ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಿದ್ದರೂ ತುಂಬದ ದೊಡ್ಡಕೆರೆ

Last Updated 14 ನವೆಂಬರ್ 2017, 7:18 IST
ಅಕ್ಷರ ಗಾತ್ರ

ಬಂಗಾರಪೇಟೆ: ಕೆರೆಗೆ ನೀರು ಹರಿಯುವ ಪ್ರಮುಖ ಕಾಲುವೆ ಮುಚ್ಚಿರುವುದರಿಂದ ನಿರೀಕ್ಷಿತ ಪ್ರಮಾಣದಷ್ಟು ನೀರು ಪಟ್ಟಣದ ದೊಡ್ಡಕೆರೆಗೆ ಹರಿದು ಬಂದಿಲ್ಲ. ಬಂಗಾರಪೇಟೆ-ಕೋಲಾರ ಮುಖ್ಯರಸ್ತೆಯ ಪೂರ್ವಕ್ಕೆ ಇರುವ ವಿವೇಕಾನಂದ ನಗರ, ವಿಜಯನಗರ, ನ್ಯೂಟೌನ್ ಸೇರಿದಂತೆ ಹಲ ನಗರಗಳಲ್ಲಿ ಬಿದ್ದ ಮಳೆ ನೀರು ಅಯ್ಯಪ್ಪಸ್ವಾಮಿ ದೇಗುಲದ ಬಳಿ ಕೆರೆಗೆ ಸೇರುತ್ತಿತ್ತು. ಆದರೆ ಆ ನೀರು ಬೇರೆಡೆಗೆ ತಿರುಗಿಸಲಾಗಿದೆ ಎನ್ನುವುದು ಸ್ಥಳೀಯರ ದೂರು.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಒಂದೂವರೆ ತಿಂಗಳಿಂದ ಸತತವಾಗಿ ಮಳೆ ಸುರಿದಿದೆ. ಪ್ರಮುಖ ನೀರಿನ ಸೆಲೆಗಳಾದ ಬೇತಮಂಗಲ ಕೆರೆ. ರಾಮಸಾಗರ ಕೆರೆ, ಮಾರ್ಕಂಡೇಯ ಜಲಾಶಯ, ಮುಷ್ಟ್ರಹಳ್ಳಿ ಜಲಾಶಯ, ಕಾಮಸಮುದ್ರ ಕೆರೆಗಳು ತುಂಬಿ ಕೋಡಿ ಹರಿದಿವೆ. ಆದರೆ ಈ ದೊಡ್ಡಕೆರೆ ಮಾತ್ರ ತುಂಬಿಲ್ಲ.

ಪ್ರಸ್ತುತ ಕೆರೆಯಲ್ಲಿ ಸುಮಾರು ಶೇ 55ರಷ್ಟು ನೀರು ಶೇಖರಣೆಯಾಗಿದ್ದು, ಸಂಪೂರ್ಣ ನೀರು ಕಲುಷಿತಗೊಂಡಿದೆ. ಕೆರೆಯ ಬಹುತೇಕ ಭಾಗ ಕಳೆ ಮತ್ತು ಪಾಚಿಯಿಂದ ಆವರಿಸಿದೆ. ಮತ್ತೊಂದೆಡೆ ಪಟ್ಟಣದ ವಿವೇಕಾನಂದ ನಗರ, ಶಾಂತಿನಗರ ಮೂಲಕ ಹರಿಯುವ ಚರಂಡಿ ನೀರು ಹಾಗೂ ಕಾರಹಳ್ಳಿ ಮೋರಿ ನೀರು ಕೆರೆಗೆ ಸೇರುತ್ತಿದೆ.

ವಾಕಿಂಗ್ ಪಾಥ್: ಕೆರೆ ಸುತ್ತ ಸುಮಾರು ₹ 3 ಕೋಟಿ ವೆಚ್ಚದಲ್ಲಿ ವಾಕಿಂಗ್ ಪಾಥ್ ನಿರ್ಮಿಸುತ್ತಿದ್ದು, ಎರಡೂ ಅಂಚಿನಲ್ಲಿ ತಂತಿ ಬೇಲಿ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಅಲಂಕಾರಿಕ ಗಿಡ ನೆಟ್ಟು, ಪಾಥ್‌ನ ಉದ್ದಕ್ಕೂ ಅಲ್ಲಲ್ಲಿ ಕಲ್ಲುಹಾಸು ಅಳವಡಿಸುವ ಕೆಲಸ ಕೂಡ ನಡೆಯಲಿದೆ.

ಪಟ್ಟಣದ ಸೌಂದರ್ಯ ಮತ್ತು ಕೆರೆ ಅಂದ ಹೆಚ್ಚಿಸಲು ಕ್ರಮ ಕೈಗೊಂಡಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಮೋರಿ ನೀರಿನ ಸಂಸ್ಕರಣೆ, ಕೆರೆಯಲ್ಲಿನ ಕಳೆ ಮತ್ತು ಪಾಚಿ ತೆರವಿಗೂ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಬೇರೆಡೆ ತಿರುಗಿಸಿರುವ ಕಾಲುವೆ ನೀರನ್ನು ಕೆರೆಗೆ ಹರಿಸಿ, ಒತ್ತುವರಿ ತೆರವುಗೊಳಿಸಬೇಕು. ಕೆರೆಯ ಸ್ವಚ್ಛತೆ, ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎನ್ನುವುದು ಸಾರ್ವಜನಿಕರು ಒತ್ತಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT