ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ತೆನೆ ಕಟಾವು ಕಾರ್ಯ ಆರಂಭ

Last Updated 14 ನವೆಂಬರ್ 2017, 7:25 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ರಾಗಿ ತೆನೆ ಕಟಾವು ಕಾರ್ಯ ಆರಂಭವಾಗಿದೆ. ಮೊದಲು ಬಿತ್ತನೆ ಮಾಡಲಾಗಿದ್ದ ಹೊಲಗಳಲ್ಲಿ ತೆನೆ ಬಲಿತು ಒಣಗಿದೆ. ಮಳೆ ಹಿನ್ನಡೆ ಇದೀಗ ಕಟಾವಿಗೆ ಪೂರಕವಾಗಿದೆ.

ಉತ್ತಮ ಗುಣಮಟ್ಟದ ಸ್ವಂತ ಬಿತ್ತನೆ ರಾಗಿ ಬಿತ್ತನೆ ಮಾಡಿರುವ ಹೊಲಗಳಲ್ಲಿ ಬಂಪರ್‌ ಇಳುವರಿ ಬಂದಿದೆ. ಕೃಷಿ ಇಲಾಖೆಯಿಂದ ಪಡೆದ ಬಿತ್ತನೆ ರಾಗಿ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಈ ರಾಗಿ ಬಿತ್ತನೆ ಮಾಡಲಾಗಿರುವ ಹೊಲಗಳಲ್ಲಿ ಚಿಕ್ಕ ತೆನೆಗಳು ಬಂದಿದ್ದು, ಹುಳು ಬಾಧೆಗೆ ತುತ್ತಾಗಿವೆ. ತೆನೆಯ ಗುಣಮಟ್ಟ ತೀರಾ ಕಳಪೆಯಾಗಿದೆ.

ಸತತವಾಗಿ ಸುರಿದ ಮಳೆಯ ಪರಿಣಾಮವಾಗಿ ಬಹುತೇಕ ರಾಗಿ ಬೆಳೆ ತೆನೆಸಹಿತ ಬಿದ್ದುಹೋಗಿವೆ. ಇದರಿಂದ ತೆನೆ ಕೊಯಿಲು ನಿಧಾನ ಗತಿಯಲ್ಲಿ ನಡೆಯುತ್ತಿದೆ. ಎಲ್ಲ ಕಡೆ ಒಂದೇ ಸಲ ಕಟಾವು ನಡೆಯುತ್ತಿರುವುದರಿಂದ ಕೃಷಿ ಕಾರ್ಮಿಕರ ಕೊರತೆ ಉಂಟಾಗಿದೆ. ಬೇಡಿಕೆಗೆ ಅನುಗುಣವಾಗಿ ಕೂಲಿಯೂ ಹೆಚ್ಚಿದೆ. ಕೂಲಿಗೆ ಜನ ಸಿಗುತ್ತಿಲ್ಲ. ಕೃಷಿ ಕಾರ್ಮಿಕರು ಕೂಲಿ ಬದಲಿಗೆ ಒಪ್ಪಂದ ಮಾಡಿಕೊಂಡು ತೆನೆ ಕೊಯ್ಯುತ್ತಿದ್ದಾರೆ.

ರಾಗಿ ತೆನೆ ಕಟಾವು ಮಾಡಲು ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಆದ್ದರಿಂದ ಕೆಲವು ರೈತರು ಬದಲು ಕೆಲಸ ಮಾಡುತ್ತಿದ್ದಾರೆ. ಇದು ಕೃಷಿ ಕಾರ್ಮಿಕರ ಸಮಸ್ಯೆಗೆ ಚಿಕ್ಕ ಪರಿಹಾರವಾಗಿದೆ. ಇದು ಎಲ್ಲರಿಗೂ ಸಾಧ್ಯವಿಲ್ಲ. ದುಡಿಯುವ ಮಂದಿ ಇರುವ ಕುಟುಂಬಗಳು ಮಾತ್ರ ಬದಲು ವ್ಯವಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಉಳಿದವರು ಕೃಷಿ ಕಾರ್ಮಿಕರನ್ನು ಅವಲಂಬಿಸುವ ಅಗತ್ಯವಿದೆ.

ಗ್ರಾಮೀಣ ಪ್ರದೇಶದಲ್ಲಿ ಕಣಗಳ ಕೊರತೆ ಇದೆ. ಕೃಷಿಕರು ಕಣ ಮಾಡುವ ಗೋಜಿಗೆ ಹೋಗುತ್ತಿಲ್ಲ. ಪ್ಲಾಸ್ಟಿಕ್‌ ಹಾಳೆಯ ಮೇಲೆ ತೆನೆ ಹರಡಿ ಒಣಗಿಸುತ್ತಿದ್ದಾರೆ. ಇದರಿಂದಾಗಿ ಪ್ಲಾಸ್ಟಿಕ್‌ ಹಾಳೆಗೆ ಬೇಡಿಕೆ ಹೆಚ್ಚಿದೆ. ಬೆಲೆಯೂ ಹೆಚ್ಚಿದೆ ಎಂಬ ಮಾತು ಸಹ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT