ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಬೇಡಿಕೆ ಈಡೇರಿರವುದೇ, ಸ್ಥಳೀಯರ ನಿರೀಕ್ಷೆ

Last Updated 14 ನವೆಂಬರ್ 2017, 4:59 IST
ಅಕ್ಷರ ಗಾತ್ರ

ವಿಜಯಪುರ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಆರಂಭಗೊಳ್ಳುತ್ತಿರುವ ಬೆನ್ನಲ್ಲೇ ತಾಲ್ಲೂಕಿನ ಜನಸಾಮಾನ್ಯರಲ್ಲಿ ಹಲವು ನಿರೀಕ್ಷೆಗಳು ಗರಿಗೆದರಿವೆ. ಚುನಾವಣೆಯ ವರ್ಷ ಆಗಿರುವುದರಿಂದ ಹಲವು ಜ್ವಲಂತ ಸಮಸ್ಯೆಗಳತ್ತ ರಾಜ್ಯ ಸರ್ಕಾರ ಔದಾರ್ಯ ತೋರಿ ಪರಿಹಾರ ಸೂಚಿಸುವುದೇ ಎಂಬುದನ್ನು ಜನ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಸೋಮವಾರದಿಂದ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸುವರ್ಣಸೌಧ ಸಕಲ ಸಜ್ಜಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ ನೀಡುವುದು ಸೇರಿದಂತೆ ಬಯಲುಸೀಮೆಯ ಬಹುದಿನಗಳ ಬೇಡಿಕೆ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಭಾಗದ ಶಾಸಕರು ಗಂಭೀರವಾಗಿ ಚರ್ಚೆ ನಡೆಸಲಿದ್ದಾರೆಯೇ ಎಂಬುದನ್ನು ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ.

ಜನರ ನಿರೀಕ್ಷೆ ಏನು: ಬಯಲು ಸೀಮೆ ಭಾಗಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೆರೆಗಳಲ್ಲಿ ಅಂತರ್ಜಲದ ಮಟ್ಟವನ್ನು ಏರಿಕೆ ಮಾಡುವ ಉದ್ದೇಶದಿಂದ ನೀರು ಹರಿಸಲು ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಯೋಜನೆ ಹಲವು ವರ್ಷಗಳಿಂದ ಕುಂಟಿತವಾಗಿದ್ದು ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿರುವುದು ಜನರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಂತರ್ಜಲ ವೃದ್ಧಿಗಾಗಿ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಹೆಬ್ಬಾಳ, ನಾಗವಾರ ಕೆರೆಗಳ ನೀರನ್ನು ಸಂಸ್ಕರಿಸಿ ಈ ಭಾಗದಲ್ಲಿನ ಕೆರೆಗಳಿಗೆ ತುಂಬಿಸುವಂತಹ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವನಹಳ್ಳಿಯಲ್ಲಿ ಶಂಕುಸ್ಥಾಪನೆ ನೆರವವೇರಿಸಿ ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ.

ಇದರ ಮಧ್ಯೆ ತ್ಯಾಜ್ಯ ನೀರು ಸಂಸ್ಕರಣೆಗೆ ಸಾಕಷ್ಟು ವಿರೋಧಗಳು, ಅಪಸ್ವರಗಳು ಕೇಳಿ ಬರುತ್ತಿವೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಕೂಡಾ ಯೋಜನೆಯನ್ನು ತೀವ್ರವಾಗಿ ಖಂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಭಾಗಕ್ಕೆ ಅಗತ್ಯವಾಗಿರುವ ಕೃಷಿ ಮತ್ತು ಕುಡಿಯುವ ನೀರಿಗಾಗಿ ನೀರು ಒದಗಿಸುವ ನಿಟ್ಟಿನಲ್ಲಿ ನೀರಾವರಿ ತಜ್ಞ ಡಾ.ಪರಮಶಿವಯ್ಯ ಅವರ ವರದಿಯನ್ನೇ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದು, ಅಧಿವೇಶನದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆಯೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರಿಗೆ ತೀರಾ ಹತ್ತಿರವಿದ್ದರು, ಇಲ್ಲಿ ಬೃಹತ್ ಕೈಗಾರಿಕೆಗಳಿಲ್ಲ, ದೇವನಹಳ್ಳಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಾಲಿಟೆಕ್ನಿಕ್ ಕಾಲೇಜುಗಳಿಲ್ಲ, ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪವಾಗಲಿದೆಯೆ ಎನ್ನುವ ನಿರೀಕ್ಷೆ ಜನರದ್ದಾಗಿದೆ.

ಸದಾಶಿವ ಆಯೋಗ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎನ್ನುವ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ ಸಮಾವೇಶ ನೀಡಿದ್ದರು, ಈ ನಡುವೆ ವರದಿ ಶಿಫಾರಸ್ಸಿಗಾಗಿ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಸಚಿವ ಆಂಜನೇಯ ಸೇರಿದಂತೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆಯೆ ಎಂದು ಮಾದಿಗ ಸಮುದಾಯದ ಜನರ ನಿರೀಕ್ಷೆಯಾಗಿದೆ.

ಎಂ.ಮುನಿನಾರಾಯಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT