ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಹಾರಾಟದ ದೂರ ನಿಯಂತ್ರಣ

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಾನಗಳ ಹಾರಾಟ ನಿಯಂತ್ರಿಸಲು, ನೆರವು ನೀಡಲು ವಿಮಾನ ನಿಲ್ದಾಣಗಳಲ್ಲಿ ವಾಯು ಸಂಚಾರ ನಿಯಂತ್ರಣ ಟವರ್‌ಗಳು (ಎಟಿಸಿ) ಇರುವುದು ಸಾಮಾನ್ಯ. ಇವು ನಿಲ್ದಾಣದೊಳಗೇ ಇರುತ್ತವೆ. ಒಂದೊಂದು ವಿಮಾನ ನಿಲ್ದಾಣಕ್ಕೂ ಒಂದೊಂದು ‘ಎಟಿಸಿ’ ಇರುತ್ತದೆ. ಇದರ ಕಾರ್ಯವ್ಯಾಪ್ತಿ ಕೇವಲ ನಿರ್ದಿಷ್ಟ ಪ್ರದೇಶಕ್ಕೆ ಸೀಮತವಾಗಿರುತ್ತದೆ. ದೇಶದಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ, ಸಂಖ್ಯೆ, ಹವಾಮಾನ, ವ್ಯಾಪ್ತಿ ಒಂದೇ ರೀತಿ ಇರುವುದಿಲ್ಲ.

‘ಎಟಿಸಿ’ಯ ಕಾರ್ಯವ್ಯಾಪ್ತಿ ವಿಸ್ತರಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಿ (ಡಿಜಿಸಿಎ) ದೂರದ (remote) ವಾಯು ಸಂಚಾರ ನಿಯಂತ್ರಣ ಗೋಪುರವನ್ನು ನಿರ್ಮಿಸಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2018ರ ಡಿಸೆಂಬರ್‌ ವೇಳೆಗೆ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಈ ಗೋಪುರ ಕಾರ್ಯಾರಂಭವಾಗಲಿದೆ. ಇದರಿಂದ ಸಮೀಪದ ಹಲವು ವಿಮಾನ ನಿಲ್ದಾಣಗಳಲ್ಲಿನ ವಿಮಾನದ ಹಾರಾಟವನ್ನು ನಿಯಂತ್ರಣ ಮಾಡಬಹುದಾಗಿದೆ. ರಿಮೋಟ್ ಮತ್ತು ವಸ್ತುಶಃ ಗೋ‍ಪುರ (ಆರ್‌ವಿಟಿ) ಸದ್ಯ ಹೊಸ ಪರಿಕಲ್ಪನೆಗಳಾಗಿದ್ದು ಇದರಲ್ಲಿ ವಿಮಾನ ನಿಲ್ದಾಣದ ಸಂಚಾರ ವ್ಯವಸ್ಥೆಯನ್ನು ದೂರದ ಸ್ಥಳದಿಂದ ನಿಯಂತ್ರಿಸಬಹುದಾಗಿದೆ.

ಸಣ್ಣ ನಿಲ್ದಾಣಗಳಿಗೆ ಅನುಕೂಲ
ದೂರದ ವಾಯುಸಂಚಾರ ನಿಯಂತ್ರಣ ಗೋಪುರ ಹೆಚ್ಚಿನದಾಗಿ ಸಣ್ಣ ವಿಮಾನ ನಿಲ್ದಾಣಗಳಿಗೆ ಅನುಕೂಲಕರವಾಗಿದೆ. ಹೆಚ್ಚು ಬಳಕೆ ಮಾಡದ ಮತ್ತು ಬಳಕೆಯೇ ಮಾಡದ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟಕ್ಕೆ ಸಹಾಯವಾಗಲಿದೆ. ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಈ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದೆ. ಇದರಿಂದ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೇ ಹೆಚ್ಚು ಅನುಕೂಲವಾಗಲಿದೆ.

ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್‌ಗಳಲ್ಲಿ ಆರರಿಂದ 12 ವಿಮಾನ ನಿಲ್ದಾಣಗಳು 200 ರಿಂದ 250 ಕಿ.ಮೀ ವ್ಯಾಪ್ತಿಯೊಳಗಿವೆ. ಹೀಗಿದ್ದರೆ ಮಾತ್ರ ದೂರದ ಎಟಿಸಿ ಗೋಪುರ ನಿರ್ಮಾಣ ಕಾರ್ಯಸಾಧುವಾದುದು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಉಡಾನ್‌’ (ಶ್ರೀಸಾಮಾನ್ಯನಿಗೂ ವಿಮಾನ ಯಾನ ಯೋಗ) ಯೋಜನೆ ಜಾರಿ ಮಾಡಿದ ನಂತರ ಸಣ್ಣ ಸಣ್ಣ ನಗರಗಳಿಗೂ ವಿಮಾನ ಸಂಪರ್ಕ ಸಿಗುವಂತಾಗಿದೆ. ಕೆಲವು ಕಡೆ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಸ್ಥಳಾವಕಾಶದ ಕೊರತೆಯೂ ಇದೆ. ಇಂತಹ ಸಂದರ್ಭದಲ್ಲಿ ದೂರದ ವಾಯುಸಂಚಾರ ನಿಯಂತ್ರಣ ಗೋಪುರಗಳು ನೆರವಾಗಬಲ್ಲವು. ಇದು ಜಾಗ ಮತ್ತು ವೆಚ್ಚ ಉಳಿತಾಯ ಮಾಡಲು ನೆರವಾಗಲಿದೆ.

ರಿಮೋಟ್‌ ಎಟಿಸಿಯಲ್ಲಿ ಏನಿರುತ್ತದೆ
ಸಾಂಪ್ರದಾಯಿಕ ಎಟಿಸಿಗಳಿಗಿಂತ ರಿಮೋಟ್‌ ಎಟಿಸಿಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುತ್ತವೆ. ಉತ್ತಮ ಗುಣಮಟ್ಟದ, ಇನ್ಫ್ರಾರೆಡ್‌ ಕ್ಯಾಮೆರಾಗಳನ್ನು ರನ್‌ವೇಗಳಲ್ಲಿ ಬಳಸಬೇಕಾಗುತ್ತದೆ. ಇದರಿಂದ ಮಾತ್ರವೇ ದೂರದಲ್ಲಿನ ಎಟಿಸಿಗೆ ಗುಣಮಟ್ಟದ ಚಿತ್ರಗಳನ್ನು ರವಾನೆ ಮಾಡಲು ಸಾಧ್ಯ. ಇಲ್ಲದಿದ್ದರೆ ಕಡಿಮೆ ಬೆಳಕಿನ ವೇಳೆ ವಿಮಾನ ಇಳಿಸುವುದು ಪೈಲಟ್‌ಗಳಿಗೆ ಸವಾಲಾಗಲಿದೆ.

ದೂರ ನಿಯಂತ್ರಣದ ಎಟಿಸಿ ಗೋಪುರ ನಿರ್ಮಿಸುವ ಸಂಬಂಧ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಕೆಲವು ತಿಂಗಳ ಹಿಂದೆಯೇ ಅಧ್ಯಯನಕ್ಕೆ ಚಾಲನೆ ನೀಡಿತ್ತು. ಭಾರತಕ್ಕೆ ತಾಂತ್ರಿಕ ನೆರವು ನೀಡಲು ಸ್ವೀಡನ್‌ನ ಸಾಬ್‌ ಮತ್ತು ಕೆನಡಾ ಮೂಲದ ಸೀರಿಡಜ್ಜ್‌ ಟೆಕ್ನಾಲಜೀಸ್‌ ಕಂಪೆನಿಗಳು ಎಎಐ ಜತೆ ಮಾತುಕತೆ ನಡೆಸಲು ಮುಂದಾಗಿದ್ದವು.

ಈ ಎರಡು ಕಂಪೆನಿಗಳು ಹಲವು ದೇಶಗಳಲ್ಲಿ ರಿಮೋಟ್‌ ಎಟಿಸಿ ನಿರ್ಮಿಸಿದ ಅನುಭವ ಹೊಂದಿವೆ. ಸೀರಿಡ್ಜ್‌ ಈಗಾಗಲೇ ಹಂಗೇರಿ, ಅಲ್ಬೇನಿಯಾ ಮತ್ತು ಅಜರ್‌ಬೈಜಾನ್‌ಗಳಲ್ಲಿ ಡಿಜಿಟಲ್ ಟವರ್‌ ನಿರ್ಮಿಸಿದೆ.

ವಿದೇಶಗಳಲ್ಲಿ ಎಲ್ಲೆಲ್ಲಿ ಇದೆ?
ರಿಮೋಟ್‌ ಎಟಿಸಿ ಈಗಾಗಲೇ ಆಸ್ಟ್ರೇಲಿಯಾ, ಅಮೆರಿಕ, ಕೆನಡಾ, ಐರ್ಲೆಂಡ್‌ ಮತ್ತು ಸ್ವೀಡನ್‌ ಸೇರಿದಂತೆ ಹಲವು ದೇಶಗಳಲ್ಲಿ ಇವೆ. ಇದರಿಂದ ವಾಯು ಸಂಚಾರ ನಿಯಂತ್ರಕರ ಕೊರತೆ ನೀಗಿದೆ. ಅಲ್ಲದೆ ಪ್ರತಿಯೊಂದು ನಿಲ್ದಾಣಗಳಲ್ಲಿ ಪ್ರತ್ಯೇಕ ಎಟಿಸಿ ನಿರ್ಮಿಸುವ ಅಗತ್ಯ ಉದ್ಭವಿಸಿಲ್ಲ. ಅಮೆರಿಕದಲ್ಲಿರುವ 13 ಸಾವಿರಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಕೇವಲ 515ರಲ್ಲಿ ವಾಯು ಸಂಚಾರ ನಿಯಂತ್ರಣ ಗೋಪುರಗಳಿವೆ.

ಗೋಪುರ ನಿರ್ಮಾಣದ ಸವಾಲುಗಳು
* ಇಲ್ಲಿನ ವಿಭಿನ್ನ ಹವಾಗುಣ ಮತ್ತು ಭೌಗೋಳಿಕ ವ್ಯಾಪ್ತಿ
* ಪೂರಕ ತಂತ್ರಜ್ಞಾನ ಮತ್ತು ತಾಂತ್ರಿಕ ಪರಿಣತರ ಕೊರತೆ
* ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ಸೌಲಭ್ಯ ಕೊರತೆ
* ಸಾಕಷ್ಟು ವಿದ್ಯುತ್‌ ಮತ್ತು ದೂರಸಂಪರ್ಕ ಸೌಲಭ್ಯದ ಸವಾಲು

* 4ನೇ ಸ್ಥಾನ ಜಾಗತಿಕ ವಿಮಾನ ಪ್ರಯಾಣಿಕರ ದಟ್ಟಣೆಯಲ್ಲಿ ಭಾರತದ ಸ್ಥಾನ
*50 ಎರಡು ವರ್ಷಗಳಲ್ಲಿ  ಮೇಲ್ದರ್ಜೆಗೆ ಏರಲಿರುವ ವಿಮಾನ ನಿಲ್ದಾಣ
* 3100 ಭಾರತದಲ್ಲಿರುವ ವಾಯುಸಂಚಾರ ನಿಯಂತ್ರಕರು. 3,900 ನಿಯಂತ್ರಕರ ಅಗತ್ಯ ಇದೆ.

*
ದಿನಕ್ಕೆ ಒಂದು ಇಲ್ಲವೇ ಎರಡು ವಿಮಾನ ಹಾರಾಟ ನಡೆಸುವ ನಿಲ್ದಾಣಗಳಲ್ಲಿ ಪ್ರತ್ಯೇಕವಾಗಿ ಎಟಿಸಿ ಗೋಪುರಗಳನ್ನು ಸ್ಥಾಪನೆ ಮಾಡುವುದರಿಂದ ಹೆಚ್ಚಿನ ವೆಚ್ಚವಾಗುತ್ತದೆ. ಇಂತಹ ಸಂದರ್ಭದಲ್ಲಿ ದೂರದ ಎಟಿಸಿ ಗೋಪುರ ಅನುಕೂಲವಾಗಬಲ್ಲದು.
– ಮೊಹಪಾತ್ರ, ಅಧ್ಯಕ್ಷ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT