ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಸ್ಥಳೀಯ ಅರ್ಥ ವ್ಯವಸ್ಥೆ ಬೆಲೆ ತೆರಬೇಕೇ?

Last Updated 13 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸರಕು ಮತ್ತು ಸೇವಾ ತೆರಿಗೆಗಳ (ಜಿಎಸ್‌ಟಿ) ಪ್ರಮಾಣವನ್ನು ಈಚೆಗೆ ತಗ್ಗಿಸಿರುವುದಕ್ಕೆ ತಾವೇ ಕಾರಣ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳೆರಡೂ ಹೇಳಿಕೊಂಡಿವೆ. ಎರಡೂ ಪಕ್ಷಗಳು ಹೇಳಿಕೊಂಡಿರುವುದರ ಸತ್ಯಾಸತ್ಯತೆ ಏನೇ ಇರಲಿ, ಜಿಎಸ್‌ಟಿ ಪ್ರಮಾಣದಲ್ಲಿನ ಇತ್ತೀಚಿನ ಬದಲಾವಣೆಗಳು ಒಳ್ಳೆಯವು ಎಂಬುದರಲ್ಲಿ ಅನುಮಾನವಿಲ್ಲ ಎಂಬಂತಿವೆ ಆ ಪಕ್ಷಗಳ ಬಲವಾದ ಸಮರ್ಥನೆಗಳು. ಆದರೆ ಸತ್ಯ ಬೇರೆಯೇ ಇದೆ. ಜಿಎಸ್‌ಟಿಗಾಗಿ ತೋರಿದ ಅವಸರ ಹಾಗೂ ಕೆಲವು ವಸ್ತುಗಳ ಮೇಲಿನ ತೆರಿಗೆ ಹಿಂತೆಗೆತವು ಅರ್ಥ ವ್ಯವಸ್ಥೆಯ (ಅರ್ಥ ವ್ಯವಸ್ಥೆಯ ಬೆಳವಣಿಗೆ ದರ ಈಗಾಗಲೇ ಕುಸಿತ ಕಂಡಿದೆ) ಮೇಲೆ ಭಾರಿ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.

ವಾಸ್ತವದಲ್ಲಿ ಏನಾಗುತ್ತಿದೆ ಎಂಬುದನ್ನು ಕಾಣಲು ನಾವು ಜಿಎಸ್‌ಟಿಯ ಸಂಕೀರ್ಣ ವಿವರಗಳನ್ನು ಬಿಟ್ಟು, ಮೂಲ ಅಂಶಗಳ ಕಡೆ ಗಮನ ನೀಡಬೇಕಿದೆ. ಎರಡು ಆರ್ಥಿಕ ವಾದಗಳನ್ನು ಆಧರಿಸಿದೆ ಜಿಎಸ್‌ಟಿ: ತೆರಿಗೆ ಮೌಲ್ಯವರ್ಧನೆಯ ಪ್ರಯೋಜನಗಳು ಮತ್ತು ‘ಒಂದು ದೇಶ, ಒಂದೇ ತೆರಿಗೆ ವ್ಯವಸ್ಥೆ’ ಎಂಬ ಪರಿಕಲ್ಪನೆ.

ತೆರಿಗೆಯ ಮೌಲ್ಯವರ್ಧನೆ ಪರವಾದ ತರ್ಕವು ಅರ್ಥಶಾಸ್ತ್ರದ ಭಾಷೆಯಲ್ಲಿ ಬಹಳ ಬಲವಾಗಿದೆ. ಅದನ್ನು ಸರಳ ಉದಾಹರಣೆಯೊಂದರ ಮೂಲಕ ವಿವರಿಸಬಹುದು. ಮೂರು ಹಂತಗಳಲ್ಲಿ ತಯಾರಾಗುವ ಉತ್ಪನ್ನವೊಂದನ್ನು ಗಣನೆಗೆ ತೆಗೆದುಕೊಳ್ಳಿ. ಪ್ರತಿ ಹಂತದಲ್ಲಿನ ಮೌಲ್ಯವರ್ಧನೆ ₹ 1,000 ಹಾಗೂ ಅಂತಿಮವಾಗಿ ಸಿಗುವ ಉತ್ಪನ್ನದ ಬೆಲೆಯು ₹ 3,000 ಆಗುತ್ತದೆ ಎಂದು ಭಾವಿಸೋಣ. ಪ್ರತಿ ಹಂತದಲ್ಲೂ ತೆರಿಗೆಯ ಮೌಲ್ಯವರ್ಧನೆ ಶೇಕಡ 10ರಷ್ಟು ಇರುತ್ತದೆ ಎಂದಾದರೆ, ಮೊದಲ ಹಂತದಲ್ಲಿ ಮೂಲ ವಸ್ತುಗಳನ್ನು ಸಿದ್ಧಪಡಿಸಿಕೊಡುವವ ₹ 100 ಪಾವತಿಸುತ್ತಾನೆ. ಎರಡನೆಯ ಹಂತದಲ್ಲಿ ಉತ್ಪನ್ನ ಸಿದ್ಧಪಡಿಸುವವ ₹ 100 ಪಾವತಿಸುತ್ತಾನೆ. ಹಾಗೆಯೇ, ಮೂರನೆಯ ಹಂತದಲ್ಲಿ ಉತ್ಪನ್ನ ಸಿದ್ಧ ಮಾಡುವ ವ್ಯಕ್ತಿ ₹ 100 ಪಾವತಿಸುತ್ತಾನೆ. ಆಗ ಪಾವತಿಸಿದ ತೆರಿಗೆಯ ಒಟ್ಟು ಮೊತ್ತ ₹ 300 ಆಗುತ್ತದೆ.

ಈ ವ್ಯವಸ್ಥೆ ಇಲ್ಲದಿದ್ದಾಗ, ಕಚ್ಚಾ ವಸ್ತುಗಳನ್ನು ಸಿದ್ಧಪಡಿಸಿಕೊಡುವ ವ್ಯಕ್ತಿ ₹ 100 ತೆರಿಗೆ ಪಾವತಿಸಿ, ತನ್ನ ಉತ್ಪನ್ನಕ್ಕೆ ₹ 1,100 ದರ ನಿಗದಿ ಮಾಡುತ್ತಾನೆ. ಎರಡನೆಯ ಹಂತದಲ್ಲಿ ಉತ್ಪನ್ನವನ್ನು ಸಿದ್ಧಪಡಿಸುವ ವ್ಯಕ್ತಿ, ₹ 1,100ಕ್ಕೆ ಕಚ್ಚಾ ವಸ್ತು ಖರೀದಿಸಿ, ತನ್ನ ಪಾಲಿನ ಮೊತ್ತ ₹ 1,000ವನ್ನು ಅದಕ್ಕೆ ಸೇರಿಸುತ್ತಾನೆ. ಈ ಹಂತದಲ್ಲಿನ ಒಟ್ಟು ಮೊತ್ತವಾದ ₹ 2,100ಕ್ಕೆ ಆತ ಶೇಕಡ 10ರಷ್ಟನ್ನು, ಅಂದರೆ ₹ 210ನ್ನು ತೆರಿಗೆ ರೂಪದಲ್ಲಿ ಪಾವತಿಸುತ್ತಾನೆ. ಮೂರನೆಯ ಹಂತದಲ್ಲಿ ಅಂತಿಮ ಉತ್ಪನ್ನ ಸಿದ್ಧಪಡಿಸುವವ, ಎರಡನೆಯ ಹಂತದವನಿಂದ ₹ 2,310ಕ್ಕೆ ಖರೀದಿಸುತ್ತಾನೆ. ಅದಕ್ಕೆ ತನ್ನ ಪಾಲಿನ ₹ 1000ವನ್ನು ಸೇರಿಸುತ್ತಾನೆ. ಆಗ ಅದರ ಮೌಲ್ಯ ₹ 3,310 ಆಗುತ್ತದೆ. ಅದಕ್ಕೆ ಮೂರನೆಯ ಹಂತದವ ಶೇ 10ರಷ್ಟು, ಅಂದರೆ ₹ 331 ತೆರಿಗೆ ಪಾವತಿಸುತ್ತಾನೆ. ಅಂದರೆ, ಮೂರೂ ಹಂತಗಳಲ್ಲಿ ಪಾವತಿಸುವ ಒಟ್ಟು ತೆರಿಗೆಯ ಮೊತ್ತ (ಕಚ್ಚಾ ವಸ್ತುವಿನ ಹಂತದಲ್ಲಿ ₹ 100, ಎರಡನೆಯ ಹಂತದಲ್ಲಿ ₹ 210, ಮೂರನೆಯ ಹಂತದಲ್ಲಿ ₹ 331) ₹ 641 ಆಗುತ್ತದೆ.

ತೆರಿಗೆಗಳ ಒಟ್ಟು ಮೊತ್ತ ₹ 300 ಮಾತ್ರ ಆಗಿರುವ ಕಾರಣ, ತೆರಿಗೆಯ ಮೌಲ್ಯವರ್ಧನೆ ವ್ಯವಸ್ಥೆಯಲ್ಲಿ ತೆರಿಗೆ ಮೊತ್ತ ₹ 341ರಷ್ಟು ಕಡಿಮೆ ಇರುತ್ತದೆ. ಕಡಿಮೆ ತೆರಿಗೆ ಅಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕಡಿಮೆ ಆದಾಯ ಎಂಬುದೂ ಹೌದು. ಆದರೆ, ಕಡಿಮೆ ತೆರಿಗೆಯ ಪ್ರಯೋಜನವು ಗ್ರಾಹಕನಿಗೆ ವರ್ಗಾವಣೆ ಆಗುವ ಕಾರಣ, ಉತ್ಪನ್ನದ ಬೆಲೆ ಕಡಿಮೆ ಆಗಿ, ಬೇಡಿಕೆ ಹೆಚ್ಚಾಗಿ, ಹೆಚ್ಚು ವೇಗದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ನಂಬಲಾಗುತ್ತದೆ. ಇವೆಲ್ಲದರ ಪರಿಣಾಮವಾಗಿ, ಒಟ್ಟು ಆದಾಯದಲ್ಲಿ ಹೆಚ್ಚಳವಾಗುತ್ತದೆ. ಇಷ್ಟೇ ಅಲ್ಲ, ಮೌಲ್ಯವರ್ಧಿಸಿ ತೆರಿಗೆ ಸಂಗ್ರಹಿಸುವ ಮಾದರಿಯು ತೆರಿಗೆ ತಪ್ಪಿಸಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆಯೂ ಇದೆ. ಈ ವ್ಯವಸ್ಥೆಯು ಪ್ರತಿ ಹಂತದಲ್ಲೂ ಹಿಂದಿನ ಹಂತದಲ್ಲಿನ ತೆರಿಗೆ ಬಾಕಿಯನ್ನೂ ಸೇರಿಸಬೇಕು ಎನ್ನುತ್ತದೆ. ಖರೀದಿ ಪಟ್ಟಿಯಲ್ಲಿ ನಮೂದಾಗುವ ಹಿಂದಿನ ಹಂತಗಳಲ್ಲಿನ ತೆರಿಗೆಯನ್ನು ವ್ಯಕ್ತಿ ಹೂಡುವಳಿ ತೆರಿಗೆ ಎಂದು ಪರಿಗಣಿಸಿ, ತನ್ನ ಜಿಎಸ್‌ಟಿಯಿಂದ ಕಡಿತ ಮಾಡಿಕೊಳ್ಳಬಹುದು. ಹಾಗಾಗಿ, ಉತ್ಪನ್ನವನ್ನು ಮಾರಾಟ ಮಾಡುವವ ತಾನು ಖರೀದಿಸಿದ್ದರ ಬಗೆಗಿನ ವಿವರಗಳನ್ನು ಇಡಬೇಕು. ಆ ಮೂಲಕ ತನಗೆ ಪೂರೈಕೆ ಮಾಡಿದವರನ್ನು ತೆರಿಗೆ ಅಧಿಕಾರಿಗಳಿಗೆ ಗುರುತಿಸಿಕೊಡಬೇಕು. ಇದು ತೆರಿಗೆ ಜಾಲವನ್ನು ವಿಸ್ತರಿಸಿ, ಆದಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬ ನಿರೀಕ್ಷೆ ಕೂಡ ಇದೆ.

ಈ ವ್ಯವಸ್ಥೆ ಜಾರಿಗೆ ಬಂದ ತಕ್ಷಣದಿಂದಲೇ ಇದರಲ್ಲಿನ ದೋಷಗಳು ಗೊತ್ತಾದವು. ಮೊದಲ ಹಂತದ ನಂತರದಲ್ಲಿ ಇದ್ದವರು ಮೊದಲು ತೆರಿಗೆ ಪಾವತಿಸಿ, ಹೂಡುವಳಿ ತೆರಿಗೆ ಮೊತ್ತ ವಾಪಸ್‌ ಸಿಗಲು ಕಾಯಬೇಕಿದ್ದ ಕಾರಣ, ಹೂಡುವಳಿ ತೆರಿಗೆಯನ್ನು ತ್ವರಿತವಾಗಿ ಪಡೆಯುವಂತೆ ಆಗಬೇಕಿತ್ತು. ಹಾಗಾಗಿ ಜಿಎಸ್‌ಟಿ ವ್ಯವಸ್ಥೆಯಲ್ಲಿ ತಿಂಗಳಿಗೆ ಮೂರು ಬಾರಿ ತೆರಿಗೆ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಹಿಂದಿನ ತಿಂಗಳ ಮಾರಾಟ ವಿವರಗಳನ್ನು 10ನೆಯ ತಾರೀಕಿನೊಳಗೆ, ಖರೀದಿ ವಿವರಗಳನ್ನು 15ರೊಳಗೆ ಮತ್ತು ಒಟ್ಟು ವಿವರಗಳನ್ನು 20ರೊಳಗೆ ಸಲ್ಲಿಸಬೇಕು. ಈ ವ್ಯವಸ್ಥೆಯಡಿ ಬರುವ ಎಲ್ಲರಲ್ಲೂ ಒಂದು ಹಂತದವರೆಗಿನ ಕಂಪ್ಯೂಟರ್‌ ಜ್ಞಾನ ಇದೆ ಎಂದು ಭಾವಿಸಲಾಗಿತ್ತು. ಆದರೆ ಅಂತಹ ಜ್ಞಾನ ವಾಸ್ತವದಲ್ಲಿ ಇರಲಿಲ್ಲ. ಅಲ್ಲದೆ, ಇದಕ್ಕಾಗಿ ರೂಪಿಸಿದ ತಂತ್ರಾಂಶ ಕೂಡ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ.

ಲೆಕ್ಕ ತಾಳೆಯಾಗದೆ ಇದ್ದಿದ್ದು ಎರಡನೆಯ ಹಾಗೂ ಹೆಚ್ಚು ಗಂಭೀರವಾದ ಸಮಸ್ಯೆ. ಉತ್ಪಾದಕನೊಬ್ಬ ತಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಖರೀದಿಯ ವಿವರಗಳು ಅದನ್ನು ಮಾರಾಟ ಮಾಡಿದ್ದಾನೆ ಎನ್ನಲಾದ ವ್ಯಕ್ತಿಯ ಬಳಿ ಇಲ್ಲದಿದ್ದರೆ ಏನು ಮಾಡುವುದು? ಈಗಿನ ವ್ಯವಸ್ಥೆಯಲ್ಲಿ, ಮುಂದಿನ ಹಂತಗಳಲ್ಲಿ ಖರೀದಿ ಮಾಡುವ ವ್ಯಕ್ತಿ ತೆರಿಗೆ ಪಾವತಿಸಿ, ಹೂಡುವಳಿ ತೆರಿಗೆ ಮೊತ್ತ ವಾಪಸ್ ಬರಲು ಕಾಯುತ್ತ ಕೂರಬೇಕು. ಲೆಕ್ಕ ಇಡದ ಪೂರೈಕೆದಾರನಲ್ಲಿ ಮಾತ್ರವೇ ಅಲ್ಲ ಸಮಸ್ಯೆ ಇರುವುದು. ಮುಂದಿನ ಹಂತದಲ್ಲಿನ ಉತ್ಪಾದಕನು ಹೂಡುವಳಿ ತೆರಿಗೆ ಹಿಂಪಡೆಯಲು ತಪ್ಪು ಮಾಹಿತಿ ನೀಡುತ್ತಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಈ ಸಮಸ್ಯೆಗೆ ಜಿಎಸ್‌ಟಿ ಮಂಡಳಿ ಪ್ರತಿಕ್ರಿಯೆ, ತೆರಿಗೆಯ ಮೌಲ್ಯವರ್ಧನೆಯನ್ನು ಮುಂದೂಡುತ್ತ ಹೋಗುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಅದನ್ನು  ಹಿಂಪಡೆಯುವುದಾಗಿತ್ತು. ಜಿಎಸ್‌ಟಿ ವ್ಯವಸ್ಥೆಯು ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೆ ಬಂದಿರುವ ಕಾರಣ ಈ ಕೆಲಸವನ್ನು ತೀರಾ ನೇರವಾಗಿ ಮಾಡಲು ಆಗುತ್ತಿರಲಿಲ್ಲ. ಹಾಗಾಗಿ, ಈ ವ್ಯವಸ್ಥೆಯ ಭಾಗವಾದ ತೆರಿಗೆಯ ಮೌಲ್ಯವರ್ಧನೆಯನ್ನು ನಿಷ್ಫಲಗೊಳಿಸಲು ಸರಣಿ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. 2018ರ ಮಾರ್ಚ್‌ವರೆಗೆ ಮಾರಾಟದ ವಿವರಗಳನ್ನು ಮಾತ್ರ ಸಲ್ಲಿಸುವುದು ಎಂಬ ತೀರ್ಮಾನ ಕೈಗೊಳ್ಳಲಾಯಿತು. ಖರೀದಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸದಿದ್ದರೆ, ಹೂಡುವಳಿ ತೆರಿಗೆ ಹಿಂಪಡೆಯುವ ಮಾತೇ ಇರುವುದಿಲ್ಲ. ಹಾಗಾಗಿ ಎಲ್ಲ ವಸ್ತುಗಳ ಮೇಲಿನ ತೆರಿಗೆ ಮೌಲ್ಯವರ್ಧನೆ ವಿಚಾರವನ್ನು 2018ರ ಮಾರ್ಚ್‌ವರೆಗೆ ಮುಂದೂಡಲಾಗಿದೆ.

ಜಿಎಸ್‌ಟಿ ಮಂಡಳಿಯು ತೆರಿಗೆಯ ಮೌಲ್ಯವರ್ಧನೆಯಿಂದ ನೀಡುವ ವಿನಾಯಿತಿಯನ್ನೂ ಹೆಚ್ಚಿಸಿದೆ. ಜಿಎಸ್‌ಟಿ ವ್ಯವಸ್ಥೆಯ ರಿಯಾಯಿತಿ ಯೋಜನೆಯ (Composition Scheme) ಅಡಿ, ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆ ವಹಿವಾಟು ನಡೆಸುವವರು ಹಲವು ಬಾರಿ ವಿವರ ಸಲ್ಲಿಸುವ ಅಗತ್ಯವಿಲ್ಲ, ಅವರು ಒಂದು ನಿರ್ದಿಷ್ಟ ಪ್ರಮಾಣದ ತೆರಿಗೆ ಪಾವತಿಸಿದರೆ ಸಾಕು. ಆದರೆ ಹೂಡುವಳಿ ತೆರಿಗೆ ಹಿಂಪಡೆಯುವ ಸೌಲಭ್ಯ ಅವರಿಗೆ ಇಲ್ಲ. ರಿಯಾಯಿತಿ ಯೋಜನೆಯ ಪ್ರಯೋಜನ ಪಡೆಯಲು ₹ 1.5 ಕೋಟಿಯವರೆಗೆ ವಹಿವಾಟು ನಡೆಸುವವರನ್ನೂ ತರುವುದು ಈಚೆಗೆ ಮಾಡಿದ ಬದಲಾವಣೆ. ಮುಂದೆ ಬರಲಿರುವುದರ ಸೂಚನೆಯೆಂಬಂತೆ ಜಿಎಸ್‌ಟಿ ಮಂಡಳಿಯು, ರೆಸ್ಟೊರೆಂಟ್‌ಗಳಿಗೆ ವಿಧಿಸುವ ತೆರಿಗೆಯನ್ನು ತಗ್ಗಿಸಿದೆ, ಅವು ಹೂಡುವಳಿ ತೆರಿಗೆ ಹಿಂಪಡೆಯುವ ಅವಕಾಶ ನಿಲ್ಲಿಸಲು ತೀರ್ಮಾನಿಸಿದೆ. ಹೂಡುವಳಿ ತೆರಿಗೆ ಪ್ರಯೋಜನ ಇಲ್ಲದಿದ್ದಾಗ ತೆರಿಗೆಯು ಮೌಲ್ಯವರ್ಧನೆಗೆ ಮಾತ್ರ ಸೀಮಿತ ಆಗಿರುವುದಿಲ್ಲ.

ತೆರಿಗೆಯ ಮೌಲ್ಯವರ್ಧನೆಯು ಪೂರ್ಣವಾಗಿ ಮರೆಗೆ ಸರಿಯದಿದ್ದರೂ, ಹಿಂದೆ ಸರಿದಿರುವ ಕಾರಣ, ಜಿಎಸ್‌ಟಿ ವ್ಯವಸ್ಥೆ ಎಂಬುದು ಈಗ ‘ಒಂದು ದೇಶ, ಒಂದೇ ತೆರಿಗೆ ವ್ಯವಸ್ಥೆ’ ರೂಪದಲ್ಲಿದೆ. ತೆರಿಗೆ ಪ್ರಮಾಣ ಕಡಿತವನ್ನು ರಾಹುಲ್‌ ಗಾಂಧಿ ಅವರು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲದೆ, ಇಡೀ ದೇಶಕ್ಕೆ ಒಂದೇ ಪ್ರಮಾಣದ ತೆರಿಗೆ ಇರಬೇಕು ಎಂದು ಹೇಳಿದ್ದಾರೆ. ಸರ್ಕಾರ ಹಾಗೂ ಜಿಎಸ್‌ಟಿ ಮಂಡಳಿಯಂತೆಯೇ, ವಾಣಿಜ್ಯ ವಹಿವಾಟು ನಡೆಸುವ ಪ್ರಕ್ರಿಯೆ ಸಲೀಸು ಆಗಬೇಕು, ಮುಖ್ಯವಾಗಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಸಲೀಸಾಗಬೇಕು ಎಂಬುದು ರಾಹುಲ್ ಅವರ ಆಲೋಚನೆಯನ್ನೂ ಪ್ರಭಾವಿಸಿರುವಂತಿದೆ. ಒಂದೇ ಪ್ರಮಾಣದ ತೆರಿಗೆಯಿಂದಾಗಿ, ಭಾರತದಲ್ಲಿ ಹಣ ಹೂಡಿಕೆ ಮಾಡಿ ಯಾವ ಪ್ರದೇಶದಲ್ಲೇ ಕಾರ್ಖಾನೆ ಆರಂಭಿಸಿದರೂ, ಪರೋಕ್ಷ ತೆರಿಗೆಗಳ ವಿಚಾರದಲ್ಲಿ ವ್ಯತ್ಯಾಸ ಆಗುವುದಿಲ್ಲ.

ಇವೆಲ್ಲವುಗಳ ಪರಿಣಾಮವು ದೇಶದ ಅನೇಕರಿಗೆ ಲಾಭಕರ ಆಗಿರುವುದಿಲ್ಲ. ಪರೋಕ್ಷ ತೆರಿಗೆಗಳು ತಮ್ಮ ಸ್ವರೂಪದಲ್ಲೇ ಅಸಮಾನವಾಗಿರುತ್ತವೆ. ಪರೋಕ್ಷ ತೆರಿಗೆ ಮೊತ್ತವನ್ನು ಉತ್ಪನ್ನ ಖರೀದಿಸುವ ವ್ಯಕ್ತಿ ಪಾವತಿಸುವ ಕಾರಣ, ದೇಶದ ಅತ್ಯಂತ ಶ್ರೀಮಂತನ ಮೇಲೆಯೂ, ಕಡು ಬಡವನ ಮೇಲೆಯೂ ಒಂದೇ ಪ್ರಮಾಣದ ಹೊರೆ ಬೀಳುತ್ತದೆ. ಬಡವರು ಹಾಗೂ ಶ್ರೀಮಂತರು ಬಳಸುವ ವಸ್ತುಗಳನ್ನು ಗುರುತಿಸುವ ಅಗತ್ಯದ ಬಗ್ಗೆ ಜಿಎಸ್‌ಟಿ ಮಂಡಳಿ ಮೇಲೆ ಒತ್ತಡ ಬಂದು, ಸರಕು ಹಾಗೂ ಸೇವೆಗಳ ಮೇಲೆ ಐದು ಹಂತಗಳ (ಶೇ 0, 5, 12, 18 ಮತ್ತು 28) ತೆರಿಗೆ ನಿಗದಿ ಮಾಡಲಾಯಿತು. ಹೆಚ್ಚಿನ ಪ್ರಮಾಣದ ತೆರಿಗೆ ಪಾವತಿಸಬೇಕಿರುವ ಪಟ್ಟಿಯನ್ನು ಈಗಿನ ಬದಲಾವಣೆ ಮೂಲಕ ಕಿರಿದಾಗಿಸಲಾಗಿದೆ.

ಆದರೆ, ಪರೋಕ್ಷ ತೆರಿಗೆಯು ಬಡವನ ಮೇಲೆ ಉಂಟುಮಾಡುವ ‍ಪರಿಣಾಮವು ಆ ತೆರಿಗೆಯನ್ನು ಪಾವತಿಸುವವನ ಮೇಲಷ್ಟೇ ಇರುವುದಿಲ್ಲ. ಇದು ಒಂದು ಸರಕು ಅಥವಾ ಸೇವೆಯ ಮೇಲಿನ ಬೇಡಿಕೆಯ ಮೇಲೆಯೂ ಪರಿಣಾಮ ಬೀರುತ್ತದೆ. ಉದಾಹರಣೆಗೆ, ನಲ್ಲಿ–ಪೈಪುಗಳನ್ನು ಜೋಡಿಸಿಕೊಡುವ ವ್ಯಕ್ತಿಯಿಂದ ಕೆಲಸ ಮಾಡಿಸಿಕೊಳ್ಳುವವರು ಶೇ 18ರಷ್ಟು ತೆರಿಗೆ ಪಾವತಿಸಬಹುದು. ಆದರೆ, ಇಂತಹ ಕೆಲಸ ಮಾಡುವವರು ಅಸಂಘಟಿತ ವಲಯಗಳಲ್ಲೇ ಸಿಗುತ್ತಿದ್ದರೆ, ಈ ಸೇವೆಗಳನ್ನು ಬಳಸುವವರು ತೆರಿಗೆ ಇಲ್ಲದ ಆಯ್ಕೆಗೇ ಮೊರೆ ಹೋಗುತ್ತಾರೆ. ಆನ್‌ಲೈನ್‌ ಮೂಲಕ ಸೇವೆ ಒದಗಿಸುವ ಏಜೆನ್ಸಿಗಳಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡ ಪ್ಲಂಬರ್‌ಗಳು ನಷ್ಟ ಅನುಭವಿಸಬೇಕಾಗುತ್ತದೆ.

ಬೃಹತ್ತಾದ ಹಾಗೂ ವೈವಿಧ್ಯಮಯವಾಗಿರುವ ಒಂದು ದೇಶಕ್ಕೆ ಒಂದೇ ಪ್ರಮಾಣದ ತೆರಿಗೆ ವಿಧಿಸುವ ಆಲೋಚನೆಯು ಪ್ರಾದೇಶಿಕ ವೈವಿಧ್ಯ ಒಡ್ಡುವ ಸವಾಲುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ಬಿಹಾರ, ಜಾರ್ಖಂಡ್‌ನಂತಹ ಪೂರ್ವ ಭಾಗದ ರಾಜ್ಯಗಳಲ್ಲಿ ಕಾರ್ಮಿಕರಿಗೆ ವರ್ಷದಲ್ಲಿ ಆರು ತಿಂಗಳಿಗಿಂತ ಕಡಿಮೆ ಅವಧಿಗೆ ಕೆಲಸ ಸಿಗುತ್ತಿದೆ ಎಂದು ಹೇಳಲು ಈಗ ಆಧಾರಗಳು ಹೆಚ್ಚೆಚ್ಚು ಸಿಗುತ್ತಿವೆ. ಹಿಂದುಳಿದಿರುವ ಈ ರಾಜ್ಯಗಳು ಕೈಗಾರಿಕೆಗಳನ್ನು ಆಕರ್ಷಿಸಬೇಕು ಎಂದಾದರೆ, ಅಲ್ಲಿ ಸಾಧ್ಯವಾಗುವ ರಿಯಾಯಿತಿಗಳನ್ನು ನೀಡಲು ಅವಕಾಶ ಇರಬೇಕು. ಆದರೆ, ಜಿಎಸ್‌ಟಿ ವ್ಯವಸ್ಥೆಯಲ್ಲಿ ಪರೋಕ್ಷ ತೆರಿಗೆಗಳ ವಿಚಾರದಲ್ಲಿ ರಿಯಾಯಿತಿ ಘೋಷಿಸಲು ಸಾಧ್ಯವಿಲ್ಲ.

ಸ್ಥಳೀಯ ಆರ್ಥಿಕತೆಗಿಂತಲೂ ಜಾಗತಿಕ ಮಟ್ಟದ ಹೂಡಿಕೆದಾರರ ಹಿತಾಸಕ್ತಿಗಳನ್ನು ಮೇಲ್ಮಟ್ಟದಲ್ಲಿ ಇಡುವ ಕಾರ್ಯತಂತ್ರವನ್ನು ಈ ಹಿಂದೆಯೂ ಅನುಸರಿಸಲಾಗಿತ್ತು. ನಮ್ಮ ಷೇರು ಮಾರುಕಟ್ಟೆಗಳಿಗೆ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಉದ್ದೇಶದಿಂದ, ಪ್ರಾದೇಶಿಕ ಷೇರು ಮಾರುಕಟ್ಟೆಗಳ ಅವಸಾನಕ್ಕೆ ಕಾರಣವಾದ ಪರಿಸ್ಥಿತಿ ಸೃಷ್ಟಿಸಲಾಗಿತ್ತು. ಪ್ರಾದೇಶಿಕ ಷೇರು ಮಾರುಕಟ್ಟೆಗಳು ಕೊನೆಗೊಂಡ ಕಾರಣದಿಂದಾಗಿ, ಸ್ಥಳೀಯ ಕೈಗಾರಿಕೆಗಳಿಗೆ ಆ ಮಾರುಕಟ್ಟೆಗಳ ಅವಕಾಶ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ದೇಶದಲ್ಲಿ ಈಗ ಖಾಸಗಿ ಬಂಡವಾಳ ಹೂಡಿಕೆ ಕಡಿಮೆ ಆಗಿರಲು ಇದೂ ಒಂದು ಕೊಡುಗೆ ನೀಡಿರಬಹುದು. ವಿದೇಶಿ ಬಂಡವಾಳ ಆಕರ್ಷಿಸಲು ಇನ್ನು ಮುಂದೆ ಬೆಲೆ ತೆರಬೇಕಿರುವುದು ಸ್ಥಳೀಯ ಅರ್ಥ ವ್ಯವಸ್ಥೆಗಳು, ಅದರಲ್ಲೂ ಮುಖ್ಯವಾಗಿ ಹೆಚ್ಚು ಹಿಂದುಳಿದ ಪ್ರದೇಶಗಳಲ್ಲಿನ ಅರ್ಥ ವ್ಯವಸ್ಥೆಗಳು ಎನ್ನುವ ಸೂಚನೆಯನ್ನು ಜಿಎಸ್‌ಟಿ ಈಗ ಹೊರಟಿರುವ ದಾರಿಯು ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT