ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸ್ತೂಲ್, ಲಾಠಿ ಬಿಡಿ; ವಿಡಿಯೋ ಮಾಡಿ!

Last Updated 14 ನವೆಂಬರ್ 2017, 6:57 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲ್ಲು ತೂರಾಟ, ಕೋಮುಗಲಭೆ, ಪ್ರತಿಭಟನೆ ಮತ್ತು ಜಾತಿ ಸಂಘರ್ಷ ನಡೆಯುವ ಸಂದರ್ಭಗಳಲ್ಲಿ ಪಿಸ್ತೂಲ್, ಲಾಠಿ ಬಳಸಿ ಗುಂಪು ಚದುರಿಸುವ ಬದಲು ಫೋಟೊ ತೆಗೆಯಬೇಕು ಮತ್ತು ವಿಡಿಯೋ ಮಾಡಿಕೊಳ್ಳಬೇಕು’ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಹೇಳಿದರು. ಇಲ್ಲಿನ ಪೊಲೀಸ್ ಭವನದಲ್ಲಿ ಸೋಮವಾರ ಆರಂಭವಾದ ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಾಕ್ಷಿ ಕಾಯ್ದೆ 64 (ಬಿ)(4)ಗೆ ತಿದ್ದುಪಡಿ ತಂದ ಬಳಿಕ ನ್ಯಾಯಾಲಯಗಳಲ್ಲಿ ವಿಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುತ್ತಿದೆ. ಆದ್ದರಿಂದ ಕರ್ತವ್ಯದಲ್ಲಿರುವ ಪೊಲೀಸ್ ಕಾನ್‌ಸ್ಟೆಬಲ್, ಸಬ್ ಇನ್‌ಸ್ಪೆಕ್ಟರ್ ಮತ್ತು ಇನ್‌ಸ್ಪೆಕ್ಟರ್‌ಗಳು ತಮ್ಮಲ್ಲಿರುವ ಸ್ಮಾರ್ಟ್ ಫೋನ್‌ನಿಂದ ಘಟನೆಯ ಚಿತ್ರೀಕರಣ ಮಾಡಿಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಶಿಕ್ಷೆಗೆ ಒಳಗಾಗುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೊಲೆ, ಆತ್ಮಹತ್ಯೆ ನಡೆದ ಸ್ಥಳಕ್ಕೆ ಕಡ್ಡಾಯವಾಗಿ ವಿಧಿ ವಿಜ್ಞಾನ, ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಬೇಕು. ಸ್ಥಳದಲ್ಲಿ ಪತ್ತೆಯಾಗುವ ವಸ್ತುಗಳನ್ನು ಜೋಪಾನವಾಗಿ ಎತ್ತಿಟ್ಟುಕೊಳ್ಳಬೇಕು. ವೈಜ್ಞಾನಿಕವಾಗಿ ತನಿಖೆ ನಡೆಸಬೇಕು. ಎಷ್ಟೋ ಬಾರಿ ಚರ್ಮ, ಕೂದಲು, ಉಗುರು, ರಕ್ತದ ಡಿಎನ್‌ಎಯಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಆದ್ದರಿಂದ ಪೊಲೀಸ್ ಸಿಬ್ಬಂದಿ ತಂತ್ರಗಾರಿಕೆಯನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್ ಮತ್ತು ಹಿರಿಯ ಅಧಿಕಾರಿಗಳಿಗೆ ವೈಜ್ಞಾನಿಕವಾಗಿ ತನಿಖೆ ನಡೆಸುವ ಬಗ್ಗೆ ಪುನಶ್ಚೇತನ ತರಬೇತಿ ಆಯೋಜಿಸಬೇಕು. ಮೊಬೈಲ್ ಫೋಟೊ ಮತ್ತು ವಿಡಿಯೋ ಬಳಸಿ ಅಪರಾಧಿಗಳನ್ನು ಪತ್ತೆ ಹಚ್ಚುವ ಕೌಶಲ ಬೆಳೆಸಬೇಕು’ ಎಂದು ತಿಳಿಸಿದರು.

‘ವಿಧಿ ವಿಜ್ಞಾನ, ಬೆರಳಚ್ಚು, ಪಾದದಮುದ್ರೆ, ಫೋಟೊ, ವಿಡಿಯೋಗ್ರಫಿ ವಿಭಾಗಗಳಲ್ಲಿ ಅಧಿಕಾರಿಗಳಿಗೆ ಸ್ಪರ್ಧೆ ನಡೆಸಲಾಗುವುದು. ಇದರಲ್ಲಿ ವಿಜೇತರಾದವರಿಗೆ ಪ್ರಥಮ ₹8ಸಾವಿರ, ದ್ವಿತೀಯ ₹6 ಸಾವಿರ ಮತ್ತು ತೃತೀಯ ₹4ಸಾವಿರ ಬಹುಮಾನ ನೀಡಲಾಗುವುದು. ಅಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಕಳುಹಿಸಲಾಗುವುದು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಮಾತನಾಡಿ, ‘ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ದಾಖಲಿಸುವ ಹಂತದಿಂದ ಆರೋಪಿ ಶಿಕ್ಷೆಗೆ ಒಳಗಾಗುವವರೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಿ.ಜೆ.ಲೋಕೇಶಕುಮಾರ್, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕ ಪ್ರವೀಣ ಸಂಗನಾಳಮಠ, ಎನ್.ನಾಗೇಶ ಇದ್ದರು. ಸಬ್ ಇನ್‌ಸ್ಪೆಕ್ಟರ್ ಶರಣಪ್ಪ ಎಚ್.ಎಸ್. ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT