ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಕಲ್ಯಾಣ ಯೋಜನೆ ವಿಳಂಬಕ್ಕೆ ಆಕ್ಷೇಪ

Last Updated 14 ನವೆಂಬರ್ 2017, 9:05 IST
ಅಕ್ಷರ ಗಾತ್ರ

ರಾಮನಗರ: ‘ಅಧಿಕಾರಿಗಳು ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿನ ಯೋಜನೆಗಳ ಅನುಷ್ಠಾನದ ಮಾಹಿತಿಯನ್ನು ಸಮಪರ್ಕವಾಗಿ ಕೊಡಿ. ಇಲ್ಲದಿದ್ದರೆ ಇಂತಹ ಸಭೆಗಳಿಗೆ ಬರಬೇಡಿ’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ಕಳೆದ ಕೆಲವು ಸಭೆಗಳಿಂದಲೂ ಹಾರಿಕೆ ಉತ್ತರ ನೀಡುತ್ತಲೇ ಬಂದಿದ್ದೀರಿ. ಈ ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೊರೆಸಿರುವ ಕೊಳವೆಬಾವಿಗಳಿಗೆ ಪಂಪ್‌ ಮೋಟಾರ್‌ ಅಳವಡಿಸಿಲ್ಲ.

ಪ್ರತಿ ಸಭೆಯಲ್ಲಿಯೂ ಮುಂದಿನ ಸಭೆ ವೇಳೆಗೆ ಅಳವಡಿಸಲಾಗುವುದು ಎಂದು ಹೇಳುತ್ತೀರಿ, ನಂತರ ಸುಮ್ಮನಾಗುತ್ತಿರಿ. ಜಿಲ್ಲೆಯಲ್ಲಿ ಕಳೆದ ಕಳೆದ ಮೂರು ವರ್ಷಗಳಿಂದೀಚೆಗೆ ಎಷ್ಟು ಕೊಳವೆಬಾವಿ  ಕೊರೆಯಲಾಗಿದೆ, ಎಷ್ಟಕ್ಕೆ ಮೋಟಾರ್‌ ಪಂಪ್‌ ಅಳವಡಿಸಲಾಗಿದೆ ಎಂಬುದರ ಬಗ್ಗೆಯೂ ಅಧಿಕಾರಿಗಳ ಬಳಿ ಮಾಹಿತಿ ಇಲ್ಲ ಎಂದರೆ ಸಭೆ ನಡೆಸಿ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇರುವುದರಿಂದ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಕೆಲವು ಕಡೆ ಗಂಗಾ ಕಲ್ಯಾಣ ಯೋಜನೆಯಡಿ ಅಳವಡಿಸಿರುವ ಪಂಪ್‌ ಮೋಟಾರ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು, ಒಂದು ವಾರಕ್ಕೆ ಕೆಟ್ಟು ಹೋಗಿವೆ. ರೈತರು ನಮ್ಮ ಬಳಿ ಬಂದು ಸಮಸ್ಯೆ ಹೇಳುತ್ತಿದ್ದಾರೆ, ನಾವು ಹೇಗೆ ಉತ್ತರ ನೀಡಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.

ಕೆರೆ ಹುಡುಕಿ ಕೊಡಿ: ‘ಹಾರೋಹಳ್ಳಿ ಗ್ರಾಮದಲ್ಲಿ ತುರುಪನ ಕೆರೆ ಇದೆ ಎಂದು ಮಾಹಿತಿ ನೀಡಿದ್ದೀರಿ, ಆ ಕೆರೆ ಎಲ್ಲಿ ಬರುತ್ತದೆ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಕೆ. ನಾಗರಾಜ್‌ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಮೀನುಗಾರಿಕೆ ಇಲಾಖೆಯ ವತಿಯಿಂದ ಈ ಕೆರೆಯಲ್ಲಿ ಮೀನು ಮರಿಗಳನ್ನು ಬಿಡಲಾಗಿದೆ ಎಂದು ಮಾಹಿತಿ ನೀಡುತ್ತಿದ್ದೀರಿ, ಕಳೆದ 40 ವರ್ಷಗಳಿಂದ ನಾನು ಅಲ್ಲಿಯೇ ವಾಸಿಸುತ್ತಿದ್ದೇನೆ. ಈ ಕೆರೆ ಎಲ್ಲಿ ಬರುತ್ತದೆ’ ಎಂದು ಸಭೆಗೆ ಮಾಹಿತಿ ನೀಡುತ್ತಿದ್ದ ಮೀನುಗಾರಿಕೆ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು.

ಮೀನುಗಾರಿಕೆ ಇಲಾಖೆಯ ಅಧಿಕಾರಿಯು ‘ಸಣ್ಣ ನೀರವಾರಿ ಇಲಾಖೆಯವರು ಮಾಹಿತಿ ನೀಡಿರುವ ಪಟ್ಟಿ ನಮ್ಮಲ್ಲಿ ಇದೆ. ಆದ್ದರಿಂದ ನಾವು ನಿಮಗೆ ಮಾಹಿತಿ ನೀಡಿದ್ದೇವೆ’ ಎಂದರು. ಈ ಸಂದರ್ಭದಲ್ಲಿ ಸಣ್ಣ ನೀರವಾರಿ ಇಲಾಖೆಯ ಅಧಿಕಾರಿ ನಾವು ಮಾಹಿತಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅಧಿಕಾರಿಗಳ ಬೇಜವಾಬ್ದಾರಿತನದ ಉತ್ತರದಿಂದ ಬೇಸತ್ತ ಎಚ್.ಕೆ. ನಾಗರಾಜ್‌ ‘ಕೆರೆ ಎಲ್ಲಿದೆ ಎಂದು ಒಂದು ವಾರದ ಒಳಗೆ ತಿಳಿಸಬೇಕು. ಇಲ್ಲದಿದ್ದರೆ ಕೆರೆ ಹುಡುಕಿ ಕೊಡಿ ಎಂದು ದೂರು ಕೊಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ತೋಟಗಾರಿಕೆ ಇಲಾಖೆಯಲ್ಲಿ ಯೋಜನೆಗಳ ಸಬ್ಸಿಡಿ ಹೆಸರಿನಲ್ಲಿ ಅಕ್ರಮ ನಡೆಯುತ್ತಿವೆ ಎಂದು ರೈತರು ದೂರು ನೀಡುತ್ತಿದ್ದಾರೆ. ಅಧಿಕಾರಿಗಳು ಯೋಜನೆಗಳಿಗೆ ಅರ್ಹರಾಗಿರುವವರನ್ನು ಗುರುತಿಸಿ ಅವರಿಗೆ ನೀಡಬೇಕು. ಯೋಜನೆಗಳ ಫಲಾನುಭವಿಗಳ ಮಾಹಿತಿ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್ ಮಾತನಾಡಿ ‘ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ಫಲಾನುಭವಿಗಳ ಮಾಹಿತಿ ತರುತ್ತಿಲ್ಲ. ಮುಂದಿನ ದಿನಗಳಲ್ಲಿ ಫಲಾನುಭವಿಗಳ, ಯೋಜನೆಗಳ ಮಾಹಿತಿ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್ ಮಾತನಾಡಿ ‘ಹಲವು ಅಂಗನವಾಡಿ ಕೇಂದ್ರಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಸಭೆ ಇದೆ ಎಂದು ನೆಪ ಹೇಳಿಕೊಂಡು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂತಹ ಕಾರ್ಯಕರ್ತೆಯರ ವಿರುದ್ಧ ಕ್ರಮಕೈಗೊಳ್ಳಿ’ ಎಂದು ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

‘ಅಂಗನವಾಡಿಯಲ್ಲಿ ಸಹಾಯಕಿಯರು ಮಕ್ಕಳಿಗೆ ಊಟ ಮಾಡಿಸಿ ಮಲಗಿಸುತ್ತಿದ್ದಾರೆ. ಕೇವಲ ಊಟ ಮಾಡಿ ಮಲಗಿಸುವುದು ಕೆಲಸವಲ್ಲ. ಮಕ್ಕಳಿಗೆ ಶೈಕ್ಷಣಿಕವಾಗಿ ಅನುಕೂಲವಾಗುವಂತೆ ಹೇಳಿಕೊಡಬೇಕು’ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಲತಾ, ಯೋಜನಾಧಿಕಾರಿ ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT