ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ತಪ್ಪಿದ ಶೆಟ್ಟರ್: ಆರೋಪ

Last Updated 14 ನವೆಂಬರ್ 2017, 6:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹದಾಯಿ ವಿವಾದವನ್ನು ನವೆಂಬರ್‌ 1ರೊಳಗಾಗಿ ಪರಿಹರಿಸಿ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ತಮ್ಮ ಮಾತಿಗೆ ತಪ್ಪಿದ್ದಾರೆ’ ಎಂದು ಆರೋಪಿಸಿ ನರಗುಂದದ ಮಹದಾಯಿ ಹೋರಾಟಗಾರರು ಸೋಮವಾರದಿಂದ ಶೆಟ್ಟರ್‌ ನಿವಾಸದ ಎದುರು ಧರಣಿ ಆರಂಭಿಸಿದ್ದಾರೆ.

ಇಲ್ಲಿನ ಕೇಶ್ವಾಪುರದ ಬಾದಾಮಿ ನಗರದಲ್ಲಿರುವ ಶೆಟ್ಟರ್ ನಿವಾಸದ ಎದುರು ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹಾಗೂ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಶಂಕ್ರಪ್ಪ ಅಂಬಲಿ ಅವರ ನೇತೃತ್ವದಲ್ಲಿ ರೈತರು ಹಾಗೂ ರೈತ ಮಹಿಳೆಯರು ಮೌನ ಪ್ರತಿಭಟನೆ ಆರಂಭಿಸಿದರು.

‘ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿರುವ ಶೆಟ್ಟರ್‌ ಹುಬ್ಬಳ್ಳಿಗೆ ಬಂದು, ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಅವರು ಸ್ಪಷ್ಟಪಡಿಸುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ಅವರ ಹುಸಿ ಭರವಸೆಗಳನ್ನು ನಾವು ಒಪ್ಪುವುದಿಲ್ಲ’ ಎಂದು ಸೊಬರದಮಠ ತಿಳಿಸಿದ್ದರು.

‘ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಅಲ್ಲಿಯೇ ಪ್ರತಿಭಟನೆ ನಡೆಸಬಹುದಿತ್ತು. ಆದರೆ, ಶೆಟ್ಟರ್‌ ಅವರು ನಮ್ಮ ಭಾಗದ ಪ್ರತಿನಿಧಿ. ಅಲ್ಲದೇ, ಅವರೇ ಗೋವಾದವರ ಮನವೊಲಿಸುವುದಾಗಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಅವರು ಏನು ಪ್ರಯತ್ನ ನಡೆಸಿದ್ದಾರೆ ಎಂಬುದು ತಿಳಿಯದಾಗಿದೆ’ ಎಂದರು.

‘ಅವರು ಯಾವಾಗ ಬೇಕಾದರೂ ಬಂದು ಭೇಟಿಯಾಗಲಿ. ಆದರೆ, ಅವರಿಂದ ಸ್ಪಷ್ಟ ನಿರ್ಧಾರ ಹೊರಬೀಳುವವರೆಗೂ ನಮ್ಮ ಧರಣಿಯನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದರು. ‘ಜನರ ತೆರಿಗೆ ದುಡ್ಡಲ್ಲಿ ಸದನ ನಡೆಸಲಾಗುತ್ತದೆ. ಇಂತಹ ಮಹತ್ವದ ಕಲಾಪಕ್ಕೂ ಶಾಸಕರು ಗೈರು ಹಾಜರಾಗಿದ್ದಾರೆ. ಬಹುತೇಕ ಕುರ್ಚಿಗಳು ಖಾಲಿ ಇವೆ. ಇವರೆಲ್ಲ ಡೋಂಗಿಗಳು’ ಎಂದು ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT