ಕಲಿಸಿದ್ರು. ಮತ್ತೇ ನಾನೇ ಕಲಿತುಕೊಂಡೆ. ಬಾರ್ಬಿ, ಅಡುಗೆ ಸೆಟ್‌ ಇದ್ರೆ ಸಾಕು ನನಗೆ ಆಟ ಆಡೋಕೆ. ಮನೆ ಹತ್ತಿರ ಆಟ ಆಡೋಕ್ಕೆ ಯಾರೂ ಫ್ರೆಂಡ್ಸ್ ಇಲ್ಲ. ಶಾಲೆಯಲ್ಲಿ ಎಲ್ಲರೂ ನನ್ನ ಸ್ನೇಹಿತರೇ. ಮೊದಲು ಡಾನ್ಸ್‌ ಕಲಿಯಲು ಹೋಗುತ್ತಿದ್ದೆ. ಆದರೆ ಈಗ ಹೋಗಲ್ಲ. ಮನೆಯಲ್ಲಿಯೇ ಕಲರಿಂಗ್‌ ಮಾಡುತ್ತೇನೆ. ನನಗೆ ಐಎಎಸ್ ಅಫೀಸರ್‌ ಆಗಬೇಕಂತ ಆಸೆ. ನಾನಿರುವುದು ಮಂಗಳೂರಿನಲ್ಲಿ ಶೂಟಿಂಗ್‌ ಇದ್ದಾಗ ಬೆಂಗಳೂರಿಗೆ ಬರ‍್ತೇನೆ. ‘ಅಸತೋಮ ಸದ್ಗಮಯ’, ‘ಗೋಲ್‌ಮಾಲ್‌’, ‘ಭೀಮಸೇನ ನಳಮಹರಾಜ’ ಸಿನಿಮಾದಲ್ಲಿ ನಟಿಸ್ತಿದ್ದೇನೆ. ಟೀವಿಯಲ್ಲಿ ಬರುತ್ತೇನೆ ಅಲ್ವಾ ಅದಕ್ಕೆ ಎಲ್ಲಿ ಹೋದರೂ, ತುಂಬಾ ಜನ ಮಾತಾಡ್ಸಕ್ಕೆ ಬರ‍್ತಾರೆ. ಕೆನ್ನೆ ಹಿಂಡುತ್ತಾರೆ. ಕೆಲವೊಂದು ಸಲ ನೋವಾಗತ್ತೇ. ಆದರೆ ನಾನು ಸುಮ್ಮನೆ ಇರುತ್ತೇನೆ. ನಾವು ದೊಡ್ಡ ಸ್ಟಾರ್‌ಗಳ ಜೊತೆ ಫೋಟೊ ತೆಗೆಸಿಕೊಳ್ಳೋದು, ಹಾಯ್‌ ಹೇಳೋದು ಮಾಡುತ್ತೀವಲ್ವಾ. ಹಾಗೆ ನನ್ನ ಅಭಿಮಾನಿಗಳು ನನ್ನ ಜತೆ ನಡ್ಕೋತಾರೆ. ನನ್ನ ಅಭಿಮಾನಿಗಳಿಗೆ ಅಷ್ಟು ಮಾಡದಿದ್ದರೆ ಹೇಗೆ ಹೇಳಿ?
–ಚಿತ್ರಾಲಿ, ಮಂಗಳೂರು

*


‘ನಾನು ತುಂಬಾ ಬ್ಯುಸಿ’
ನಮಸ್ತೆ ಮೇಡಮ್‌.. ಹೇಗಿದ್ದೀರಾ.. ನಾನು ಮಕ್ಕಳ ದಿನಾಚರಣೆಗೆ ಬಿಳಿ ಡ್ರೆಸ್‌ ಮತ್ತೇ ಶೂ ಹಾಕಿಕೊಂಡು ಹೋಗ್ತೇನೆ. ಅಲ್ಲಿ ಏನೇನು ಮಾಡಿಸ್ತಾರೋ ನನಗೆ ಗೊತ್ತಿಲ್ಲ. ನಮ್ಮ ಶಾಲೆಯಲ್ಲಿ ಎಲ್ಲರನ್ನೂ ಒಟ್ಟಿಗೆ ನಿಲ್ಲಿಸಿ ಫೋಟೊ ತೆಗಿಸ್ತಾರೆ,  ಚಪ್ಪಾಳೆ ಹೊಡಿಸುತ್ತಾರೆ. ಮತ್ತೆ ಅಲ್ಲಿ ಚಾಚಾ ನೆಹರೂ ಫೋಟೊ ಇರುತ್ತದೆ. ಹಾಡು ಹೇಳಿಸಬಹುದು ಅನಿಸುತ್ತದೆ. ನಾನು ಹಾಡು ಹೇಳುತ್ತೇನೆ. ನನಗೆ ಆ್ಯಕ್ಟಿಂಗ್‌ ಮಾಡೋದಂದ್ರೆ ತುಂಬಾ ಇಷ್ಟ. ಮೊದಲು ಮನೆಯಲ್ಲೆ ಆ್ಯಕ್ಟಿಂಗ್‌ ಮಾಡ್ತಿದ್ದೆ. ಅಜ್ಜಿ ಟೀವಿಯಲ್ಲಿ ಆ್ಯಕ್ಟಿಂಗ್‌ ಮಾಡು ಅಂತ ಹೇಳಿ ಕಳುಹಿಸಿದ್ರು. ಹೋಂ ವರ್ಕ್‌ ಆದ ಮೇಲೆ ಅಣ್ಣನ ಜೊತೆ ಆಟ ಆಡ್ತೇನೆ. ನನಗೆ ಸೈಕಲ್‌, ಕಣ್ಣಾಮುಚ್ಚಾಲೆ ಆಟ ತುಂಬಾ ಇಷ್ಟ. ಅಮೃತಾ, ಪ್ರೀತಿ ನನ್ನ ಫ್ರೆಂಡ್ಸ್‌. ಅವರ ಜೊತೆ ಜೂಟಾಟ ಆಡ್ತೇನೆ. ಶಾಲೆ, ಧಾರಾವಾಹಿ, ಸಿನಿಮಾ, ಭರತನಾಟ್ಯ, ಕಾರ್ಯಕ್ರಮ...ಹೀಗೆ ಪೂರ್ತಿ ದಿನ ನಾನು ಬ್ಯುಸಿಯಾಗಿರ್ತೀನಿ ಗೊತ್ತಾ.
– ರೇವತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT