ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಮುಷ್ಕರ: ಸೇವೆಯಲ್ಲಿ ವ್ಯತ್ಯಯ

Last Updated 14 ನವೆಂಬರ್ 2017, 6:18 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಂಗಳು ಸೋಮವಾರ ಹಮ್ಮಿಕೊಂಡಿದ್ದ ಮುಷ್ಕರದಿಂದ ವೈದ್ಯಕೀಯ ಸೇವೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯವಾಯಿತು. ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಖಾಸಗಿ ನರ್ಸಿಂಗ್‌ ಹೋಂ ಅಸೋಸಿಯೇಷನ್‌ ನೇತೃತ್ವದಲ್ಲಿ ಬೆಳಗಾವಿ ಚಲೋ ಹಮ್ಮಿಕೊಂಡಿದ್ದರ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಆಸ್ಪತ್ರೆ, ನರ್ಸಿಂಗ್‌ ಹೋಂಗಳು ಬಾಗಿಲು ಮುಚ್ಚಿದ್ದವು.

‘ಕರ್ನಾಟಕ ಸರ್ಕಾರ ಜಾರಿಗೆ ತರಲು ಹೊರಟಿರುವ ಕರಾಳ ಮಸೂದೆಯು ಸಾರ್ವಜನಿಕರಿಗೆ, ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಮರಣಶಾಸನವಾಗಿದ್ದು, ಇದನ್ನು ಪ್ರತಿಭಟಿಸಿ ಆಸ್ಪತ್ರೆ ಬಂದ್ ಮಾಡಲಾಗಿದೆ’ ಎಂಬ ಬರಹದ ಭಿತ್ತಿಪತ್ರಗಳನ್ನು ಆಸ್ಪತ್ರೆ, ನರ್ಸಿಂಗ್‌ ಹೋಂಗಳ ಬಾಗಿಲುಗಳಿಗೆ ಅಂಟಿಸಲಾಗಿತ್ತು. ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಬಂದವರು ಸರ್ಕಾರಿ ಆಸ್ಪತ್ರೆಗಳಿಗೆ ತೆರಳುತ್ತಿದ್ದ ದೃಶ್ಯ ನಗರದ ಪಿ.ಜೆ.ಬಡಾವಣೆಯಲ್ಲಿ ಕಂಡುಬಂತು.

‘ಇದು ಒಂದು ದಿನದ ಮುಷ್ಕರವಾಗಿದ್ದರಿಂದ ಜಿಲ್ಲೆಯಲ್ಲಿ ಅಂತಹ ಗಂಭೀರ ಪರಿಣಾಮ ಬೀರಿಲ್ಲ. ಮುಷ್ಕರ ಮುಂದುವರಿದರೆ ಸಮಸ್ಯೆ ಎದುರಾಗಬಹುದು. ಜಿಲ್ಲಾ ಆಸ್ಪತ್ರೆ ಒಳಗೊಂಡಂತೆ ಸರ್ಕಾರಿ ಆಸ್ಪತ್ರೆಗಳಿಗೆ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿಕಿತ್ಸೆ ಪಡೆಯಲು ಬಂದಿದ್ದರು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಕಷ್ಟು ವೈದ್ಯರು ಮನೆಯಲ್ಲೂ ಚಿಕಿತ್ಸೆ ನೀಡುತ್ತಾರೆ. ಅಲ್ಲದೇ, ಜನರು ಈಗ ವಾಟ್ಸ್‌ಆ್ಯಪ್‌ ಮೂಲಕವೂ ವೈದ್ಯರಿಂದ ಕಾಯಿಲೆಗೆ ಸಲಹೆ ಪಡೆದುಕೊಳ್ಳುತ್ತಾರೆ. ಹಾಗಾಗಿ, ಅಂತಹ ಗಂಭೀರ ಪರಿಣಾಮ ಎದುರಾಗಿಲ್ಲ. ಜಿಲ್ಲಾ ಆಸ್ಪತ್ರೆ ಜತೆಗೆ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆ ಹಾಗೂ ಬಾಪೂಜಿ ಆಸ್ಪತ್ರೆಗಳು ಸೋಮವಾರ ಸೇವೆ ನೀಡಿವೆ’ ಎಂದು ಹೇಳಿದರು. ಮುಷ್ಕರದ ಮಧ್ಯೆಯೇ ಪಿ.ಜೆ.ಬಡಾವಣೆಯಲ್ಲಿರುವ ಕೆಲ ಮಕ್ಕಳ ಆಸ್ಪತ್ರೆಗಳು ಬಾಗಿಲು ತೆರೆದು ಸೇವೆ ನೀಡಿದವು. ಈ ಆಸ್ಪತ್ರೆಗಳಲ್ಲಿ ಎಂದಿಗಿಂತ ಹೆಚ್ಚಿನ ಜನ ಇದ್ದರು.

ಇಂದಿನಿಂದ ಸೇವೆ ಲಭ್ಯ: ಮಂಗಳವಾರದಿಂದ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಂಗಳು ಎಂದಿನಂತೆ ಸೇವೆ ನೀಡಲಿವೆ ಎಂದು ಜಿಲ್ಲಾ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಗಣೇಶ್‌ ಇಡಗುಂಜಿ ತಿಳಿಸಿದರು. ‘ಬೆಳಗಾವಿಗೆ ದಾವಣಗೆರೆ ಜಿಲ್ಲೆಯಿಂದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ಜತೆ ಕೆಲವು ಹಿರಿಯ ವೈದ್ಯರೂ ಬಂದಿದ್ದಾರೆ. ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ್ದಾರೆ.

ಮಸೂದೆ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಹಾಗಾಗಿ ಜಿಲ್ಲಾವಾರು ಸರದಿಯಂತೆ ಉಪವಾಸ ಸತ್ಯಾಗ್ರಹ ನಡೆಸಲು ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ನಮ್ಮ ಜಿಲ್ಲೆಯ ಸರದಿ ಬಂದಾಗ ನಾವೂ ಬೆಳಗಾವಿಗೆ ಹೋಗಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತೇವೆ’ ಎಂದರು.

‘ಸರ್ಕಾರ ತರುತ್ತಿರುವ ಕಾಯ್ದೆಗೆ ನಮ್ಮ ವಿರೋಧವಿಲ್ಲ. ಆದರೆ, ತಿದ್ದುಪಡಿಯ ಅಂಶಗಳಿಗೆ ವಿರೋಧವಿದೆ. ರೋಗಿಗೆ ನಿಗದಿತ ಅವಧಿಯೊಳಗೆ ಚಿಕಿತ್ಸೆ ನೀಡದಿದ್ದರೆ, ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವುದು ಸರಿಯಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT