ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತ

Last Updated 14 ನವೆಂಬರ್ 2017, 6:23 IST
ಅಕ್ಷರ ಗಾತ್ರ

ದಾವಣಗೆರೆ: ಮೆಕ್ಕೆಜೋಳದ ಬೆಲೆ ದಿಢೀರ್ ಕುಸಿತವಾಗಿದ್ದು, ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆದು ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲೇ ಅತಿಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆ ದಾವಣಗೆರೆ. ಬರಗಾಲ, ರೋಗಬಾಧೆ, ಭದ್ರಾ ಜಲಾಶಯದ ನೀರಿನ ಅಲಭ್ಯತೆಯ ನಡುವೆಯೂ ಜಿಲ್ಲೆಯಲ್ಲಿ ಈ ಬಾರಿ 1.75 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಆದರೆ, ಬೆಲೆ ಕುಸಿತ ರೈತರನ್ನು ಕಂಗೆಡಿಸಿದೆ.

ಅಕ್ಟೋಬರ್‌ ಕೊನೆ ವಾರದಿಂದ ಕಟಾವು ಆರಂಭವಾಗಿದ್ದು, ಪ್ರತಿದಿನ ಎಪಿಎಂಸಿಗೆ ಸಾವಿರಾರು ಕ್ವಿಂಟಲ್‌ ಆವಕ ಬರುತ್ತಿದೆ. ಆದರೆ, ಉತ್ತಮ ಬೆಲೆ ಸಿಗುತ್ತಿಲ್ಲ. ತಿಂಗಳ ಹಿಂದೆ ಕ್ವಿಂಟಲ್‌ಗೆ ₹ 1,400ರ ಆಸುಪಾಸಿನಲ್ಲಿದ್ದ ದರವು ಸದ್ಯಕ್ಕೆ ₹ 1,000ಕ್ಕೆ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಬೆಳೆಗಾರರು.

‘ಮಳೆಯ ಕೊರತೆಯಿಂದ ಮೂರು ಹಂಗಾಮಿನಲ್ಲಿ ಈ ಭಾಗದ ರೈತರು ಬಿತ್ತನೆ ಮಾಡಿಲ್ಲ. ಈ ಬಾರಿ ಸುರಿದ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಆದರೆ, ದರ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯದ ದರದಲ್ಲಿ ಮಾರಾಟ ಮಾಡಿದರೆ, ಖರ್ಚು ಮಾಡಿದ ಹಣವೂ ಕೈಸೇರುವುದಿಲ್ಲ. ಮಾರದಿದ್ದರೆ ಸಾಲದ ಹೊರೆ ಹೆಚ್ಚಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತ ಮುಖಂಡ ಬಿ.ಎಂ.ಸತೀಶ್‌.

‘ಜಿಲ್ಲೆಯಲ್ಲಿ ಈಗಾಗಲೇ ಶೇ 40ರಷ್ಟು ಕಟಾವು ಮುಗಿದಿದ್ದು, ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ರಾಜ್ಯ ಸರ್ಕಾರ ತುರ್ತಾಗಿ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ರೈತರ ಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ’ ಎನ್ನುತ್ತಾರೆ ಅವರು. ‘ಮಾರುಕಟ್ಟೆಯ ಮೇಲೆ ದಲ್ಲಾಳಿಗಳು ಸಂಪೂರ್ಣ ನಿಯಂತ್ರಣ ಸಾಧಿಸಿದ್ದು, ಆವಕ ಹೆಚ್ಚಾಗು ತ್ತಿದ್ದಂತೆ ದಿಢೀರ್ ಬೆಲೆ ಕಡಿತಗೊಳಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ದಾಸ್ತಾನು ಮಾಡುತ್ತಿದ್ದಾರೆ. ಸರ್ಕಾರ ತಡವಾಗಿ ಖರೀದಿ ಕೇಂದ್ರಗಳನ್ನು ತೆರೆದರೆ ರೈತರ ಹೆಸರಲ್ಲಿ ಮೆಕ್ಕೆಜೋಳ ಮಾರಾಟ ಮಾಡಿ ವರ್ತಕರು ಲಾಭ ಮಾಡಿಕೊಳ್ಳಲಿದ್ದಾರೆ’ ಎಂಬುದು ಅವರ ಆತಂಕವಾಗಿದೆ.

‘ಕ್ವಿಂಟಲ್‌ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ₹ 1,450 ನಿಗದಿಗೊಳಿಸಿದ್ದು, ಇದಕ್ಕೆ ಪ್ರೋತ್ಸಾಹಧನ ಸೇರಿಸಿ ಕ್ವಿಂಟಲ್‌ಗೆ ₹ 2,000ದಂತೆ ರಾಜ್ಯ ಸರ್ಕಾರ ಖರೀದಿಸಬೇಕು. ಹಿಂದೆಯೂ ಸರ್ಕಾರ ಖರೀದಿ ಕೇಂದ್ರದ ಮೂಲಕವೇ ಮೆಕ್ಕೆಜೋಳ ಕೊಂಡು, ಬಳಿಕ ಟೆಂಡರ್ ಆಹ್ವಾನಿಸಿ ಹೆಚ್ಚಿನ ಬೆಲೆಗೆ ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡಿತ್ತು. ಆದರೆ, ಈ ಬಾರಿ ಮಾತ್ರ ಖರೀದಿಗೆ ಆಸಕ್ತಿ ತೋರುತ್ತಿಲ್’ಲ ಎಂದು ಬೇಸರ ವ್ಯಕ್ತಪಡಿಸಿದರು.

ತಿಂಗಳ ಹಿಂದೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡು ರೈತರು ಹೈರಾಣಾಗಿದ್ದರು. ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿತ್ತು. ಸಮಸ್ಯೆಗಳ ಮಧ್ಯೆಯೂ ಅಲ್ಪಸ್ವಲ್ಪ ಬೆಳೆ ಉಳಿಸಿಕೊಂಡಿದ್ದ ರೈತರಿಗೆ ಬೆಲೆ ಕುಸಿತ ದೊಡ್ಡ ಹೊಡೆತ ಕೊಟ್ಟಿದೆ. ಎಪಿಎಂಸಿ ಹಾಗೂ ತೋಟಗಾರಿಕಾ ಸಚಿವರ ತವರಲ್ಲೇ ರೈತರು ಸಮಸ್ಯೆಯಲ್ಲಿ ಸಿಲುಕಿದ್ದು, ಸಚಿವರು ನೆರವಿಗೆ ಧಾವಿಸಬೇಕು ಎಂದೂ ರೈತ ಮುಖಂಡರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT