ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾವುದೇ ತನಿಖೆಗೂ ನಾನು ಸಿದ್ಧ’

Last Updated 14 ನವೆಂಬರ್ 2017, 8:38 IST
ಅಕ್ಷರ ಗಾತ್ರ

ಮಂಗಳೂರು: ‘ನನ್ನ ಪತ್ನಿ ಹೆಸರಿಗೆ ಬಗರ್‌ ಹುಕುಂ ಯೋಜನೆಯಡಿ ಜಮೀನು ಮಂಜೂರಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಆಧಾ ರರಹಿತವಾದುದು. ಈ ವಿಚಾರದಲ್ಲಿ ನಾನು ಯಾವುದೇ ಬಗೆಯ ತನಿಖೆ ಎದುರಿಸಲು ಸಿದ್ಧ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಇತ್ತೀಚೆಗೆ ಮಾಡಿರುವ ಆರೋಪದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಹಿಸ್ಸೆಯ ಮೂಲಕ ಬಂದಿರುವುದು ಮತ್ತು ಖರೀದಿ ಮಾಡಿರುವುದು ಸೇರಿ ನನ್ನ ಸ್ವಾಧೀನದಲ್ಲಿ 15 ಎಕರೆ 22 ಸೆಂಟ್ಸ್‌ ಜಮೀನಿದೆ. ಪತ್ನಿಯ ಕುಟುಂಬದ 7 ಎಕರೆ 90 ಸೆಂಟ್ಸ್‌ ಜಮೀನಿನ ಪಕ್ಕದಲ್ಲಿದ್ದ 3 ಎಕರೆ 4 ಸೆಂಟ್ಸ್‌ ಜಮೀನನ್ನು ಕೃಷಿ ಮಾಡಿದ್ದು, ಬಗರ್‌ ಹುಕುಂ (ಅಕ್ರಮ– ಸಕ್ರಮ) ಅಡಿ ಮಂಜೂರಾತಿಗಾಗಿ
ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ಕಾನೂನಿನ ಪ್ರಕಾರ ಸಮಿತಿ ಒಪ್ಪಿಗೆ ನೀಡಲಾಗಿತ್ತು’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

‘ಕಳ್ಳಿಗೆಯಲ್ಲಿ ನನ್ನ ಮನೆಯ ಬಳಿ ಇರುವ ಜಮೀನು ಸರ್ಕಾರಿ ಆಸ್ತಿಯಲ್ಲ. ನನ್ನ ಜಮೀನಿನಲ್ಲಿ 8 ಎಕರೆಯಲ್ಲಿ ರಬ್ಬರ್‌ ಬೆಳೆದಿದ್ದೇನೆ. ಕೊಳವೆಬಾವಿ ಕೊರೆಸಿರುವ ಜಾಗ ಕೂಡ ಸ್ವಂತದ್ದು. ಸರ್ಕಾರಿ ಜಮೀನು ಅತಿಕ್ರಮಣ ಮಾಡಿದ್ದೇನೆ ಎಂದು ಆರೋಪಿಸುವವರಿಗೆ ಈ ಯಾವ ವಿಚಾರಗಳೂ ತಿಳಿದಿಲ್ಲ. ನನ್ನ ಜೀವಮಾನದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಜನರು ತಲೆತಗ್ಗಿಸುವಂತಹ ಯಾವ ಕೆಲಸವನ್ನೂ ಮಾಡಿಲ್ಲ, ಮುಂದೆ ಯೂ ಮಾಡುವುದಿಲ್ಲ’ ಎಂದರು.

‘ನಮ್ಮದು ಜಮೀನ್ದಾರರ ಕುಟುಂಬ. 1961ರಲ್ಲಿ ಕಳ್ಳಿಗೆಯಲ್ಲಿ ನನ್ನ ತಂದೆ ನೂರಾರು ಎಕರೆ ಜಮೀನು ಖರೀದಿಸಿದ್ದರು. ಭೂಸುಧಾರಣಾ ಕಾನೂನು ಜಾರಿಗೆ ಬಂದಾಗ ನೂರಾರು ಎಕರೆ ಜಮೀನು ಕಳೆದು ಕೊಂಡೆವು. ಅವಧಿ ಮುಗಿದ ಬಳಿಕ ಬೇಡಿಕೆ ಸಲ್ಲಿಸಿ ದವರಿಗೂ ಯಾವ ತಕರಾರು ಇಲ್ಲದೆ ಜಮೀನು ಬಿಟ್ಟುಕೊಟ್ಟವರು ನಾವು. ಬೊಳುವಾರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮೂಲಿ ಜಮೀನಿನ ಹಕ್ಕನ್ನು ಪುಕ್ಕಟೆಯಾಗಿ ಬಿಟ್ಟುಕೊಟ್ಟದ್ದು ನನ್ನ ಕುಟುಂಬ’ ಎಂದು ಹೇಳಿದರು.

‘ಭೂ ಸುಧಾರಣಾ ಕಾಯ್ದೆಯಡಿ ನೀಡಿದ ಜಮೀನನ ಖುಷ್ಕಿ (ಪುಂಜ) ಜಮೀನು ಮೂಲ ಮಾಲೀಕರಿಗೆ ಸೇರಿದ್ದು ಎಂಬ ಕಾನೂನು ಜಾರಿಗೆ ಬಂದಿದೆ. ಆ ಬಳಿಕ ಹಲವರು ನ್ಯಾಯಾ ಲಯದ ಆದೇಶ ಪಡೆದು ಖುಷ್ಕಿ ಬಿಡಿಸಿ ಕೊಂಡಿದ್ದಾರೆ. ನಾನು ಹಾಗೆ ಅರ್ಜಿ ಸಲ್ಲಿಸಿದ್ದರೆ ನೂರಾರು ಎಕರೆ ಸ್ವಾಧೀನಕ್ಕೆ ಬರುತ್ತಿತ್ತು. ಇವತ್ತಿಗೂ ಯಾವ ಅರ್ಜಿಯನ್ನೂ ಸಲ್ಲಿಸಿಲ್ಲ’ ಎಂದರು.

‘ಪತ್ನಿಯ ಹೆಸರಿಗೆ ಜಮೀನು ಮಂಜೂರಾಗಿರುವ ವಿಚಾರದಲ್ಲಿ ಯಾವುದೇ ಬಗೆಯ ತನಿಖೆ ಎದುರಿಸಲು ನಾನು ಸಿದ್ಧನಿದ್ದೇನೆ. ತಪ್ಪೆಸಗಿರುವುದು ಸಾಬೀತಾದರೆ ಸಾರ್ವಜನಿಕ ಜೀವನ ದಿಂದ ನಿವೃತ್ತಿ ಹೊಂದುತ್ತೇನೆ’ ಎಂದು ಸವಾಲು ಹಾಕಿದರು.

ಸೋಲಿಸಿದವರ ಜೊತೆಗಿದ್ದಾರೆ: ‘ನಾನು ಎಲ್ಲ ಸಂದರ್ಭಗಳಲ್ಲೂ ಜನಾರ್ದನ ಪೂಜಾರಿ ಅವರನ್ನು ಗೌರವಿಸಿದ್ದೇನೆ. ಅವರ ಪರ ಕೆಲಸ ಮಾಡಿದ್ದೇನೆ. ಮತ ಚಲಾಯಿಸಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪೂಜಾರಿ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಡ ಹೇರಲು 15 ದಿನಗಳ ಕಾಲ ದೆಹಲಿಯಲ್ಲೇ ಇದ್ದೆ. ಈಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರು ಪೂಜಾರಿ ಯವರನ್ನು ಸೋಲಿಸಿದವರ ಜೊತೆ ಕೈಜೋಡಿಸಿದ್ದಾರೆ’ ಎಂದು ಹರಿಕೃಷ್ಣ ಬಂಟ್ವಾಳ  ಹೆಸರು ಉಲ್ಲೇಖಿಸದೇ ಹೇಳಿದರು.

‘ಪದೇ ಪದೇ ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಒಮ್ಮೊಮ್ಮೆ ಅನಿಸಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಕೀಲ ಚಿದಾನಂದ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT