ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೋಮೆಟ್ರಿಕ್‌ಗೆ ಸರದಿ ಸಾಲು

Last Updated 14 ನವೆಂಬರ್ 2017, 4:57 IST
ಅಕ್ಷರ ಗಾತ್ರ

ವಿಜಯಪುರ: ಪಡಿತರ ತೆಗೆದುಕೊಳ್ಳಬೇಕಾದರೆ ಪ್ರತಿ ತಿಂಗಳು ಕಡ್ಡಾಯವಾಗಿ ಬಯೋಮೆಟ್ರಿಕ್ ನೀಡಬೇಕು ಎನ್ನುವ ಅವೈಜ್ಞಾನಿಕ ನಿಯಮ ರದ್ದುಗೊಳಿಸಬೇಕು ಎಂದು ಬುಳ್ಳಹಳ್ಳಿ ಗ್ರಾಮದ ನಾಗರಿಕರಾದ ಗೋಪಿ, ರತ್ನಪ್ಪ ಒತ್ತಾಯಿಸಿದ್ದಾರೆ.

ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಂದು ಯೂನಿಟ್ ಗೆ 7ಕೆ.ಜಿ.ಅಕ್ಕಿ ವಿತರಣೆ ಮಾಡುತ್ತಿರುವ ಸರ್ಕಾರ, ಪಡಿತರ ಚೀಟಿಗಳಲ್ಲಿರುವ ನಾಗರಿಕರು ಯಾರಾದರೊಬ್ಬರು ಕಡ್ಡಾಯವಾಗಿ ಬಯೋಮೆಟ್ರಿಕ್ ನೀಡಬೇಕು. ಇಲ್ಲವಾದರೆ ಅವರಿಗೆ ಆಹಾರ ಧಾನ್ಯ ವಿತರಣೆಯಾಗುವುದಿಲ್ಲ ಎಂಬ ನಿಯಮ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

‘ಕೂಲಿ ಮಾಡುವ ನಾವು ಬಯೋಮೆಟ್ರಿಕ್ ನೀಡುವುದಕ್ಕೆ ದಿನವೆಲ್ಲಾ ಸರದಿ ಸಾಲಿನಲ್ಲಿ ನಿಲ್ಲಬೇಕು. ಬಯೋಮೆಟ್ರಿಕ್  ನೀಡಿದ ನಂತರ  ಕೊಡುವ ಟೋಕನ್ ತೆಗೆದುಕೊಂಡು ಹೋದರೆ ಮಾತ್ರ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಸಿಗುತ್ತದೆ. ಇಲ್ಲವಾದರೆ ವಾಪಸು ಕಳುಹಿಸಲಾಗುತ್ತದೆ. ಟೋಕನ್ ಆಕಸ್ಮಿಕ ನೀರಿನಲ್ಲಿ ಒದ್ದೆಯಾದರೆ, ಇಲ್ಲವೆ ಕಳೆದು ಹೋಗಿ ಯಾರ ಕೈಗಾದರೂ ಸಿಕ್ಕರೆ, ಅವರೇ ರೇಷನ್ ತೆಗೆದುಕೊಳ್ಳಬಹುದು. ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ’ ಎಂಬುದು ಸ್ಥಳೀಯರ ಅಳಲು.

ಮೊದಲು ಪಡಿತರ ಕಾರ್ಡ್ ತೆಗೆದುಕೊಂಡು ನ್ಯಾಯಬೆಲೆ ಅಂಗಡಿಗೆ ಹೋದರೆ ಕಾರ್ಡ್ ನಂಬರ್ ಬರೆದುಕೊಂಡು, ಹಣ ಪಾವತಿಸಿದರೆ ಪಡಿತರ ಸಿಗುತ್ತಿದ್ದು,  ಈಗ ಒಂದು ದಿನ ಬಯೋಮೆಟ್ರಿಕ್  ನೀಡಬೇಕು. ಎರಡು ದಿನ ಬಿಟ್ಟು ಆಹಾರ ಪಾದಾರ್ಥ ಸಿಗುತ್ತದೆ. ಬಯೋಮೆಟ್ರಿಕ್ ಕೊಡುವಾಗಲೇ ಪಡಿತರಕ್ಕಾಗಿ ಹಣ ಪಾವತಿ ಮಾಡಬೇಕು.

ಟೋಕನ್ ಕಳೆದು ಹೋದರೆ ಪಡಿತರ ವಾಪಸು ಹೋಗಲಿದೆ ಎನ್ನುವುದು ಅವರ ಆತಂಕ. ಈ ಪದ್ಧತಿಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು, ಸರ್ಕಾರ ಮೊದಲಿನ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು ಎಂದು ಸ್ಥಳೀಯರ ಒತ್ತಾಯ.

ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲುಸೀಮೆ ಭಾಗದಲ್ಲಿನ ಜನರಿಗೆ ತಿಂಗಳಲ್ಲಿ ಹತ್ತು ದಿನಗಳ ಕಾಲ ಕೂಲಿ ಕೆಲಸ ಸಿಗುವುದೇ ಹೆಚ್ಚು. ಕೂಲಿ ಸಿಗುವಂತಹ ದಿನಗಳಲ್ಲಿ ಎರಡು ದಿನಗಳು ಬಯೋಮೆಟ್ರಿಕ್ ಕೊಡುವುದಕ್ಕೆ, ಪಡಿತರ ತರುವುದಕ್ಕೆ ಮೀಸಲಿಡಬೇಕು. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಕೂಡಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತ ಹಾಗೂ ಸಚಿವರು ಗಮನಹರಿಸಬೇಕು ಎಂದು ಸ್ಥಳೀಯ ನಿವಾಸಿ ರಾಜಪ್ಪ ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT