ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕ ಪ್ರಾಣಿಗಳ ಚಿಕಿತ್ಸೆಗೂ ಗ್ರಹಣ!

Last Updated 14 ನವೆಂಬರ್ 2017, 6:06 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಪಶು ವೈದ್ಯಕೀಯ ಇಲಾಖೆಯಲ್ಲಿ ಬಹುತೇಕ ಹುದ್ದೆಗಳು ಖಾಲಿ ಇದ್ದು, ಮೂಕ ಪ್ರಾಣಿಗಳ ಚಿಕಿತ್ಸೆಗೂ ಗ್ರಹಣ ಹಿಡಿದಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಎನ್.ಆರ್.ಪುರ, ಮಾಗುಂಡಿ, ಬಾಳೆಹೊನ್ನೂರು, ಕಟ್ಟಿನಮನೆ, ಬೆಳ್ಳೂರು, ಮುತ್ತಿನ ಕೊಪ್ಪ ಗ್ರಾಮಗಳಲ್ಲಿ ಪಶುವೈದ್ಯಕೀಯ ಆಸ್ಪತ್ರೆಗಳಿವೆ. ತಾಲ್ಲೂಕಿನ ಒಟ್ಟು 7 ಪಶುವೈದ್ಯಕೀಯ ವೈದ್ಯರು ಹುದ್ದೆ ಮಂಜೂರಾಗಿದ್ದು, 5 ಹುದ್ದೆಗಳು ಖಾಲಿ ಉಳಿದಿದ್ದು, ಇಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಶುವೈದ್ಯಕೀಯ ಪರೀಕ್ಷರ 4 ಹುದ್ದೆಯಲ್ಲಿ 3 ಖಾಲಿ ಇದ್ದು, ಪಶು ವೈದ್ಯಕೀಯ ಸಹಾಯಕಿಯರ 6ರಲ್ಲಿ 5 ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕ ಒಂದು ಖಾಲಿ ಇದ್ದು, ವಾಹನ ಚಾಲಕ 1 ಹುದ್ದೆ ಖಾಲಿಯಿದೆ. 12 ‘ಡಿ’ ದರ್ಜೆ ಹುದ್ದೆಯಲ್ಲಿ 10 ಖಾಲಿ ಇವೆ. ಜಾನುವಾರು ಅಧಿಕಾರಿಯ 1ಹುದ್ದೆ ಖಾಲಿಯಿದೆ.

ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿ ಹುದ್ದೆ ಖಾಲಿ ಇರುವುದರಿಂದ ಬಹುತೇಕ ಕಡೆ ಇರುವ ವೈದ್ಯರೇ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಹೊರಗುತ್ತಿಗೆ ಆಧಾರದಲ್ಲಿ ಕೆಲವು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಟ್ಟಿನ ಮನೆ ಪಶು ಆಸ್ಪತ್ರೆಯ ವೈದ್ಯ ಡಾ.ರಾಕೇಶ್ ಬಾಳೆಹೊನ್ನೂರು, ಮಾಗುಂಡಿ ವ್ಯಾಪ್ತಿಯಲ್ಲೂ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುತ್ತಿನಕೊಪ್ಪ ಮತ್ತು ಬೆಳ್ಳೂರು ಪಶು ಆಸ್ಪತ್ರೆಗೆ ಶೃಂಗೇರಿಯ ಪಶುವೈದ್ಯಾಧಿಕಾರಿ ಪ್ರಭಾರ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಬಾಳೆಹೊನ್ನೂರು, ಮಾಗುಂಡಿ, ಬೆಳ್ಳೂರು ಗ್ರಾಮದಲ್ಲಿನ ಪಶು ಆಸ್ಪತ್ರೆಯಲ್ಲಿ ಎಲ್ಲಾ ಹುದ್ದೆಗಳು ಖಾಲಿ ಇರುವುದರಿಂದ ಹೊರಗುತ್ತಿಯ ಆಧಾರದಲ್ಲಿ ನೇಮಕವಾಗಿರುವ ಡಿ ದರ್ಜೆ ನೌಕರರಿಂದ ಆಸ್ಪತ್ರೆ ನಿರ್ವಹಿಸುವ ಸ್ಥಿತಿ ಇದೆ.

ಪಶು ವೈದ್ಯಕೀಯ ಇಲಾಖೆಯಲ್ಲಿ ಎಲ್ಲ ಹುದ್ದೆಗಳು ಖಾಲಿ ಇರುವುದರಿಂದ ಇರುವ ಸಿಬ್ಬಂದಿಗೆ ಆಡಳಿತ ನಿರ್ವಹಣೆಯ ಜತೆಗೆ ತುರ್ತು ಸಂದರ್ಭಗಳಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸಾಕಷ್ಟು ಸಮಸ್ಯೆಯಾಗಿದೆ.

ಸಿಬ್ಬಂದಿ ಕೊರತೆಯಿಂದಾಗಿ ಈ ಹಿಂದೆ ವಾರದಲ್ಲಿ 4 ದಿನ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಪಶು ಚಿಕಿತ್ಸಾ ಘಟಕಕ್ಕೆ ವಾಹನದ ಸೌಲಭ್ಯವಿದ್ದರೂ ಈ ಸೇವೆ ಪ್ರಸ್ತುತ ಸಂಪೂರ್ಣ ಸ್ಥಗಿತಗೊಂಡಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಷ್ಟವಾಗುತ್ತಿದೆ ಎಂಬ ಮಾತು ಆಡಳಿತ ವರ್ಗದಲ್ಲಿ ಕೇಳಿಬರುತ್ತಿದೆ.

‘ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಬೇರೆ ಕಡೆ ನಿಯೋಜಿಸಲಾಗಿತ್ತು, ಪುನಾ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸೂಚಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಹೊಸದಾಗಿ ನೇಮಕಾತಿಯಾದವರಿಗೆ ಆದೇಶ ಪತ್ರ ನೀಡುವುದ ರಿಂದ ಸಮಸ್ಯೆ ಬಗೆಹರಿಯಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ತಿಳಿಸಿದರು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಶಾಸಕರ ಹಾಗೂ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಸಹಾಯಕ ಪಶು ವೈದ್ಯಾ ಧಿಕಾರಿ ಡಾ.ವಿಜಯಕುಮಾರ್ ತಿಳಿಸಿದರು. ಸರ್ಕಾರ ಪಶುವೈದ್ಯಕೀಯ ಹುದ್ದೆ ಭರ್ತಿ ಮಾಡಿ ಜಾನುವಾರಗಳ ಆರೋಗ್ಯ ಸೌಲಭ್ಯಕ್ಕೆ ಆದ್ಯತೆ ನೀಡಬೇಕೆಂದು ಸಾರ್ವಜನಿಕರ ಆಗ್ರಹ.
ಕೆ.ವಿ.ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT