ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಪ್ಪೋತ್ಸವಕ್ಕೆ ಹರಿದು ಬಂದ ಜನಸಾಗರ

Last Updated 14 ನವೆಂಬರ್ 2017, 8:24 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಗಾವಡಗೆರೆ ಗ್ರಾಮದಲ್ಲಿ 12 ವರ್ಷಗಳ ಬಳಿಕ ಹಬ್ಬದ ವಾತಾವರಣ ಮನೆ ಮಾಡಿ, ಗ್ರಾಮ ದೇವತೆ ಬಸವೇಶ್ವರ ಮತ್ತು ಪಟ್ಲದಮ್ಮ ದೇವರ ತೆಪ್ಪೋತ್ಸವ ಸೋಮವಾರ ಜರುಗಿತು. ಗ್ರಾಮದಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡು ತುಂಬಿ ತುಳುಕುತ್ತಿರುವ ಕೆರೆಯಲ್ಲಿ ಉತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ಭಕ್ತರ ಸಾಗರ ಹರಿದು ಬಂದಿತ್ತು.

12 ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲದೆ ಗ್ರಾಮ ದೇವತೆಯ ತೆಪ್ಪೋತ್ಸವ ಕಾರ್ಯಕ್ರಮ ನಡೆಯದೆ ಜನರಲ್ಲಿ ಸಮಾಧಾನವೇ ಕಳೆದು ಹೋಗಿದಂತಾಗಿತ್ತು. ಈಗ ಮನಸ್ಸು ತುಂಬಿ ಬಂದಂತಾಗಿದೆ ಎಂದು ಗ್ರಾಮದ ನಿವಾಸಿ ಶ್ರೀನಾಥ್‌ ಹೇಳಿದರು.

ಬೆಳಿಗ್ಗೆ ಕಾರ್ತಿಕ ಮಾಸದ ಪೂಜೆ ಸಲ್ಲಿಸಲು ಗ್ರಾಮದ ಮಹಿಳೆಯರು ಕೆರೆಯ ಬಳಿ ತಂಡೋಪ ತಂಡವಾಗಿ ಬಂದರು. ಗ್ರಾಮದ ಪುರೋಹಿತ ಸುಂದರ್‌ ನೇತೃತ್ವದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಸಾರ್ವಜನಿಕರು ಕೆರೆ ಬಳಿ ನೆಟ್ಟಿದ್ದ ಬಾಳೆ ಕಂಬ ಕಡಿಯುವ ಮೂಲಕ ಕೆರೆಯಲ್ಲಿ ದೇವರ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.
ಕೆರೆ ಏರಿಯಲ್ಲಿ ಯುವಕರು, ಯುವತಿಯರು, ಮಕ್ಕಳು, ಹಿರಿಯರು ಎಲ್ಲರೂ ಕುಳಿತು ತೆಪ್ಪೋತ್ಸವ ಕಣ್ತುಂಬಿಕೊಂಡರು.

ಮೆರವಣಿಗೆ : ತೆಪ್ಪೋತ್ಸವ ಮುಗಿದ ನಂತರ ದೇವತೆಗಳ ಉತ್ಸವ ಮೂರ್ತಿ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ತೆರಳಿತು. ದೇವರ ಉತ್ಸವ ತೆರಳುವ ಬೀದಿಗಳನ್ನು ಮಹಿಳೆಯರು ರಂಗೋಲಿ ಬಿಡಿಸುವ ಮೂಲಕ ಅಲಂಕರಿಸಿದ್ದರು.

ಗ್ರಾಮದ ದೇವತೆಯ ಉತ್ಸವದಲ್ಲಿ ಎಲ್ಲ ವರ್ಗದವರೂ ಕೈ ಜೋಡಿಸಿ ಉತ್ಸವದ ಉಸ್ತುವಾರಿಯನ್ನು ಒಂದೊಂದು ವರ್ಗದವರು ಜವಾಬ್ದಾರಿ ಹೊತ್ತು ಜಾತ್ಯಾತೀತ ಪದ್ಧತಿ ಅನುಸರಿಸುವ ಮೂಲಕ ಸೌಹಾರ್ದ ಮೆರೆಯುತ್ತೇವೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಹೊನ್ನಪ್ಪ ರಾವ್‌ ಕಾಳಿಂಗೆ ಹೇಳಿದರು. ಕಾರ್ಯಕ್ರಮದಲ್ಲಿ ಕೃಷ್ಣೋಜಿರಾವ್‌ ಕದಂ, ದೇವರಾಜು, ಗೋಪಾಲ ನಾಯಕ, ಕಾಳಸಿದ್ದ ನಾಯಕ, ಸ್ವಾಮಿ ನಾಯಕ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ರಥೋತ್ಸವ
ನಂಜನಗೂಡು: ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಸೋಮವಾರ ಪ್ರಥಮ ಬಾರಿಗೆ ಬಿಳಿಕೆರೆ ಮಹದೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ದೇವಾಲಯದ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉತ್ಸವಕ್ಕೆ ಚಾಲನೆ ನೀಡಿದರು.

ಮಹದೇಶ್ವರರ ಉತ್ಸವ ಮೂರ್ತಿಯನ್ನು ರಥೋತ್ಸವ ಇರಿಸಿ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದಂತೆ ಭಕ್ತರು ‘ಉಘೇ ಉಘೇ ಮಾದಪ್ಪ...’ ಎಂಬ ಜಯ ಘೋಷದೊಂದಿಗೆ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ಸಹಸ್ರಾರು ಜನರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಮೊದಲ ಉತ್ಸವಕ್ಕೆ ಮೆರುಗು ತಂದರು. ದೇವಾಲಯದ ವತಿಯಿಂದ ಪ್ರಸಾದ ವಿನಿಯೋಗ ನಡೆಸಲಾಯಿತು.
‘ಗ್ರಾಮದಲ್ಲಿ ಪ್ರಥಮ ಬಾರಿಗೆ ಉತ್ಸವ ನಡೆದಿರುವುದು ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿತ್ತು. ಸುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರಿಂದ ಮತ್ತಷ್ಟು ಕಳೆ ಹೆಚ್ಚಿಸಿತ್ತು’ ಎಂದು ಜಿ.ಪಂ ಮಾಜಿ ಸದಸ್ಯ ಎಚ್.ಎಂ.ನಂಜಪ್ಪ ಹೇಳಿದರು.

‘ಸಚಿವ ಮಹದೇವಪ್ಪ ಅವರು ತಮ್ಮ ತಾಯಿ ಮಾದಮ್ಮನವರ ಅಭಿಲಾಷೆಯಂತೆ ಗ್ರಾಮದ ಬಿಳಿಕೆರೆ ಮಾದಪ್ಪನ ದೇವಾಲಯದ ಜೀರ್ಣೋದ್ಧಾರಕ್ಕೆ ಅನುದಾನ ನೀಡಿದರು. ಅಲ್ಲದೆ ತಮ್ಮ ಸ್ವಂತ ಖರ್ಚಿನಿಂದ ಶಿಲ್ಪಕಲಾ ಅಕಾಡೆಮಿ ಸದಸ್ಯ ಶಿಲ್ಪಿ ವಿ.ಕೆ.ಚಿದಾನಂದ ಹಾಗೂ ತಂಡದವರಿಂದ ರಥವನ್ನು ಮಾಡಿಸಿ ರಥೋತ್ಸವ ನಡೆಯಲು ಕಾರಣರಾಗಿದ್ದಾರೆ’ ಎಂದು ವಿವರಿಸಿದರು. ಗ್ರಾಮದ ಮುಖಂಡರಾದ ಶಿವಪ್ಪ, ಎಚ್.ಸಿ.ನಿಂಗಪ್ಪ, ಅನಿಲ್ ಬೋಸ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT