ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನದಲ್ಲಿ ಜಿಲ್ಲಾಧಿಕಾರಿಗೆ ವರದಿ

Last Updated 14 ನವೆಂಬರ್ 2017, 8:43 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಆದಿವಾಸಿಗಳಿಗಾಗಿ ನಿರ್ಮಿಸಿದ್ದ ಮನೆಗಳ ಕಾಮಗಾರಿಯನ್ನು ಪರಿಶೀಲಿಸಿದ್ದೇನೆ. ಅದನ್ನು ಜಿಲ್ಲಾಧಿಕಾರಿಗಳಿಗೆ ಇನ್ನೆರಡು ದಿನಗಳಲ್ಲಿ ವರದಿ ನೀಡುವುದಾಗಿ’ ಹುಣಸೂರು ಉಪವಿಭಾಗಾಧಿಕಾರಿ ನಿತೀಶ್ ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನ ವ್ಯಾಪ್ತಿಯ ಅರಣ್ಯದೊಳಗಿರುವ ವಿವಿಧ ಹಾಡಿಗಳಲ್ಲಿರುವ ಆದಿವಾಸಿ ಗಳನ್ನು ಸ್ಥಳಾಂತರ ಮಾಡಲು ಪುನರ್ವಸತಿ ಕೇಂದ್ರದಲ್ಲಿ 210ಮನೆಗಳನ್ನು ನಿರ್ಮಿಸಲಾಗಿತ್ತು. ಈ ಪೈಕಿ ಬಹುತೇಕ ಮನೆಗಳು ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕವಾಗಿ ಕೂಡಿದೆ ಎಂದು ಈಚೆಗೆ ಪ್ರಜಾವಾಣಿ ‘ಕಾಡಿನ ಮಕ್ಕಳಿಗೆ ಕಟ್ಟಿದ್ದಾರೆ ಕಳಪೆ ಮನೆ’ ವಿಶೇಷ ವರದಿ ಪ್ರಕಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಿಲ್ಲಾಧಿಕಾರಿ ಮಾರ್ಗದರ್ಶನದಂತೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ‘ಮನೆಗಳು ನಿರ್ಮಾಣವಾಗಿ ಈಗಾಗಲೇ 9 ತಿಂಗಳಾಗಿವೆ. ಕೆಲ ಮನೆಗಳಲ್ಲಿ ಕೆಲವೆಡೆ ವಾಸವಾಗಿದ್ದಾರೆ. ಹಾಗಾಗಿ ಅಂತಹ ಮನೆಗಳನ್ನು ಗುರುತಿಸಿ, ಶೌಚಾಲಯದ ಗುಂಡಿಗಳನ್ನು ಸ್ಥಳಾಂತರ ಮಾಡಿಸಲಾಗುವುದು’ ಎಂದು ಹೇಳಿದರು.

‘ಶೌಚಾಲಯದ ಗುಂಡಿಗಳಲ್ಲಿ ನೀರು ನಿಂತಿದೆ. ಮನೆ ಸುತ್ತಲೂ ಮಳೆ ನೀರು ನಿಲ್ಲದಂತೆ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಭಯಪಡುವಂತಹ ಯಾವುದೇ ಸಮಸ್ಯೆ ಇಲ್ಲ, ಏನೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಡಲಾಗುವುದು’ ಎಂದು ನಿವಾಸಿಗಳಿಗೆ ಭರವಸೆ ನೀಡಿದರು.

‘ನಿಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬಹುದು, ಸರ್ಕಾರದ ಸವಲತ್ತುಗಳು ಕೂಡ ಸಿಗುತ್ತವೆ. ಆದಿವಾಸಿ ಗಿರಿಜನರಲ್ಲಿ ಮದ್ಯವ್ಯಸನಿಗಳು ಹೆಚ್ಚು ಎನ್ನುವ ಮಾಹಿತಿ ಇದ್ದು, ಅಂಥವರನ್ನು ಗುರುತಿಸಿ ಅವರನ್ನು ವಾಪಸ್ ಕಳುಹಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸ್ಥಳ ಪರಿಶೀಲನೆಯ ಸಮಯದಲ್ಲಿ ವಡ್ಡರಗುಡಿ ಗ್ರಾಮದ ಆದಿವಾಸಿ ಮುಖಂಡ ಪುಟ್ಟಬಸವ ಮಾತನಾಡಿ, ‘ಶೌಚಾಲಯದ ಗುಂಡಿಗಳು ಬಾವಿಗಳಂತಾಗಿ ಅಲ್ಲಿ ನೀರು ತುಂಬಿದೆ. ಅದು ಗಿರಿಜನರ ಶೌಚಾಲಯಕ್ಕೆ ಬಳಕೆಯಾಗುವುದಿಲ್ಲ. ಇಲ್ಲಿ ಮಳೆ ಬಂದರೆ ಮನೆಯೊಳಕ್ಕೆ ನೀರು ನುಗ್ಗುತ್ತದೆ’ ಎಂದು ತಿಳಿಸಿದರು.

ಆದಿವಾಸಿ ಮುಖಂಡ ಅಯ್ಯಪ್ಪ ಮಾತನಾಡಿ, ಭೀಮನಹಳ್ಳಿಯಿಂದ ಬರುವ ರಸ್ತೆ ಒತ್ತುವರಿ ಆಗಿದೆ. ರಸ್ತೆ ತೆರವು ಆಗಬೇಕು. ರಸ್ತೆ ಅಭಿವೃದ್ಧಿಪಡಿಸಬೇಕು, ಅಲ್ಲಿನ ಜನರಿಗೂ ನಮಗೂ ಯಾವುದೇ ತಕರಾರು ಆಗದಂತೆ ನೀವು ಮಾಡಿಕೊಡುವಂತೆ ಮನವಿ ಮಾಡಿದರು.

‘ನಾವು ಇಲ್ಲಿನ ಮನೆಗಳನ್ನು ನೋಡಿ ಖುಷಿಯಾಗಿದ್ದೇವೆ. ಇಲ್ಲಿಗೆ ಬರಲು ತಯಾರಿದ್ದೇವೆ, ಆದರೆ ನಮಗೆ ನಮ್ಮ ಹೆಸರಿನಲ್ಲಿ ಎಷ್ಟು ಹಣ ನೀಡುತ್ತೀರಿ, ನಮ್ಮ ಖಾತೆಗೆ ಎಷ್ಟು ಹಣ ನೀಡುತ್ತೀರಿ, ಇಲ್ಲಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸೂಕ್ತ ಶಾಲೆಗಳ ಅವಶ್ಯಕತೆ ಇದೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಬರಲು ರಸ್ತೆ ಸೂಕ್ತವಾಗಿಲ್ಲ’ ಎಂದು ಫಲಾನುಭವಿ ಕೆಂಚ ಸಮಸ್ಯೆ ಹೇಳಿದರು.

ಉಳಿಕೆ ಹಣ ನಿಮಗೆ: ಒಟ್ಟಾರೆ ಉಳಿಯುವ ಎಲ್ಲ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗುವುದು. ನಿಖರವಾದ ಮಾಹಿತಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರನ್ನು ಸಂಪರ್ಕಿಸುವಂತೆ ನಿತೀಶ್ ತಿಳಿಸಿದರು. ಭೂಸೇನಾ ನಿಗಮದ ಮುಖ್ಯಸ್ಥ ಮಂಜುನಾಥ್, ಎಂಜಿನಿಯರ್‌ಗಳಾದ ರಮೇಶ್, ಗುತ್ತಿಗೆದಾರ ಜಗದೀಶ್, ಹರೀಶ್ ವಿವರಣೆ ನೀಡಿದರು.

ಇದಕ್ಕೂ ಮುನ್ನ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣ ಆಗುತ್ತಿರುವ ಮನೆಗಳ ವಿವರ, ಖರ್ಚು ವೆಚ್ಚ, ಹಾಡಿ ಜನತೆಗೆ ಸ್ಮಶಾನಕ್ಕೆ ಕೊಡಬೇಕಾದ ಜಾಗ ಮುಂತಾದ ವಿವರಗಳನ್ನು ಅಧಿಕಾರಿಗಳಿಂದ ಪಡೆದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಕೇಂದ್ರಕ್ಕೆ ನಿಯೋಜನೆಗೊಂಡಿರುವ ಅರಣ್ಯಾಧಿಕಾರಿ ಕಿಶೋರ್‌ನಾಯಕ್, ವಲಯಾಧಿಕಾರಿ ತ್ಯಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT