ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಬದುಕು ಕಸಿದ ಬೆಂಕಿ

ಕೋಣನಕುಂಟೆ ಕ್ರಾಸ್‌ ಬಳಿಯ ಗಾರ್ಮೆಂಟ್ಸ್‌ ಕಟ್ಟಡದಲ್ಲಿ ಅವಘಡ
Last Updated 13 ನವೆಂಬರ್ 2017, 20:08 IST
ಅಕ್ಷರ ಗಾತ್ರ

ಬೆಂಗಳೂರು: ಕೋಣನಕುಂಟೆ ಕ್ರಾಸ್‌ ಮೆಟ್ರೊ ಮಾರ್ಗ ಬಳಿಯ ‘ಲೊವೆಬಲ್ ಲಾಂಜರಿ ಲಿಮಿಟೆಡ್‌’ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದೆ. ಅದರಿಂದಾಗಿ 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ.

ಅಶೋಕ ರೆಡ್ಡಿ ಎಂಬುವರಿಗೆ ಸೇರಿದ್ದ ಗಾರ್ಮೆಂಟ್ಸ್‌ನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ನಿಮಿಷದಲ್ಲಿ ಬೆಂಕಿಯ ಕೆನ್ನಾ‌ಲಿಗೆ ಹೆಚ್ಚಾಗಿ, ಇಡೀ ಕಟ್ಟಡವನ್ನು ಆವರಿಸಿತ್ತು. ಅದನ್ನು ಗಮನಿಸಿದ ಭದ್ರತಾ ಸಿಬ್ಬಂದಿಯು ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು 5 ಗಂಟೆಗಳವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಕಟ್ಟಡದ ಮೆಟ್ಟಿಲುಗಳ ಬಳಿ ದಟ್ಟ ಹೊಗೆ ಆವರಿಸಿದ್ದರಿಂದ ಕೆಲಹೊತ್ತು ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ಇದೇ ವೇಳೆ ಇಬ್ಬರು ಸಿಬ್ಬಂದಿ ಅಸ್ವಸ್ಥಗೊಂಡರು. ಸ್ಥಳದಲ್ಲಿದ್ದ ಆಂಬುಲೆನ್ಸ್‌ನಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

‘25 ವರ್ಷಗಳ ಕಟ್ಟಡದಲ್ಲಿ ಈ ಕಾರ್ಖಾನೆ ಇತ್ತು. ಘಟನೆಯಿಂದಾಗಿ ಬಟ್ಟೆಗಳು, ಪೀಠೋಪಕರಣ ಹಾಗೂ ಯಂತ್ರಗಳು ಸುಟ್ಟಿವೆ. ಅವುಗಳ ಮೌಲ್ಯ ಎಷ್ಟು ಎಂಬುದನ್ನು ಮಾಲೀಕರು ನಿಖರವಾಗಿ ಹೇಳಿಲ್ಲ. ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಈ ಅವಘಡ ಸಂಭವಿಸಿರುವ ಅನುಮಾನವಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಕುಮಾರಸ್ವಾಮಿ ಲೇಔಟ್‌ ಪೊಲೀಸರು ತಿಳಿಸಿದರು.

ಕಣ್ಣೀರಿಟ್ಟ ಮಹಿಳಾ ಕಾರ್ಮಿಕರು:100ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು, ಉರಿಯುತ್ತಿದ್ದ ಗಾರ್ಮೆಂಟ್ಸ್ ಕಟ್ಟಡದ ಬಳಿ ಬಂದು ಕಣ್ಣೀರಿಟ್ಟರು.

‘22 ವರ್ಷದಿಂದ ಈ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯ ದುಡಿಮೆಯೇ ಜೀವನಕ್ಕೆ ಆಧಾರ. ಈಗ ಹೆತ್ತ ತಂದೆ–ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಗುತ್ತಿದೆ. ನಾವೆಲ್ಲರೂ ಬೀದಿಗೆ ಬಂದಿದ್ದೇವೆ’ ಎಂದು ಮೇಲ್ವಿಚಾರಕಿ ಶೋಭಾ ಅಳಲು ತೋಡಿಕೊಂಡರು.

‘ದಿನದ ಅನ್ನಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿತ್ತು. ಜನರೇಟರ್‌ನಲ್ಲಿ ಉಂಟಾದ ಶಾರ್ಟ್‌ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ₹20 ಕೋಟಿಯಷ್ಟು ನಷ್ಟವಾಗಿದೆ. ಗಾರ್ಮೆಂಟ್ಸ್ ಮಾಲೀಕರು ಮುಂಬೈನಲ್ಲಿದ್ದು, ಅವರು ನಗರಕ್ಕೆ ಬಂದ ಬಳಿಕ ನಮ್ಮ ಸಮಸ್ಯೆಯನ್ನು  ಹೇಳಿಕೊಳ್ಳಲಿದ್ದೇವೆ’ ಎಂದು ಹೇಳಿದರು.

ಸೌಭಾಗ್ಯಮ್ಮ, ‘14 ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ, ಇಲ್ಲಿಗೆ ಬಂದಾಗ ಮರೆಯುತ್ತಿದ್ದೆ. ವೇತನವೂ ಚೆನ್ನಾಗಿತ್ತು’ ಎಂದರು.

ಸುಮಂಗಲ, ‘ಇಲ್ಲಿಯ ದುಡಿಮೆ ನಂಬಿ ಬದುಕು ಸಾಗಿಸುತ್ತಿದ್ದೆವು. ಈಗ ನಮಗ್ಯಾರು ಗತಿ’ ಎಂದು ಕಣ್ಣೀರಿಟ್ಟರು.

* ಗಾರ್ಮೆಂಟ್ಸ್‌ನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳುತ್ತಿದ್ದೇವೆ. ಹಲವು ಮಾಲೀಕರು ಅದನ್ನು ನಿರ್ಲಕ್ಷಿಸುತ್ತಿದ್ದು, ಇಂಥ ಅವಘಡಕ್ಕೆ ಕಾರಣವಾಗುತ್ತಿದೆ.

  – ಮಾರ್ಕಂಡಯ್ಯ, ಅಗ್ನಿಶಾಮಕ ದಳದ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT