ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೆಚ್ಚಿನ ಚಾಪ್ಲಿನ್ ಅಂಕಲ್

Last Updated 13 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅದೊಂದು ಇಂಟರ್‌ನೆಟ್ ಸೆಂಟರ್. ಆಧಾರ್-ಪಾನ್ ಕಾರ್ಡ್ ನೋಂದಣಿ ಸೇರಿ ಸಕಲೆಂಟು ಸೇವೆಗಳನ್ನು ಒದಗಿಸುವ ಸೇವಾಕೇಂದ್ರ. ಮಗುವನ್ನೂ ಸಂಭಾಳಿಸುತ್ತಿದ್ದ ತಂದೆಯೊಬ್ಬ ಅದನ್ನು ನಿರ್ವಹಿಸುತ್ತಿದ್ದ. ಆತ ಗ್ರಾಹಕರ ಜೊತೆಗೆ ಮಾತನಾಡುವಾಗ ಮಗು ಬಿದ್ದುಬಿದ್ದು ನಗುತ್ತಿತ್ತು. ಏಕೆ ಹೀಗೆ ಅಂತ ಇಣುಕಿ ನೋಡಿದಾಗ ಕಂಡಿದ್ದು ಚಾರ್ಲಿ ಚಾಪ್ಲಿನ್‌ನ ‘ದಿ ಕಿಡ್’.

ಸುಮಾರು ನೂರು ವರ್ಷಗಳಿಂದ ಜಗತ್ತು ಚಾಪ್ಲಿನ್ ಚಿತ್ರಗಳನ್ನು ನೋಡುತ್ತಿದೆ. ಸೊಟ್ಟಗೆ ನಡೆಯುವ, ಮೂತಿ ತಿರುಗಿಸುವ, ಮಗುವನ್ನು ಲಾಲಿಸುವ, ವಾಕಿಂಗ್ ಸ್ಟಿಕ್ ಹಿಡಿದು ತಿರುಗುವ, ತನ್ನದೇ ಶೈಲಿಯಲ್ಲಿ ಡಾನ್ಸು ಮಾಡುವ ಚಾಪ್ಲಿನ್ ಅಂದ್ರೆ ಎಲ್ಲರಿಗೂ ಇಷ್ಟ.

‘ದಿ ಗೋಲ್ಡ್ ರಶ್‌’ನಲ್ಲಿ ನೂಡಲ್ಸ್ ಥರ ಶೂ ಲೇಸ್ ತಿನ್ನುವ, 'ಮಾಡರ್ನ್ ಟೈಮ್ಸ್'ನಲ್ಲಿ ಯಂತ್ರಗಳೊಳಗೆ ಹಾದುಬರುವ, 'ದಿ ಗ್ರೇಟ್ ಡಿಕ್ಟೇಟರ್'ನಲ್ಲಿ ವಿಮಾನವನ್ನು ತಲೆಕೆಳಗಾಗಿ ಹಾರಿಸುವ, 'ಶೋಲ್ಡರ್ ಆರ್ಮ್ಸ್'ನಲ್ಲಿ ಮಸಿ ಮೆತ್ತಿಕೊಂಡು ಓಡುವ ದೃಶ್ಯಗಳು ದೊಡ್ಡವರಿಗಷ್ಟೇ ಅಲ್ಲ, ಮಕ್ಕಳಿಗೂ ನೆಚ್ಚು. ಇವಿಷ್ಟೂ ಚಿತ್ರಗಳು ನಗಿಸುವುದರೊಂದಿಗೆ ತ್ಯಾಗ, ಶಾಂತಿ, ಸಹಬಾಳ್ವೆ, ಸಾಂತ್ವನ, ಕರುಣೆಯ ಆಶಯಗಳನ್ನೂ ನೋಡುವವರ ಮನಸಿಗೆ ನಾಜೂಕಾಗಿ ದಾಟಿಸಿಬಿಡುತ್ತವೆ.

ಮಗು ಮತ್ತು ಚಾಪ್ಲಿನ್ ಎಂದುಕೊಂಡಾಗ ಮನಸಿಗೆ ಥಟ್ಟನೆ ನೆನಪಾಗುವುದು 'ದಿ ಕಿಡ್'. ಅವಿವಾಹಿತ ತಾಯಿಯ ಮಗುವನ್ನು ಅಚಾನಕ್ ಕೈಗೆತ್ತಿಕೊಂಡು, ಅದನ್ನು ಸಾಕುವ ಹೊಣೆ ನಿಭಾಯಿಸಲು ಚಾರ್ಲಿ ಪಡುವ ಪಾಡು ದೇವರಿಗೆ ಪ್ರೀತಿ. ಹಸಿದು ಮಲಗುವ ಬಡವರಿಗೆ ಬೀಳುವ ಕನಸುಗಳು ಹೇಗಿರುತ್ತವೆ ಎನ್ನುವುದನ್ನು ಜಗತ್ತಿಗೆ ಸಾರಿಹೇಳಿದ ಅಪರೂಪದ ಚಿತ್ರವಿದು.

ಬೀದಿಯೊಂದರಲ್ಲಿ ಸಂಚರಿಸುವ ಮಗು ಕಿಟಕಿಗಳಿಗೆ ಕಲ್ಲು ಹೊಡೆಯುತ್ತೆ. ಆಮೇಲೆ ಅದೇ ಬೀದಿಗೆ ಬರುವ ಚಾರ್ಲಿ ಗಾಜು ಬದಲಿಸಿ ಹಣ ಸಂಪಾದಿಸುತ್ತಾನೆ. ಇಂಥ ಕಳ್ಳಾಟಗಳಿಂದ ಬದುಕು ಸಾಗಿಸುವುದು ದುಸ್ತರ ಎನಿಸಿದಾಗ ಬದುಕಿನ ಹಾದಿ ಬದಲಿಸಿಕೊಳ್ಳಲು ಮನಸು ಮಾಡುತ್ತಾನೆ. ಆ ಮಗುವನ್ನು ಅನಾಥಾಶ್ರಮಕ್ಕೆ ಕೊಂಡೊಯ್ಯುವಾಗ ಚಾರ್ಲಿಯ ಪರದಾಟ, ಮಗುವಿನ ಅಳು ಪ್ರೇಕ್ಷಕರ ಮನ ಕಲಕುತ್ತವೆ. ಮಕ್ಕಳಂತೂ ಕಣ್ಣು-ಮೂಗು ಒರೆಸಿಕೊಂಡೇ ಸಿನಿಮಾ ನೋಡುವುದು.

ಮುಂದೊಂದು ದಿನ ಅದೇ ಮಗುವಿನ ತಾಯಿ ಚಾರ್ಲಿಗೆ ಒಲಿಯುತ್ತಾಳೆ ಎಂಬಲ್ಲಿಗೆ ಚಿತ್ರಕ್ಕೆ ಶುಭಂ. ನೋಡುವವರಿಗೂ ನೆಮ್ಮದಿಯ ಭಾವ.

ಮಗು-ತಂದೆಯ ಬಾಂಧವ್ಯಕ್ಕೆ ದೇಹದ ನಂಟು ಇರಲೇಬೇಕೆ? ಅವಿವಾಹಿತ ತಾಯಂದಿರ ಮಾನಸಿಕ ತೊಳಲಾಟ ಹೇಗಿರುತ್ತೆ? ಮಕ್ಕಳ ಮನಸಿಗೆ ಸ್ಪಂದಿಸುವುದು ಎಂದರೇನು? ಇಂಥ ಹಲವು ಪ್ರಶ್ನೆಗಳನ್ನು ಚಾರ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾನೆ.

ಈ ಚಿತ್ರ (The Kid) ಯುಟ್ಯೂಬ್ ನಲ್ಲಿ ಲಭ್ಯವಿದೆ. ನಿಮ್ಮ ಮಗುವಿಗೆ ತೋರಿಸಿ, ನೀವೂ ನೋಡಲು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT