ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಜುನ್ ರೆಡ್ಡಿ’ ಎಂಬ ‘ಅರೆ ಕಲ್ಟ್ ಸಿನಿಮಾ’

Last Updated 14 ನವೆಂಬರ್ 2017, 10:33 IST
ಅಕ್ಷರ ಗಾತ್ರ

ಸಿದ್ಧ ಮಾದರಿಯನ್ನು ಮುರಿದು ಕಟ್ಟುವ ಸಿನಿಮಾವನ್ನು ‘ಕ್ಲಾಸಿಕಲ್ ಕಲ್ಟ್’ ಎನ್ನುತ್ತಾರೆ. ಜನಪ್ರಿಯ ಧಾಟಿಯನ್ನು ಒಪ್ಪಿಕೊಂಡೂ ಅದಕ್ಕೆ ಹೊರತಾದ ದೃಶ್ಯ ಸಂಯೋಜನೆ ಮಾಡುವ ಪ್ರಯೋಗಮುಖಿಗಳು ನಮ್ಮ ನಡುವೆ ಇದ್ದಾರೆ. ಹೂಡಿದ ದೊಡ್ಡ ಮೊತ್ತದ ಬಂಡವಾಳ ವಾಪಸ್ಸಾಗಲಿ ಎನ್ನುವ ಸಹಜ ನಿರೀಕ್ಷೆ ಇಂಥ ಸಿನಿಮಾಗಳನ್ನು ಕಟ್ಟುವ ಹಂತದಿಂದಲೇ ಇರುತ್ತದೆ.

ಅತ್ತ ಪರ್ಯಾಯ ಎನ್ನಲಾಗದ, ಪ್ರಯೋಗಶೀಲ ಅಲ್ಲವೇ ಅಲ್ಲ ಎಂದು ಜರೆಯಲಾಗದ, ಜನಪ್ರಿಯ ಧಾಟಿಯಲ್ಲೇ ಮಾರ್ಪಾಡುಗಳನ್ನು ಮಾಡಿ ಗೆಲ್ಲುವ ಇಂಥ ಚಿತ್ರಗಳನ್ನು ‘ಮಾಸ್ ಕಲ್ಟ್’ ಎಂದು ಕರೆಯಬಹುದೇನೋ? ‘ಅರ್ಜುನ್ ರೆಡ್ಡಿ’ ತೆಲುಗು ಚಿತ್ರ ನೋಡಿದ ಮೇಲೆ ‘ಕಲ್ಟ್’ ಕುರಿತ ವ್ಯಾಖ್ಯಾನವನ್ನು ಮರುವಿಮರ್ಶೆಗೆ ಒಳಪಡಿಸಬೇಕು ಎನ್ನಿಸಿತು.

ನಾವು ಹಲವು ಬಗೆಯ ‘ದೇವದಾಸ್’ಗಳನ್ನು ನೋಡಿದ್ದೇವೆ. ಪ್ರೇಮ ಹಾಗೂ ಮದ್ಯದ ಅಮಲಿನ ಪರಾಕಾಷ್ಠೆಯ ಮಾದರಿ ಅದು. ಸಿನಿಮಾ ಆಗಿ ಅಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿಯೂ ‘ದೇವದಾಸ್’ ಒಂದು ಭಗ್ನಪ್ರೇಮದ ರೂಪಕವೇ ಹೌದು. ಈ ರೂಪಕವನ್ನು ಎತ್ತಿಕೊಂಡು, ಅದರ ಅಸ್ತಿತ್ವವನ್ನೂ ಕೆಣಕುತ್ತಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ‘ಅರ್ಜುನ್ ರೆಡ್ಡಿ’ ತೆಲುಗು ಸಿನಿಮಾ ಕಟ್ಟಿದ್ದಾರೆ.

ಇದರ ಕಥೆ ಮಾಮೂಲೇ. ಕಾಲೇಜು ಹುಡುಗನ ‘ಲವ್ ಅಟ್ ಫಸ್ಟ್ ಸೈಟ್’. ಹುಡುಗಿಯ ಮನೆಯವರ ಪ್ರತಿರೋಧ. ಅವಳಿಗೆ ಬೇರೆ ಹುಡುಗನ ಜೊತೆ ಮದುವೆ. ಭಗ್ನಪ್ರೇಮಿ ಹುಡುಗ ದಾಡಿ ಬಿಟ್ಟು, ಮದ್ಯ-–ಮಾದಕ ದ್ರವ್ಯಗಳ ವ್ಯಸನಕ್ಕೆ ಸಿಲುಕುವುದು. ಇಷ್ಟು ಕೇಳಿದರೆ ಇದರಲ್ಲಿ ಹೊಸತೇನಿದೆ ಎನಿಸಿಬಿಡುತ್ತದೆ. ಸಂದೀಪ್ ರೆಡ್ಡಿ ಇಷ್ಟೇ ಕಥನದ ಆತ್ಮ ಎತ್ತಿಕೊಂಡು, ಹೊಸತು ಏನಿದೆ ಎನ್ನುವುದರ ಕುರಿತು ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಬಗೆದು ನೋಡಿದರೆ ಭಾವಲೋಕದ ಇನ್ನಷ್ಟು ತುಮುಲಗಳು ಸಿಗುತ್ತವೆ ಎಂದು ತೋರಿಸಿಕೊಟ್ಟಿದ್ದಾರೆ.

ಚಿತ್ರಕಥೆ ಹೇಗಿದೆ ಎಂದರೆ ಅದನ್ನು ಅವರು ಚಿತ್ರೀಕರಣ ನಡೆಸಿದ ಜಾಗಗಳಲ್ಲೇ ಕುಳಿತು ಬರೆದಹಾಗೆ. ಪಾತ್ರಪೋಷಣೆಯ ಸ್ಥಿರತೆ ಎಷ್ಟರ ಮಟ್ಟಿಗೆ ಇದೆಯೆಂದರೆ, ಅವುಗಳ ನುಡಿಗಟ್ಟು, ವ್ಯಕ್ತಿತ್ವ ಎಲ್ಲೂ ಹದತಪ್ಪದ ಹಾಗೆ. ಸಣ್ಣ ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ. ನೋಡುಗರಾಗಿ ನಮ್ಮಲ್ಲಿ ಏಳುವ ಪ್ರಶ್ನೆಗಳು ನಿರ್ದೇಶಕರಿಗೂ ಎದ್ದಿವೆ.

ಅವನ್ನು ಬೇರೆ ಬೇರೆ ಪಾತ್ರಗಳ ಮೂಲಕ ಅವರು ಕೇಳಿಸಿದ್ದಾರೆ. ವಿಮರ್ಶೆ, ಸಂವಾದ, ಮೂರು ತಲೆಮಾರುಗಳ ಭಿನ್ನ ದೃಷ್ಟಿಕೋನಗಳು ಎಲ್ಲವೂ ಚಿತ್ರದ ಔಚಿತ್ಯಕ್ಕೆ ತಕ್ಕಂತೆ ಬೆಸೆದುಕೊಂಡಿವೆ. ಎಲ್ಲಕ್ಕಿಂತ ಮಿಗಿಲಾಗಿ ನಿರ್ದೇಶಕರು ‘ಜಾಹೀರಾತು ಪ್ರಣೀತ ಶಾಟ್ ಸೃಷ್ಟಿ’ಯ ಬೀಸಿನಿಂದ ತಪ್ಪಿಸಿಕೊಂಡಿದ್ದಾರೆ. ಸಿನಿಮಾ ಎಂದರೆ ಚಕಚಕನೆ ಸಾಗಬೇಕು, ಲಂಬಿಸಿದರೆ ಎಳೆದಂತೆ ಆಗಿಬಿಡುತ್ತದೆ ಎಂಬಿತ್ಯಾದಿ ಸಿದ್ಧ ನಂಬಿಕೆಗಳನ್ನು ದಾಟಿದ್ದಾರೆ.

ಕೆಲವು ಉದಾಹರಣೆಗಳನ್ನು ನೋಡೋಣ:
ಒಂದು-–
ನಾಯಕ ಚಹಾ ಕುಡಿಯುತ್ತಾ ಬಯಲು ಕ್ಯಾಂಟೀನ್‌ನಲ್ಲಿ ಕುಳಿತಿದ್ದಾನೆ. ಸಿಗರೇಟಿನ ಹೊಗೆ ಉಗುಳುವ ಅವನ ಕೆಂದುಟಿ. ನೋಟ ದಿಢೀರನೆ ನಿರ್ದಿಷ್ಟ ವ್ಯಕ್ತಿಯ ಮೇಲೆ ಕೀಲಿಸುತ್ತದೆ. ಅದು ನಾಯಕಿ. ಸಹಪಾಠಿಗಳೊಟ್ಟಿಗೆ ಸಾಲಿನಲ್ಲಿ ಬರುತ್ತಿದ್ದಾಳೆ. ಅವಳು ಸಾಲಿನಲ್ಲಿ ಮೊದಲು ನಿಂತಿಲ್ಲ. ನಡುವೆ ಎಲ್ಲೋ ಇದ್ದಾಳೆ. ನಾಯಕ ಅವಳನ್ನೇ ನೋಡುತ್ತಿದ್ದಾನೆ ಎನ್ನುವುದು ಅವಳ ಸಹಪಾಠಿಗಳಿಗೂ ಗೊತ್ತಾಗುತ್ತದೆ. ನಾಯಕನ ಆಪ್ತಸ್ನೇಹಿತನಿಗೂ ತಿಳಿಯುತ್ತದೆ. ಹಿನ್ನೆಲೆಯಲ್ಲಿ ಬಾಂಬೆ ಜಯಶ್ರೀ ಕಂಠದ ಕರ್ನಾಟಕ ಶಾಸ್ತ್ರೀಯ ಸಂಗೀತ. ಒಂದು ಮಾತೂ ಇಲ್ಲ.

ಎರಡು-–ನಾಯಕ ಮೂಳೆ ತಜ್ಞವೈದ್ಯನಾಗಿ ಸ್ನಾತಕೋತ್ತರ ಪದವಿ ಪಡೆದು ಬರುತ್ತಾನೆ. ಅವನ ಅಣ್ಣನ ಮದುವೆ. ತಿಂಗಳುಗಳ ನಂತರ ತನ್ನ ಪ್ರಿಯತಮೆಯನ್ನು ಕಾಣಲೆಂದು ಮೊದಲ ಬಾರಿಗೆ ಅವಳ ಮನೆಗೆ ಬರುತ್ತಾನೆ. ಅವಳು ತಲೆಗೆ ಸ್ನಾನ ಮಾಡಿ ತಯಾರಾಗಿದ್ದಾಳೆ. ಗೇಟಿನ ಹತ್ತಿರ ನಿಂತು ಕಾಯುತ್ತಿದ್ದಾಳೆ. ಎದುರುಗೊಂಡದ್ದೇ ಅವಳ ಮುಖ ಕಮಲ. ಅವನು ನಿಧಾನ ನಡೆದು ಬಂದು ಗೇಟಿನ ಬಳಿ ನಿಲ್ಲುತ್ತಾನೆ. ‘ಇದು ನಿನ್ನ ಮನೆಯಾ’ ಎನ್ನುತ್ತಾನೆ. ಅವಳು ಹೌದೆಂದು ತಲೆಯಾಡಿಸುತ್ತಾಳೆ. ‘ಚೆನ್ನಾಗಿದೆ’ ಎನ್ನುತ್ತಾನೆ. ಅವಳು ‘ಒಳಗೆ ಬಾ’ ಎಂದು ಕರೆಯುತ್ತಾಳೆ.

ಮೂರು–-ಕಾಲೇಜಿನ ಡೀನ್ ಹೊಸ ವಿದ್ಯಾರ್ಥಿಗಳಿಗೆ ಗಂಭೀರವಾಗಿ ಬೋಧನೆ ಮಾಡುತ್ತಿರುತ್ತಾರೆ. ಆಗ ನಾಯಕ ಅವರನ್ನು ಕಾಣಲೆಂದು ಅದೇ ತರಗತಿಯ ಬಾಗಿಲ ಎದುರು ನಿಲ್ಲುತ್ತಾನೆ. ಫುಟ್‌ಬಾಲ್ ಆಡುವಾಗ ಜಗಳವಾಗಿ, ಕೋಪಾವೇಶದಿಂದ ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಖ ಮೂತಿ ನೋಡದೆ ಹೊಡೆದು ಬಂದ ನಾಯಕನನ್ನು ಡೀನ್ ತಮ್ಮದೇ ಶೈಲಿಯಲ್ಲಿ ಪರಿಚಯಿಸುತ್ತಾರೆ.

ಓದಿನಲ್ಲಿ ಅವನು ಕಾಲೇಜಿಗೇ ಮೊದಲಿಗನಾಗಿರುವುದು, ಕೋಪದಲ್ಲಿ ಕೂಡ ಎಲ್ಲರನ್ನೂ ಹಿಂದಿಕ್ಕಿರುವುದನ್ನು ಹೇಳುತ್ತಾರೆ. ‘ಕೋಪಕ್ಕೆ ಮನಸ್ಸು ಕೊಡುವವನು ಸರ್ಜನ್ ಆಗಿ, ಸರ್ಜಿಕಲ್ ಬ್ಲೇಡ್ ಕೈಲಿ ಹಿಡಿದರೆ ಅದು ಕೊಲೆಗೆ ಸಮಾನ’ ಎಂದು ವಿಮರ್ಶಿಸುತ್ತಾರೆ. ಅದಕ್ಕೆ ವಿದ್ಯಾರ್ಥಿ ಕಾರಣವಿಲ್ಲದೆ ತಾನು ಕುಪಿತನಾಗುವುದಿಲ್ಲವೆಂದೂ, ಮಾಡದ ತಪ್ಪಿಗೆ ಕ್ಷಮೆಯಾಚಿಸುವವರ ಪೈಕಿ ತಾನಲ್ಲವೆಂದೂ ಹೇಳುತ್ತಾನೆ.

ನಾಲ್ಕು-– ಮದ್ಯದ ಅಮಲಿನಲ್ಲಿಯೇ ಹೆಡ್ ನರ್ಸ್‌ಗೆ ಮಾರ್ಗದರ್ಶನ ನೀಡಿ, ತುರ್ತು ಶಸ್ತ್ರಚಿಕಿತ್ಸೆ ಮಾಡಿಸುವ ನಾಯಕ ಆಮೇಲೆ ನ್ಯಾಯಾಲಯದ ಪ್ರಕರಣ ಎದುರಿಸಬೇಕಾಗುತ್ತದೆ. ವಿಶೇಷ ಕೋರ್ಟ್ ಕಲಾಪ ಏರ್ಪಾಟು ಮಾಡಿಸಿ, ಅವನನ್ನು ಆ ಸುಳಿಯಿಂದ ಹೊರತರಲು ಅವನ ಅಣ್ಣ ಹೆಣಗಾಡುತ್ತಾನೆ. ತಾನು ಶಸ್ತ್ರಚಿಕಿತ್ಸೆ ಮಾಡಿದಾಗ ಕುಡಿದಿರಲಿಲ್ಲ ಎಂದು ಒಂದು ಸುಳ್ಳು ಹೇಳಿಬಿಟ್ಟಿದ್ದರೆ ಪ್ರಕರಣ ಬಿದ್ದುಹೋಗುತ್ತಿತ್ತು. ಆದರೆ, ನಾಯಕ ತಾನು ಪ್ರತಿ ಶಸ್ತ್ರಚಿಕಿತ್ಸೆ ಮಾಡಿದಾಗಲೂ ಅಮಲಿನಲ್ಲಿಯೇ ಇದ್ದುದಾಗಿಯೂ, ಯಾವ ಶಸ್ತ್ರಚಿಕಿತ್ಸೆಯೂ ವಿಫಲವಾಗಿಲ್ಲವೆಂದೂ ಸತ್ಯ ಅರುಹುತ್ತಾನೆ.

ಸಿನಿಮಾದ ಫೋಕಲ್ ಪಾಯಿಂಟ್ ‘ಅರ್ಜುನ್ ರೆಡ್ಡಿ’. ಅವನಲ್ಲಿ ಸದ್ಗುಣಗಳಿರುವಂತೆ ದೌರ್ಬಲ್ಯಗಳೂ ಇವೆ. ಶ್ರೀಮಂತ ಕುಟುಂಬದವನಾದರೂ ಓದಿನಲ್ಲಿ ಅವನಿಗೆ ಶಿಸ್ತಿದೆ. ಪ್ರೀತಿಸಿದ ಹುಡುಗಿಯ ಭವಿಷ್ಯದ ಕುರಿತೂ ಕಾಳಜಿ ಇದೆ. ಅವಳೂ ಓದಿ ವೈದ್ಯೆಯಾಗಬೇಕು ಎಂಬ ಕಳಕಳಿಯಿಂದ ತಾನೇ ಪಾಠ ಕೂಡ ಹೇಳಿಕೊಡುತ್ತಾನೆ. ಎಲ್ಲವನ್ನೂ ಬದ್ಧತೆಯಿಂದ ಮಾಡುವ ಅವನಿಗೆ ಕೋಪ ಬಂದರೆ ಮುಗಿಯಿತು.

ಬೋಧನೆ, ಕಿತ್ತಾಟ, ರಮಿಸುವುದು, ಕಾಳಜಿ ಮಾಡುವುದು, ವೃತ್ತಿ ಧರ್ಮ ಪಾಲನೆ ಎಲ್ಲದರಲ್ಲೂ ಅವನ ಉತ್ಕಟತೆ ಕಾಡುವಂಥದ್ದು. ಆದರೆ, ‘ದೇವದಾಸ್’ ಆಗುವ ಅವನು ಅದರಿಂದ ಆಚೆ ಬರಲಾಗದೆ, ಸಿಕ್ಕ ಸಿಕ್ಕ ಹೆಣ್ಣುಗಳಲ್ಲೆಲ್ಲ ಭಗ್ನಪ್ರೇಮ ಕಥಾ ಕಾಲಕ್ಷೇಪ ಮಾಡುವ ಪರಿಯಲ್ಲಿ ಒಂದಿಷ್ಟು ಗೋಜಲುಗಳಿವೆ. ಅವನು ಸ್ತ್ರೀಲೋಲನೋ, ಕಾಮುಕನೋ, ಎರಡೂ ಆಗಲಾಗದ ಸಂದಿಗ್ಧನೋ ಸ್ಪಷ್ಟವಾಗಿ ಗೊತ್ತಾಗದ ಸನ್ನಿವೇಶಗಳೂ ಇವೆ. ನಿರ್ದೇಶಕರು ಪ್ರಜ್ಞಾಪೂರ್ವಕವಾಗಿಯೇ ಈ ರೀತಿ ದೃಶ್ಯಗಳನ್ನು ಕಟ್ಟಿರಲಿಕ್ಕೆ ಸಾಕು.

ಚಿತ್ರದ ಒಂದು ಸನ್ನಿವೇಶದಲ್ಲಿ ನಾಯಕ-–ನಾಯಕಿಯ ಸಂಭಾಷಣೆಯಲ್ಲೇ ಜಾತಿ ಸಂಘರ್ಷ ಢಾಳಾಗಿ ವ್ಯಕ್ತವಾಗುತ್ತದೆ. ಬಹುತೇಕ ತಮಿಳು, ತೆಲುಗು ಚಿತ್ರಗಳ ಕಚ್ಚಾ ಮಾದರಿಯನ್ನು ಈ ಸಿನಿಮಾ ಮೀರುವುದು ಇಂಥ ವಿಷಯದಲ್ಲೇ. ಹೊಡೆದಾಡುವ ಸನ್ನಿವೇಶ ನಿರ್ಮಾಣವಾದರೂ ನಾಯಕ ಮಾಮೂಲಿ ಕಾದಾಟಕ್ಕೆ ಇಳಿಯದೆ ತನ್ನ ಜಾಣತನವನ್ನೇ ನೆಚ್ಚಿಕೊಳ್ಳುವ ರೀತಿ ಅನನ್ಯ. ಅತಿ ಕಡಿಮೆ ಕನ್ನಡ, ಅಪರೂಪಕ್ಕೆ ತುಳು, ಬಹುತೇಕ ತೆಲುಗು ಮಾತನಾಡುವ ಪಾತ್ರಗಳಿವೆ. ಇನ್ನಷ್ಟು ಕನ್ನಡ ಸಂಸ್ಕೃತಿಯನ್ನು ಚಿತ್ರದಲ್ಲಿ ತರಲು ಸಾಧ್ಯವಿತ್ತು. ಅದನ್ನ ತಂದೂ ತೆಲುಗು ಸಿನಿಮಾ ಜಾಯಮಾನವನ್ನು ಉಳಿಸಿಕೊಳ್ಳಬಹುದಿತ್ತು.

ಅಲ್ಲಲ್ಲಿ ಮಸಾಲೆ ಚಿತ್ರದಂತೆ ಕಾಣುವ ‘ಅರ್ಜುನ್ ರೆಡ್ಡಿ’, ಹಲವು ದೃಶ್ಯಗಳಲ್ಲಿ ಸೂಪರ್ ರಿಯಲಿಸ್ಟಿಕ್ ಆಗಿಬಿಡುತ್ತದೆ. ನಾಯಕ-, ನಾಯಕಿಯ ನಡುವಿನ ರಸಮಯ ಕ್ಷಣಗಳನ್ನೂ ಅದಕ್ಕೆ ಉದಾಹರಣೆಯಾಗಿ ಕೊಡಬಹುದು. ಅವನು ಕುಡಿಯುವ ಬಗೆ, ಮಾದಕ ದ್ರವ್ಯಕ್ಕೆ ಶರಣಾಗುವ ರೀತಿ ತೋರಿಸಿರುವುದರಲ್ಲೂ ಸೂಪರ್ ರಿಯಲಿಸ್ಟಿಕ್ ಧೋರಣೆ ಇದೆ.

ಸಿನಿಮಾದಲ್ಲಿನ ಪಾತ್ರಗಳನ್ನು ಲೆಕ್ಕ ಹಾಕಿದರೆ ಅಚ್ಚರಿಯಾಗುತ್ತದೆ. ಡೀನ್, ಮೇಡಂ, ಕ್ಲರ್ಕ್, ಆಪ್ತಸ್ನೇಹಿತ, ಕಾಲೇಜಿನ ಸೀನಿಯರ್, ಇನ್ನೂ ಇಬ್ಬರು ಸಹಪಾಠಿಗಳು, ರ್‍್ಯಾಗಿಂಗ್ ಮಾಡುವ ಹುಡುಗಿ, ಆಪ್ತಸ್ನೇಹಿತನ ಅಪ್ಪ, ನಾಯಕನ ಅಪ್ಪ-–ಅಮ್ಮ, ಅಣ್ಣ-–ಅತ್ತಿಗೆ, ಅಜ್ಜಿ, ನಾಯಕಿಯ ಅಪ್ಪ-–ಅಮ್ಮ-, ಅಕ್ಕ-–ತಮ್ಮ, ಆಸ್ಪತ್ರೆಯ ಮಾಲೀಕ, ನರ್ಸ್, ಹೆಡ್ ನರ್ಸ್, ಮನೆಗೆಲಸದವಳು, ನಾಯಕಿಯ ಹೆಸರನ್ನು ಇಟ್ಟು ನಾಯಕ ಸಾಕುವ ಮುದ್ದಿನ ನಾಯಿ, ವಕೀಲ, ಜಡ್ಜ್, ನಾಯಕಿಯ ಪೋಷಕಿಯಾಗುವ ಮಹಾತಾಯಿ, ನಾಯಕಿಯ ಹೊಟ್ಟೆಯಲ್ಲಿ ಬೆಳೆಯುವ ಮಗು... ಈ ಯಾವ ಪಾತ್ರಗಳೂ ಸಿನಿಮಾದಲ್ಲಿ ಅನಗತ್ಯ ಎಂದು ಅನಿಸುವುದೇ ಇಲ್ಲ.

ನಾಯಕನ ಹದ ತಪ್ಪಿದ ಬದುಕಿಗೆ ಸಾಕ್ಷಿಯಾಗುತ್ತಾ, ಅಡಿಗಡಿಗೂ ಅವನನ್ನು ಪ್ರಶ್ನಿಸುವ ಆಪ್ತಸ್ನೇಹಿತನ ಪಾತ್ರ ‘ಕಾಮಿಕ್ ರಿಲೀಫ್’ ಆಗಿಯೂ ಪ್ರಕಟಗೊಂಡಿರುವುದರಲ್ಲಿ ನಿರ್ದೇಶಕರ ಕುಸುರಿತನವಿದೆ.  ಎಷ್ಟೆಲ್ಲ ಹೋಂವರ್ಕ್ ಮಾಡಿದ ಮೇಲೂ ಸಿನಿಮಾದಲ್ಲಿ ಎರಡು ದೃಶ್ಯಗಳಲ್ಲಿ ಮಾನ್ಯತೆ ಕಳೆದುಕೊಂಡ ಹಳೆಯ ನೋಟುಗಳು ಕಾಣುತ್ತವೆ.

ನಾಯಕ ವಿಜಯ್ ದೇವರಕೊಂಡ ಅವರ ವೃತ್ತಿಬದುಕಿನಲ್ಲಿ ಇದು ಮರೆಯಲಾಗದ ಸಿನಿಮಾ. ಹಲವು ಭಾವ ಹಾಗೂ ತುಮುಲಗಳನ್ನು ಒಳಗೊಂಡ ಸಂಕೀರ್ಣ ಪಾತ್ರವನ್ನು ಅವರು ಆವಾಹಿಸಿಕೊಂಡಿದ್ದಾರೆ. ಸ್ಫುರದ್ರೂಪಿ ನಾಯಕನಾದ ಅವರ ಕಣ್ಣುಗಳ ತೀಕ್ಷ್ಣತೆಯನ್ನು ನಿರ್ದೇಶಕರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲೇ ನಾಯಕಿ ಶಾಲಿನಿ ಪಾಂಡೆ ಸ್ನಿಗ್ಧ ನಗುವಿನಿಂದ ಕಾಡುತ್ತಾರೆ. ನಾಯಕನ ಪಾತ್ರದಷ್ಟು ‘ದರ್ಶನ’ ಅವರ ಪಾತ್ರಕ್ಕೆ ಇಲ್ಲವಾದರೂ, ಸಂಘರ್ಷದ ದೃಷ್ಟಿಯಿಂದ ತೂಕದ ನಾಯಕಿ ಅವರು.

ನಗು, ಅಳುವಿನಿಂದ ಹಿಡಿದು ತುಟಿ ಬಟ್ಟಲನ್ನು ಒಡ್ಡಿಕೊಳ್ಳುವವರೆಗೆ ಯಾವ ವಿಷಯದಲ್ಲೂ ಅವರು ಜುಗ್ಗರಾಗಿಲ್ಲ. ನಾಯಕನ ಸ್ನೇಹಿತನ ಪಾತ್ರದಲ್ಲಿ ರಾಹುಲ್ ರಾಮಕೃಷ್ಣ ಹೆಚ್ಚು ಕಾಲ ಕಾಡುತ್ತಾರೆ. ಹಿರಿಯ ನಟಿ ಕಾಂಚನಾ ಅಜ್ಜಿಯ ಪಾತ್ರವನ್ನ ನಿಭಾಯಿಸಿರುವ ರೀತಿಯೂ ಮೆಚ್ಚುಗೆ ಸಲ್ಲಬೇಕು. ಆಧುನಿಕ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಮಾಗಿದ ಪಾತ್ರ ಅವರದ್ದು. ‘ನೋವು ಅನುಭವಿಸುವುದು ತೀರಾ ಖಾಸಗಿ. ಅದನ್ನು ಅವನು ಅನುಭವಿಸಲಿ ಬಿಡು’ ಎಂದು ನಾಯಕನ ಕುರಿತು ಆ ಅಜ್ಜಿ ಆಡುವ ಮಾತು ಅಲ್ಲಾಡಿಸಿಬಿಡುತ್ತದೆ.

ಎಲ್ಲಕ್ಕೂ ಕಳಶವಿಟ್ಟಂತೆ ರಾಧನ್ ಸಂಗೀತ ಸಂಯೋಜನೆ ಚಿತ್ರಕ್ಕೆ ಒದಗಿಬಂದಿದೆ. ರಾಜು ತೋಟ ಸಿನಿಮಾಟೋಗ್ರಫಿಗೆ ಕ್ಲೋಸಪ್‌ ಕೆಲಸವೇ ಹೆಚ್ಚು. ಹಿನ್ನೆಲೆ ಸಂಗೀತದಲ್ಲಿ ಬಳಕೆಯಾಗಿರುವ ಪಾಶ್ಚಿಮಾತ್ಯ ವಾದ್ಯ ಸಂಗೀತ, ಹಾಡುಗಳಲ್ಲಿ ಬಳಸಿಕೊಂಡಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಿಶ್ರ ಮಾಧುರ್ಯ ನಿರ್ದೇಶಕರ ಸೂಕ್ಷ್ಮತೆಗೆ ರಾಧನ್ ಸ್ಪಂದಿಸಿರುವ ರೀತಿಗೆ ಉದಾಹರಣೆಗಳು.

ಇಷ್ಟಾಗಿ ಇದನ್ನು ಪರಿಪೂರ್ಣ ‘ಕಲ್ಟ್ ಸಿನಿಮಾ’ ಎನ್ನಲಾಗದು. ಅಂತ್ಯದಲ್ಲಿ ವಿಪರೀತ ಎನ್ನಬಹುದಾದ ಮೆಲೋಡ್ರಾಮಾ ಇದೆ. ಮೂರು ಅಂತ್ಯಗಳನ್ನು ಚಿತ್ರಕ್ಕೆಂದು ನಿರ್ದೇಶಕರು ಬರೆದಿದ್ದರಂತೆ. ಇನ್ನೆರಡು ಯಾವುದೆನ್ನುವುದು ತಿಳಿದಿಲ್ಲ.

ನಿರೂಪಣೆಯಲ್ಲಿ ಬಹು ಫ್ಲ್ಯಾಷ್‌ಬ್ಯಾಕ್‌ಗಳನ್ನು ಬಳಸಿರುವ ರೀತಿ. ದೀರ್ಘವಾದರೂ ಸಾವಧಾನವಾಗಿ ಕಟ್ಟಿದ ಶಾಟ್‌ಗಳು, ಲಯ ಮೀರದ ಸಂಭಾಷಣೆ, ಔಚಿತ್ಯಕ್ಕೆ ಅಗತ್ಯವಾದ ಸನ್ನಿವೇಶಗಳು... ಜನಪ್ರಿಯ ಮಾದರಿಯಲ್ಲಿನ ಈ ಪ್ರಯೋಗ ಸ್ವಲ್ಪ ಅತ್ತಿತ್ತ ಆಗಿದ್ದರೂ ಕಷ್ಟವಿತ್ತು. ನಿರ್ದೇಶಕರ ಅಖಂಡ ಆತ್ಮವಿಶ್ವಾಸ ಇಲ್ಲದಿದ್ದರೆ ಇಂಥ ಸಿನಿಮಾ ತಯಾರಿಕೆ ಸಾಧ್ಯವಾಗುತ್ತಿರಲಿಲ್ಲ. ಸಿನಿಮಾದ ನಾಯಕನ ಆತ್ಮಗೌರವ ಹಾಗೂ ನಿರ್ದೇಶಕರ ಆತ್ಮವಿಶ್ವಾಸ ಎರಡಕ್ಕೂ ಸಾವಯವ ಸಂಬಂಧವಿದೆ. 

***

ವೈದ್ಯಕ್ಕೆ ಬೆನ್ನು ಮಾಡಿದ ನಿರ್ದೇಶಕ

ಸಂದೀಪ್ ರೆಡ್ಡಿ ವಂಗ ಧಾರವಾಡದ ಕಾಲೇಜಿನಲ್ಲಿ ಫಿಸಿಯೊಥೆರಪಿ ಕಲಿಯಲು ಹೊರಟಿದ್ದರು. ತಲೆ ತುಂಬ ಸಿನಿಮಾ ಗೀಳು. ಆಸ್ಪ್ರೇಲಿಯಾದಲ್ಲಿ ವ್ಯವಸ್ಥಿತವಾಗಿ ಸಿನಿಮಾ ಕುರಿತು ಕಲಿತು ಬಂದ ಅವರು ನಾಗಾರ್ಜುನ ಅಭಿನಯದ ತೆಲುಗು ಚಿತ್ರವೊಂದಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಾಲ್ಕು ವರ್ಷ ಅವರು ಹೆಣೆದು, ತಿದ್ದಿದ ಕಥೆ ‘ಅರ್ಜುನ್ ರೆಡ್ಡಿ’. ಬರೆಯುವಾಗ ಅಲ್ಲು ಅರ್ಜುನ್ ಈ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವರಿಗೆ ಅನ್ನಿಸಿತ್ತು.

ಅದು ಆಗದೇಹೋದಾಗ ಅವರು ಅನೇಕ ನಿರ್ಮಾಪಕರಲ್ಲಿ ಕಥಾ ಎಳೆ ಹೇಳಿದರು. ಯಾರೂ ಹಣ ವಿನಿಯೋಗಿಸಲು ಮುಂದೆ ಬರಲಿಲ್ಲ. ಆಗ ತಮ್ಮ ಅಪ್ಪ-–ಅಣ್ಣನ ಮನವೊಲಿಸಿ ಸಿನಿಮಾ ತಯಾರಿಸಿದರು. ಅಳೆದೂ ತೂಗಿ 12 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮಾಡಿದ ಸಿನಿಮಾ ಒಂದೇ ವಾರದಲ್ಲಿ 30 ಕೋಟಿ ರೂಪಾಯಿಗೂ ಹೆಚ್ಚು ಹಣ ತಂದಿತು.

ಚಿತ್ರಕ್ಕೆ ಒಂದೊಂದು ದೃಶ್ಯ ಬರೆದ ಮೇಲೂ ಒಂದು ವಾರ ಬ್ರೇಕ್ ತೆಗೆದುಕೊಳ್ಳುತ್ತಿದ್ದ ಸಂದೀಪ್ ಮನೆಯ ಕಾಲಿಂಗ್ ಬೆಲ್ ಈಗ ಪದೇ ಪದೇ ಹೊಡೆದುಕೊಳ್ಳುತ್ತದೆ. ತಾರಾನಟರೆಲ್ಲ ಅವರಿಗೆ ಕಾಲ್‌ಷೀಟ್ ಕೊಡಲು ಈಗ ಮುಂದಾಗುತ್ತಿದ್ದಾರೆ. ಅಂದಹಾಗೆ, ಸಂದೀಪ್ ಮಗನ ಹೆಸರು ಅರ್ಜುನ್. ಸಿನಿಮಾಗೂ ಅದೇ ಹೆಸರನ್ನು ಇಟ್ಟಿದ್ದು ಅರ್ಥಪೂರ್ಣ. ಯಾಕೆಂದರೆ, ಅದೂ ಅವರ ಕೂಸೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT