ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಪಲಾಯನವಾದವನ್ನು ಕಲಿಸಲಿಲ್ಲ

Last Updated 14 ನವೆಂಬರ್ 2017, 5:31 IST
ಅಕ್ಷರ ಗಾತ್ರ

ಬೀದರ್‌: ಮನುಷ್ಯ ಮರೆವಿನ ಪ್ರಾಣಿ. ಅರಿವಿನ ಪ್ರಜ್ಞೆ ಇದ್ದರೂ ಮರೆವಿನಲ್ಲಿರುತ್ತಾನೆ. ಮರೆವು ಎನ್ನುವುದು ಶಿವಕೃಪೆ. ಜಗತ್ತಿನಲ್ಲಿ ಯಾವ ಮನುಷ್ಯನೂ ಪರಿಪೂರ್ಣನಲ್ಲ. ಮಹಾತ್ಮರ ತತ್ವಗಳು ಪರಿಪೂರ್ಣ ಹೊರತು ಮಹಾತ್ಮರು ಪರಿಪೂರ್ಣರಲ್ಲ. ಸೃಷ್ಟಿಯೊಳಗೆ ಉಳಿಯುವಂತಹದ್ದು ಪರಮಾತ್ಮನ ಅಗೋಚರ ಶಕ್ತಿ. ಅಹಂಕಾರದ ಅರಿವಿನ ಪ್ರಜ್ಞೆಯಿದ್ದವರೂ ಅಜ್ಞಾನದಿಂದ ಸುಜ್ಞಾನದ ಕಡೆಗೆ ಬರಬೇಕಾಗಿದೆ.

ಕಾಣದಿರುವ ದೇವರನ್ನು ಹುಡುಕುವ ಬದಲು ಕಾಣುವ ಮನುಷ್ಯರನ್ನು ಪ್ರೀತಿಸಲು ಕಲಿಸಿದವರು ಬಸವಣ್ಣ. ಬಸವಣ್ಣನ ಮನೆಗೆ ಬಂದ ಕಳ್ಳನೂ ಶರಣನಾದನು. ನಮ್ಮ ವರ್ತನೆಗಳನ್ನು ಇಂದು ಪರಿವರ್ತನೆ ಮಾಡಿಕೊಳ್ಳುವ ಅವಶ್ಯಕತೆ ಇದೆ.

ದೇವರು ಸೃಷ್ಟಿ ಮಾಡಿರುವ ಜಗತ್ತು ಅದ್ಭುತವಾಗಿದೆ. ಪರಿವರ್ತನೆ ಎನ್ನುವುದು ದುರ್ಬಲ ಮನಸ್ಸಿನ ಸಂಕೇತವಲ್ಲ. ಕ್ಷಣ ಕ್ಷಣಕ್ಕೂ ಮನುಷ್ಯ ಪರಿವರ್ತನೆಯಾಗಬೇಕು. ಮನುಷ್ಯನಿಗೆ ಅತಂತ್ರ, ಕುತಂತ್ರ, ಪರತಂತ್ರ ಮತ್ತು ಸ್ವತಂತ್ರ ಎನ್ನುವ ತಲೆಗಳಿವೆ. ಬಸವಣ್ಣ ನಮಗೆ ಸ್ವತಂತ್ರ ತಲೆಯನ್ನು ಕೊಟ್ಟಿದ್ದಾನೆ. ಬಸವಣ್ಣ ಪಲಾಯನವಾದವನ್ನು ಕಲಿಸಲಿಲ್ಲ. ಲಿಂಗಾಯತ ಧರ್ಮ ರಾಷ್ಟ್ರ ಧರ್ಮ.

ಈ ದೇಶದಲ್ಲಿರುವ ಚಾತುರ್ವಣ ವ್ಯವಸ್ಥೆಯಿಂದ ಈ ದೇಶ ನಶಿಸಿ ಹೋಗಬಾರದೆಂಬ ಕಾರಣಕ್ಕಾಗಿ ಬಸವಣ್ಣನವರು ಎಲ್ಲರನ್ನೂ ಒಳಗೊಳ್ಳುವ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಬಸವಣ್ಣನ ಧರ್ಮವೆಂದರೆ ಅದು ಮಾನವೀಯತೆಯ ಧರ್ಮ. ನಮ್ಮ ಆತ್ಮಶಕ್ತಿಗೆ ಧೈರ್ಯ ತುಂಬಿದ್ದು ಬಸವಣ್ಣ. ವೀರಶೈವ ಎನ್ನುವುದು ಕೇವಲ ಒಂದು ಮತ.

ಅದರೊಂದಿಗೆ ನಮ್ಮ ವಾದ-ವಿವಾದವಿಲ್ಲ. ಬಸವಣ್ಣನ ಧರ್ಮವನ್ನು ಬೇರೆ ಬೇರೆ ಧರ್ಮಗಳೊಂದಿಗೆ ತರ್ಕಿಸಿ ನೋಡಬೇಕು. ವೇದ-ಉಪನಿಷತ್ತುಗಳನ್ನು ಮೀರಿ ಬಸವಣ್ಣ ಏನು ಹೇಳಿದರು ಎನ್ನುವುದು ಚರ್ಚಿತವಾಬೇಕು.

ಬಸವಣ್ಣ ಲಿಂಗಾಯತ ಧರ್ಮವನ್ನು ಕನ್ನಡ ಭಾಷೆಯಲ್ಲಿ ತಂದರು. ಆದರೆ ಅದನ್ನು ಪ್ರಚುರಗೊಳಿಸುವಲ್ಲಿ ಮಠಾಧೀಶರ ಇಚ್ಛಾಶಕ್ತಿಯ ಕೊರತೆ ಇತ್ತು. ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದರೆ ತನು, ಮನ, ಭಾವ ತುಂಬಿಕೊಳ್ಳುವುದು ಎಂದರ್ಥ. ಬಸವಣ್ಣನಿಗೆ ಜಗದ್ಗುರು ಪಟ್ಟ ಬೇಕಾಗಿರಲಿಲ್ಲ. ಕೆಳಗೆ ಬಿದ್ದವರನ್ನು ಎತ್ತುವುದಕ್ಕಾಗಿ, ಅರಿವನ್ನು ತುಂಬುವುದಕ್ಕಾಗಿ ಹೊಸ ಧರ್ಮವನ್ನು ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT