ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಲ್ಲಿ ಘಟಕ ಕಾರ್ಯಾರಂಭ: ಸಚಿವೆ

Last Updated 14 ನವೆಂಬರ್ 2017, 5:36 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ‘ಕುದೇರು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಹಾಲು ಒಕ್ಕೂಟದ ಕಟ್ಟಡದ ಮುಂದುವರಿದ ಕಾಮಗಾರಿಗೆ ರಾಜ್ಯ ಸರ್ಕಾರ ₹50 ಕೋಟಿ ನೀಡಿದ್ದು, ಕಟ್ಟಡ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡು, ಮಾರ್ಚ್ ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ’ ಎಂದು ಸಚಿವೆ ಎಂ.ಸಿ. ಮೋಹನಕುಮಾರಿ ತಿಳಿಸಿದರು.
ಸಮೀಪದ ಕುದೇರು ಗ್ರಾಮದಲ್ಲಿರುವ ಜಿಲ್ಲಾ ಹಾಲು ಒಕ್ಕೂಟ ಕೇಂದ್ರಕ್ಕೆ ಭಾನುವಾರ ಭೇಟಿನೀಡಿ, ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು.

‘ದಿವಂಗತ ಮಹದೇವಪ್ರಸಾದ್ ಅವರ ಕನಸಿನ ಕೂಸಾದ ಪ್ರತ್ಯೇಕ ಹಾಲು ಒಕ್ಕೂಟ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು. ಅವರ ಶ್ರಮದ ಫಲದಿಂದ ಕುದೇರು ಗ್ರಾಮದಲ್ಲಿ ಹಾಲು ಒಕ್ಕೂಟ ಸ್ಥಾಪನೆಯಾಗಿದೆ. ಈಗಾಗಲೇ ಮೈಸೂರು ಒಕ್ಕೂಟದಿಂದ ಪ್ರತ್ಯೇಕಗೊಂಡಿದೆ. ಜೊತೆಗೆ ನೂತನ ಆಡಳಿತ ಮಂಡಳಿಯೂ ಅಸ್ತಿತ್ವದಲ್ಲಿದೆ.

ರಾಜ್ಯ ಸರ್ಕಾರ ಈವರೆಗೆ ನೀಡಿದ್ದ ಅನುದಾನ ಸಂಪೂರ್ಣ ಬಳಕೆಯಾಗಿದ್ದು, ಹಣವಿಲ್ಲದ ಕಾರಣ ಉಳಿದ ಕಾಮಗಾರಿ 6 ತಿಂಗಳಿನಿಂದ ಸ್ಥಗಿತಗೊಂಡಿತ್ತು. ಅದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹50 ಕೋಟಿಯನ್ನು ಸಾಲದ ರೂಪದಲ್ಲಿ ನೀಡಿದ್ದಾರೆ’ ಎಂದರು.

‘ಕರ್ನಾಟಕ ಹಾಲು ಮಹಾ ಮಂಡಲ ವಾಣಿಜ್ಯ ಬ್ಯಾಂಕುಗಳಿಂದ ದೀರ್ಘಾವಧಿ ಸಾಲ ಭರಿಸಲು ಮತ್ತು ಆ ಸಾಲವನ್ನು ಸರ್ಕಾರದಿಂದ ಮರು ಪಾವತಿಸಲು ಆದೇಶ ಹೊರಡಿಸಲಾಗಿದೆ. ಹೀಗಾಗಿ ಕಾಮಗಾರಿ ಭರದಿಂದ ಸಾಗಿದ್ದು, ಅಂತಿಮ ಹಂತದಲ್ಲಿದೆ. ಟೆಟ್ರಾ ಪ್ಯಾಕೆಟ್ ಯೂನಿಟ್, ಹಾಲು ಶಿಥಲೀಕರಣ ಘಟಕ ಸೇರಿದಂತೆ ವಿವಿಧ ಘಟಕಗಳ ನಿರ್ಮಾಣ, ವೈರಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸ್ವತಂತ್ರವಾಗಿ ಮಾರ್ಚ್ ನಿಂದ ಒಕ್ಕೂಟ ಕಾರ್ಯಾರಂಭವಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಇನ್ನೂ ಹೆಚ್ಚಿನ ಅನುದಾನ ಹಾಗೂ ಆಡಳಿತಾತ್ಮಕ ಅನುಮೋದನೆಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಹಾಲು ಮಹಾಮಂಡಲದ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್, ಒಕ್ಕೂಟದ ನಿರ್ದೇಶಕರಾದ ಎಂ.ಎಸ್. ರವಿಶಂಕರ್, ಬಸವರಾಜು, ಸ್ವಾಮಿ, ಮಾದಪ್ಪ, ನಂಜುಂಡಸ್ವಾಮಿ, ಪ್ರಮೋದಾ, ಸುರೇಶ್, ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್, ಉಪ ವ್ಯವಸ್ಥಾಪಕ ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT