ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 20ರಷ್ಟು ರೋಗಿಗಳ ಹೆಚ್ಚಳ

Last Updated 14 ನವೆಂಬರ್ 2017, 6:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ತಿದ್ದುಪಡಿಗೆ ವಿರೋಧಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ‘ಬೆಳಗಾವಿ ಚಲೋ’ದಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ನಗರದ ಭಾಗಶಃ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದವು. ಪರಿಣಾಮವಾಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿಗಳು ಮತ್ತು ಒಳ ರೋಗಿಗಳ ಸಂಖ್ಯೆಯಲ್ಲಿ ತುಸು ಏರಿಕೆ ಕಂಡು ಬಂತು. ಮಧ್ಯಾಹ್ನದ ವೇಳೆಯಲ್ಲಿ ಆಸ್ಪತ್ರೆಯ ಆವರಣ ರೋಗಿಗಳಿಂದ ಭರ್ತಿಯಾಗಿದ್ದು, ಕಂಡು ಬಂತು.

ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ದಿನ ಸಾಮಾನ್ಯವಾಗಿ 700 ರಿಂದ 800 ಹೊರ ರೋಗಿಗಳು ನೋಂದಣಿಯಾಗುತ್ತಾರೆ. ಆದರೆ, ಸೋಮವಾರ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರಿಂದ 1,112 ಹೊರ ರೋಗಿಗಳು ನೋಂದಣಿ ಮಾಡಿಸಿದ್ದರು. ಒಳ ರೋಗಿಗಳಲ್ಲಿ ಶೇ 50ರಷ್ಟು ಹೆಚ್ಚು ರೋಗಿಗಳು ದಾಖಲಾಗಿದ್ದರು.

‘ಪ್ರತಿ ದಿನ 35ರಿಂದ 40 ರೋಗಿಗಳು ಒಳರೋಗಿಗಳಾಗಿ ದಾಖಲಾಗುತ್ತಾರೆ. ಇಂದು 82 ರೋಗಿಗಳು ದಾಖಲಾಗಿದ್ದಾರೆ’ ಎಂದು ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯ (ಆರ್‌.ಎಂ.ಒ) ಡಾ. ಆನಂದ್ ಪ್ರಕಾಶ್ ಮಾಹಿತಿ ನೀಡಿದರು. ‘ನಾಲ್ಕು ಹೆರಿಗೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಒಂದು ಶಸ್ತ್ರಚಿಕಿತ್ಸೆ ಮಾಡಿ ಡೆಲಿವರಿ ಮಾಡಿಸಲಾಯಿತು’ ಎಂದು ಅವರು ತಿಳಿಸಿದರು.

‘ಬೆಳಗಾವಿ ಚಲೋ’ ತೂಗು ಫಲಕ: ಮುಂಜಾನೆಯಿಂದಲೇ ಪತಂಜಲಿ ಆಸ್ಪತ್ರೆ, ಕೃಷ್ಣ ನರ್ಸಿಂಗ್ ಹೋಂ, ರವಿ ನರ್ಸಿಂಗ್ ಹೋಮ್, ಉದಯ ನರ್ಸಿಂಗ್ ಹೋಮ್, ವಾಸವಿ ಡಯಾಗ್ನಸ್ಟಿಕ್, ಕಾರ್ತಿಕ್ ಡಯಾಗ್ನಸ್ಟಿಕ್, ವಾಸವಿ ಲ್ಯಾಬ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳೂ ಬಂದ್ ಆಗಿದ್ದವು. ಆಸ್ಪತ್ರೆಗಳ ಬಾಗಿಲ ಮೇಲೆ ಬೆಳಗಾವಿ ಚಲೋಗೆ ಹೋಗಿರುವ ಹಿನ್ನೆಲೆಯಲ್ಲಿ ಬಂದ್ ಮಾಡಿದ್ದೇವೆ ಎಂಬ ಫಲಕವನ್ನು ತೂಗು ಹಾಕಲಾಗಿತ್ತು.

ಬಸವೇಶ್ವರ ಆಸ್ಪತ್ರೆಯಲ್ಲಿ ಶೇ 60ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಶೇ 40ರಷ್ಟು ವೈದ್ಯರು ಮತ್ತು ಸಿಬ್ಬಂದಿ ಬೆಳಗಾವಿ ಚಲೋದಲ್ಲಿ ಪಾಲ್ಗೊಂಡಿದ್ದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ಸತ್ಯನಾರಾಯಣ್ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಸಂದರ್ಭದಲ್ಲಿ ರೋಗಿಗಳಿಗೆ ಯಾವುದೇ ಕೊರತೆಯಾಗದಂತೆ ನಿರ್ವಹಿಸಲಾಯಿತು. ಬೇರೆ ಆಸ್ಪತ್ರೆಗಳಿಂದಲೂ ಬಂದಂತಹ ರೋಗಿಗಳಿಗೂ ಚಿಕಿತ್ಸೆ ನೀಡಲಾಗಿದೆ. ಸ್ಕ್ಯಾನಿಂಗ್ ಸೇರಿದಂತೆ ಪ್ರಮುಖ ಪರೀಕ್ಷೆಗಳಿಗಾಗಿಯೂ ಬೇರೆ ಆಸ್ಪತ್ರೆ ರೋಗಿಗಳು ನಮ್ಮಲ್ಲಿಗೆ ಬಂದಿದ್ದರು ಎಂದು ಸತ್ಯನಾರಾಯಣ್ ವಿವರಣೆ ನೀಡಿದರು.

ಹೊಸದುರ್ಗ
ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರೋಗಿಗಳು ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದರು. ಮುರುಗೇಶ್‌ ನರ್ಸಿಂಗ್‌ ಹೋಂ, ಮಾರುತಿ ನರ್ಸಿಂಗ್‌ ಹೋಂ, ರಾಯ್ಕರ್‌ ನರ್ಸಿಂಗ್‌ ಹೋಂ, ಶಾರದ ನರ್ಸಿಂಗ್‌ ಹೋಂ ಸೇರಿದಂತೆ 15ಕ್ಕೂ ಅಧಿಕ ಖಾಸಗಿ ಕ್ಲಿನಿಕ್‌ಗಳ ಸೇವೆ ಸ್ಥಗಿತಗೊಂಡಿದ್ದವು. ಇದರಿಂದ ರೋಗಿಗಳು ಸಾರ್ವಜನಿಕ ಆಸ್ಪತ್ರೆಗೆ ಧಾವಿಸಿ, ಚಿಕಿತ್ಸೆ ಪಡೆದರು.

ಸರ್ಕಾರಿ ಆಸ್ಪತ್ರೆಯಲ್ಲಿ 8 ವಿವಿಧ ವೈದ್ಯರು ಸೇವೆ ಸಲ್ಲಿಸಿದ್ದಾರೆ. ಸೋಮವಾರ ಪಟ್ಟಣದಲ್ಲಿ ಸಂತೆ ದಿನ ಹಾಗೂ ಖಾಸಗಿ ಕ್ಲಿನಿಕ್ ಬಂದ್‌ ಆಗಿದ್ದರಿಂದ ಸ್ವಲ್ಪ ಹೆಚ್ಚಿಗೆ ರೋಗಿಗಳು ಬಂದಿದ್ದರು. ‘ಇಂದು 882 ಹೊರ ರೋಗಿಗಳು, 58 ಒಳ ರೋಗಿಗಳು ದಾಖಲಾಗಿದ್ದಾರೆ. ಎಲ್ಲಾ ರೋಗಿಗಳಿಗೆ ಸಮರ್ಪಕವಾಗಿ ಸೇವೆ ಒದಗಿಸಲಾಗಿದೆ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶಿವಾನಂದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಳಕಾಲ್ಮುರು
ಖಾಸಗಿ ಆಸ್ಪತ್ರೆಗಳ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಖಾಸಗಿ ವೈದ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸಿದರು. ಹೀಗಾಗಿ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗಿರುವ ಬಗ್ಗೆ ವರದಿಯಾಗಿಲ್ಲ. ಸರ್ಕಾರ ಸ್ಪಂದಿಸದಿದ್ದಲ್ಲಿ ಸಂಘ ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಖಾಸಗಿ ವೈದ್ಯರು ಪತ್ರಿಕೆಗೆ ತಿಳಿಸಿದ್ದಾರೆ.

ಹೊಳಲ್ಕೆರೆ
ಪಟ್ಟಣದಲ್ಲಿ ಮಧ್ಯಾಹ್ನದ ನಂತರ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ‘ಆಸ್ಪತ್ರೆಗಳನ್ನು ಬಂದ್ ಮಾಡಬೇಕೆಂಬ ನಿರ್ದೇಶನ ಇರಲಿಲ್ಲ. ಆದರೂ ‘ಬೆಳಗಾವಿ ಚಲೋ’ ಯಶಸ್ವಿಗೊಳಿಸಲು ಆಸ್ಪತ್ರೆ ಬಂದ್ ಮಾಡಲಾಗಿತ್ತು’ ಎಂದು ಬಾಲಾಜಿ ಕ್ಲಿನಿಕ್ ವೈದ್ಯ ಡಾ. ಮಂಜುನಾಥ್ ತಿಳಿಸಿದರು.

‘ಬೆಳಿಗ್ಗೆ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಗಳನ್ನು ಮುಚ್ಚಲಾಗಿತ್ತು. ಪರಿಣಾಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಶೇ 20ರಷ್ಟು ಹೊರ ಹಾಗೂ ಒಳ ರೋಗಿಗಳ ಸಂಖ್ಯೆ ಏರಿಕೆಯಾಗಿತ್ತು’ ಎಂದು ಸರ್ಕಾರಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ತುರುವನೂರ
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಪ್ರತಿ ದಿನಕ್ಕಿಂತ ಶೇ 30ರಷ್ಟು ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು ಎಂದು ವೈದ್ಯಾಧಿಕಾರಿ ಡಾ. ಓಂಕಾರ ಮೂರ್ತಿ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ಸಮೀಪವಿರುವ ಗ್ರಾಮವಾದ್ದರಿಂದ, ಬಹುತೇಕ ರೋಗಿಗಳು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಿದ್ದರು. ಅಲ್ಲಿ ಆಸ್ಪತ್ರೆಗಳು ಬಂದ್ ಆದಕಾರಣ, ಈ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ರೋಗಿಗಳು ಹೆಚ್ಚಾಗಿ ದಾಖಲಾಗಿದ್ದರು ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT